ವಾಯುಭಾರ ಕುಸಿತ; ಮುಂಗಾರು ಮಳೆ ಮತ್ತಷ್ಟು ವಿಳಂಬ
ಬೆಂಗಳೂರು, ಜೂನ್ 15; ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಬಿಪೊರ್‌ಜಾಯ್ ಚಂಡಮಾರುತದಿಂದಾಗಿ ನೈಋತ್ಯ ಮುಂಗಾರು ಮಳೆ ವಿಳಂಬವಾಗಿದೆ. ಜೂನ್ 15 ಬಂದರೂ ಸರಿಯಾಗಿ ಮಳೆಯಾಗದೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬರದ ಛಾಯೆ ಆವರಿಸಿದೆ. ಸದ್ಯದ ಮಾಹಿತಿ ಪ್ರಕಾರ ಮುಂಗಾರು ಮಳೆ ಸುರಿಯುವುದು ಮತ್ತಷ್ಟು ತಡವಾಗಲಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಲಿದ್ದು, ನೈಋತ್ಯ ಮುಂಗಾರು ಮತ್ತಷ್ಟು ದುರ್ಬಲವಾಗಲಿದೆ. ಇದರ ಪರಿಣಾಮ ಸುಮಾರು ಎರಡು ವಾರಗಳ ಕಾಲ ಮಳೆ ವಿಳಂಬವಾಗಲಿದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ. ಆದ್ದರಿಂದ ಜುಲೈನಲ್ಲಿ ಮುಂಗಾರು ಮಳೆಯ ಅಬ್ಬರ ನಿರೀಕ್ಷೆ ಮಾಡಬಹುದಾಗಿದೆ.

ಬಿಪೊರ್‌ಜಾಯ್ ಚಂಡಮಾರುತ ವಾತಾವರಣದಲ್ಲಿನ ತೇವಾಂಶವನ್ನು ಸೆಳೆದುಕೊಂಡ ಪರಿಣಾಮ ರಾಜ್ಯದಲ್ಲಿ ನೈಋತ್ಯ ಮುಂಗಾರು ದುರ್ಬಲಗೊಂಡಿದೆ. ಆದ್ದರಿಂದ ಜೂನ್ ತಿಂಗಳ ಆರಂಭದಲ್ಲಿಯೇ ಅಬ್ಬರಿಸಬೇಕಿದ್ದ ಮುಂಗಾರು ಮಳೆಯ ಸುಳಿವಿಲ್ಲ. ವಿವಿಧ ಜಿಲ್ಲೆಗಳಲ್ಲಿ ಮಳೆ ಇಲ್ಲದೇ ಕುಡಿಯುವ ನೀರಿಗೂ ಸಹ ಕೊರತೆ ಉಂಟಾಗಿದೆ.
ಎಷ್ಟು ಮಳೆಯ ಕೊರತೆ; ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್ಎನ್‌ಎಂಡಿಸಿ) ಮಾಹಿತಿ ಪ್ರಕಾರ ಜೂನ್ 1 ರಿಂದ 13ರ ತನರ ರಾಜ್ಯದಲ್ಲಿನ ಮಳೆಯ ಕೊರತೆ ಶೇ 66. ಈ ಅವಧಿಯಲ್ಲಿ ವಾಡಿಕೆಯಂತೆ 70 ಮಿ. ಮೀ. ಮಳೆಯಾಗಬೇಕಿತ್ತು. ಆದರೆ ಕೇವಲ 24 ಮಿ. ಮೀ. ಮಳೆಯಾಗಿದೆ. ಬಿಪೊರ್‌ಜಾಯ್ ಚಂಡಮಾರುತದ ಪರಿಣಾಮದಿಂದಲೂ ರಾಜ್ಯದಲ್ಲಿ ಮಳೆ ಸುರಿದಿಲ್ಲ.
ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಶೇ 44, ಉತ್ತರ ಒಳನಾಡು ಶೇ 58, ಮಲೆನಾಡಿನಲ್ಲಿ ಶೇ 78 ಹಾಗೂ ಕರಾವಳಿಯಲ್ಲಿ ಶೇ 73ರಷ್ಟು ವಾಡಿಕೆಗಿಂತ ಮಳೆ ಕೊರತೆ ಇದೆ. ಜೂನ್ ಮೊದಲ ವಾರದಲ್ಲಿ ಆರಂಭವಾಗಬೇಕಿದ್ದ ಕೃಷಿ ಚಟುವಟಿಕೆ ಸಹ ತಡವಾಗಿದೆ. ಮತ್ತೊಂದು ಕಡೆ ನಿರೀಕ್ಷಿತ ಮಳೆ ಕೊರತೆ ನೀರಿನ ಅಭಾವ ಸೃಷ್ಟಿಮಾಡಿದೆ.

ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ರಾಜ್ಯದಲ್ಲಿ ಇನ್ನೂ ಎರಡು ವಾರಗಳ ಕಾಲ ಹೀಗೆ ಮೋಡ ಕವಿದ ವಾತಾವರಣ ಇರಲಿದೆ. ಆಗಾಗ ವಿವಿಧ ಪ್ರದೇಶಗಳಲ್ಲಿ ಮಳೆಯಾಗಲಿದೆ. ಆದರೆ ಮುಂಗಾರು ಮಳೆಯ ಆರ್ಭಟವನ್ನು ಜುಲೈ 8 ಅಥವ 10ರ ಬಳಿಕ ನಿರೀಕ್ಷಿಸಬಹುದಾಗಿದೆ. ಈ ಮುನ್ಸೂಚನೆ ಗಮನಿಸಿದರೆ ಜೂನ್‌ನಲ್ಲಿ ಕೃಷಿ ಚಟುವಟಿಕೆಗಳಿಗೆ ಭಾರೀ ಹಿನ್ನಡೆ ಉಂಟಾಗಲಿದೆ.
ಭಾಗಶಃ ಮೋಡ ಕವಿದ ವಾತಾವರಣ ಕಂಡುಬಂದರೂ ಸಹ ಸಂಜೆಯ ವೇಳೆಗೆ ಮಾತ್ರ ಸಾಧಾರಣ ಮಳೆಯಾಗುತ್ತದೆ. ಉತ್ತಮವಾದ ಮಳೆ ನಿರೀಕ್ಷೆ ಮಾಡುವುದು ಸಾಧ್ಯವಿಲ್ಲ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ. ಈ ಸಾಧಾರಣ ಮಳೆಯನ್ನು ನಂಬಿಕೊಂಡು ರೈತರು ಸಹ ಬಿತ್ತನೆ ಕಾರ್ಯಕ್ಕೆ ಕೈ ಹಾಕುವುದಿಲ್ಲ.
ಜೂನ್ 17ರ ಬಳಿಕ ಬಂಗಾಳಕೊಲ್ಲಿಯಲ್ಲಿ ಉಂಟಾಗುವ ವಾಯುಭಾರ ಕುಸಿತದ ಪರಿಣಾಮ ರಾಜ್ಯದಲ್ಲಿ ಸಾಧಾರಣ ಮಳೆ ನಿರೀಕ್ಷೆ ಮಾಡಲಾಗಿದೆ. ಇದು ಬಾಂಗ್ಲಾದೇಶದ ಕಡೆ ಸಾಗುವ ನಿರೀಕ್ಷೆ ಇದ್ದು, ದೇಶದಲ್ಲಿ ನೈಋತ್ಯ ಮುಂಗಾರು ವಿಳಂಬಕ್ಕೆ ಕಾರಣವಾಗಲಿದೆ. ನೈಋತ್ಯ ಮುಂಗಾರು ಆರಂಭದ ಅವಧಿಯಲ್ಲಿ ವಾಯುಭಾರ ಕುಸಿತ ಉಂಟಾಗುವುದು ಸಾಮಾನ್ಯವಾಗಿದೆ. ಆದರೆ ಇದರಿಂದಾಗಿ ಹೆಚ್ಚಿನ ಮಳೆಯನ್ನು ನಿರೀಕ್ಷೆ ಮಾಡುವುದು ಅಸಾಧ್ಯ.
ಈ ವಾಯುಭಾರ ಕುಸಿತವೂ ಸಹ ವಾತಾವರಣದ ತೇವಾಂಶ ಸೆಳೆದುಕೊಳ್ಳುವ ಸಾಧ್ಯತೆ ಇದ್ದು, ನೈಋತ್ಯ ಮುಂಗಾರು ದುರ್ಬಲಗೊಳಿಸಲಿದೆ. ಈಗಿನ ವಾತಾವರಣ ಮುಂಗಾರು ಹಂಗಾಮಿನ ಬಿತ್ತನೆಗೆ ಪೂರಕವಾಗಿಲ್ಲ. ಈಗ ಬೆಳೆದಿರುವ ಬೆಳೆಗಳು ಸಹ ಸರಿಯಾದ ನೀರಿನ ಸೌಲಭ್ಯ ಇಲ್ಲದೆ ಒಣಗುತ್ತಿವೆ. ಕುಡಿಯುವ ನೀರಿಗೆ ಕೊರತೆ ಉಂಟಾಗಿದ್ದು, ಬೆಳೆಗಳಿಗೆ ನೀರು ಪೂರೈಕೆ ಹೇಗೆ? ಎಂಬುದು ರೈತರ ಸಮಸ್ಯೆಯಾಗಿದೆ.












Click it and Unblock the Notifications