ಡಿವಿಜಿ ಒಡನಾಡಿ,ರಾಷ್ಟ್ರೋತ್ಥಾನದ ಮಾಜಿ ಅಧ್ಯಕ್ಷ ಎಸ್‌ಆರ್ ರಾಮಸ್ವಾಮಿ ನಿಧನ
ಬೆಂಗಳೂರು: ಖ್ಯಾತ ಸಾಹಿತಿ ಡಿ.ವಿ.ಗುಂಡಪ್ಪ ಅವರ ನಿಕಟ ಒಡನಾಡಿಯಾಗಿದ್ದ ನಾಡೋಜ ಎಸ್.ಆರ್.ರಾಮಸ್ವಾಮಿ ಅವರು ಶುಕ್ರವಾರ (ಏ 10) ಮುಂಜಾನೆ ನಗರದಲ್ಲಿ ನಿಧನರಾಗಿದರು. ಸಂಘ ಪರಿವಾರದ ಅಂಗಸಂಸ್ಥೆ ರಾಷ್ಟ್ರೋತ್ಥಾನದ ನಿಕಟಪೂರ್ವ ಅಧ್ಯಕ್ಷರೂ ಆಗಿದ್ದ ರಾಮಸ್ವಾಮಿ ಪ್ರಸ್ತುತ ಉತ್ಥಾನ ಮಾಸ ಪತ್ರಿಕೆಯ ಸಂಪಾದಕರಾಗಿ ಹಲವು ಪ್ರತಿಭೆಗಳನ್ನು ಬೆಳಕಿಗೆ ತಂದು ಸಾಹಿತ್ಯ ಸೇವೆ ಮಾಡಿದವರು. ಚಾಮರಾಜಪೇಟೆಯ ಕೇಶವಶಿಲ್ಪದಲ್ಲಿ ಇಂದು ಬೆಳಿಗ್ಗೆ 12 ಗಂಟೆಯವರೆಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಸಾರಸ್ವತ ಲೋಕ ಬೆಳಗಿದ ಬಹುಮುಖ ಪ್ರತಿಭೆ
ಕನ್ನಡ ಸಾರಸ್ವತ ಲೋಕಕ್ಕೆ ಹಲವು ಹೊಸ ಪ್ರತಿಭೆಗಳನ್ನು ಪರಿಚಯಿಸಿದ ಎಸ್.ಆರ್.ರಾಮಸ್ವಾಮಿ ಅವರ ಪೂರ್ಣ ಹೆಸರು ಸೊಂಡೆಕೊಪ್ಪ ರಾಮಚಂದ್ರಶಾಸ್ತ್ರಿ ರಾಮಸ್ವಾಮಿ. 29ನೇ ಅಕ್ಟೋಬರ್ 1937 ರಲ್ಲಿ ಜನಿಸಿದ ಅವರು ಕನ್ನಡದ ಸಾಹಿತಿ, ಪತ್ರಕರ್ತ, ಕಲಾ ವಿಮರ್ಶಕ, ಪರಿಸರವಾದಿ ಮತ್ತು ಸಾಮಾಜಿಕ ಕಾರ್ಯಕರ್ತರಾಗಿ ನಾಡಿಗೆ ಅವಿರತ ಸೇವೆ ಸಲ್ಲಿಸಿದರು. ಮೊನಚು ಶೈಲಿ, ಹದವರಿತ ಬರಹ, ಯುವಜನರಿಗೆ ಬೆನ್ನುತಟ್ಟುವ ಸ್ವಭಾವ, ಸಂಘಟನೆಯಲ್ಲಿದ್ದ ಶ್ರದ್ಧೆ ಅವರ ವ್ಯಕ್ತಿತ್ವದ ಗಮನ ಸೆಳೆಯುವ ಅಂಶಗಳಾಗಿದ್ದವು.
ಒಬ್ಬ ಪ್ರತಿಭಾನ್ವಿತ ಬರಹಗಾರ ಮತ್ತು ಅನುವಾದಕರಾದ ಅವರು ಸಾಹಿತ್ಯ, ಸಾಂಸ್ಕೃತಿಕ, ರಾಷ್ಟ್ರೀಯತೆ ಮತ್ತು ಅಭಿವೃದ್ಧಿ ವಿಷಯಗಳ ಕುರಿತು ಐವತ್ತಕ್ಕೂ ಹೆಚ್ಚು ಪುಸ್ತಕಗಳು ಮತ್ತು ಎರಡು ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. 'ಪ್ರಜಾವಾಣಿ' ಬಳಗದ ಸುಧಾ ವಾರಪತ್ರಿಕೆಯಲ್ಲಿ 1972 ರಿಂದ 1979 ರ ವರೆಗೆ ಮುಖ್ಯ ಉಪಸಂಪಾದಕರಾಗಿ ಕೆಲಸ ಮಾಡಿದ್ದರು. ನಂತರ ರಾಷ್ಟ್ರೋತ್ಥಾನ ಸಾಹಿತ್ಯ ಮತ್ತು ಕನ್ನಡ ಮಾಸಿಕ 'ಉತ್ಥಾನ'ದ ಪ್ರಧಾನ ಸಂಪಾದಕರಾಗಿ ದುಡಿದರು. ಬೆಂಗಳೂರಿನ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಗೌರವ ಕಾರ್ಯದರ್ಶಿಯಾಗಿ ಸಂಸ್ಥೆಯ ಚಟುವಟಿಕೆಗಳಿಗೆ ಹೊಸ ಸ್ಪರ್ಶ ಕೊಟ್ಟರು.
ಕನ್ನಡ ಸಾಂಸ್ಕೃತಿಕ ಲೋಕದ ದಿಗ್ಗಜರು ಎನಿಸಿದ ಡಿ.ವಿ.ಗುಂಡಪ್ಪ, ವಿ.ಸೀತಾರಾಮಯ್ಯ, ಎಸ್.ಶ್ರೀಕಂಠ ಶಾಸ್ತ್ರಿ, ರಾಳ್ಳಪಲ್ಲಿ ಅನಂತಕೃಷ್ಣ ಶರ್ಮ, ಯಾದವರಾವ್ ಜೋಶಿ, ಮತ್ತು ಪಿ ಕೋದಂಡ ರಾವ್ ಸೇರಿದಂತೆ ಹಲವರೊಂದಿಗೆ ನಿಕಟ ಸಂಬಂಧ ಹೊಂದಿದ್ದರು.
ಸಾಹಿತ್ಯದ ಜೊತೆಗೆ ಗ್ರಾಮೀಣಾಭಿವೃದ್ಧಿ ಮತ್ತು ಸುಸ್ಥಿರ ಪರಿಸರ ಸಹ ರಾಮಸ್ವಾಮಿ ಅವರ ಆಸಕ್ತಿಯ ವಿಚಾರಗಳಾಗಿದ್ದವು. ಸಾಹಿತ್ಯವನ್ನು ಬದುಕಿನ ಬಿಂಬ ಎಂದೇ ಅವರು ಗ್ರಹಿಸಿದ್ದರು. ಹಲವು ಸ್ವಯಂಪ್ರೇರಿತ ಗ್ರಾಮೀಣಾಭಿವೃದ್ಧಿ ಉಪಕ್ರಮಗಳಿಗೆ ಮಾರ್ಗದರ್ಶನ ನೀಡಿದರು. ಸ್ವದೇಶಿ ಚಳವಳಿ ಅವರ ಹೃದಯಕ್ಕೆ ಆಪ್ತವಾಗಿದ್ದ ವಿಷಯವಾಗಿತ್ತು.
ಪರಿಸರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ಅವರು, ಅರಣ್ಯ ನೀತಿಗಳಿಂದ ಬೆದರಿಕೆಗೆ ಒಳಗಾದ ಸಮುದಾಯಗಳಿಗೆ ಭೂಮಿಯ ಮೇಲಿನ ಹಕ್ಕು ಸಿಗಬೇಕು ಎಂದು ಪ್ರತಿಪಾದಿಸಿದ್ದರು. ಜನಪರವಾಗಿ ಸಮಾಜದಲ್ಲಿ ಜಾಗೃತಿ ಮೂಡಿಸುವುದು, ತಳಮಟ್ಟದಲ್ಲಿ ಹೋರಾಟಗಳನ್ನು ಸಂಘಟಿಸುವುದು, ಆಡಳಿತ ಮತ್ತು ಶಾಸಕಾಂಗ ಮಟ್ಟದಲ್ಲಿ ತಮಗೆ ಇದ್ದ ಪ್ರಭಾವ ಬಳಸಿ ಜನರಿಗೆ ನ್ಯಾಯ ಕೊಡಿಸಲು ಶ್ರಮಿಸಿದ್ದರು. ಸುಪ್ರೀಂ ಕೋರ್ಟ್ ಸೇರಿದಂತೆ ಹಲವು ನ್ಯಾಯಾಲಯಗಳಲ್ಲಿ ಮೊಕದ್ದಮೆ ಹೂಡಿದ್ದರು.
ಎಸ್‌ಆರ್ ರಾಮಸ್ವಾಮಿ ಅವರಿಗೆ ಸಂದ ಪ್ರಮುಖ ಗೌರವ, ಪುರಸ್ಕಾರಗಳು
ರಾಮಸ್ವಾಮಿ ಅವರ ಲೇಖನಿಯಿಂದ 50 ಕ್ಕೂ ಹೆಚ್ಚು ಕೃತಿಗಳು ಹೊರಹೊಮ್ಮಿವೆ.
'ಶತಮಾನದ ತಿರುವಿನಲ್ಲಿ ಭಾರತ' (1992) ಸಮಾಜ ವಿಜ್ಞಾನ ಕೃತಿಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪತ್ರಿಕೋದ್ಯಮಕ್ಕೆ ನೀಡಿದ ಕೊಡುಗೆಗಾಗಿ ಆರ್ಯಭಟ ಪ್ರಶಸ್ತಿ (2006), ನಾಡಿಗೆ ಕೊಟ್ಟ ಕೊಡುಗೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (2008), ಸಾಹಿತ್ಯ ಮತ್ತು ಪತ್ರಿಕೋದ್ಯಮಕ್ಕೆ ನೀಡಿದ ಜೀವಮಾನದ ಕೊಡುಗೆಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ಶ್ರೀಯುತರಿಗೆ ಗೌರವ ಡಾಕ್ಟರೇಟ್ (2011) ನೀಡಿ ಗೌರವಿಸಿದೆ. ಕನ್ನಡ ವಿಶ್ವವಿದ್ಯಾಲಯವು ರಾಮಸ್ವಾಮಿ ಅವರಿಗೆ ನಾಡಿನ ಪ್ರತಿಷ್ಠಿತ 'ನಾಡೋಜ' (2015) ಪದವಿ ನೀಡಿ ಗೌರವಿಸಿತು.
(ಮತ್ತಷ್ಟು ಮಾಹಿತಿ ಶೀಘ್ರ ಅಪ್‌ಡೇಟ್ ಆಗಲಿದೆ)












Click it and Unblock the Notifications