Karnataka Highway: ರಾಜ್ಯದ 180ಕಿಮೀ. ಹೆದ್ದಾರಿ ಅಗಲೀಕರಣ ಯೋಜನೆ, ಎಲ್ಲಿ? ಏನೆಲ್ಲ ಪ್ರಯೋಜನ
ಬೆಂಗಳೂರು, ಜುಲೈ 27: ಕರ್ನಾಟಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ, ರೈಲು ಮಾರ್ಗ, ಎಕ್ಸ್‌ಪ್ರೆಸ್‌ವೇಗಳ ಅಭಿವೃದ್ಧಿ ಯೋಜನೆಗಳ ಮೂಲಕ ಸಾರ್ವಜನಿಕ ಸಂಚಾರದಲ್ಲಿ ಸುರಕ್ಷತೆ, ಸಂಚಾರ ಸುಧಾರಣೆಗೆ ಆದ್ಯತೆ ನೀಡಲಾಗುತ್ತಿದೆ. ಇದೀಗ ಕರ್ನಾಟಕದಲ್ಲಿ ಮತ್ತೊಂದು ಹೆದ್ದಾರಿ ನಾಲ್ಕು ಪಥಗಳಾಗಿ ವಿಸ್ತರಣೆಯಾಗುವ ಕಾಲ ಸನ್ನಿಹಿತವಾಗಿದೆ. ಇದಕ್ಕಾಗಿ ಸರ್ಕಾರ ಸಮಗ್ರ ಯೋಜನಾ ವರದಿ (DPR) ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ ಎಂಬ ಮಾಹಿತಿ ಸಿಕ್ಕಿದೆ.
ಕರ್ನಾಟಕ ರಾಜ್ಯದ ರಾಷ್ಟ್ರೀಯ ಹೆದ್ದಾರಿ-52ರ (NH-52) ಹೊನಗನಹಳ್ಳಿ ಸಮೀಪದಿಂದ ಹುಬ್ಬಳ್ಳಿ ವರೆಗೆ (74 ಕಿಮೀ-261ವರೆಗೆ) ಎರಡು ಪಥದ ರಸ್ತೆಯನ್ನು ನಾಲ್ಕು ಪಥದ ರಸ್ತೆಯಾಗಿ ಅಗಲೀಕರಣಗೊಳಿಸುವ ಬೃಹತ್ ಯೋಜನೆ ಇದಾಗಿದೆ. ಈ ಯೋಜನೆಗೆ ಕಾರ್ಯಪ್ರವೃತ್ತಗೊಳ್ಳಲು ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ. ಈ ಭಾಗದಲ್ಲಿ ಹೆದ್ದಾರಿ ಅಭಿವೃದ್ಧಿಗೆ ಉತ್ತಮ ಪ್ಲಾನ್ ಮಾಡಿಕೊಳ್ಳಲಾಗಿದೆ. ಶೀಘ್ರವೇ ಟೆಂಡರ್ ಆಹ್ವಾನಿಸುವ ನಿರೀಕ್ಷೆ ಇದೆ.

ಹುಬ್ಬಳ್ಳಿಯಿಂದ ನರಗುಂದ, ಕೆರೂರು, ಬಾಗಲಕೋಟೆ, ಬೀಳಗಿ ಮಾರ್ಗವಾಗಿ ವಿಜಯಪುರ ತಲುಪುವ ಮಾರ್ಗ ಮಧ್ಯೆ ಬರುವ ಹೊನಗನಹಳ್ಳಿವರೆಗೆ ಈ ಹೆದ್ದಾರಿಯನ್ನು ವಿಸ್ತರಣೆ ಮಾಡುವುದರಿಂದ ನಿತ್ಯ ಓಡಾಡುವ ಲಕ್ಷಾಂತರ ಮಂದಿಗೆ, ಸಾವಿರಾರು ವಾಹನಗಳಿಗೆ ಸಹಾಯವಾಗುತ್ತದೆ. ಸಂಚಾರ ಸಾಮರ್ಥ್ಯವನ್ನು ಹೆಚ್ಚಾಗುತ್ತದೆ. ರಸ್ತೆ ಸುರಕ್ಷತೆಯನ್ನು ಸುಧಾರಿಸುತ್ತದೆ. ಈ ಕಾರಣದಿಂದ ರಸ್ತೆ ಅಗಲೀಕರಣ ಯೋಜನೆ ರೂಪಿಸಲಾಗಿದೆ.
180 ಕಿಲೋ ಮೀಟರ್ ರಸ್ತೆ ಅಗಲೀಕರಣ..
ಹೊನಗನಹಳ್ಳಿಯಿಂದ ಹುಬ್ಬಳ್ಳಿಗೆ ಮಾರ್ಗದಲ್ಲಿ 180 ಕಿಲೋ ಮೀಟರ್ ಕ್ರಮಿಸಲು (ಗೂಗಲ್ ನಕ್ಷೆ ಪ್ರಕಾರ) ಒಟ್ಟು ಸುಮಾರು 3 ಗಂಟೆ 28 ನಿಮಿಷಗಳು ಹಿಡಿಯುತ್ತದೆ. ಈ ಹೆದ್ದಾರಿಯು ಬಾದಾಮಿ ಮತ್ತು ಚಾಲುಕ್ಯ ಶಿವ ದೇವಾಲಯದಂತಹ ಪ್ರದೇಶಗಳ ಮೂಲಕ ಹಾದು ಹೋಗುತ್ತದೆ. ರಸ್ತೆ ಅಗಲೀಕರಣಗೊಂಡ ಬಳಿಕ ಅತೀ ಕಡಿಮೆ ಸಮಯದಲ್ಲಿ ಸಂಚರಿಸಬಹುದಾಗಿದೆ.

ರಸ್ತೆ ಅಗಲೀಕರಣದಿಂದ ಸಾಕಷ್ಟು ಪ್ರಯೋಜನ
ರಸ್ತೆ ಅಗಲವನ್ನು 1.5 ಮೀಟರ್‌ಗಳಿಂದ 2.5 ಮೀಟರ್‌ಗಳಿಗೆ ಹೆಚ್ಚಿಸುವುದರಿಂದ ಅಪಘಾತಗಳ ಸಾವಿನ ಪ್ರಮಾಣ ಕಡಿಮೆ ಆಗುತ್ತದೆ ಎಂದು 2021ರ ಸೈನ್ಸ್‌ಡೈರೆಕ್ಟ್ ಅಧ್ಯಯನವು ಹೇಳುತ್ತದೆ. ಇನ್ನು ಹೆದ್ದಾರಿಯನ್ನು ಎರಡು ಪಥಗಳಿಂದ ನಾಲ್ಕು ಪಥಗಳಾಗಿ ಮಾಡಿದರೆ ಸುರಕ್ಷತೆ ಹೆಚ್ಚಾಗುತ್ತದೆ. ಈ ಉತ್ತರ ಕರ್ನಾಟಕದ ಭಾಗದ ಪ್ರಮುಖ ಹೆದ್ದಾರಿ ಇದಾಗಲಿದ್ದು, ಕೈಗಾರಿಕೆ, ವ್ಯಾಪಾರ ವಹೀವಾಟು, ನಿತ್ಯ ಸಾಗಾಣೆಗೆ, ಶೈಕ್ಷಣಿಕವಾಗಿ ಅಲ್ಲದೇ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಕ್ಕಂತಾಗುತ್ತದೆ.
ಈ ಮಾರ್ಗದಲ್ಲಿ ಬರುವ 5 ನೇ ಶತಮಾನದ ಚಾಲುಕ್ಯ ಶಿವ ದೇವಾಲಯದಂತಹ ಐತಿಹಾಸಿಕ ಸ್ಥಳಗಳಿಗೆ ಹತ್ತಿರದಲ್ಲಿದೆ. ರಸ್ತೆ ಯೋಜನೆ ಸಾಕಾರಗೊಳಿಸುವ ಸಮಯದಲ್ಲಿ ಈ ಸ್ಥಳಗಳನ್ನು ಸಂರಕ್ಷಿಸಲು ಕಾಳಜಿ ವಹಿಸಬೇಕು.ಏಕೆಂದರೆ ಧಾರ್ಮಿಕ ಸ್ಥಳಗಳಿರುವ ಅಕ್ಕಪಕ್ಕ ಯೋಜನೆ ಕೈಗೊಳ್ಳುವುದು, ಅದರಲ್ಲೂ ರಸ್ತೆ ಅಗಲೀಕರಣ ಮಾಡುವುದು ಭಾರತದಲ್ಲಿ ಸವಾಲಿನ ವಿಷಯವೇ ಆಗಿದೆ.
ಯೋಜನೆ ಅರಂಭ-ಪೂರ್ಣ ಯಾವಾಗ?
ಈ ಹೆದ್ದಾರಿ ಯೋಜನೆಗೆ ಇದೇ 2025 ಫೆಬ್ರವರಿರಲ್ಲಿ ಅನುಮೋದನೆ ನೀಡಲಾಗಯಿತು. ಸಾಮಾಜಿಕ ಜಾಲತಾಣದಲ್ಲಿ ಈ ಯೋಜನೆ ಆರಂಭ ಮತ್ತು ಪೂರ್ಣಗೊಳ್ಳುವ ಗಡುವು, ದಿನಾಂಕದ ಬಗ್ಗೆ ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಯಾವೆಲ್ಲ ತೊಡಕುಗಳು ಎದುರಾಗಬಹುದು. ಗುಣಮಟ್ಟದಲ್ಲಿ ಯಾವುದೇ ಕೊರತೆ ಆಗದಂತೆ ಯೋಜನೆ ಅನುಷ್ಠಾನಕ್ಕೆ ತರಬೇಕೆಂದು ಒತ್ತಾಯಿಸಲಾಗುತ್ತದೆ. ಶೀಘ್ರವೇ ಯೋಜನೆಯ ಎಲ್ಲ ಅಧಿಕೃತ ಮಾಹಿತಿಗಳು ಸಿಗಲಿವೆ.












Click it and Unblock the Notifications