ಜೀವ ಬೆದರಿಕೆಗೆ ಹೆದರುವುದಿಲ್ಲ; ಕಲಬುರ್ಗಿಗೆ ಹೋಗುತ್ತೇನೆ: ಸವಾಲು ಹಾಕಿದ ಬಿಜೆಪಿ ನಾಯಕ
ಬೆಂಗಳೂರು, ಮೇ 24: ಕಲಬುರ್ಗಿ ಜಿಲ್ಲೆಯಲ್ಲಿ ಕಾಂಗ್ರೆಸ್ಸಿನ ಗೂಂಡಾ ಸಂಸ್ಕೃತಿ ಅನಾವರಣಗೊಂಡಿದೆ. ಅಲ್ಲಿ ನಡೆದಿದ್ದೇನೆಂದು ನಾನೂ ಹೇಳಲಿದ್ದೇನೆ. ಅವರು ಜೀವ ಬೆದರಿಕೆ ಹಾಕಬಹುದು. ನನಗೆ ಹೆದರಿಕೆ ಇಲ್ಲ. ಆಗೋದು ಏನಿದೆ ಅದೂ ಆಗಲಿ, ಅವರಿಗೆ ಏನು ಮಾಡುತ್ತಾರೋ ಮಾಡಲಿ. ನಮ್ಮ ಪಕ್ಷದ ಕಾರ್ಯಕರ್ತರು ಇದಕ್ಕೆ ಉತ್ತರ ನೀಡುತ್ತಾರೆ ಎಂದು ಪ್ರಿಯಾಂಕ್ ಖರ್ಗೆ ವಿರುದ್ಧ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಕಿಡಿಕಾರಿದರು.
ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ನನಗೆ ಆಗಿರುವ ಹಕ್ಕುಚ್ಯುತಿ ಕುರಿತು ಸಭಾಪತಿ ಅವರ ಅನುಪಸ್ಥಿತಿಯಲ್ಲಿ ಅವರ ಆಪ್ತ ಸಹಾಯಕರಿಗೆ ಮನವಿ ನೀಡಿದ್ದೇವೆ. ಸಭಾಪತಿಯವರ ಜೊತೆ ಫೋನಿನಲ್ಲಿ ಮಾತನಾಡಿದ್ದೇನೆ. ತಕ್ಷಣ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ, ನಮ್ಮನ್ನು ನಾಯಿಗೆ ಹೋಲಿಸಿದ್ದಾರೆ. ನಮ್ಮ ಕ್ಷೇತ್ರಕ್ಕೆ ಬಂದ ಅವರಿಗೆ ಪದ್ಮಶ್ರೀ ಕೊಡಬೇಕಿತ್ತೇ ಎಂದು ಸಚಿವರು ಕೇಳಿದ್ದಾರೆ. ದಿಗ್ಬಂಧನ ಹಾಕಿದ್ದೂ ಸರಿ, ಮಸಿ ಅಥವಾ ಇಂಕ್ ಚೆಲ್ಲಿದ್ದೂ ಸರಿ, ಮೊಟ್ಟೆ, ಕಲ್ಲುಗಳಲ್ಲಿ ಹೊಡೆದಿದ್ದೂ ಸರಿ, ನಮ್ಮ ಉತ್ತರ ಹೀಗೇ ಇರುತ್ತದೆ ಎಂಬುದನ್ನು ಅವರು ಹೇಳಿಕೊಂಡಿದ್ದಾರೆ ಎಂದು ತಿಳಿಸಿದರು.

ಪ್ರಧಾನಿಯವರು ಸಂಸತ್ತಿನಲ್ಲಿ ಮಾತನಾಡುವಾಗ ಗೌರವಾನ್ವಿತ ಖರ್ಗೆಯವರು ನಿಮ್ಮ ಮನೆಯ ನಾಯಿಯೂ ಸ್ವಾತಂತ್ರ್ಯ ಹೋರಾಟದಲ್ಲಿ ಸತ್ತಿಲ್ಲ ಎಂದಿದ್ದರು. ಅವರು ನಾಯಿ ಪದ ಬಳಸಿಲ್ಲವೇ? ಈ ದೇಶದ ಪ್ರಧಾನಿಯನ್ನು ವಿಷ ಸರ್ಪ ಎಂದು ಆಪಾದಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಪಕ್ಷ ನಾಯಕರಾಗಿದ್ದಾಗ ನಾನು ಕೂಡ ಚಡ್ಡಿ ಸುಡುತ್ತೇನೆ ಎಂದಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆಯೂ ಒಂದು ಅಂಗ. ಅದಕ್ಕೆ ವಿರುದ್ಧವಾಗಿ ಉತ್ತರ ಕೊಡುವ ರೀತಿಯಲ್ಲಿ ಅವರಿಗೆ ಎರಡು ಚಡ್ಡಿ ಕೊಟ್ಟಿದ್ದೆ ಎಂದು ತಿಳಿಸಿದರು.
ಆಗ ಮನುವಾದಿ ಎಂದು ಟೀಕಿಸಿದ್ದರು. ಮನುವಾದಿ ಎಂದರೆ ಏನು ಎಂದು ಕೇಳಿದರು. ನಿಮ್ಮ ಉದ್ಧಟತನ, ದರ್ಪ ನಿಮ್ಮಲ್ಲೇ ಇರಲಿ. ನನ್ನನ್ನು ಕೆಣಕಲು ಹೋಗದಿರಿ ಎಂದು ಸವಾಲು ಹಾಕಿದರು. ಇದು ದಲಿತರ ಪ್ರಶ್ನೆಯೇ ಅಲ್ಲ, ನೀವು ನಮ್ಮನ್ನು ಆ ರೀತಿ ನಿಂದಿಸದಿದ್ದರೆ ನಾವು ನಿಂದಿಸುವ ಪ್ರಶ್ನೆ ಬರುತ್ತಿರಲಿಲ್ಲ ಎಂದು ತಿಳಿಸಿದರು. ನೀವು ಸಚಿವರು, ನಾನು ವಿಪಕ್ಷ ನಾಯಕ. ನೀವು ನನ್ನ ಬಗ್ಗೆ ಮಾತನಾಡಿದಾಗ ನಾನು ತಮ್ಮ ಬಗ್ಗೆ ಮಾತನಾಡಬಾರದೇ? ಪ್ರಧಾನಿ ಬಗ್ಗೆ ಪ್ರಶ್ನಿಸಿ,ಆದರೆ ನಿಂದನೆಗಳು ಸರಿಯೇ ಎಂದು ಕೇಳಿದರು.
ಆನೆಯೇರಿ ಹೋದಡೆ ಶ್ವಾನ ಬಗಳುವುದಲ್ಲದೆ ಕಚ್ಚುವುದೇ ಎಂದು ಅಣ್ಣ ಬಸವಣ್ಣನವರು ಹೇಳಿದ್ದಾರೆ. ಇದು ವಚನ. ಅಷ್ಟೇ ಏಕೆ ಬಹಳಷ್ಟು ಜನರು ಬಹಳ ವ್ಯಾಖ್ಯಾನ ಮಾಡಿದ್ದಾರೆ. ನಾಯಿ ಎಂದರೆ ಅದೊಂದು ಪ್ರಾಣಿ ಇರಬಹುದು. ನಾಯಿಯೇ ನಾರಾಯಣ ಅನ್ನುತ್ತಾರೆ ಎಂದು ಹೇಳಿದರು. ವಿಷ ಸರ್ಪ ಎಂಬುದು ಕೆಟ್ಟ ಪದ. ನಾಯಿ ಎಂಬುದು ಕೆಟ್ಟ ಪದವಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಹೇಳಿದರು.
ಪದೇಪದೇ ಚಡ್ಡಿ ಎನ್ನದಿರಿ. ನೀವು ಚಡ್ಡಿ ಇಲ್ಲದವರೇ ಎಂದು ಕೇಳಿದರು. ನಿಮ್ಮ ಚಡ್ಡಿ ಭದ್ರ ಮಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು. ನಾಳೆ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಅಶೋಕ್, ನಮ್ಮ ಶಾಸಕ ಮಿತ್ರರೆಲ್ಲರೂ ಸೇರಿ ಕಲಬುರ್ಗಿಗೆ ಹೋಗುತ್ತೇವೆ. ನಾನೂ ಕೂಡ ಹೋಗಲೇಬೇಕಿದೆ. ನಾವು ಬಿಜೆಪಿ ಕಾರ್ಯಕರ್ತರನ್ನು ಬೀದಿಯಲ್ಲಿ ಓಡಾಡಲು ಬಿಡುವುದಿಲ್ಲ ಎಂದಿದ್ದೀರಿ. ನಾವು ಹಾಗೆ ಹೇಳುವುದಿಲ್ಲ. ನಮ್ಮ ಕಾರ್ಯಕರ್ತರು ರೌಡಿಗಳಲ್ಲ; ಅವರು ದೇಶಭಕ್ತರು ಎಂದು ಸ್ಪಷ್ಟಪಡಿಸಿದರು. ನಮ್ಮ ಕಾರ್ಯಕರ್ತರು ನಿಮ್ಮ ವಿರುದ್ಧ ಕೆಲಸ ಮಾಡುವುದಿಲ್ಲ. ಪಕ್ಷದ ಪರ, ದೇಶದ ಪರವಾಗಿ ಕೆಲಸ ಮಾಡುತ್ತಾರೆ ಎಂದು ನುಡಿದರು. ನಿಮ್ಮ ದರ್ಪಕ್ಕೆ ಕಾನೂನು ಉತ್ತರ ಕೊಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಕೆಟ್ಟಿದೆ. ಪೊಲೀಸಿನವರು ಪಾಪ ಹೆದರುತ್ತಾರೆ. ಗುಲ್ಬರ್ಗವು ರಿಪಬ್ಲಿಕ್ ಆಫ್ ಗುಲ್ಬರ್ಗ ಆಗಿದೆ ಎಂದು ನಾನು ಅಲ್ಲಿ ಹೋದಾಗ ಹೇಳಿದ್ದೇನೆ. ಬಾಬಾಸಾಹೇಬ ಅಂಬೇಡ್ಕರರ ಸಂವಿಧಾನ, ಈ ದೇಶದ ಕಾನೂನು ಅಲ್ಲಿ ಜಾರಿಯಲ್ಲಿಲ್ಲ, ಮಂತ್ರಿಗಳು ಹೇಳಿದ್ದೇ ಕಾನೂನು ಸಚಿವರು ನಡೆದಿದ್ದೇ ದಾರಿ ಆಗಿದೆ ಎಂದು ಟೀಕಿಸಿದರು.












Click it and Unblock the Notifications