ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ನಾ ಡಿಸೋಜ

Posted By:
Subscribe to Oneindia Kannada

ಬೆಂಗಳೂರು, ಡಿ.4: ಕೊಡಗಿನಲ್ಲಿ ನಡೆಯಲಿರುವ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಖ್ಯಾತ ಸಾಹಿತಿ ನೋರ್ಬೆರ್ಟ್ ಡಿಸೋಜ(ನಾ. ಡಿಸೋಜ) ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರು ಘೋಷಿಸಿದ್ದಾರೆ. 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜನವರಿ 7, 8 ಮತ್ತು 9, 2014 ರಂದು ಕೆ.ಎನ್.ಕಾರ್ಯಪ್ಪ ಕ್ರೀಡಾಂಗಣದಲ್ಲಿ ಜರುಗಲಿದೆ.

ಮಡಿಕೇರಿ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಡಾ. ಎಂ.ಎಂ ಕಲಬುರ್ಗಿ, ದೇವನೂರು ಮಹಾದೇವ, ಲತಾ ರಾಜಶೇಖರ, ಬಿ.ವಿ ವೀರಭದ್ರಪ್ಪ ಮತ್ತು ಹಂಪಾ ನಾಗರಾಜಯ್ಯ ಅವರ ಹೆಸರುಗಳು ಚರ್ಚೆಗೆ ಬಂದಿತ್ತು. ಕಲಬುರ್ಗಿ ಅವರ ಹೆಸರು ಆಯ್ಕೆಯಾಗಿದೆ ಎಂಬ ಸುದ್ದಿಯೂ ಹಬ್ಬಿತ್ತು. ಆದರೆ, ನಾ. ಡಿಸೋಜ ಅವರ ಆಯ್ಕೆ ಸರ್ವಾನುಮತದಿಂದ ಆಗಿದೆ ಎಂದು ಸಾಹಿತ್ಯ ಪರಿಷತ್ತಿನ ಮೂಲಗಳು ಹೇಳಿವೆ.

'ಮೂಲತಃ ನಾನು ಕೊಂಕಣಿ ಭಾಷಿಕ. ನನಗೆ ತಿಳಿಯದೇ ಈ ಗೌರವ ಲಭಿಸಿದೆ. ಬಾಲ್ಯದಲ್ಲಿ ಕೊಂಕಣಿ ಓದಿದ್ದೆ. ನಂತರ ಕನ್ನಡ ಅಧ್ಯಯನ ಮಾಡಿದೆ. ಕನ್ನಡಕ್ಕೆ ಮಾಡಿದ ಕೆಲಸ ಖುಷಿ ಕೊಟ್ಟಿದೆ ಎಂದು ಕಾದಂಬರಿಕಾರ ನಾ ಡಿಸೋಜ ಅವರು ತಕ್ಷಣದ ಪ್ರತಿಕ್ರಿಯೆ ನೀಡಿದ್ದಾರೆ.

Writer Norbert D'Souza Kannada Sahitya Sammelena, Kodagu P resident

ಜನಪರ ಕಾಳಜಿ, ಪರಿಸರ ಕಾಳಜಿವುಳ್ಳ ಸಾಹಿತ್ಯ ನೀಡುವ ಮೂಲಕ ಮನೆ ಮಾತಾಗಿರುವ ನಾ. ಡಿಸೋಜ ಅವರು ಮಕ್ಕಳ ಸಾಹಿತ್ಯಕ್ಕೂ ಅಪಾರ ಕೊಡುಗೆ ನೀಡಿದ್ದಾರೆ. ಇವರ ಕೃತಿಗಳು ಸಿನಿಮಾಗಳಿಗೆ ಕಥೆ ಒದಗಿಸಿ ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿ ಗಳಿಸಿದೆ.

ಸುರೇಶ್ ಹೆಬ್ಲೀಕರ್ ನಿರ್ದೇಶನದಲ್ಲಿ ‘ಕಾಡಿನ ಬೆಂಕಿ', ಗಿರೀಶ್ ಕಾಸರವಳ್ಳಿ ನಿರ್ದೇಶನದಲ್ಲಿ ‘ದ್ವೀಪ', ಸಿರಿಗಂಧ ಶ್ರೀನಿವಾಸಮೂರ್ತಿ ನಿರ್ದೇಶನದ ‘ಬಳುವಳಿ', ಕೋಡ್ಲು ರಾಮಕೃಷ್ಣರವರ ನಿರ್ದೇಶನದ ‘ಬೆಟ್ಟದಪುರದ ದಿಟ್ಟ ಮಕ್ಕಳು' ಮತ್ತು ಮನು ನಿರ್ದೇಶನದ ‘ಆಂತರ್ಯ' ಚಲನಚಿತ್ರಗಳು ಜನಪ್ರಿಯತೆ ಗಳಿಸಿವೆ. 'ಕಾಡಿನ ಬೆಂಕಿ' ಚಿತ್ರ ರಜತ ಕಮಲ ಪ್ರಶಸ್ತಿ , 'ದ್ವೀಪ' ಚಿತ್ರ 'ಸ್ವರ್ಣ ಕಮಲ' ಪ್ರಶಸ್ತಿಯನ್ನೂ ಗಳಿಸಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಗೌರವಕ್ಕೆ ಪಾತ್ರವಾಗಿವೆ.

ಮಕ್ಕಳ ಸಾಹಿತ್ಯದಲ್ಲಿ ಕೃಷಿ ಮಾಡಿರುವ ನಾ.ಡಿಸೋಜ ಮಕ್ಕಳ ಸಾಹಿತ್ಯದ ವಿವಿಧ ಪ್ರಕಾರದಲ್ಲಿ 12 ಕೃತಿಗಳನ್ನು ಪ್ರಕಟಿಸಿದ್ದಾರೆ. ಡಿಸೋಜ ಅವರ ಹಲವಾರು ಸಣ್ಣ ಕಥೆಗಳು ಕೊಂಕಣಿ, ಮಲಯಾಳಂ, ತೆಲುಗು, ಸಂಸ್ಕೃತ, ಹಿಂದಿ, ಇಂಗ್ಲಿಷ್ ಭಾಷೆಗೂ ಅನುವಾದಗೊಂಡಿವೆ. ಕನ್ನಡದಲ್ಲಿ ಆನ್ ಲೈನ್ ಪತ್ರಿಕಗಳ ಬಗ್ಗೆ ನಾ. ಡಿಸೋಜ ಅವರು ಕನ್ನಡಟೈಮ್ಸ್ ಜತೆ ಮಾತನಾಡಿದ ವಿಡಿಯೋ ಇಲ್ಲಿದೆ ನೋಡಿ...

‘ಮುಳುಗಡೆ', ‘ಕೊಳಗ', ‘ಒಳಿತನ್ನು ಮಾಡಲು ಬಂದವರು', ‘ಬಣ್ಣ', ‘ಪಾದರಿಯಾಗುವ ಹುಡುಗ', ‘ಇಬ್ಬರು ಮಾಜಿಗಳು' ಮುಂತಾದ ಕಾದಂಬರಿಗಳು ಕುವೆಂಪು ವಿಶ್ವವಿದ್ಯಾಲಯದ ಬಿ.ಎಸ್ಸಿ., ಬಿ.ಕಾಂ., ತರಗತಿಗಳಿಗೆ, ಬೆಂಗಳೂರು ವಿಶ್ವವಿದ್ಯಾಲಯದನ ಬಿ.ಎ. ತರಗತಿಗಳಿಗೆ, ಮಂಗಳೂರು ವಿಶ್ವವಿದ್ಯಾಲಯದ ಬಿ.ಕಾಂ. ತರಗತಿಗಳಿಗೆ ಮತ್ತು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಮುಂತಾದೆಡೆಗಳಲ್ಲಿ ಪಠ್ಯಪುಸ್ತಕಗಳಾಗಿವೆ. ಕರ್ನಾಟಕ ಸಾಹಿತ್ಯ ಅಕಾಡಮಿ ಪುರಸ್ಕಾರ, ಅಖಿಲ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಸೇರಿದಂತೆ ಹತ್ತು ಹಲವು ಪುರಸ್ಕಾರ ಗೌರವಕ್ಕೆ ಪಾತ್ರರಾಗಿದ್ದಾರೆ. ಹೆಚ್ಚಿನ ಮಾಹಿತಿ ಅವಧಿಯಲ್ಲಿ ಕಾಣಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Eminent Kannada writer and novelist Norbert D'Souza is chosen as President for 80th Kannada Sahitya Sammelana to be held in Kodagu said Kannada Sahitya Parishat President Pundalika Halambi today(Dec.4)
Please Wait while comments are loading...