ದೇವೇಗೌಡರ ಮೊಮ್ಮಗನಿಗೆ ಟಿಕೆಟ್: ‘ಮಂಡ್ಯ’ ಮಹಾಯುದ್ಧಕ್ಕೆ ಸನ್ನದ್ಧವಾದ ನಿಖಿಲ್ ಕುಮಾರಸ್ವಾಮಿ?
ಲೋಕಸಭೆ ಚುನಾವಣೆ 2024ರಲ್ಲಿ ಇಡೀ ದೇಶದ್ದೇ ಒಂದು ಲೆಕ್ಕಾಚಾರ ಆಗಿದ್ದರೆ, ಮಂಡ್ಯ ಲೋಕಸಭಾ ಕ್ಷೇತ್ರದ ಲೆಕ್ಕಾಚಾರವೇ ಮತ್ತೊಂದು ಲೆಕ್ಕ ಎನ್ನುವಂತಾಗಿದೆ. ಅದರಲ್ಲೂ ಈ 'ಮಂಡ್ಯ' ಮಹಾಯುದ್ಧಕ್ಕೆ ಮಾಜಿ ಮುಖ್ಯಮಂತ್ರಿ, ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಎಂಟ್ರಿ ಕೊಡೋದು ಬಹುತೇಕ ಗ್ಯಾರಂಟಿ ಆಗಿದೆ. ಅದ್ರಲ್ಲೂ ಈ ಬಗ್ಗೆ ಇಂದು ಸ್ವತಃ ಎಚ್.ಡಿ. ಕುಮಾರಸ್ವಾಮಿ ಅವರೇ ಮಂಡ್ಯದಲ್ಲಿ ಸುಳಿವು ಕೊಟ್ಟಿದ್ದಾರೆ. ಆ ಬಗ್ಗೆ ಸಂಪೂರ್ಣ ಮಾಹಿತಿಗೆ ಮುಂದೆ ಓದಿ.
ಎಲ್ಲರಿಗೂ ಗೊತ್ತಿರುವಂತೆ ಜೆಡಿಎಸ್ & ಬಿಜೆಪಿ ನಾಯಕರು ಇದೀಗ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆ 2024ಕ್ಕೆ ಸಜ್ಜಾಗಿದ್ದಾರೆ. ಹೀಗಾಗಿ ಮೈತ್ರಿ ಮಾತುಕತೆಯ ಒಪ್ಪಂದ ಪ್ರಕಾರ, ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ಪಾಲಿಗೆ ಬಂದಿದೆ. ಇದೇ ಕಾರಣಕ್ಕೆ ಈಗ, ಮಂಡ್ಯ ಲೋಕಸಭೆ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಅವರನ್ನು ಅಖಾಡಕ್ಕೆ ಇಳಿಸಲು ಕುಮಾರಸ್ವಾಮಿ ಅವರು ಸಕಲ ಸಿದ್ಧತೆ ನಡೆಸಿದಂತೆ ಕಾಣುತ್ತಿದೆ. ಅದ್ರಲ್ಲೂ ಇಂದು ಇದರ ಬಗ್ಗೆ ಮಂಡ್ಯದಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಅವರು, ನಿಖಿಲ್ ಸ್ಪರ್ಧೆ ಬಗ್ಗೆ ಭರ್ಜರಿ ಸುದ್ದಿ ನೀಡಿದ್ದಾರೆ.

ಮಂಡ್ಯ ಅಖಾಡಕ್ಕೆ ನಿಖಿಲ್ ಎಂಟ್ರಿ?
ಹೌದು, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಮಂಡ್ಯ ಜೆಡಿಎಸ್‍ನ ನಾಯಕರಿಂದ ಸಭೆ ಮಾಡಲಾಯಿತು. ಈ ವೇಳೆ ಮಂಡ್ಯದ ಜೆಡಿಎಸ್ ಕಾರ್ಯಕರ್ತರು ಕೂಡ ಭಾಗಿಯಾಗಿ ಸಭೆಯಲ್ಲಿ ಚರ್ಚೆ ನಡೆಸಿದರು. ಈ ವೇಳೆ ಕಾರ್ಯಕರ್ತರು ಕುಮಾರಸ್ವಾಮಿ ಅಥವಾ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಬೇಕು ಎಂಬ ಡಿಮ್ಯಾಂಡ್ ಮುಂದಿಟ್ಟರು. ಈ ವೇಳೆ ದಿಢೀರ್ ಜೆಡಿಎಸ್ ಸಭೆಯಲ್ಲಿ ದೊಡ್ಡ ಗಲಾಟೆ ಶುರುವಾಗಿತ್ತು. ಆಗ ಕುಮಾರಸ್ವಾಮಿ ಅವರೇ ಮಧ್ಯ ಪ್ರವೇಶ ಮಾಡಬೇಕಾಗಿ ಬಂತು.
ಕೊನೆಗೂ ಜೆಡಿಎಸ್ ಕಾರ್ಯಕರ್ತರ ಮನವಿಗೆ ಸ್ಪಂದಿಸಿದ ಕುಮಾರಸ್ವಾಮಿ ನಿಮ್ಮ ಆಸೆಗೆ ನಾವು ಭಂಗ ತರಲ್ಲ. ನಿಖಿಲ್ ಕುಮಾರಸ್ವಾಮಿ ಅವರಿಗೆ ಒಂದು ಮಾತು ಹೇಳುತ್ತೇನೆ. ನಿಮ್ಮ ಭಾವನೆಗೆ ಯಾವುದೇ ಕಾರಣಕ್ಕೂ ನಿರಾಸೆ ಆಗಲ್ಲ. ನಿಮ್ಮೆಲ್ಲರ ಆಸೆಯಂತೆ ಅದನ್ನು ನೇರವೇರಿಸುತ್ತೇವೆ ಎಂದಿದ್ದಾರೆ ಕುಮಾರಸ್ವಾಮಿ ಅವರು. ಈ ಮೂಲಕ ನಿಖಿಲ್ ಕುಮಾರಸ್ವಾಮಿ ಮಂಡ್ಯದಲ್ಲಿ ಸ್ಪರ್ಧೆ ಮಾಡುವುದು ಬಹುತೇಕ ಪಕ್ಕಾ ಆಗಿದೆ. ಆದರೆ ಈಗ, ಅಧಿಕೃತ ಘೋಷಣೆಯೊಂದೆ ಬಾಕಿ ಉಳಿದಿದೆ.
2019ರ ಲೋಕಸಭೆ ಫೈಟ್ ರಿಟರ್ನ್ಸ್?
ನಿಖಿಲ್ ಕುಮಾರಸ್ವಾಮಿ ಅವರು ಮತ್ತೊಮ್ಮೆ ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆಯ ಮಾಡುವುದು ಪಕ್ಕಾ ಆದರೆ ಸಂಚಲನ ಸೃಷ್ಟಿಯಾಗಲಿದೆ. ಯಾಕಂದ್ರೆ 2019ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ & ಕಾಂಗ್ರೆಸ್ ಮೈತ್ರಿ ಮಾಡ್ಕೊಂಡು ಅಖಾಡಕ್ಕೆ ಇಳಿದಿದ್ದವು. 2019 ರಲ್ಲಿ ಮಂಡ್ಯ ಕ್ಷೇತ್ರದಿಂದ ಮಾಜಿ ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಮೈತ್ರಿ ಅಭ್ಯರ್ಥಿ ಆಗಿದ್ದರು.

ಆಗ ಬಿಜೆಪಿಗೆ ಇದು ಟಾಸ್ಕ್ ಆಗಿದ್ದಾಗಲೇ ಅಭ್ಯರ್ಥಿಯನ್ನ ಹಾಕದೆ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಅವರಿಗೆ ಬೆಂಬಲ ನೀಡಿತ್ತು. ಖುದ್ದಾಗಿ, ಪ್ರಧಾನಿ ನರೇಂದ್ರ ಮೋದಿ ಬೆಂಬಲವೂ ಸುಮಲತಾ ಅವರಿಗೆ ಸಿಕ್ಕಿತ್ತು ಎಂಬ ಮಾತು ಕೇಳಿಬಂದಿತ್ತು. ಆದರೆ ಇದೀಗ ಜೆಡಿಎಸ್ & ಬಿಜೆಪಿ ಮಧ್ಯೆ ಮೈತ್ರಿ ಫಿಕ್ಸ್ ಆಗಿದ್ದು, ಮಂಡ್ಯ ಕ್ಷೇತ್ರದ ಬಗ್ಗೆ ಕುತೂಹಲ ಡಬಲ್ ಆಗಿದೆ. ಒಂದು ಕಡೆ ಹಾಲಿ ಮಂಡ್ಯ ಸಂಸದೆ ಸುಮಲತಾ ಅವರು ನನಗೇ ಟಿಕೆಟ್ ಬೇಕು ಅಂತಾ ಪಟ್ಟು ಹಿಡಿದು ಕೂತಿದ್ದರೆ, ಇನ್ನೊಂದು ಕಡೆ ನಿಖಿಲ್ ಅವರೇ ಮಂಡ್ಯ ಅಭ್ಯರ್ಥಿ ಎಂಬ ಮಾತು ಇದೀಗ ಕೇಳಿಬರುತ್ತಿದೆ. ಹೀಗಾಗಿ 2019ರ ಲೋಕಸಭೆ ಫೈಟ್ ಮತ್ತೊಮ್ಮೆ ಮರುಕಳಿಸುವ ಸಾಧ್ಯತೆಯು ದಟ್ಟವಾಗಿದೆ.












Click it and Unblock the Notifications