ಚಿಕ್ಕಮಗಳೂರು: ವರ್ಷಾಂತ್ಯದಲ್ಲಿ 'ಹೆಲಿ ಟೂರಿಸಂ' ವೈಮಾನಿಕ ಚಟುವಟಿಕೆಗಳಿಗೆ ಎನ್‌ಜಿಟಿ ಮಧ್ಯಂತರ ತಡೆ
ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಡಿ.20ರಿಂದ ನಡೆಯಬೇಕಿದ್ದ 'ಹೆಲಿ ಟೂರಿಸಂ' ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಮಹತ್ವದ ಆದೇಶ ಹೊರಡಿಸಿದೆ. ಕೆಲಿಕಾಪ್ಟರ್ ಹಾರಾಟದಲ್ಲಿ ಇಲ್ಲಿನ ವನ್ಯಜೀವಿಗಳಿಗೆ ತೊಂದರೆ ಆಗುವ ಕಾರಣಕ್ಕೆ 2025ರ ವರ್ಷಾಂತ್ಯದ ರಜೆಯಲ್ಲಿ ಪರಿಸರ ವೀಕ್ಷಣೆಗೆಂದು ಆಯೋಜನೆಗೊಂಡಿದ್ದ ವೈಮಾನಿಕ ಚಟುವಟಿಕೆಗಳಿಗೆ ನ್ಯಾಯಮಂಡಳಿ ತಾತ್ಕಾಲಿಕ ತಡೆ ನೀಡಿದ ಆದೇಶ ಹೊರಡಿಸಿದೆ.
ಭಾರತದ ಹೆಲಿಕಾಪ್ಟರ್ ವೈಮಾನಿಕ ಸಂಸ್ಥೆಯಾದ ಥಂಬಿ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ಹಾಗೂ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆ ವತಿಯಿಂದ ಇದೇ ವರ್ಷಾಂತ್ಯದಲ್ಲಿ ಪ್ರವಾಸಿಗರಿಗಾಗಿ ಆಗಸದಿಂದ ಗಿರಿಗಳ ವೈಮಾನಿಕ ದರ್ಶನ ಮಾಡಿಸಲು 'ಹೆಲಿಕಾಪ್ಟರ್ ಟೂರಿಸಂ' ಚಟುವಟಿಕೆಗ ಆಯೋಜಿಸಿತ್ತು. ಇದರ ವಿರುದ್ಧ ಅರ್ಜಿದಾರ ಮೊಹಮ್ಮದ್ ಜಬೀಬುಲ್ಲಾ ಅವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಎನ್‌ಜಿಟಿ ಮಹತ್ವದ ಆದೇಶ ಹೊರಡಿಸಿದೆ. ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ರಜೆಗಳಿವೆ. ಹೀಗಾಗಿ ಚಿಕ್ಕಮಗಳೂರಿಗೆ ಹೆಚ್ಚಿನ ಪ್ರವಾಸಿಗರು ಆಮಿಸುವ ನಿರೀಕ್ಷೆ ಇತ್ತು.

ಹೆಲಿ ಟೂರಿಸಂ ವಿರುದ್ಧ ಅರ್ಜಿದಾರರ ವಾದವೇನು?
ಶುಕ್ರವಾರ ನಡೆದ ಅರ್ಜಿ ವಿಚಾರಣೆಯಲ್ಲಿ, ಮುಳ್ಳಯ್ಯನಗಿರಿಗೆ ಹೊಂದಿಕೊಂಡಂತೆ ಭದ್ರಾ ವನ್ಯಜೀವಿ ಪ್ರದೇಶ ಇದೆ. ಕಳಸ ಮತ್ತು ಮೂಡಿಗೆರೆಗೆ ಕುದುರೆಮುಖ ರಾಷ್ಟ್ರೀಯ ಉದ್ಯಾನ ಹೊಂದಿಕೊಂಡಿವೆ. ಭದ್ರಾ ಹುಲಿ ಸಂರಕ್ಷಿತ ಪ್ರದೇಶ, ಅದರ ಬಫರ್ ವಲಯವಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಮತ್ತು ಅದರ ಬಫರ್ ವಲಯದ ಮೇಲೆ ಈ ಹೆಲಿಕಾಪ್ಟರ್‌ಗಳು ಹಾದು ಹೋಗುವುದರಿಂದ ಸ್ಥಳೀಯ ಜೀವವೈವಿಧ್ಯತೆಗೆ ತೀವ್ರ ಧಕ್ಕೆ ಉಂಟಾಗಬಹುದು. ಅಲ್ಲದೇ ವನ್ಯಜೀವಿಗಳ ಆವಾಸಕ್ಕೆ ತೊಂದರೆ ಉಂಟು ಆಗುತ್ತದೆ. ಪಕ್ಷಿಗಳು ಗೂಡು ಕಟ್ಟುವ ಸಮಯ ಆಗಿರುವ ಕಾರಣ ಈ ಚಟುವಟಿಕೆಗಳು ನಡೆಯಬಾರದು ಎಂದು ಅರ್ಜಿದಾರರು ವಾದ ಮಂಡಿಸಿದರು.
ಪರಿಸರ ಸೂಕ್ಷ್ಮ ಪ್ರದೇಶ ಆಗಿರುವ ಕಾರಣ ಚಿಕ್ಕಮಗಳೂರು ವ್ಯಾಪ್ತಿಯಲ್ಲಿ'ಹೆಲಿ ಟೂರಿಸಂ' ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ಅರ್ಜಿದಾರರು ವಾದ ಮಂಡಿಸಿದರು. ಮುಳ್ಳಯ್ಯನಗಿರಿ ವೈಮಾನಿಕ ನೋಟಕ್ಕಾಗಿ ಪ್ರವಾಸಿಗರಿಗೆಂದು ಆಯೋಜಿಸಿದ್ದ ಹೆಲಿಕಾಪ್ಟರ್ ಚಟುವಟಿಕೆಗಳಿಗೆ ತಡೆ ವಿಧಿಸಲಾಗಿದೆ. ಚಿಕ್ಕಮಗಳೂರಲ್ಲಿ ಹೆಲಿಕಾಪ್ಟರ್ ಹಾರಾಟಕ್ಕೆ ಅನುಮತಿ ನೀಡಲಾಗಿದೆ ಎಂದು ಎನ್‌ಜಿಟಿ ತನ್ನ ಆದೇಶದಲ್ಲಿ ತಿಳಿಸಿದೆ.
ಶಾಶ್ವತ ನಿಷೇಧಕ್ಕೆ ಮನವಿ: ಇಲ್ಲಿ ನಿಯಮಗಳೇನಿವೆ?
ಅರ್ಜಿದಾರ ಮೊಹಮ್ಮದ್ ಜಬೀಬುಲ್ಲಾ ಅವರು, ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯನ್ನು ಮೊದಲ ಪ್ರತಿವಾದಿ ಮತ್ತು ಥಂಬಿ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ಆನರೇ ಪ್ರತಿವಾದಿಗಳಾಗಿ ಮಾಡಿದ್ದಾರೆ. ಈ ಅರಣ್ಯ ಪ್ರದೇಶಗಳ ವ್ಯಾಪ್ತಿಯಲ್ಲಿ ಪ್ರವಾಸೋದ್ಯಮ ನಡೆಸುವುದನ್ನು ಶಾಶ್ವತವಾಗಿ ನಿಷೇಧಿಸುವಂತೆ ಅವರು ವಿಚಾರಣೆ ವೇಳೆ ಕೋರಿದ್ದಾರೆ.
'ಪರಿಸರ ಸೂಕ್ಷ್ಮ ವಲಯ'ವನ್ನು (ಇಎಸ್‌ಝಡ್) ಸಂರಕ್ಷಿತ ಪ್ರದೇಶಗಳಿಗೆ ಇನ್ನೂ ಅಧಿಸೂಚಿಸಿದ ಕಾರಣ, ಪೂರ್ವನಿಯೋಜಿತ 10 ಕಿ.ಮೀ. ಇಎಸ್‌ಝಡ್ ನಿಯಮ ಅನ್ವಯವಾಗುತ್ತದೆ. ಮುಳ್ಳಯ್ಯನಗಿರಿ ಪ್ರದೇಶವು ಅತ್ಯಂತ ಪರಿಸರ ಸೂಕ್ಷ್ಮವಾಗಿದೆ. 2018ರಲ್ಲಿ ಕರ್ನಾಟಕ ಹೈಕೋರ್ಟ್ (ಡಬ್ಲ್ಯೂ.ಪಿ. ಸಂಖ್ಯೆ 53985/2018) ಇದನ್ನು 'ಸಂರಕ್ಷಣಾ ಮೀಸಲು ಪ್ರದೇಶ' ಎಂದು ಘೋಷಿಸಲು ನಿರ್ದೇಶಿಸಿತ್ತು. ಈ ಪ್ರದೇಶವು ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಇಎಸ್‌ಝಡ್ ವ್ಯಾಪ್ತಿಯಲ್ಲಿ ಬರುತ್ತದೆ.

ಪ್ರವಾಸೋದ್ಯಮ ಇಲಾಖೆಯು 2025ರ ಕ್ರಿಸ್‌ಮಸ್‌ಗಾಗಿ ಚಿಕ್ಕಮಗಳೂರು ನಗರ ಮತ್ತು ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಹೆಲಿ ಟೂರಿಸಂ ಕಾರ್ಯಕ್ರಮವನ್ನು ಉತ್ತೇಜಿಸಲು 2025ರಂದು ಡಿಸೆಂಬರ್ 16 ಅಧಿಕೃತ ಮಾಹಿತಿ ಹೊರಡಿಸಿತ್ತು. ಈ ಕಾರ್ಯಕ್ರಮದಡಿಯಲ್ಲಿ 'ಚಿಕ್ಕಮಗಳೂರು ವೈಮಾನಿಕ ನೋಟ' ಮತ್ತು 'ಮುಳ್ಳಯ್ಯನಗಿರಿ ವೈಮಾನಿಕ ನೋಟ' ಎಂಬ ಎರಡು ಪ್ರಮುಖ ಚಟುವಟಿಕೆಗಳಾಗಿ ವಿಂಗಡಿಸಿತ್ತು.
ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯು ಇಂದು ಶನಿವಾರ (ಡಿಸೆಂಬರ್ 20) ರಿಂದ 2026 ಜನವರಿ 06ರವರೆಗೆ ಚಿಕ್ಕಮಗಳೂರು ವ್ಯಾಪ್ತಿಯ ವಿವಿಧ ಪ್ರವಾಸಿ ತಾಣಗಳಲ್ಲಿ ಹೆಲಿ ಟೂರಿಸಂ ಕಾರ್ಯಾಚರಣೆಗಳು ನಡೆಬೇಕಿತ್ತು. ಈ ಹೆಲಿ ಟೂರಿಸಂ ಒಂದು ಮನರಂಜನೆ ಒದಗಿಸುವ ಸಂಸ್ಥೆಯಾಗಿದ್ದು, ಪ್ರವಾಸಿಗರಿಗೆ ರೋಮಾಂಚಕ ಅನುಭವ ಮತ್ತು ಪರ್ವತ ಶ್ರೇಣಿಯ ವಿಹಂಗಮ ನೋಟವನ್ನು ನೀಡುತ್ತದೆ. ಹೀಗಾಗಿ ಇಲ್ಲಿ ಒಂದಷ್ಟು ವೈಮಾನಿಕ ವೀಕ್ಷಣೆಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ನಗರ ಪ್ರದೇಶದ ಮೇಲೆ ಹಾರಾಟಕ್ಕೆ ಆಕ್ಷೇಪವಿಲ್ಲ
ಹೆಲಿ ಟೂರಿಸಂ ಚಿಕ್ಕಮಗಳೂರು ನಗರ ಪ್ರದೇಶದ ಮೇಲೆ ನಡೆಸುವುದಕ್ಕೆ ನಮ್ಮ ಆಕ್ಷೇಪಿಸುವುದಿಲ್ಲ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದರು. ಆದರೆ, ಪರಿಸರ ಸೂಕ್ಷ್ಮ ಮುಳ್ಳಯ್ಯನಗಿರಿ ಮತ್ತು ಮೂಡಿಗೆರೆ ಪ್ರದೇಶಗಳ ಮೇಲೆ ಹೆಲಿಕಾಪ್ಟರ್ ಹಾರಾಟವು ಪಕ್ಷಿಗಳ ಗೂಡು ಕಟ್ಟುವಿಕೆ, ನೈಸರ್ಗಿಕ ಲಯಕ್ಕೆ ಭಂಗ ತರುತ್ತದೆ. ಮುಖ್ಯವಾಗಿ ಪ್ರತಿವಾದಿಗಳು ಅರಣ್ಯ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳಿಂದ ಅಗತ್ಯ ಅನುಮತಿ ಪಡೆದಿಲ್ಲವೆಂದು ಅವರು ಆರೋಪಿಸಿದರು.
ವಾದ ವಿವಾದ ಆಲಿಸಿದ ಎನ್‌ಜಿಟಿ ಪ್ರವಾಸೋದ್ಯಮ ಇಲಾಖೆಯಂತಹ ಸಂಸ್ಥೆಯು ಯಾವುದೇ ಅನುಮತಿಗಳಿಲ್ಲದೆ ಇಂತಹ ಯೋಜನೆಗಳನ್ನು ಪ್ರಾರಂಭಿಸಲು ಸಾಧ್ಯವಿಲ್ಲ ಎಂದು ನ್ಯಾಯಮಂಡಳಿ ಅಭಿಪ್ರಾಯಪಟ್ಟಿತು. ಆದರೆ, ಪರಿಸರ ಸೂಕ್ಷ್ಮವಲಯಗಳ ಮೇಲೆ ಹೆಲಿಕಾಪ್ಟರ್‌ಗಳಿಂದ ಉಂಟಾಗುವ ಅತಿಯಾದ ಶಬ್ದವು ಅಲ್ಲಿನ ಜೀವಿಗಳ ಮೇಲೆ ಮತ್ತು ಗಾಳಿಯ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂಬ ಅಂಶವನ್ನು ನ್ಯಾಯಮಂಡಳಿ ಗಮನಿಸಿ ತಾತ್ಕಾಲಿಕ ತಡೆ ನೀಡಿ ಆದೇಶಿಸಿತು.












Click it and Unblock the Notifications