Government Employee: NPS ನಿಂದ OPS ಸರ್ಕಾರಿ ನೌಕರರಿಗೆ ಸಿಹಿಸುದ್ದಿ
ಬೆಂಗಳೂರು, ಫೆಬ್ರವರಿ 20: ಕರ್ನಾಟಕದ ಸರ್ಕಾರಿ ನೌಕರರು ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ (ಒಪಿಎಸ್) ಮರು ಜಾರಿಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಮಾರ್ಚ್ 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸುವ 2025-26ನೇ ಸಾಲಿನ ಬಜೆಟ್‌ನಲ್ಲಿ ಈ ಕುರಿತು ಅಂತಿಮ ಘೋಷಣೆಯಾಗುವ ನಿರೀಕ್ಷೆ ಇದೆ.
ಕರ್ನಾಟಕ ಸರ್ಕಾರ ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿ ಮಾಡುವ ಸಾಧ್ಯತೆಗಳ ಕುರಿತು ಪರಿಶೀಲಿಸಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿದೆ. ದಿನಾಂಕ 16/8/2024ರಲ್ಲಿ ಈ ಸಮಿತಿಯನ್ನು ಪುನರ್ ರಚಿಸಿ ಆದೇಶವನ್ನು ಹೊರಡಿಸಲಾಗಿದೆ. ಈ ಸಮಿತಿ ಇನ್ನೂ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿಲ್ಲ.

ಸರ್ಕಾರಿ ನೌಕರರ ಸಂಘದ ಭೇಟಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ನೇತೃತ್ವದ ನಿಯೋಗ ಸರ್ಕಾರ ರಚನೆ ಮಾಡಿರುವ ಸಮಿತಿಯ ಅಧ್ಯಕ್ಷರಾದ ಅಂಜುಂ ಪರ್ವೇಜ್ ಅವರನ್ನು ಭೇಟಿ ಮಾಡಿತು. ಎನ್‌ಪಿಎಸ್ ರದ್ಧತಿ ಕುರಿತು ಕೈಗೊಂಡಿರುವ ಕ್ರಮಗಳ ಕುರಿತು ಅವರ ಜೊತೆ ಚರ್ಚೆಯನ್ನು ನಡೆಸಿತು.
ಈ ಸಂದರ್ಭದಲ್ಲಿ ನಿಯೋಗಕ್ಕೆ ಅಧ್ಯಕ್ಷರು ಎನ್‌ಪಿಎಸ್ ಸಮಿತಿಯು ಅಂತಿಮ ಸಭೆಯನ್ನು ಶೀಘ್ರದಲ್ಲಿಯೇ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಿದೆ ಎಂದು ಭರವಸೆ ನೀಡಿದರು. ಸರ್ಕಾರಕ್ಕೆ ಸಲ್ಲಿಸುವ ವರದಿಯಲ್ಲಿ ಎನ್‌ಪಿಎಸ್ ನೌಕರರಿಗೆ ಪೂರಕವಾದ ಅಂಶಗಳನ್ನು ಅಧ್ಯಯನ ಮಾಡಿ ತಯಾರಿಸಿದ ವರದಿಯನ್ನು ಬಜೆಟ್ ಮಂಡನೆ ಪೂರ್ವದಲ್ಲಿಯೇ ಸರ್ಕಾರಕ್ಕೆ ಸಲ್ಲಿಸುವ ಭರವಸೆಯನ್ನು ಕೊಟ್ಟಿದ್ದಾರೆ.
ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದ ಮೇಲೆ ಕರ್ನಾಟಕ ಸರ್ಕಾರಿ ನೌಕರರ ಸಂಘ ಸರ್ಕಾರದ ಮೇಲೆ ಒತ್ತಡವನ್ನು ತಂದು ಒಪಿಎಸ್ ಜಾರಿಗೆ ಕ್ರಮ ಕೈಗೊಳ್ಳಲಿದೆ ಎಂದು ಸಂಘ ಹೇಳಿದೆ. ಸಮಿತಿಯ ವರದಿಯನ್ನು 2025-26ನೇ ಬಜೆಟ್ ಮಂಡನೆ ಪೂರ್ವದಲ್ಲಿಯೇ ಸಲ್ಲಿಕೆ ಮಾಡಲಾಗುತ್ತದೆ ಎಂದು ಸಮಿತಿಯು ಸಂಘಕ್ಕೆ ಭರವಸೆ ನೀಡಿದೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆ: ಕರ್ನಾಟಕ ಕಾಂಗ್ರೆಸ್ 2023ರ ವಿಧಾನಸಭೆ ಚುನಾವಣೆಗೆ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಸರ್ಕಾರಿ ನೌಕರರ ಬೇಡಿಕೆಯಾದ ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆ ಪಿಂಚಣಿ ವ್ಯವಸ್ಥೆ ಮರು ಜಾರಿಗೊಳಿಸುತ್ತೇವೆ ಎಂದು ಭರವಸೆ ಕೊಟ್ಟಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಎರಡು ವರ್ಷಗಳು ಕಳೆದರೂ ಸಹ ಇನ್ನೂ ನೀಡಿರುವ ಭರವಸೆ ಈಡೇರಿಸಿಲ್ಲ. ಆದ್ದರಿಂದ ಸರ್ಕಾರಿ ನೌಕರರು ಈ ಕುರಿತು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.
ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಚಾರದಲ್ಲಿ ಸರ್ಕಾರಿ ನೌಕರರಿಗೆ ಭರವಸೆಯೊಂದನ್ನು ನೀಡಿದ್ದಾರೆ. 'ನಿಮ್ಮೆಲ್ಲರ ಬೇಡಿಕೆಯಂತೆ ಹಳೆ ಪಿಂಚಣಿ ಪದ್ಧತಿ ಮತ್ತು ಆರೋಗ್ಯ ಸಂಜೀವಿನಿ ಕಾರ್ಯಕ್ರಮದ ಬಗ್ಗೆಯೂ ಸರ್ಕಾರ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುತ್ತದೆ. ಇದು ನಿಮ್ಮೆಲ್ಲರ ಸರ್ಕಾರ. ನಾನು ನಿಮ್ಮ ಜೊತೆ ಇರುತ್ತೇನೆ. ನಾವು-ನೀವು ಒಟ್ಟಾಗಿ ಜನರ ಜೊತೆ ಇದ್ದು, ಜನರ ಋಣ ತೀರಿಸೋಣ" ಎಂದು ಹೇಳಿದ್ದಾರೆ.
ರಾಜ್ಯ ಎನ್‌ಪಿಎಸ್ ನೌಕರರ ಸಂಘ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಎನ್‌ಪಿಎಸ್ ರದ್ದುಗೊಳಿಸಬೇಕು ಎಂದು ಕೆಲವು ದಿನಗಳ ಹಿಂದೆ ಬೃಹತ್ ಪ್ರತಿಭಟನೆಯನ್ನು ಸಹ ನಡೆಸಿತ್ತು. ಕರ್ನಾಟಕ ಸರ್ಕಾರ ರಚನೆ ಮಾಡಿರುವ ಸಮಿತಿಗೆ ವರದಿ ನೀಡಲು ಕಾಲಮಿತಿಯನ್ನು ನಿಗದಿ ಮಾಡಿಲ್ಲ. ಆದರೆ ಬಜೆಟ್ ಮಂಡನೆಗೂ ಮೊದಲೇ ವರದಿ ಸಲ್ಲಿಕೆ ಮಾಡುವ ನಿರೀಕ್ಷೆ ಇದೆ.












Click it and Unblock the Notifications