ನಾಗಮಂಗಲದ ಘಟನೆ ಕುರಿತು ಎನ್‍ಐಎ ತನಿಖೆ : ಶೋಭಾ ಕರಂದ್ಲಾಜೆ ಹೇಳಿದ್ದೇನು?
ಬೆಂಗಳೂರು, ಸೆಪ್ಟೆಂಬರ್ 12: ನಾಗಮಂಗಲದ ಘಟನೆ ಕುರಿತು ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ (ಎನ್‍ಐಎ) ಮೂಲಕ ತನಿಖೆ ಮಾಡಿಸಿ ಎಂದು ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ ಅವರು ಆಗ್ರಹಿಸಿದರು.
ರಾಜಾಜಿನಗರದಲ್ಲಿ ಇಂದು(ಗುರುವಾರ) ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಎನ್‍ಐಎ ತನಿಖೆ ಮಾಡಿದರೆ ಮಾತ್ರ ಸತ್ಯಾಂಶ ಹೊರಕ್ಕೆ ಬರಲಿದೆ ಎಂದು ನುಡಿದರು. ನಾಗಮಂಗಲದ ಘಟನೆಯಿಂದ ನಮ್ಮೆಲ್ಲ ಹಿಂದೂಗಳಿಗೆ ಅಪಮಾನ ಆಗಿದೆ. ನಾಗಮಂಗಲದಲ್ಲಿ ಗಣಪತಿ ಮೆರವಣಿಗೆ ಮೇಲೆ ಚಪ್ಪಲಿ ಎಸೆದಿದ್ದಾರೆ. ಜೊತೆಗೆ ಕಲ್ಲೆಸೆದಿದ್ದಾರೆ. ಅಲ್ಲದೆ, ನಮ್ಮ ಅಂಗಡಿಗಳನ್ನು ಸುಟ್ಟಿದ್ದಾರೆ ಎಂದು ಆಕ್ಷೇಪಿಸಿದರು.

ಆದರೂ ಅಲ್ಲಿನ ಸಚಿವರು, ಗೃಹ ಸಚಿವರು ಇದೊಂದು ಚಿಕ್ಕ ಘಟನೆ ಎಂದಿದ್ದಾರೆ ಎಂದರಲ್ಲದೆ, ಇನ್ನು ದೊಡ್ಡದು ಏನಾಗಬೇಕಿತ್ತು ನಿಮಗೆ ಎಂದು ಪ್ರಶ್ನಿಸಿದರು. ಹಿಂದೂಗಳ 25 ಅಂಗಡಿ ಸುಟ್ಟದ್ದು ನಿಮಗೆ ಚಿಕ್ಕ ಘಟನೆಯಾಗಿ ಕಂಡರೆ ಇನ್ನು ದೊಡ್ಡ ಘಟನೆ ಏನಾಗಬೇಕಾಗಿತ್ತು ಎಂದು ಕೇಳಿದರು.
ಸಿದ್ದರಾಮಯ್ಯನವರು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲ ಹಿಂದೂಗಳಿಗೆ ಅಪಮಾನ ಮಾಡುವಂಥದ್ದು ನಡೆಯುತ್ತಿದೆ. ತನ್ನ ತಪ್ಪನ್ನು ಮುಚ್ಚಿ ಹಾಕಿಕೊಳ್ಳಲು ಕಾಂಗ್ರೆಸ್ ಇಂಥ ಕೆಲಸ ಮಾಡುತ್ತಿದೆಯೇ ಎಂಬ ಸಂಶಯ ಮೂಡುತ್ತಿದೆ ಎಂದು ಟೀಕಿಸಿದರು.
ಅವರ ಮೇಲೆ ಭ್ರಷ್ಟಾಚಾರದ ಆರೋಪ ಇದೆ. ಸಚಿವರ ಮೇಲೂ ಭ್ರಷ್ಟಾಚಾರದ ದೂರುಗಳಿವೆ. ಇಷ್ಟೊಂದು ಕೆಟ್ಟ ಸರಕಾರ ಎಂದು ಜನರು ಮಾತನಾಡುವ ಸಂದರ್ಭದಲ್ಲಿ ಅದನ್ನು ಮುಚ್ಚಿ ಹಾಕಲು ನೀವೇನಾದರೂ ಗಲಭೆ ಮಾಡುತ್ತಿದ್ದೀರಾ ಎಂದು ಕೇಳಿದರು.
ಇನ್ನು ಇದೇ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಮಾತನಾಡಿ, ನಾಗಮಂಗಲದ ಘಟನೆ ನಿಜಕ್ಕೂ ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಿದೆ. ಕಳೆದ ಒಂದು ವರ್ಷದಿಂದ ಇಂತಹ ಘಟನೆಗಳು ಆಗ್ತಿವೆ. ಪೊಲೀಸರು ಕ್ರಮ ಕೈಗೊಂಡಿಲ್ಲ, ಲಾಂಗ್ ಮಚ್ಚು ಮಸೀದಿಯಿಂದ ಬಂದು ಎಸೆದಿದ್ದಾರೆ ಎಂದು ಆರೋಪಿಸಿದರು. ಗಲಾಟೆ ಮಾಡಿದವರು ಅವರು. ಬಂಧಿಸಿರೋದು ಹಿಂದೂಗಳನ್ನು.ಪರಮೇಶ್ವರ ಪ್ರಕಾರ ದೊಡ್ಡ ಗಲಾಟೆ ಆಗಬೇಕಿತ್ತಾ? ನಾನು ಭೇಟಿ ನೀಡಿ ಪರಿಶೀಲನೆ ಮಾಡ್ತೀನಿ. ಇದು ಸರ್ಕಾರದ ವೈಫಲ್ಯ ಎಂದು ಆರೋಪಿಸಿದರು.
ನಾಗಮಂಗಲದಲ್ಲಿ ಗಣಪತಿ ಭಕ್ತರ ಮೇಲೆ ದಾಳಿ: ಹೆಚ್ಡಿಕೆ ಖಂಡನೆ
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಒಂದು ಸಮುದಾಯದ ಪುಂಡರು ನಡೆಸಿದ ದಾಳಿಯನ್ನು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಖಂಡಿಸಿದ್ದಾರೆ. ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದಿರುವ ಘಟನೆಯನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ ಎಂದು ತಿಳಿಸಿದ್ದಾರೆ.
ಗಣಪತಿ ದೇವರ ಮೆರವಣಿಗೆಯಲ್ಲಿ ಶಾಂತಿಯುತವಾಗಿ ತೆರಳುತ್ತಿದ್ದ ಭಕ್ತರನ್ನು ಗುರಿ ಮಾಡಿ ಒಂದು ಸಮುದಾಯದ ಪುಂಡರು ಉದ್ದೇಶಪೂರ್ವಕವಾಗಿಯೇ ದಾಂಧಲೆ ಎಬ್ಬಿಸಿ ಸಾರ್ವಜನಿಕರು-ಪೊಲೀಸರ ಮೇಲೆ ಕಲ್ಲು, ಚಪ್ಪಲಿ ಎಸೆದು ಪೆಟ್ರೋಲ್ ಬಾಂಬ್ ಸ್ಫೋಟಿಸಿ ತಲ್ವಾರ್ ಝಳಪಿಸುವ ದುಸ್ಸಾಹಸಕ್ಕೆ ಕೈ ಹಾಕಿರುವುದು ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆ ವೈಫಲ್ಯವಾಗಿರುವುದಕ್ಕೆ ಸಾಕ್ಷಿ ಎಂದು ಕೇಂದ್ರ ಸಚಿವರು ಕಿಡಿಕಾರಿದ್ದಾರೆ.
ಪೊಲೀಸ್ ಠಾಣೆ ಎದುರು ರಕ್ಷಣೆ ಕೊಡಿ ಎಂದು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದವರ ಮೇಲೆಯೇ ಆ ಕೋಮಿನ ಪುಂಡರು ದಬ್ಬಾಳಿಕೆ ನಡೆಸುತ್ತಾರೆ ಎಂದರೆ ನಾವು ಎಲ್ಲಿದ್ದೇವೆ ಎನ್ನುವ ಅನುಮಾನ ಬರುತ್ತದೆ. ಇಲ್ಲಿ ಸ್ಥಳೀಯ ಪೊಲೀಸರ ವೈಫಲ್ಯವೂ ಎದ್ದು ಕಾಣುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಮತ್ತು ಆ ಪಕ್ಷದ ರಾಜ್ಯ ಸರಕಾರ ರಾಜಕೀಯ ಸ್ವಾರ್ಥಕ್ಕಾಗಿ ಒಂದು ನಿರ್ದಿಷ್ಟ ಸಮುದಾಯವನ್ನು ಅತಿಯಾಗಿ ಓಲೈಸಿ ತುಷ್ಟೀಕರಣ ಮಾಡಿದ ಫಲವಾಗಿ ನಾಗಮಂಗಲದಲ್ಲಿ ಈ ಹೇಯ ಘಟನೆ ನಡೆದಿದೆ. ಇಂತಹ ಓಲೈಕೆ, ತುಷ್ಟೀಕರಣ ರಾಜಕಾರಣ ನಿಲ್ಲಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ದಿನಗಳು ದೂರವಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕರು ಶಾಂತಿ ಕಾಪಾಡಬೇಕು ಎನ್ನುವುದು ನನ್ನ ಕಳಕಳಿಯ ಮನವಿ. ತಕ್ಷಣವೇ ಪಟ್ಟಣದಲ್ಲಿ ಶಾಂತಿ ಮರುಸ್ಥಾಪನೆ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕು. ಅಲ್ಲದೆ; ಈ ಪ್ರಕರಣ ನೆಪದಲ್ಲಿ ವಿರೋಧ ಪಕ್ಷಗಳ ಮುಖಂಡರು, ಕಾರ್ಯಕರ್ತರ ಮೇಲೆ ಪೊಲೀಸರು ದರ್ಪ ತೋರಿದರೆ ಸಹಿಸುವ ಪ್ರಶ್ನೆ ಇಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.












Click it and Unblock the Notifications