ಯಡಿಯೂರಪ್ಪ ಅವರಂತೆ ಜೈಲಿಗೆ ಹೋಗಲು ನಾನು ಸಿದ್ದನಿಲ್ಲ: ಡಿ ಕೆ ಶಿವಕುಮಾರ್ ಹೀಗೆ ಹೇಳಿದ್ಯಾಕೆ?
ರಾಮನಗರ, ಸೆಪ್ಟೆಂಬರ್ 4: ಬಿಡದಿ ಟೌನ್ ಶಿಪ್ ನಿರ್ಮಾಣಕ್ಕೆ ತೀರ್ಮಾನ ಮಾಡಿದ್ದು ಕುಮಾರಸ್ವಾಮಿ ಅವರು. ಇದನ್ನು ನಾನು ಡಿನೋಟಿಫಿಕೇಷನ್ ಮಾಡಿ ಯಡಿಯೂರಪ್ಪ ಅವರಂತೆ ಜೈಲಿಗೆ ಹೋಗಲು ತಯಾರಿಲ್ಲ. ಕಾನೂನು ಚೌಕಟ್ಟಿನಲ್ಲಿ ರೈತರಿಗೆ ನೆರವಾಗಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಭೂಸ್ವಾಧೀನ ವಿರೋಧಿಸಿ ರಾಮನಗರದ ಜಿಲ್ಲಾಧಿಕಾರಿ ಕಚೇರಿ ಪ್ರತಿಭಟನಾ ನಿರತ ರೈತರನ್ನು ಉದ್ದೇಶಿಸಿ ಗುರುವಾರ ಮಾತನಾಡಿದ ಡಿ ಕೆ ಶಿವಕುಮಾರ್, ನಾನು ಹೊರಗಡೆಯಿಂದ ಬಂದವನಲ್ಲ. ನಾನು ಕೂಡ ನಿಮ್ಮ ಜಿಲ್ಲೆಯವನೇ. ಬಿಡದಿ ಕೈಗಾರಿಕಾ ಪ್ರದೇಶ ಮಾಡಿದಾಗ ಯಾವ ಸರ್ಕಾರ ಅಧಿಕಾರದಲ್ಲಿತ್ತು ಎಂಬುದು ರೈತರಿಗೆ ತಿಳಿದಿದೆ. ಇದರಿಂದ 16 ಸಾವಿರ ಎಕರೆ ಭೂಮಿ ಹೋಯಿತು. ಟೊಯೋಟೊ ಸೇರಿದಂತೆ ಒಂದಷ್ಟು ಕಂಪನಿಗಳು ಈ ಭಾಗಕ್ಕೆ ಬಂದವು. ಈ ಹಿಂದೆ ಕೈಗಾರಿಕಾ ಪ್ರದೇಶವಾದಾಗ ನನ್ನದೂ ಸಹ 12 ಎಕರೆ ಜಮೀನು ಹೋಗಿದೆ. ಆಗ ಪರಿಹಾರವನ್ನು 8 ಲಕ್ಷಕ್ಕೆ ಮೀರಿ ನೀಡಿಯೇ ಇಲ್ಲ ಎಂದರು.

ನಿಮಗೆ ಉತ್ತಮ ಪರಿಹಾರ ನೀಡಲು ಸುಮಾರು 10 ಸಾವಿರ ಕೋಟಿ ರೂ. ಸಾಲ ಮಾಡುವ ಬಗ್ಗೆ ಚರ್ಚೆ ನಡೆಸಲಾಗಿದೆ. ನಿಮ್ಮ ಒಂದು ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಅವಶ್ಯಕತೆ ನಮಗಿಲ್ಲ. ಸ್ವಾಧೀನವಾಗಿರುವ ಭೂಮಿಯನ್ನು ಕಾನೂನು ಚೌಕಟ್ಟು ಮೀರಿ ಕೈ ಬಿಡುವ ಹಂತದಲ್ಲಿ ನಾನಿಲ್ಲ ಎಂದರು. ಕುಮಾರಸ್ವಾಮಿ ಅವರ ಧರ್ಮಪತ್ನಿಯವರು ಹಾಗೂ ಮಗ ಸೇರಿದಂತೆ ಶೇ.70 ರಷ್ಟು ಮಂದಿ ಪರಿಹಾರ ನೀಡಿ ಎಂದು ಭೂಸ್ವಾಧೀನಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಶೇ.30 ರಷ್ಟು ಮಂದಿ ಮಾತ್ರ ಒಪ್ಪಿಗೆ ನೀಡಿಲ್ಲ. ಆದರೆ ನಾನು ನಿಮ್ಮ ಪರವಾಗಿ ಏನು ತೀರ್ಮಾನ ತೆಗೆದುಕೊಳ್ಳಬೇಕು. ಯಾವ ರೀತಿ ಸಹಾಯ ಮಾಡಬೇಕು ಎಂದು ಚರ್ಚೆ ನಡೆಸುತ್ತೇನೆ ಎಂದು ತಿಳಿಸಿದರು.
ನಾನು ಕೇವಲ ಬಿಡದಿ ಪ್ರದೇಶಕ್ಕೆ ಮಾತ್ರ ವಿಶೇಷವಾಗಿ ತೀರ್ಮಾನ ತೆಗೆದುಕೊಳ್ಳಲು ಕಾನೂನಿನಲ್ಲಿ ಸಾಧ್ಯವಿಲ್ಲ. ತೀರ್ಮಾನ ತೆಗೆದುಕೊಂಡರೆ ಇಡೀ ರಾಜ್ಯದ ಎಲ್ಲಾ ಭೂ ಸ್ವಾಧೀನಗಳ ಮೇಲೆ ಪರಿಣಾಮ ಬೀರಲಿದೆ. ಈ ಪ್ರದೇಶವನ್ನು ಕೈ ಬಿಡಬೇಕು ಎನ್ನುವ ಒತ್ತಡ ಕೂಡ ಇತ್ತು. ಆದರೆ ಕಾನೂನಿನ ಚೌಕಟ್ಟಿನಲ್ಲಿ ಡಿನೋಟಿಫಿಕೇಷನ್ ಮಾಡಲು ಆಗುವುದಿಲ್ಲ ಎನ್ನುವ ಅಭಿಪ್ರಾಯಗಳು ಬಂದಿವೆ ಎಂದರು.
ಬಿಡದಿಯ ರೈತರಿಗೆ ಸಹಾಯ ಮಾಡಬೇಕು ಎಂದು ಮಾಜಿ ಸಂಸದರಾದ ಡಿ.ಕೆ.ಸುರೇಶ್ ಅವರು, ಶಾಸಕರಾದ ಬಾಲಕೃಷ್ಣ ಅವರು ಹಲವಾರು ಸಭೆಗಳನ್ನು ನಡೆಸಿದ್ದಾರೆ. ನಿಮ್ಮ ಪರವಾಗಿ ಅವರಿಗೂ ಜವಾಬ್ದಾರಿಯಿದೆ ಎಂದರು. ಈ ವೇಳೆ ಶಾಸಕ ಬಾಲಕೃಷ್ಣ ಅವರು ರೈತರ ಪರವಿಲ್ಲ ಎಂದು ಪ್ರತಿಭಟನಾ ನಿರತ ರೈತರು ಆಕ್ಷೇಪ ವ್ಯಕ್ತಪಡಿಸಿದಾಗ, "ಬಾಲಕೃಷ್ಣ ಅವರು ನಿಮ್ಮ ಪರವಾಗಿ ಎಷ್ಟು ಹೋರಾಟ ಮಾಡಿದ್ದಾರೆ ಎಂಬುದು ನನಗೆ ತಿಳಿದಿದೆ.
ನನ್ನ ಹಿಂದೆ ಬಿದ್ದು ರೈತರ ಪರವಾಗಿ ಮಾತನಾಡಿದ್ದಾರೆ. ನಿಮ್ಮ ಭೂಮಿಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಹಿಂದೆ ಸಹಿ ಹಾಕಿದವರು ನಿಮ್ಮ ಪರವಾಗಿದ್ದಾರಾ? ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ರೂ.1 ಕೋಟಿ ಪರಿಹಾರ ನಿಗದಿ ಮಾಡಿದವರು ನಿಮ್ಮ ಪರವಾಗಿದ್ದಾರಾ? ಅವರುಗಳು ಯಾರೂ ನಿಮ್ಮ ಪರವಾಗಿಲ್ಲ. ರೈತರಿಗೆ ಉತ್ತಮ ಪರಿಹಾರ ದೊರೆಯಬೇಕು ಎಂದು ಹೋರಾಟ ಮಾಡುತ್ತಿರುವ ಶಾಸಕ ಬಾಲಕೃಷ್ಣ ನಿಮ್ಮ ಪರವಾಗಿದ್ದಾರೆ. ನಿಮ್ಮ ಪರವಾಗಿ ಇವರಷ್ಟು ಹೋರಾಟವನ್ನು ಬೇರೆ ಯಾರೂ ಸಹ ಮಾಡಿಲ್ಲ ಎಂದರು.
ಡಿಎಲ್ ಎಫ್ ಕಂಪೆನಿಯವರು ಈ ಪ್ರದೇಶವನ್ನು ತೆಗೆದುಕೊಂಡರು. ಆ ನಂತರ ಇಲ್ಲಿನ ವೃಷಭಾವತಿ ನೀರು ಸೇರಿದಂತೆ ಇತರೇ ಸಂಗತಿಗಳನ್ನು ಗಮನಿಸಿ ನಮ್ಮಿಂದ ಟೌನ್ ಶಿಪ್ ಮಾಡಲು ಸಾಧ್ಯವಿಲ್ಲ ಎಂದು ಯೋಜನೆ ಕೈ ಬಿಟ್ಟರು. 9,600 ಎಕರೆ ಪ್ರದೇಶದಲ್ಲಿ ಸುಮಾರು 912 ಎಕರೆ ಪ್ರದೇಶವನ್ನು ಕೈಗಾರಿಕೆಗೆ ಎಂದು ನೀಡಲಾಯಿತು. ಎಕರೆಗೆ ರೂ.1 ಕೋಟಿ ಹಾಗೂ ಅದಕ್ಕಿಂತ ಹೆಚ್ಚು ಪರಿಹಾರ ಹಣವನ್ನು ನಿಗದಿ ಪಡಿಸಲಾಯಿತು. ಆಗ ಯಾರೂ ಸಹ ವಿರೋಧ ಮಾಡಲಿಲ್ಲ. ಈಗ ಏಕೆ ವಿರೋಧ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.












Click it and Unblock the Notifications