ಪಿಎಸ್ಐ ಆಕಾಂಕ್ಷಿಗಳೇ.. ಹೊಸ ನೇಮಕಾತಿ ಪ್ರಕ್ರಿಯೆ ಸದ್ಯಕ್ಕಿಲ್ಲ: ಯಾಕೆ ಗೊತ್ತಾ?
ಬೆಂಗಳೂರು, ಜು. 07: ಬೊಮ್ಮಾಯಿ ಸರ್ಕಾರ ಬದಲಾಗಿ ಹೊಸ ಸರ್ಕಾರ ಬಂದರೂ 545 ಪಿಎಸ್ಐ ನೇಮಕಾತಿ ಪ್ರಕ್ರಿಯೆ ಆರಂಭವಾಗುವುದು ಅನುಮಾನ!
ಸದ್ಯದ ಪರಿಸ್ಥಿತಿಯಲ್ಲಿ ಪಿಎಸ್ಐ ನೇಮಕಾತಿ ಸಂಬಂಧ ಹೊಸ ಅಧಿಸೂಚನೆ ಹೊರಡಿಸಿದರೂ ಅದು ಊರ್ಜಿತ ಆಗುವುದಿಲ್ಲ. ಹೀಗಾಗಿ ಪಿಎಸ್ಐ ನೇಮಕಾತಿ ಪ್ರಕ್ರಿಯೆ ಪ್ರಸ್ತಾಪದಿಂದಲೇ ಪೊಲೀಸ್ ಇಲಾಖೆ ಹಿಂದೆ ಸರಿದಿದೆ.
ಪಿಎಸ್ಐ ಅಕ್ರಮ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ 545 ಪಿಎಸ್ಐ ನೇಮಕಾತಿ ಪ್ರಕ್ರಿಯೆ ರದ್ದಾಗಿದೆ. ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಆಯ್ಕೆಯಾಗಿದ್ದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಭರವಸೆ ಕೊಟ್ಟಿದ್ದರು. ವಾಸ್ತವದಲ್ಲಿ ಈಗ ಪಿಎಸ್ಐ ನೇಮಕಾತಿ ಪ್ರಕ್ರಿಯೆಗೆ ಹೊಸ ಅಧಿಸೂಚನೆ ಹೊರಡಿಸಿದ್ರೆ, ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಆಯ್ಕೆಯಾಗಿದ್ದ ಅಭ್ಯರ್ಥಿಗಳು ಕೋರ್ಟ್‌ಗೆ ಹೋಗಿ ತಡೆಯಾಜ್ಞೆ ತರುವುದು ನಿಶ್ಚಿತ.
ಈ ಸತ್ಯ ಅರಿತ ಪೊಲೀಸ್ ಇಲಾಖೆ ನೇಮಕಾತಿ ಪ್ರಕ್ರಿಯೆ ಆರಂಭಿಸಿ ಕಾನೂನು ಸಮರ ಎದುರಿಸಲು ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಪೊಲೀಸ್ ಇಲಾಖೆ ಪಿಎಸ್ಐ ನೇಮಕಾತಿ ಪ್ರಕ್ರಿಯೆ ಆರಂಭಿಸಲು ನಿರುತ್ಸಾಹ ತೋರಿದೆ. ಪರಿಸ್ಥಿತಿ ನೋಡಿದ್ರೆ ಇನ್ನು ಎರಡು ವರ್ಷವಾದರೂ ಪಿಎಸ್ಐ ನೇಮಕಾತಿ ಪ್ರಕ್ರಿಯೆ ಆರಂಭವಾಗುವುದು ಅಸಾಧ್ಯ ಎಂಬ ಮಾಹಿತಿ ಪೊಲೀಸ್ ಇಲಾಖೆಯಿಂದಲೇ ಲಭ್ಯವಾಗಿದೆ.

ನ್ಯಾಯ ಸಿಗುವುದು ಸದ್ಯಕ್ಕೆ ಕನಸಿನ ಮಾತು
ಪಿಎಸ್ಐ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವ ಅರೋಪ ಕೇಳಿ ಬಂದ ಕೂಡಲೇ ಗೃಹ ಸಚಿವರು ಸಿಐಡಿ ತನಿಖೆಗೆ ವಹಿಸಿದ್ದರು. ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ, ಪಿಎಸ್ಐ ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಅತಿ ಶೀಘ್ರದಲ್ಲಿಯೇ ಪಿಎಸ್ಐ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ಈಗಾಗಲೇ ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಭರವಸೆ ನೀಡಿದ್ದರು.ಗೃಹ ಸಚಿವರು ಇದೇ ಮಾತು ಹೇಳಿದ್ದರು. ಆದ್ರೆ ಗೃಹ ಸಚಿವರು ಹೇಳಿದಂತೆ ಅನ್ಯಾಯಕ್ಕೆ ಒಳಗಾಗಿರುವ ಅಭ್ಯರ್ಥಿಗಳಿಗೆ ನ್ಯಾಯ ಸಿಗುವುದು ಸದ್ಯಕ್ಕೆ ಕನಸಿನ ಮಾತು.

ನೇಮಕಾತಿ ಪುನರಾರಂಭಿಸುವ ಬಗ್ಗೆ ಯೋಚಿಸಿಲ್ಲ
ಪಿಎಸ್ಐ ನೇಮಕಾತಿ ಪ್ರಕ್ರಿಯೆ ರದ್ದಾದ ಬಳಿಕ ಇದೀಗ ಹೊಸದಾಗಿ ನೇಮಕಾತಿ ಪ್ರಕ್ರಿಯೆ ಈಗಾಗಲೇ ಆರಂಭಿಸಬೇಕಿತ್ತು. ಸದ್ಯದ ಸ್ಥಿತಿಯಲ್ಲಿ ಪಿಎಸ್ಐ ಅಕ್ರಮದ ತನಿಖೆ ಇನ್ನೂ ಮುಂದುವರೆದಿದೆ. ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್ ಬಂಧನಕ್ಕೆ ಒಳಗಾಗಿದ್ದಾರೆ. ಇನ್ನೂ ಹಲವು ಪ್ರಭಾವಿಗಳು ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದರೂ ಅಚ್ಚರಿ ಪಡಬೇಕಿಲ್ಲ. ಈ ಅಕ್ರಮದ ತನಿಖೆ ನೆಪದಲ್ಲಿ ಪಿಎಸ್ಐ ನೇಮಕಾತಿ ಪ್ರಕ್ರಿಯೆ ಸದ್ಯಕ್ಕೆ ಪುನರಾರಂಭಿಸುವ ಬಗ್ಗೆ ಸರ್ಕಾರ ಯೋಜನೆ ಮಾಡಿಲ್ಲ. ಪಿಎಸ್ಐ ನೇಮಕಾತಿ ಪ್ರಕ್ರಿಯೆ ಅರಂಭಿಸಿದರೆ ನೊಂದ ಅಭ್ಯರ್ಥಿಗಳು ಕೋರ್ಟ್ ಮೊರೆ ಹೊಗುತ್ತಾರೆ. ತಡೆಯಾಜ್ಞೆ ತರುತ್ತಾರೆ. ಪುನಃ ನೇಮಕಾತಿ ಪ್ರಕ್ರಿಯೆ ವಿಳಂಬವಾಗಲಿದೆ. ಹೀಗಾಗಿ ಸದ್ಯದ ಮಟ್ಟಿಗೆ ಚುನಾವಣೆ ಮುಗಿಯುವ ವರೆಗೂ ಪಿಎಸ್ಐ ನೇಮಕಾತಿ ಅಧಿಸೂಚನೆ ಹೊರಡಿಸಿದರಲು ಸರ್ಕಾರ ಚಿಂತನೆ ಮಾಡಿದೆ.

ಹೊಸ ನೇಮಕಾತಿ ಅಧಿಸೂಚನೆ ಅಸಾಧ್ಯ
ರಾಜ್ಯದಲ್ಲಿ ಸುಮಾರು ಪಿಎಸ್ಐಗಳು ಸೇವಾ ಹಿರಿತನದ ಆಧಾರದ ಮೇಲೆ ಪೊಲೀಸ್ ಇನ್‌ಸ್ಪೆಕ್ಟರ್ ಗಳಾಗಿ ಬಡ್ತಿ ಹೊಂದಿದ್ದಾರೆ. ಸೇವಾ ಹಿರಿತನ ಆಧಾರದ ಮೇಲೆ ಹಲವು ಎಎಸ್ಐಗಳಿಗೆ ಪಿಎಸ್ಐ ಹುದ್ದೆಗೆ ಬಡ್ತಿ ನೀಡಿದರೂ ರಾಜ್ಯದ ಹಲವಾರು ಪೊಲೀಸ್ ಠಾಣೆಗಳಲ್ಲಿ ಪಿಎಸ್ಐ ಹುದ್ದೆಗಳು ಖಾಲಿಯಿವೆ. ಅವನ್ನು ತುಂಬುವ ಉದ್ದೇಶದಿಂದಲೇ 545 ಪಿಎಸ್ಐ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು.
"ಸದ್ಯದ ಪರಿಸ್ಥಿತಿಯಲ್ಲಿ ನೇರ ನೇಮಕಾತಿ ಮೂಲಕ ಪಿಎಸ್ಐಗಳನ್ನು ನೇಮಿಸಿ ತರಬೇತಿ ನೀಡಿ ನಿಯೋಜನೆ ಮಾಡುವುದು ಕಷ್ಟದ ಕೆಲಸ. ಹೀಗಾಗಿ ಸೇವಾ ಹಿರಿತನದ ಆಧಾರದ ಮೇಲೆ ಎಎಸ್ಐಗಳಿಗೆ ಬಡ್ತಿ ನೀಡಿ ಪಿಎಸ್ಐ ಹುದ್ದೆಗೆ ನಿಯೋಜಿಸಲು ಪೊಲೀಸ್ ಇಲಾಖೆ ಚಿಂತನೆ ಮಾಡಿದೆ. ಈ ಬೆಳವಣಿಗೆ ನೋಡಿದ್ರೆ ಸದ್ಯದ ಮಟ್ಟಿಗೆ ಪಿಎಸ್ಐ ನೇಮಕಾತಿ ಅಕ್ರಮ ತಣ್ಣಗಾಗಿ ವರ್ಷ ಕಳೆಯುವ ವರೆಗೂ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸುವುದು ಅಸಾಧ್ಯ," ಎಂದು ಪೊಲೀಸ್ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಲಕ್ಷಾಂತರ ಅಭ್ಯರ್ಥಿಗಳು ಕಾಯುತ್ತಿದ್ದಾರೆ
ಪಿಎಸ್ಐ ಹೊಸ ನೇಮಕಾತಿ ಅಧಿಸೂಚನೆಗಾಗಿ ಲಕ್ಷಾಂತರ ಅಭ್ಯರ್ಥಿಗಳು ಕಾಯುತ್ತಿದ್ದಾರೆ. ಆದ್ರೆ ಸರ್ಕಾರ ಸದ್ಯದ ಪರಿಸ್ಥಿತಿಯಲ್ಲಿ ಪಿಎಸ್ಐ ನೇಮಕಾತಿ ಅಧಿಸೂಚನೆ ಹೊರಡಿಸಿದ್ರೆ, ಅದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲು ನೊಂದ ಅಭ್ಯರ್ಥಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಆಯ್ಕೆಯಾಗಿದ್ದವರು ಪುನಃ ಆಯ್ಕೆಯಾಗುವ ಯಾವ ಭರವಸೆಯೂ ಇಲ್ಲ. ಹೀಗಾಗಿ ನ್ಯಾಯ ಕೋರಿ ಮೆಟ್ಟಿಲೇರುವ ನೆಪದಲ್ಲಿ ಹೊಸ ಅಧಿಸೂಚನೆಗೆ ತಡೆಯಾಜ್ಞೆ ತರಲು ಕಾದು ಕುಳಿತಿದ್ದಾರೆ. ಇದನ್ನು ಅರಿತ ಗೃಹ ಇಲಾಖೆ ಕೂಡ ಅಧಿಸೂಚನೆ ಹೊರಡಿಸಿದ್ರೆ ಎಡವಟ್ಟಾದೀತು ಎಂದು ಪಿಎಸ್ಐ ನೇಮಕಾತಿ ಪ್ರಕ್ರಿಯೆ ಪ್ರಸ್ತಾಪವನ್ನೇ ದೂರವಿಟ್ಟಿದೆ.












Click it and Unblock the Notifications