ಬೆಂ-ಮೈ 6 ಪಥದ ರಸ್ತೆ, ಫ್ಲೈ ಓವರ್ ನಿರ್ಮಾಣಕ್ಕೆ ವಿರೋಧ
ಬೆಂಗಳೂರು, ಸೆಪ್ಟೆಂಬರ್ 27 : ಬೆಂಗಳೂರು-ಮೈಸೂರು ನಡುವಿನ 6 ಪಥದ ರಸ್ತೆ ಕಾಮಗಾರಿ ಎರಡು ತಿಂಗಳಿನಲ್ಲಿ ಆರಂಭವಾಗುವ ನಿರೀಕ್ಷೆ ಇದೆ. ಆದರೆ, ಯೋಜನೆಯ ಭಾಗವಾಗಿ ಮೂರು ಕಡೆ ಫ್ಲೈ ಓವರ್ ನಿರ್ಮಿಸುವ ಪ್ರಸ್ತಾವನೆಗೆ ಎನ್‌ಎಚ್‌ಎಐ ವಿರೋಧ ವ್ಯಕ್ತಪಡಿಸಿದೆ.
ಬೆಂಗಳೂರು-ಮೈಸೂರು 6 ಪಥದ ರಸ್ತೆಯಲ್ಲಿ ಮಂಡ್ಯ, ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಫ್ಲೈ ಓವರ್ ನಿರ್ಮಿಸಲು ಪ್ರಸ್ತಾವನೆ ಸಿದ್ಧಗೊಳಿಸಲಾಗಿದೆ. ಈ ಪ್ರಸ್ತಾವನೆಯಿಂದ ಯೋಜನೆಯ ವೆಚ್ಚ ಅಧಿಕವಾಗಲಿದೆ ಎಂಬ ಕಾರಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿರೋಧ ವ್ಯಕ್ತಪಡಿಸುತ್ತಿದೆ.
ಈಗಿನ ಯೋಜನೆಯ ಅನ್ವಯ ಮೂರು ನಗರಗಳ ಹೊರಭಾಗದಿಂದ ವಾಹನಗಳ ಸಂಚಾರಕ್ಕೆ ಬೈಪಾಸ್ ನಿರ್ಮಾಣ ಮಾಡಲಾಗುತ್ತದೆ. ಬೈಪಾಸ್ ನಿರ್ಮಾಣವಾದರೆ ವಾಹನ ದಟ್ಟಣೆ ಕಡಿಮೆ ಆಗುತ್ತದೆ. ಫ್ಲೈ ಓವರ್ ಏಕೆ? ಎಂದು ಎನ್‌ಎಚ್‌ಎಐ ಪ್ರಶ್ನಿಸುತ್ತಿದೆ.

ರಾಮನಗರ, ಚನ್ನಪಟ್ಟಣ ಮತ್ತು ಮಂಡ್ಯದಲ್ಲಿ ಫ್ಲೈ ಓವರ್ ನಿರ್ಮಾಣ ಮಾಡುವ ಹೊಸ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಇಲಾಖೆಗೆ ಸಲ್ಲಿಸಿದೆ. ಇಂತಹ ಪ್ರಸ್ತಾವನೆ ಈಗ ಏಕೆ? ಎಂಬದು ಹೆದ್ದಾರಿ ಪ್ರಾಧಿಕಾರದ ಪ್ರಶ್ನೆ.
ಲೋಕೋಪಯೋಗಿ ಇಲಾಖೆ ನೇರವಾಗಿ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಿದೆ. ಸದ್ಯಕ್ಕೆ ಅದರ ವಿರಗಳು ಲಭ್ಯವಾಗಿಲ್ಲ. ಕೇಂದ್ರ ಸರ್ಕಾರವೇ ಈ ನಗರದಲ್ಲಿ ಫ್ಲೈ ಓವರ್ ಬೇಕೆ?, ಬೇಡವೇ ಎಂಬ ಕುರಿತು ನಿರ್ಧಾರವನ್ನು ಕೈಗೊಳ್ಳಲಿದೆ.
ಹಿಂದಿನ ಯೋಜನೆ ನಕ್ಷೆ ಪ್ರಕಾರ ರಾಮನಗರ ಮತ್ತು ಚನ್ನಪಟ್ಟಣದಲ್ಲಿ 23 ಕಿ.ಮೀ. ಮತ್ತು ಬಿಡದಿ, ಮಂಡ್ಯ ಮತ್ತು ಮದ್ದೂರಿನಲ್ಲಿ 11 ಕಿ.ಮೀ. ಬೈಪಾಸ್ ರಸ್ತೆ ನಿರ್ಮಾಣವಾಗಲಿದೆ. ಬೆಂಗಳೂರು-ಮೈಸೂರು 6 ಪಥದ ರಸ್ತೆಯ ಯೋಜನಾ ವೆಚ್ಚ 6,800 ಕೋಟಿ. ರೂ.ಗಳು.












Click it and Unblock the Notifications