ನೈಸ್ ವಿವಾದ ಸ್ಫೋಟ; 20 ವರ್ಷವಾದರೂ ರೈತರಿಗೆ ಹಣ ನೀಡಿಲ್ಲ: ಹೆಚ್‌ ಡಿ ಕುಮಾರಸ್ವಾಮಿ

ಮಂಡ್ಯ: ನೈಸ್ ರಸ್ತೆ ಯೋಜನೆ ವಿಚಾರವಾಗಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರ ಹಾಗೂ ನೈಸ್ ಕಂಪನಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನೈಸ್ ಯೋಜನೆಗಾಗಿ ರೈತರಿಂದ ಭೂಮಿ ಪಡೆದುಕೊಂಡು 20 ವರ್ಷ ಕಳೆದರೂ ಇನ್ನೂ ರೈತರಿಗೆ ಹಣ ನೀಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಪಾಂಡವಪುರ ತಾಲೂಕಿನ ಮೇಲುಕೋಟೆಯ ಶ್ರೀಚೆಲುವನಾರಾಯಣಸ್ವಾಮಿ ದೇವಾಲಯಕ್ಕೆ ಭಾನುವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ನೈಸ್ ಯೋಜನೆಯ ಹೆಸರಿನಲ್ಲಿ ರೈತರಿಂದ ಪಡೆದುಕೊಂಡಿರುವ ಬೆಲೆಬಾಳುವ ಭೂಮಿಯನ್ನು ರಿಯಲ್ ಎಸ್ಟೇಟ್ ಉದ್ದೇಶಕ್ಕೆ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿದರು. ನೈಸ್ ಕಂಪನಿ ಯೋಜನೆಗೆ ಐದು ರೂಪಾಯಿ ಕೂಡ ಹೂಡಿಕೆ ಮಾಡಿಲ್ಲ. ರೈತರ ಭೂಮಿಯನ್ನು ಬ್ಯಾಂಕ್‌ನಲ್ಲಿ ಅಡವಿಟ್ಟು ಸಾಲ ಪಡೆದು ಯೋಜನೆಯ ಹೆಸರಿನಲ್ಲಿ ವ್ಯವಹಾರ ನಡೆಸುತ್ತಿದೆ ಎಂದರು.

NICE Road Project Row HD Kumaraswamy Says Farmers Yet to Get Payment After 20 Years

ದೊಡ್ಡ ಕಂಪನಿಗಳೊಂದಿಗೆ ಜಂಟಿ ಒಪ್ಪಂದಗಳನ್ನು ಮಾಡಿಕೊಂಡಿರುವ ಆರೋಪವೂ ಇದೆ. ಈ ಎಲ್ಲ ಅಂಶಗಳನ್ನು ಪರಿಶೀಲಿಸಿರುವ ನ್ಯಾಯಾಲಯ ನೈಸ್ ಟೋಲ್ ಸಂಗ್ರಹ ಕಾನೂನುಬಾಹಿರ ಎಂದು ಅಭಿಪ್ರಾಯಪಟ್ಟಿದೆ. ಆದರೂ ರಾಜ್ಯ ಸರ್ಕಾರ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ನೈಸ್ ಯೋಜನೆಗೆ ಕಂಪನಿ ಐದು ರೂಪಾಯಿ ಹಣವನ್ನೂ ಹೂಡಿಕೆ ಮಾಡಿಲ್ಲ ಎಂದು ಆರೋಪಿಸಿದ ಕುಮಾರಸ್ವಾಮಿ, ರಾಜ್ಯ ಸರ್ಕಾರ ಕಡಿಮೆ ದರದಲ್ಲಿ ಭೂಮಿಯನ್ನು ಲೀಸ್‌ಗೆ ನೀಡಿದೆ. ಬಳಿಕ ರಾಜ್ಯದ ಆಸ್ತಿಯನ್ನು ಐಸಿಐಸಿಐ ಬ್ಯಾಂಕ್‌ನಲ್ಲಿ ಅಡವಿಟ್ಟು ಸಾಲ ಪಡೆಯಲಾಗಿದೆ ಎಂದು ಹೇಳಿದರು.

ಸಾಲದ ಹಣದಿಂದ ವ್ಯವಹಾರ ನಡೆಸಲಾಗುತ್ತಿದೆ. ಇಂತಹ ಬೆಳವಣಿಗೆಗಳ ನಡುವೆಯೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ಕುಳಿತಿದೆ ಎಂದು ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ನೈಸ್ ಯೋಜನೆಯನ್ನು ರಾಜ್ಯದ ಅತಿದೊಡ್ಡ ಹಗರಣ ಎಂದು ಕರೆಯುವುದರಲ್ಲಿ ತಪ್ಪಿಲ್ಲ. ಹಿಂದಿನ ಸರ್ಕಾರಗಳು ಹಾಗೂ ಅಧಿಕಾರಿಗಳೂ ಯೋಜನೆಯ ವಿಚಾರದಲ್ಲಿ ಕಂಪನಿಯೊಂದಿಗೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.

ಯೋಜನಾ ಚೌಕಟ್ಟು ಒಪ್ಪಂದ (Framework Agreement) ಉಲ್ಲಂಘನೆಯಾಗಿದೆ. ಕಂಪನಿ ಮಾಲೀಕರಿಗೆ ರೆಡ್ ಕಾರ್ಪೆಟ್ ಹಾಕಲಾಗಿದೆ. ರೈತರ ಭೂಮಿಯನ್ನು ಪಡೆದುಕೊಂಡು 20 ವರ್ಷ ಕಳೆದರೂ ರೈತರಿಗೆ ಹಣ ಪಾವತಿಯಾಗಿಲ್ಲ ಎಂದು ಅವರು ದೂರಿದರು. 2006-07ರಲ್ಲೇ ವಿಧಾನಸಭೆಯಲ್ಲಿ ನೈಸ್ ಯೋಜನೆ ಕುರಿತು ಪ್ರಶ್ನೆ ಎತ್ತಿದ್ದೆ. ಸದನ ಒಪ್ಪಿದರೆ ಯೋಜನೆಯನ್ನು ರದ್ದುಪಡಿಸೋಣ ಎಂದು ಹೇಳಿದ್ದೆ. ಆದರೆ ಆಗ ತಮ್ಮೊಂದಿಗೆ ಕೇವಲ 38 ಶಾಸಕರ ಬೆಂಬಲವಿತ್ತು ಎಂದು ಕುಮಾರಸ್ವಾಮಿ ನೆನಪಿಸಿಕೊಂಡರು. ನನಗೆ 134 ಶಾಸಕರ ಬೆಂಬಲ ಇದ್ದಿದ್ದರೆ ಇಂತಹವರು ಜೈಲಿನಲ್ಲಿ ಇರುತ್ತಿದ್ದರು" ಎಂದು ಅವರು ಕಿಡಿಕಾರಿದರು.

ನೈಸ್ ರಸ್ತೆ ಯೋಜನೆಗೆ ಇನ್ನೂ 20 ವರ್ಷಗಳ ಒಪ್ಪಂದವಿದೆ ಎಂದು ಲೋಕೋಪಯೋಗಿ ಸಚಿವರು ಹೇಳಿರುವ ವಿಚಾರಕ್ಕೂ ಕುಮಾರಸ್ವಾಮಿ ಪ್ರಶ್ನೆ ಹಾಕಿದರು. "ಇನ್ನೂ 20 ವರ್ಷ ಅಗ್ರಿಮೆಂಟ್ ಇದೆ ಅಂತಾರೆ. ಯಾವ ಅಗ್ರಿಮೆಂಟ್ ಇದೆ?" ಎಂದು ಅವರು ಪ್ರಶ್ನಿಸಿದರು. ಸರ್ಕಾರವು ಕಂಪನಿಯೊಂದಿಗೆ ಸೇರಿಕೊಂಡು ಇನ್ನಷ್ಟು ಲೂಟಿ ಮಾಡಲು ಅವಕಾಶ ನೀಡಬಾರದು. ರೈತರು ವರ್ಷಗಟ್ಟಲೆ ನ್ಯಾಯಾಲಯದ ಮುಂದೆ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಒಬ್ಬ ವ್ಯಕ್ತಿಗೆ ರಕ್ಷಣೆ ನೀಡಲು ಇರುವುದಲ್ಲ; ರಾಜ್ಯದ ಆರೂವರೆ ಕೋಟಿ ಜನರ ರಕ್ಷಣೆಗೆ ಇರಬೇಕು.ರಾಜ್ಯ ಸರ್ಕಾರ ನೈಸ್ ಕಂಪನಿಗೆ ಸಂಪೂರ್ಣ ಶರಣಾಗಿದೆ. ಇದು ಸರ್ಕಾರದ ಅವ್ಯವಹಾರವಾಗಿದ್ದು, ಕರ್ನಾಟಕದ ನಂ.1 ಹಗರಣವಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ತಮ್ಮ ವಿರುದ್ಧ ಅಶೋಕ್ ಖೇಣಿ ನೀಡಿದ್ದಾರೆ ಎನ್ನಲಾದ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, "ಖೇಣಿ ನನಗೆ ಏನು ಹೇಳಬೇಕಿಲ್ಲ. ಅವರನ್ನು ಕಟ್ಟಿಕೊಂಡು ನನಗೆ ಏನೂ ಆಗಬೇಕಿಲ್ಲ. ನಾನು ಅವರ ಬಗ್ಗೆ ಹೇಳುತ್ತಿಲ್ಲ. ನಾನು ಹೇಳುತ್ತಿರುವುದು ರಾಜ್ಯ ಸರ್ಕಾರಕ್ಕೆ. ಕೋರ್ಟ್ ಆದೇಶ ನೀಡಿರುವುದು ಸರ್ಕಾರಕ್ಕೆ, ಖೇಣಿಗೆ ಅಲ್ಲ" ಎಂದು ತಿರುಗೇಟು ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+