ಗೋಮಾಳ ಜಾಗ ಮಾರಾಟಕ್ಕೆ ಮುಂದಾದ ಸರ್ಕಾರ, ತೀವ್ರ ಖಂಡನೆ
ಕರ್ನಾಟಕ ಸರ್ಕಾರ ರಾಜ್ಯದಲ್ಲಿರುವ ಗೋಮಾಳ, ಗಾಯರಾಣ, ಹುಲ್ಲುಬನ್ನಿ, ಸೊಪ್ಪಿನ ಬೆಟ್ಟ ಲಕ್ಷಾಂತರ ಎಕರೆ ಭೂಮಿಯನ್ನು ಸಂಘ-ಸಂಸ್ಥೆಗಳಿಗೆ ಮಾರಾಟ ಮಾಡಲು ಮುಂದಾಗಿದ್ದು ಇದಕ್ಕಾಗಿ ಸಂಪುಟ ಉಪ ಸಮಿತಿ ರಚಿಸಿರುವುದನ್ನು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ತೀವ್ರವಾಗಿ ಖಂಡಿಸುತ್ತದೆ.
ಈ ಭೂಮಿಯನ್ನು ಮಾರಾಟ ಮಾಡಲು ಒಂದು ಉನ್ನತ ಮಟ್ಟದ ಮಂತ್ರಿಗಳ ಸಮಿತಿಯನ್ನೇ ರಚಿಸಿರುವುದನ್ನು ನೋಡಿದರೆ ಸರ್ಕಾರ ಭೂಮಿಗಳನ್ನು ಮಾರಾಟ ಮಾಡಲು ಈ ಸಮಿತಿಯು ಇನ್ನು ಮುಂದೆ "ರಿಯಲ್ ಎಸ್ಟೇಟ್" ಸಮಿತಿಯಾಗಿ ಕೆಲಸ ಮಾಡಲಿದೆ ಎಂದು ಇದಕ್ಕೆ ಅಧಿಕೃತವಾಗಿ ಘೋಷಣೆ ಮಾಡಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ.
ಕಂದಾಯ ಮಂತ್ರಿ, ಕಾನೂನು ಮಂತ್ರಿ, ಗೃಹ ಮಂತ್ರಿ, ಕೃಷಿ ಮಂತ್ರಿ, ನಗರಾಭಿವೃದ್ಧಿ ಹಾಗೂ ಪಶುಸಂಗೋಪಾನಾ ಮಂತ್ರಿಗಳನ್ನು ಸೇರಿಸಿ ಭೂಮಿಯನ್ನು ಮಂಜೂರಾತಿಗಾಗಿ ಸಂಪುಟ ಉಪ ಸಮಿತಿಯನ್ನು ಮಾಡುವ ಮೂಲಕ ರಾಜ್ಯದ ಮರ್ಯಾದೆಯನ್ನು ಹರಾಜಾಕಿದಂತಾಗಿದೆ.

ರಾಜ್ಯದಲ್ಲಿ ಈಗಾಗಲೇ ಲಕ್ಷಾಂತರ ಭೂರಹಿತರು ಇದೇ ಭೂಮಿಗಳಲ್ಲಿ ಸಾಗುವಳಿ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಮತ್ತು ಸೊಪ್ಪಿನ ಬೆಟ್ಟವನ್ನು ಅವಲಂಭಿಸಿ ಕೃಷಿಯನ್ನು ನಡೆಸುತ್ತಾ ಸಮುದಾಯದ ಅಸ್ತಿಯನ್ನಾಗಿ ಜನರು ಉಳಿಸಿ ಬೆಳೆಸಿಕೊಂಡು ಬರುತ್ತಿದ್ದಾರೆ. ಹುಲ್ಲುಗಾವಲುಗಳು ರಾಜ್ಯದ ಉದ್ದಗಲ್ಲಕ್ಕೂ ಬಯಲು ಸೀಮೆ, ಮಲೆನಾಡಿನಲ್ಲಿ ನೀರಿನ ಟ್ಯಾಂಕ್‌ಗಳಾಗಿವೆಯಲ್ಲದೆ, ದನಕರುಗಳಿಗೆ, ಮೇಕೆ, ಕುರಿಗಳಿಗೆ ಇವುಗಳೇ ಆಧಾರ.
ಗ್ರಾಮಕ್ಕೆ ಅಗತ್ಯವಿರುವಷ್ಟು ಗಾಯರಾಣ-ಗೋಮಾಳ ಭೂಮಿಯನ್ನು ಉಳಿಸಿಕೊಂಡು ಉಳಿದದ್ದನ್ನು ಭೂರಹಿತರು ಸಾಗುವಳಿ ಮಾಡುತ್ತಾ ಜೀವನೊಪಾಯವಾಗಿಸಿಕೊಂಡಿದ್ದಾರೆ. ಜನರ ಬದುಕಿಗೆ ಪೂರಕವಾಗಿ ಬಳಸಿಕೊಂಡು ಭೂಮಿ ಎಂಬ ಸಂಪತ್ತನ್ನು ಕಾಪಾಡಿಕೊಂಡು ಬರುತ್ತಿದ್ದಾರಲ್ಲದೆ ಮುಂದಿನ ಪೀಳಿಗೆ ಕಾಪಿಟ್ಟುಕೊಂಡು ಬರುತ್ತಿರುವುದು ವಿಶೇಷವೇ ಆಗಿದೆ.

ಈಗ ಅದೇ ಭೂಮಿಯನ್ನೇ ಗುರಿಯಾಗಿಟ್ಟುಕೊಂಡು ದೊಡ್ಡ ದೊಡ್ಡ ಕಂಪನಿಗಳಿಗೆ, ಸಂಘ- ಸಂಸ್ಥೆಯ ಹೆಸರುಗಳಿಗೆ ಮಾರಾಟ ಮಾಡಲು ಹೊರಟಿರುವ ಸರ್ಕಾರದ ಕ್ರಮ ಅಕ್ಷಮ್ಯ ಅಪರಾಧವಾಗಿದ್ದು ಕೂಡಲೇ ಸರ್ಕಾರ ಸಮಿತಿಯನ್ನು ಕೈಬಿಡಬೇಕೆಂದು, ಈ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಆಗ್ರಹಿಸುತ್ತದೆ.
ಸರ್ಕಾರ ಭೂಮಿಗಳನ್ನು ಮಾರಾಟ ಮಾಡುತ್ತಿರುವುದರ ಹಿಂದೆ ಕಂಪನಿಗಳ ಹಿತಾಸಕ್ತಿ ಇದೆ ಎಂಬುದಕ್ಕೆ ಭೂಸುಧಾರಣಾ ಕಾಯ್ದೆಯ ತಿದ್ದುಪಡಿ, ಎಪಿಎಂಸಿ ಕಾಯ್ದೆಗೆ ತಿದ್ದುಪಡಿಯಂತಹ ಇತ್ತೀಚೆನ ಸರ್ಕಾರದ ನೀತಿಗಳೇ ಸಾಕ್ಷಿಯಾಗಿವೆ. ಪ್ರಜಾಪ್ರಭುತ್ವದ ಮೌಲ್ಯಗಲ್ಲೊಂದಾದ ಸಂಪತ್ತಿನ ಹಂಚಿಕೆಗೆ ವಿರುದ್ದವಾಗಿ ನಡೆದುಕೊಳ್ಳುತ್ತಾ ದೇಶದ ಪ್ರಧಾನ ಸಂಪತ್ತಾದ ಭೂಮಿಯನ್ನೂ ಸರ್ಕಾರದ ಮಾಲೀಕತ್ವದಿಂದ ಹಿಂದೆ ಸರಿದು ಬಂಡವಾಳಿಗರಿಗೆ ಮಾರಾಟ ಮಾಡುವ ಮೂಲಕ ಅಪಚಾರ ಮಾಡುತ್ತಿದೆ.
ರಾಜ್ಯದ ಬಿಜೆಪಿ ಸರ್ಕಾರದ ಈ ನೀತಿ, ಧೋರಣೆಯನ್ನು ನಾಡಿನ ದೇಶಪ್ರೇಮಿಗಳೆಲ್ಲರೂ ಖಂಡಿಸುತ್ತಾ ಒಕ್ಕೊರಲಿನಿಂದ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ. ಈ ಮೂಲಕ ನಾಡಿನ ಭೂಮಿಯ ಸಂಪತ್ತನ್ನು ಉಳಿಸಿಕೊಳ್ಳುವುದಕ್ಕೆ ಪಣ ತೊಡಬೇಕಿದೆ.
ಹಲವು ದಶಕಗಳ ಕಾಲದಿಂದಲೂ ಗಾಯರಾಣ, ಗೋಮಾಳ, ಸೊಪ್ಪಿನ ಬೆಟ್ಟ, ಹುಲ್ಲುಬನ್ನಿ ಹೆಸರಿನಲ್ಲಿರುವ ಭೂಮಿಗಳಲ್ಲಿ ಬದುಕಿಗಾಗಿ ತುಂಡು ಭೂಮಿಯನ್ನು ಅವಲಂಭಿಸಿ ಲಕ್ಷಾಂತರ ದಲಿತ, ಆದಿವಾಸಿ, ಹಿಂದುಳಿದ, ಅಲೆಮಾರಿ ಹಾಗೂ ಇನ್ನಿತರೆ ಸಮುದಾಯಗಳು ಫಾರಂ.ನಂ.50,53 ಹಾಗೂ 57 ರಲ್ಲಿ ಅರ್ಜಿ ಸಲ್ಲಿಸಿ ಭೂಮಿಯ ಹಕ್ಕಿಗಾಗಿ ತಮ್ಮ ಜೀವನವನ್ನೇ ಸವೆಸುತ್ತಿದ್ದಾರೆ.
ಭೂಮಿಯ ಮಂಜೂರಾತಿಗಾಗಿ ಎರಡು-ಮೂರು ತಲೆ ಮಾರುಗಳು ರಾಜಕಾರಣಿಗಳ ಮನೆ ಬಾಗಿಲು ಕಾದಿದ್ದಲ್ಲದೆ, ನೂರಾರು ಅಧಿಕಾರಿಗಳ ಮುಖಗಳನ್ನು ನೋಡಿದರೂ ತಮ್ಮ ಬದುಕಿನ ಜೀವನ ಸವೆದದ್ದು ಬಿಟ್ಟರೆ ಬದುಕು ಬದಲಾಗಲೇ ಇಲ್ಲ. ಈಗ ಸರ್ಕಾರದ ಈ ನೀತಿಗಳು ಲಕ್ಷಾಂತರ ಜನರ ಜೀವಂತ ಬದುಕಿಗೆ ಬೆಂಕಿ ಇಡುವಂತಾಗಿದೆ...ಭೂಮಿ ಹಕ್ಕೆಂಬ ಕನಸನ್ನು ಮಣ್ಣುಪಾಲು ಮಾಡುತ್ತಿದ್ದಾರೆ.
ರಾಜ್ಯದ ಜನತೆ ನಾಡಿನ ಸಂಪತ್ ಉಳಿಸಿಕೊಳ್ಳಲು, ಭೂರಹಿತರು ತುಂಡು ಭೂಮಿಯ ಹಕ್ಕಿಗಾಗಿ, ರೈತರ ಸಮುದಾಯದ ಆಸ್ತಿಗಾಗಿ ಬೀದಿಗೆ ಬಂದು ಹೋರಾಡದಿದ್ದರೆ ನಮ್ಮೆಲ್ಲರ ಬದುಕು ನಾಶವಾಗುವುದಲ್ಲಿ ಎರಡು ಮಾತಿಲ್ಲ.
ಆದ್ದರಿಂದ ಸರ್ಕಾರ ಜನವಿರೋಧಿ ಆದೇಶಗಳನ್ನು, ರಿಯಲ್ ಎಸ್ಟೇಟ್ ಮಂತ್ರಿಗಳ ಸಮಿತಿಯನ್ನು ಕೂಡಲೇ ರದ್ದುಪಡಿಸಬೇಕೆಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಕಾರ್ಯದರ್ಶಿ ಮಂಡಳಿ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತದೆ.
ಎಂದು ಹೋರಾಟ ಸಮಿತಿಯ ಕುಮಾರ್ ಸಮತಳ, ಕೆಜೆಎಸ್ ಮರಿಯಪ್ಪ, ಡಿ.ಎಚ್.ಪೂಜಾರ್, ಸಿರಿಮನೆ ನಾಗರಾಜ್, ಸ್ವರ್ಣಭಟ್, ಸಿದ್ದರಾಜ್, ಸಿ.ಜಿ.ಗಂಗಪ್ಪ, ಕರಿಯಪ್ಪ ಗುಡಿಮನಿ, ಡಿ.ಎಸ್.ನಿರ್ವಾಣಪ್ಪ, ಅಮೀನ್ ಮೊಹಿಸೀನ್, ಕಂದೇಗಾಲ ಶ್ರೀನಿವಾಸ್, ಬಸವರಾಜ್ ಆಗ್ರಹಿಸಿದ್ದಾರೆ.












Click it and Unblock the Notifications