Happy New Year 2025: ಹೊಸ ವರ್ಷವನ್ನು ಹೊಸ ಭರವಸೆಗಳೊಂದಿಗೆ ಬರಮಾಡಿಕೊಳ್ಳೋಣ : ಸಿದ್ದರಾಮಯ್ಯ ಶುಭ ಕೋರಿದ್ದು ಹೀಗೆ
ಬೆಂಗಳೂರು, ಜನವರಿ 01: 2024 ಕ್ಕೆ ಗುಡ್ ಬೈ ಹೇಳಿದ್ದು, 2025 ರ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಲಾಗಿದೆ. ಈ ನಡುವೆ ನಾಡಿನ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸ ವರ್ಷದ ಶುಭಾಶಯ ಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪ್ರೀತಿಯ ನಾಡಬಾಂಧವರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಹೊಸ ವರ್ಷವನ್ನು ಹೊಸ ಚಿಂತನೆ, ಹೊಸ ಭರವಸೆ ಹಾಗೂ ಹೊಸ ಉತ್ಸಾಹದೊಂದಿಗೆ ಬರಮಾಡಿಕೊಳ್ಳೋಣ. ಜಾತಿ, ಧರ್ಮಗಳ ದ್ವೇಷ ತೊರೆದು ಎಲ್ಲರೂ ಒಂದಾಗಿ ಪ್ರೀತಿ - ಸಹಬಾಳ್ವೆಯ ಹಾದಿಯಲ್ಲಿ ಹೆಜ್ಜೆಹಾಕೋಣ. 2025ರ ನವ ವಸಂತ ತಮ್ಮೆಲ್ಲರ ಬಾಳಲ್ಲಿ ಸುಖ, ಶಾಂತಿ, ಸಮೃದ್ಧಿಯನ್ನು ತರಲಿ ಎಂದು ಹಾರೈಸಿದ್ದಾರೆ.

ಇನ್ನೂ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ ಅವರು ಸಹ ಹೊಸ ವರ್ಷದ ಶುಭಕೋರಿದ್ದು, ಹೊಸ ವರ್ಷದ ಹಾರ್ದಿಕ ಶುಭಾಶಯಗಳು. 2025ನೇ ವರ್ಷ ಶುಭ ತರಲಿ, ಎಲ್ಲರ ಮನ ಮನೆಗಳಲ್ಲಿ ಸುಖ ಶಾಂತಿ, ನೆಮ್ಮದಿ ಸಮೃದ್ಧಿ ನೆಲೆಸಲಿ. ಹೊಸ ವರ್ಷದಲ್ಲಿ ಭಾರತದ ಸಾಧನೆ ದಿಗಂತಕ್ಕೇರುವುದರ ಜೊತೆಗೆ, ಗೌರವಾನ್ವಿತ ಪ್ರಧಾನಿಗಳಾದ ನರೇಂದ್ರ ಮೋದಿ ಅವರ ಕನಸಿನ ವಿಕಸಿತ ಭಾರತ ಸಾಕಾರಕ್ಕೆ ಶಕ್ತಿ ತುಂಬಲಿ ಎಂದು ಹಾರೈಸುತ್ತೇನೆ ಹಾಗೂ ಈ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸೋಣ ಎಂದು ತಿಳಿಸಿದ್ದಾರೆ.
ಇನ್ನೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಶುಭಕೋರಿದ್ದು, ಎಲ್ಲರಿಗೂ 2025 ರ ಹೊಸ ವರ್ಷದ ಶುಭಾಶಯಗಳು. ಹೊಸ ವರ್ಷವು ಸಮೃದ್ಧ ತರಲಿ ಹಾಗೂ ಹಲವು ಅವಕಾಶಗಳನ್ನ ತರಲಿ, ನಿಮ್ಮ ಎಲ್ಲಾ ಪ್ರಯತ್ನಗಳು ನನಸಾಗಲಿ ಎಂದು ಶುಭ ಕೋರಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಶಿಕಾರಿಪುರ ಶಾಸಕರಾದ ಬಿ ವೈ ವಿಜಯೇಂದ್ರ ಅವರು ಶುಭಕೋರಿದ್ದು, ನಾಡಿನ ಸಮಸ್ತ ಜನತೆಗೆ 2025 ನೂತನ ಕ್ಯಾಲೆಂಡರ್ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ವರ್ಷಪೂರ್ತಿ ಕರುನಾಡ ತುಂಬೆಲ್ಲಾ ಹರುಷ ಪಸರಿಸಲಿ, ಅತಿವೃಷ್ಟಿ-ಅನಾವೃಷ್ಟಿಗಳು ರಾಜ್ಯವನ್ನು ಬಾಧಿಸದಿರಲಿ,ಯುವ ಜನರ ಬದುಕಿನಂಗಳದಲ್ಲಿ ಹೊಸ ಬೆಳಕು ಚೆಲ್ಲಲಿ, ಭರವಸೆಗಳು ಹೊಮ್ಮಲಿ ರೈತರು, ಕೃಷಿ ಕಾರ್ಮಿಕರು, ಶ್ರಮಿಕ ವರ್ಗದ ಜನರ ಬದುಕಿನಲ್ಲಿ ಹೊಸ ಚೈತನ್ಯ ಮೂಡಲಿ, ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಭಾರತವು ವಿಶ್ವಭೂಪಟದಲ್ಲಿ ಅಗ್ರ ಸ್ಥಾನ ಆಕ್ರಮಿಸಲಿ, 2025 ಜಾಗತಿಕ ತಾಪಮಾನ ಇಳಿಯಲಿ-ಯುದ್ಧ ಪೀಡನೆಯೂ ತೊಲಗಲಿ, ಪ್ರತಿಯೊಬ್ಬರ ಬದುಕಲ್ಲೂ ಶಾಂತಿ-ಸಂತಸ ಮೇಳೈಸಲಿ ಎಂದು ಶುಭಕೋರಿದ್ದಾರೆ.
ಹೊಸ ವರ್ಷದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಮಾನ್ಯ ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಅವರನ್ನು ಸದಾಶಿವನಗರದ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಶುಭ ಕೋರಿದರು. ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಅಲೋಕ್ ಮೋಹನ್, ಡಿಜಿಪಿ ಎಂ.ಎ.ಸಲೀಂ, ಮಾಲಿನಿ ಕೃಷ್ಣಮೂರ್ತಿ, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ್, ಎಡಿಜಿಪಿಗಳಾದ ಆರ್.ಹಿತೇಂದ್ರ, ಹೇಮಂತ್ ನಿಂಬಾಳ್ಕರ್, ಅಲೋಕ್ ಕುಮಾರ್, ಸೀಮಂತ್ ಕುಮಾರ್ ಸಿಂಗ್, ಉಮೇಶ್, ಶರತ್‌ಚಂದ್ರ ಮುಂತಾದವರು ಇದ್ದರು.












Click it and Unblock the Notifications