ಕರ್ನಾಟಕ: ಪೊಲೀಸ್ ಕಣ್ಗಾವಲಿನಲ್ಲಿ ಹೊಸ ವರ್ಷಾಚರಣೆ: ಜಿ.ಪರಮೇಶ್ವರ ನೀಡಿದ ಸೂಚನೆಗಳಿವು
ಬೆಂಗಳೂರು, ಡಿಸೆಂಬರ್ 22: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಜನ ಹೊಸ ವರ್ಷ ಎದುರು ನೋಡುತ್ತಿದ್ದಾರೆ. ಇದರಲ್ಲಿ ಬಹುತೇಕರು ಹೊಸ ವರ್ಷಾಚರಣೆಗೆ ಸಿದ್ಧವಾಗಿದೆ ಈ ಸಂದರ್ಭದಲ್ಲಿ ನಾಡಿನಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ತೀವ್ರ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ನಿರ್ದೇಶನ ನೀಡಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪೊಲೀಸ್ ಇಲಾಖೆ, ಆರೋಗ್ಯ, ಅಬಕಾರಿ ಇಲಾಖೆ, ಬಿಬಿಎಂಪಿ, ಬಿಎಂಆರ್‌ಸಿಎಲ್, ಬಿಎಂಟಿಸಿಯ ಹಿರಿಯ ಅಧಿಕಾರಿಗಳ ಜೊತೆ ಶುಕ್ರವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಬೆಂಗಳೂರಿನ ಎಂಜಿ.ರೋಡ್, ಬ್ರಿಗೇಡ್ ರೋಡ್, ಎಲೆಕ್ಟ್ರಾನಿಕ್ ಸಿಟಿ, ಇಂದಿರಾನಗರ ಹಾಗೂ ಶಾಪಿಂಗ್ ಮಾಲ್, ಸ್ಟಾರ್ ಹೋಟೆಲ್‌ಗಳಲ್ಲಿ ಹೊಸ ವರ್ಷ ಆಚರಿಸಲು ಹೆಚ್ಚಿನ ಜನಸಂಖ್ಯೆ ಸೇರುವ ಸಾಧ್ಯತೆ ಇದೆ. ಎಲ್ಲ ರೀತಿಯ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಬೇಕು. ರಾಜ್ಯದ ಪ್ರಮುಖ ನಗರಗಳಲ್ಲಿಯೂ ಸಹ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಹೊರಗಡೆಯಿಂದ ಬರುವವರ ಮೇಲೆ ನಿಗಾ ಇಡಿ
ಎನ್‌ಐಎ ಅಧಿಕಾರಿಗಳು ಕಳೆದೊಂದು ತಿಂಗಳಿನಿಂದ ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ದಾಳಿ ನಡೆಸಿ, ಶಂಕಿತರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಕ್ರಿಸ್‌ಮಸ್ ಹಬ್ಬ, ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ಹೊರಗಡೆಯಿಂದ ಬರುವರ ಚಲನವಲನಗಳ ಬಗ್ಗೆ ಸೂಕ್ತ ನಿಗಾವಹಿಸಬೇಕು ಎಂದು ತಾಕೀತು ಮಾಡಿದರು.
ಹೊಸ ವರ್ಷ ಆಚರಿಸಲು ಜನ ಸೇರುವ ಪ್ರಮುಖ ಸ್ಥಳಗಳನ್ನು ಗುರುತಿಸಿ, ಪೊಲೀಸ್ ಅಧಿಕಾರಿಗಳು ಪರಿಶೀಲಿಸಬೇಕು. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಬೇಕು. ಎಸ್‌ಡಿಆರ್‌ಎಫ್ ತಂಡಗಳು ಇರಬೇಕು. ಎಂಜಿ.ರಸ್ತೆ, ಬ್ರಿಗೇಡ್ ರೋಡ್‌ಗಳಲ್ಲಿ ಬಿಬಿಎಂಪಿಯವರು ತಾತ್ಕಲಿಕ ಆರೋಗ್ಯ ಕೇಂದ್ರಗಳನ್ನು ತೆರೆಯಬೇಕು. ನಗರದ ಎಲ್ಲ ವಿಭಾಗದ ಡಿಸಿಪಿಗಳು ಸ್ಥಳೀಯ ಆಸ್ಪತ್ರೆಗಳಿಗೆ ಭೇಟಿ ನೀಡಿ, ಡಿಸೆಂಬರ್ 31ರ ತಡರಾತ್ರಿ ತುರ್ತು ಚಿಕಿತ್ಸೆಗಾಗಿ ಅಲರ್ಟ್ ಇರುವಂತೆ ತಿಳಿಸಬೇಕು ಎಂದರು.

ವಿದ್ಯುತ್ ಅವಘಡ ಆಗದಂತೆ ಎಚ್ಚರ ವಹಿಸಿ
ಬೆಂಗಳೂರಿನ ಎಂಜಿ.ರಸ್ತೆ, ಬ್ರಿಗೇಡ್ ರೋಡ್, ಇಂದಿರಾನಗರ, ಎಲೆಕ್ಟ್ರಾನಿಕ್ ಸಿಟಿಗಳಲ್ಲಿನ ರಸ್ತೆಗಳಲ್ಲಿ ಪಬ್‌ಮತ್ತು ಬಾರ್, ಶಾಪಿಂಗ್ ಮಾಲ್, ಸ್ಟಾರ್ ಹೋಟೆಲ್‌ಗಳಿಗೆ ವಿದ್ಯುತ್ ದೀಪಾಲಂಕಾರ ಮಾಡುವ ಸಾಧ್ಯತೆ ಇದೆ. ಇದರಿಂದ ಅವಘಡಗಳಾಗುವ ಸಾಧ್ಯತೆ ಇರುತ್ತದೆ. ಅಗ್ನಿಶಾಮಕ ದಳ ಸಿಬ್ಬಂದಿಗಳು ಅಲರ್ಟ್ ಆಗಿರಬೇಕು.
ಇನ್ನೂ ಪಬ್ ಮತ್ತು ಬಾರ್‌ಗಳು ಸುರಕ್ಷತಾ ಕ್ರಮಕೈಗೊಂಡಿವೆಯೇ ಎಂಬುದನ್ನು ಪರಿಶೀಲಿಸಿ. ಮೇಲ್ಚಾವಣಿಗಳಲ್ಲಿ ಕಿಚನ್ ತೆರೆಯಲು ಅವಕಾಶ ನೀಡಬೇಡಿ. ಮದ್ಯದ ಅಂಗಡಿಗಳು ಎಂದಿನಂತೆಯೇ ತೆರೆದಿರಬೇಕು. ಹೆಚ್ಚಿನ ಸಮಯಾವಕಾಶ ನೀಡುವುದು ಬೇಡ ಎಂದು ತಿಳಿಸಿದರು.
ಪೊಲೀಸ್ ಹೆಲ್ಪ್‌ಡೆಸ್ಕ್
ನ್ಯೂ ಇಯರ್ ಸೆಲೆಬ್ರೇಷನ್‌ಗಾಗಿ ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ತಾತ್ಕಲಿಕ "ಪೊಲೀಸ್ ಹೆಲ್ಪ್ ಡೆಸ್ಕ್" ತೆರೆಯಬೇಕು. ಈ ಬಗ್ಗೆ ಜನರಿಗೆ ಅನೌನ್ಸ್‌ಮೆಂಟ್ ಮಾಡಬೇಕು. ಮೆಟ್ರೋ ರೈಲುಗಳು ಹೆಚ್ಚಿನ ಅವಧಿಯವರೆಗೆ ಸಂಚರಿಸಲಿ. ಅಲ್ಲದೇ, ಬಿಎಂಟಿಸಿ ವತಿಯಿಂದ ಪ್ರತ್ಯೇಕ ಬಸ್‌ಗಳನ್ನು ಬಿಡಬೇಕು. ಖಾಸಗಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಅಧಿಕಾರಿಗಳು ಸೂಚಿಸಿದರು.
ಈ ಸಭೆಯಲ್ಲಿ ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾಶಂಕರ್, ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಅಲೋಕ್ ಮೋಹನ್, ನಗರ ಪೊಲೀಸ್ ಆಯುಕ್ತ ದಯಾನಂದ್, ಅಗ್ನಿಶಾಮಕ ವಿಭಾಗದ ಮುಖ್ಯಸ್ಥ ಕಮಾಲ್ ಪಂತ್, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಸೇರಿದಂತೆ ಮತ್ತಿತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.












Click it and Unblock the Notifications