ನಿಶಾ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಫಿಕ್ಸ್; ಚನ್ನಪಟ್ಟಣದಿಂದ ಅಪ್ಪನ ವಿರುದ್ದ ಮಗಳು ಸ್ಪರ್ಧೆಗೆ ವೇದಿಕೆ ರೆಡಿನಾ?
ಬೆಂಗಳೂರು,ಏಪ್ರಿಲ್ 03: ಲೋಕಸಭಾ ಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಠಕ್ಕರ್ ಕೊಡುವ ನಿಟ್ಟಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿದ್ದು, ಕಮಲ-ದಳ ನಾಯಕರು ಡಿ ಕೆ ಬ್ರದರ್ಸ್ ಗೆ ಸೋಲಿನ ರುಚಿ ತೋರಿಸಲು ಪಣ ತೊಟ್ಟಿದ್ದಾರೆ. ಆದರೆ, ಈ ಎಲ್ಲಾ ತಂತ್ರಗಾರಿಕೆಯ ನಡುವೆ ಬಿಜೆಪಿ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯರಾದ ಸಿ ಪಿ ಯೋಗೇಶ್ವರ್ ಅವರ ಪುತ್ರಿ ನಿಶಾ ಯೋಗೇಶ್ವರ್ ಅವರು ಕಾಂಗ್ರೆಸ್ ಸೇರ್ಪಡೆಗೆ ಸಜ್ಜಾಗಿದ್ದಾರೆ.
ಹೌದು, ಲೋಕಸಭಾ ಚುನಾವಣಾ ತಯಾರಿಯಲ್ಲಿರುವ ರಾಜಕೀಯ ಬೆಳವಣೆಗೆಗಳ ನಡುವೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ಹಾಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದರಾದ ಡಿ ಕೆ ಸುರೇಶ್ ಅವರನ್ನ ನಿಶಾ ಯೋಗೇಶ್ವರ್ ಅವರು ಭೇಟಿಯಾಗಿದ್ದು, ಕಾಂಗ್ರೆಸ್ ಸೇರ್ಪಡೆ ಕುರಿತು ಚರ್ಚೆ ನಡೆಸಿದ್ದಾರೆ. ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ ಅವರ ಪುತ್ರಿ ನಿಶಾ ಯೋಗೇಶ್ವರ್ ಕಾಂಗ್ರೆಸ್ ಸೇರುವುದು ಖಚಿತವಾಗಿದೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ನಿಶಾ ಯೋಗೇಶ್ವರ್ ಅವರು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎನ್ನುವ ಚರ್ಚೆ ಸಾಕಷ್ಟು ಸದ್ದು ಮಾಡುತ್ತಿತ್ತು. ಇದೀಗ ಸಿ ಪಿ ಯೋಗೇಶ್ವರ್ ಅವರ ಪುತ್ರಿ ನಿಶಾ ಅವರೇ ಕಾಂಗ್ರೆಸ್ ಸೇರುವುದಾಗಿ ಹೇಳಿದ್ದಾರೆ. ಈ ಮೂಲಕ, ತಂದೆಯ ರಾಜಕೀಯ ಹಾದಿ ಹಾಗೂ ಸಿದ್ದಾಂತಗಳನ್ನ ಬಿಟ್ಟು ಭಿನ್ನ ದಾರಿಯನ್ನ ನಿಶಾ ಯೋಗೇಶ್ವರ್ ಅವರು ಆಯ್ಕೆ ಮಾಡಿಕೊಂಡಿರುವದು ತೀವ್ರ ಕುತೂಹಲ ಮೂಡಿಸಿದೆ.
ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್ ಅವರು ನಿಶಾ ಯೋಗೇಶ್ವರ್ ಅವರು ಕಾಂಗ್ರೆಸ್ ಸೇರ್ಪಡೆ ಕುರಿತು ಮಾಹಿತಿ ನೀಡಿದ್ದು, ನಿಶಾ ಅವರು ಕಾಂಗ್ರೆಸ್ ಸೇರುವ ಬಗ್ಗೆ ಹಲವು ಬಾರಿ ಮಾತನಾಡಿದ್ದಾರೆ. ಈ ಬಗ್ಗೆ ಜಿಲ್ಲೆಯ ಮುಖಂಡರು ಹಾಗೂ ನಾಯಕರ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಹೇಳಿದ್ದರು.
ಇನ್ನೂ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ನಿಶಾ ಯೋಗೇಶ್ವರ್ ಮಾತನಾಡಿ, ನಾನು ಕಾಂಗ್ರೆಸ್ ಸೇರುವ ಬಗ್ಗೆ ನಮ್ಮ ತಂದೆಯವರು ಯಾವುದೇ ರೀತಿಯ ಅಡ್ಡಿ ವ್ಯಕ್ತಪಡಿಸಿಲ್ಲ. ಅವರ ಸಂಪೂರ್ಣ ಬೆಂಬಲ ನನಗಿದೆ. ಅವರು ಚಿಕ್ಕವಯಸ್ಸಿನಲ್ಲಿಯೇ ತಳಹಂತದಿಂದ ಸ್ವತಂತ್ರವಾಗಿ ಬೆಳೆದವರು. ಅದೇ ಸ್ವಾತಂತ್ರ್ಯವನ್ನು ನನಗೂ ಕೂಡ ಕೊಟ್ಟಿದ್ದಾರೆ. ಚನ್ನಪಟ್ಟಣದ ಎಲ್ಲ ಜನರು ನನ್ನವರೇ, ಅದರಲ್ಲಿ ಅವರು ಇವರು ಅಂತಾ ಏನಿಲ್ಲ. ನಾನು ಇಲ್ಲಿಯೇ ಬೆಳೆದಿದ್ದು, ಅವರ ಮನೆ ಮಗಳಾಗಿ ಚನ್ನಪಟ್ಟಣದ ಜನರ ನಡುವೆ ನಾನು ಬೆಳೆದಿದ್ದೇನೆ. ನಾನು ಚನ್ನಪಟ್ಟಣದಲ್ಲಿ ಕೆಲಸ ಶುರು ಮಾಡಿದ್ದೇನೆ. ಕಾಂಗ್ರೆಸ್ ಪಕ್ಷದ ನಾಯಕರು ಯಾವಾಗ ಸೇರಿಸಿಕೊಳ್ಳುತ್ತಾರೋ ಆಗ ಪಕ್ಷವನ್ನು ಸೇರುತ್ತೇನೆ ಎಂದು ನಿಶಾ ಯೋಗೇಶ್ವರ್ ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ಅಪ್ಪ-ಮಗಳ ಫೈಟ್ ನಡೆಯುತ್ತಾ?
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹಾಗೂ ಸಿಪಿ ಯೋಗೇಶ್ವರ್ ನಡುವೆ ಫೈಟ್ ನಡೆಯುತ್ತಿತ್ತು. ಇದೀಗ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಸ್ಪರ್ಧೆ ನಡೆಸಿದ್ದು, ಕುಮಾರಸ್ವಾಮಿ ಗೆಲುವು ಸಾಧಿಸಿದರೆ ಸಹಜವಾಗಿ ಚನ್ನಪಟ್ಟಣದಲ್ಲಿ ಉಪ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಸಿಪಿ ಯೋಗೇಶ್ವರ್ ಕಣಕ್ಕಿಳಿಯುವುದು ಬಹುತೇಕ ಖಚಿತ. ಇತ್ತ ಕಾಂಗ್ರೆಸ್ ನಲ್ಲಿ ಸಮರ್ಥ ಅಭ್ಯರ್ಥಿ ಕೊರತೆ ಇದ್ದು, ಕಾಂಗ್ರೆಸ್ ಸೇರ್ಪಡೆಯನ್ನ ಬಯಸಿರುವ ನಿಶಾ ಯೋಗೇಶ್ವರ್ ಅವರನ್ನೇ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ಅಪ್ಪ-ಮಗಳ ಸ್ಪರ್ಧೆಗೆ ನಡೆಯುವ ನಿರೀಕ್ಷೆ ಇದೆ.
ನಿಶಾ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಡಿ ಕೆ ಶಿವಕುಮಾರ್ ಹೇಳಿದ್ದೇನು?
ನಿಶಾ ಯೋಗೇಶ್ವರ್ ನಮ್ಮ ಮನೆ ಮಗಳಂತೆ. ಆಕೆ ನಮ್ಮ ಬಳಿ ಬಂದು ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಇಂಗಿತ ವ್ಯಕ್ತಪಡಿಸಿದರು. ಅವರ ತಾಯಿ ನನಗೆ ಪರಿಚಯ. ಅವರಿಗೆ ರಕ್ಷಣೆ ಇಲ್ಲ. ತಂದೆ ಸ್ಥಾನದಲ್ಲಿ ನಿಂತು ನನ್ನನ್ನು ಸ್ವೀಕಾರ ಮಾಡಿ ಎಂದು ಕೇಳಿದಳು. ರಾಜಕಾರಣಕ್ಕಾಗಿ ತಂದೆ ಮಗಳ ಬೇರೆ ಮಾಡುವುದು ಸರಿಯಲ್ಲ. ಆಕೆಗೆ ಮದುವೆ ಮಾಡಬೇಕು, ಧಾರೆ ಎರೆದು ಅಕ್ಷತೆ ಹಾಕಬೇಕು. ಅದನ್ನು ತಂದೆಯೇ ಮಾಡಬೇಕು. ಹೀಗಾಗಿ ರಾಜಕೀಯಕ್ಕಾಗಿ ಅವರನ್ನು ಬೇರೆ ಮಾಡಲು ಇಷ್ಟವಿಲ್ಲ. ಆಕೆ ಬಂದು ತಮ್ಮ ಕಷ್ಟ ಹೇಳಿಕೊಂಡಿದ್ದಾಳೆ. ಆಕೆ ಪ್ರಬುದ್ಧ ಯುವತಿ. ಆಕೆಗೆ ರಾಜಕಾರಣದಲ್ಲಿನ ಆಯ್ಕೆಗೆ ಸ್ವಾತಂತ್ರ್ಯವಿದೆ. ಆಕೆ ಇನ್ನೂ ಯೋಗೇಶ್ವರ್ ಅವರ ಕುಟುಂಬದ ಮೇಲೆ ಅವಲಂಬಿತವಾಗಿದ್ದಾರೆ.

ಅವರನ್ನು ಪಕ್ಷಕ್ಕೆ ಸೇರಿಸಿಕೊಂಡರೆ ರಾಜಕೀಯಕ್ಕೆ ಅಪ್ಪ ಮಗಳನ್ನು ದೂರ ಮಾಡಿದರು ಎಂದು ಜನ ಪ್ರಶ್ನೆ ಮಾಡಬಹುದು. ಯೋಗೇಶ್ವರ್ ಜತೆ ಇರುವ ಬಿಜೆಪಿ ಕಾರ್ಯಕರ್ತರೇ ಆಕೆಗೆ ಕಾಂಗ್ರೆಸ್ ಸೇರುವಂತೆ ಸಲಹೆ ನೀಡಿದ್ದಾರೆ. ಆಕೆ ವಿವಾಹವಾಗಿ ಬೇರೆ ಕುಟುಂಬಕ್ಕೆ ಸೇರಿದ್ದರೆ, ನಾವು ಇಷ್ಟು ಆಲೋಚನೆ ಮಾಡುತ್ತಿರಲಿಲ್ಲ. ಹೀಗಾಗಿ ನಾನು ನನ್ನ ಸಹೋದರ ಈ ವಿಚಾರವಾಗಿ ಬಹಳ ತಾಳ್ಮೆಯಿಂದ ಆಲೋಚನೆ ಮಾಡುತ್ತಿದ್ದೇವೆ. ನಿಶಾ ಅವರು ಮಾಧ್ಯಮಗಳಿಗೆ ಕೊಟ್ಟ ಹೇಳಿಕೆ ಗಮನಿಸಿದೆ. ಆಕೆ ದೊಡ್ಡ ಧೈರ್ಯ ಮಾಡಿರುವಂತೆ ಕಾಣುತ್ತಿದೆ. ಕಾಂಗ್ರೆಸ್ ಪಕ್ಷದಲ್ಲೇ ಕೆಲಸ ಮಾಡುತ್ತೇನೆ ಎಂದು ಆಕೆ ತೀರ್ಮಾನ ಮಾಡಿದರೆ, ಆಕೆಯನ್ನು ಹೊರದಬ್ಬಲು ಆಗುವುದಿಲ್ಲ. ಹೀಗಾಗಿ ಸ್ಥಳೀಯ ನಾಯಕರ ಜೊತೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.












Click it and Unblock the Notifications