ಕೇವಲ ಪ್ರಾಂಪ್ಟ್ ಬರೆದರೆ ಸಾಲದು: AI ಯುಗದಲ್ಲಿ ಉದ್ಯೋಗ ಉಳಿಸಿಕೊಳ್ಳಲು ಬೇಕು ಈ ಹೊಸ ಕೌಶಲ್ಯ ಎಂದ Nestle CEO
ಪ್ರಸ್ತುತ ಜಗತ್ತಿನಾದ್ಯಂತ ಕೃತಕ ಬುದ್ಧಿಮತ್ತೆ ಅಥವಾ ಈ ಎಐ ಉದ್ಯೋಗ ಮಾರುಕಟ್ಟೆಯಲ್ಲಿ ಭಾರಿ ಕ್ರಾಂತಿಯನ್ನೇ ಸೃಷ್ಟಿಸುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಕೆಲಸದ ಸ್ಥಳದಲ್ಲಿ ನಾವು ಮುಂದಿರಲು ಕೇವಲ ಉತ್ತಮವಾದ 'ಪ್ರಾಂಪ್ಟ್' ಬರೆಯುವುದು ಮಾತ್ರ ಇನ್ನು ಮುಂದೆ ಸಾಕಾಗುವುದಿಲ್ಲ ಎಂದು ನೆಸ್ಲೆಯ (Nestlé) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಫಿಲಿಪ್ ನವರತಿಲ್ ಹೇಳಿದ್ದಾರೆ.
ಒಂದು ವ್ಯವಹಾರವನ್ನ ಸಂಪೂರ್ಣವಾಗಿ ಪರಿವರ್ತಿಸಲು ಈ ತಂತ್ರಜ್ಞಾನ ಹೇಗೆ ಸಹಾಯ ಮಾಡುತ್ತಿದೆ ಎಂಬುದನ್ನ ಅರ್ಥಮಾಡಿಕೊಳ್ಳುವ ವಿಶಾಲ ದೃಷ್ಟಿಕೋನ ಉದ್ಯೋಗಿಗಳಿಗೆ ಇರಬೇಕು ಎಂದು ಫಿಲಿಪ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಪಂಚದಾದ್ಯಂತ ನೆಸ್ಫ್ರೆಸ್ಸೊ (Nespresso) ಸೇರಿದಂತೆ ಪ್ರಮುಖ ಬ್ರ್ಯಾಂಡ್‌ಗಳನ್ನ ಹೊಂದಿರುವ ನೆಸ್ಲೆ ಕಂಪನಿಯಲ್ಲಿ 2,70,000ಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. ಬಿಸಿನೆಸ್ ಇನ್ಸೈಡರ್ ವರದಿಯ ಪ್ರಕಾರ, ಉದ್ಯೋಗಿಗಳು ಎಐ ತಂತ್ರಜ್ಞಾನದ ಪ್ರತಿಯೊಂದು ತಾಂತ್ರಿಕ ಸೂಕ್ಷ್ಮತೆಯನ್ನ ಕಲಿಯಬೇಕಾಗಿಲ್ಲ. ಆದರೆ, ಅದರ ಸಾಮರ್ಥ್ಯಗಳು, ಪ್ರಸ್ತುತ ಟ್ರೆಂಡ್‌ಗಳು ಮತ್ತು ಸಂಸ್ಥೆಯ ವ್ಯವಹಾರದ ಮೇಲೆ ಅದು ಬೀರುವ ಒಟ್ಟಾರೆ ಪ್ರಭಾವವನ್ನ ಗ್ರಹಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಫಿಲಿಪ್ ನವರತಿಲ್ ತಿಳಿಸಿದ್ದಾರೆ.
ಕೇವಲ ಪರಿಕರವಲ್ಲ, ವ್ಯವಹಾರ ಪರಿವರ್ತನೆಗೆ ಎಐ ಸಾಧನ
ಎಐ ಅನ್ನು ಕೇವಲ ಒಂದು ದೈನಂದಿನ ಕೆಲಸದ ಟೂಲ್ ಆಗಿ ನೋಡುವುದರಿಂದ ಅದರ ಸಂಪೂರ್ಣ ಲಾಭವನ್ನ ಪಡೆಯಲು ಸಾಧ್ಯವಿಲ್ಲ. ಬದಲಿಗೆ, ಪ್ರಸ್ತುತ ಇರುವ ಕೆಲಸದ ವರ್ಕ್‌ಪ್ಲೋ ಮತ್ತು ವ್ಯವಹಾರ ಪ್ರಕ್ರಿಯೆಗಳನ್ನ ಮರುರೂಪಿಸಲು ಈ ತಂತ್ರಜ್ಞಾನ ಹೇಗೆ ನೆರವಾಗಬಲ್ಲದು ಎಂಬುದನ್ನ ಉದ್ಯೋಗಿಗಳು ಯೋಚಿಸಬೇಕು ಎಂದು ನವರತಿಲ್ ಹೇಳಿದ್ದಾರೆ.
ಅಸ್ತಿತ್ವದಲ್ಲಿರುವ ಸಾಂಪ್ರದಾಯಿಕ ಕೆಲಸದ ವಿಧಾನಗಳಿಗೆ ಕೇವಲ ಎಐ ಪರಿಕರಗಳನ್ನ ಸೇರಿಸುವುದರಿಂದ ಕೆಲಸಗಳು ಸುಲಭವಾಗುವ ಬದಲು ಇನ್ನಷ್ಟು ಕಷ್ಟವಾಗಬಹುದು ಎಂಬ ಎಚ್ಚರಿಕೆಯನ್ನ ಸಹ ನೀಡಿದ್ದಾರೆ.
ಕೆಲಸದ ವಿಧಾನವನ್ನು ಸರಳಗೊಳಿಸುವ ಮಾರ್ಗ
ಉದ್ಯೋಗಿಗಳು ತಮ್ಮ ದಿನನಿತ್ಯದ ಕೆಲಸಗಳಲ್ಲಿ ಅನಗತ್ಯ ಪ್ರಕ್ರಿಯೆಗಳನ್ನ ಗುರುತಿಸಿ, ಕೆಲಸವನ್ನಾ ಸರಳಗೊಳಿಸಲು ಎಐ ಅನ್ನು ಬಳಕೆ ಮಾಡಿಕೊಳ್ಳಬೇಕು. ಇದರಿಂದಾಗಿ ಉಳಿತಾಯವಾಗುವ ಸಮಯವನ್ನ ಮನುಷ್ಯನ ಅಗತ್ಯವಿರುವ ಮಹತ್ವದ ಕೆಲಸಗಳಿಗೆ ಬಳಸಿಕೊಳ್ಳಬಹುದು.
ಉದಾಹರಣೆಗೆ, ಡೇಟಾ ವಿಶ್ಲೇಷಣೆ ಮಾಡುವುದು, ವ್ಯಾಪಾರ ಪಾಲುದಾರರನ್ನ ಭೇಟಿ ಮಾಡುವುದು ಮತ್ತು ವೇಗವಾಗಿ ವ್ಯಾಪಾರ ನಿರ್ಧಾರಗಳನ್ನ ತೆಗೆದುಕೊಳ್ಳಲು ಈ ಸಮಯವನ್ನ ವಿನಿಯೋಗಿಸಬಹುದು. ವೈಯಕ್ತಿಕ ಕಾರ್ಯಗಳನ್ನ ಪೂರ್ಣಗೊಳಿಸುವುದನ್ನ ಮೀರಿ, ಇಡೀ ಸಂಸ್ಥೆಯು ಹೇಗೆ ಉತ್ತಮವಾಗಿ ಕಾರ್ಯನಿರ್ವಹಿಸಬಹುದು ಎಂಬುದನ್ನು ಅನ್ವೇಷಿಸುವುದು ಇಂದಿನ ತುರ್ತು ಅಗತ್ಯವಾಗಿದೆ.
ಜಾಗತಿಕ ಟೆಕ್ ನಾಯಕರ ಅಭಿಪ್ರಾಯ
ನವರತಿಲ್ ಅವರ ಈ ಹೇಳಿಕೆಗಳು ಎಐ ಚಾಲಿತ ಕೆಲಸದ ಸ್ಥಳದಲ್ಲಿ ಯಾವ ಸಾಮರ್ಥ್ಯಗಳು ಮುಖ್ಯವಾಗುತ್ತವೆ ಎಂಬ ಚರ್ಚೆಯನ್ನ ಮುನ್ನೆಲೆಗೆ ತಂದಿವೆ. ಕಾಯಿನ್‌ಬೇಸ್ ಸಂಸ್ಥೆಯ ಮುಖ್ಯ ತಂತ್ರಜ್ಞಾನ ಅಧಿಕಾರಿ, ಓಪನ್‌ಎಐ ಅಧ್ಯಕ್ಷ ಗ್ರೆಗ್ ಬ್ರಾಕ್‌ಮನ್ ಹಾಗೂ ವೈ ಕಾಂಬಿನೇಟರ್‌ನ ಸಹ-ಸಂಸ್ಥಾಪಕ ಪಾಲ್ ಗ್ರಹಾಂ ಸೇರಿದಂತೆ ಹಲವು ತಂತ್ರಜ್ಞಾನ ಮುಖಂಡರು ಸಹ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ತಂತ್ರಜ್ಞಾನವು ವಿಷಯಗಳನ್ನ ಉತ್ಪಾದಿಸುವುದನ್ನ ಸುಲಭಗೊಳಿಸಿದಾಗ, ವಾಸ್ತವದಲ್ಲಿ ಏನನ್ನು ಸೃಷ್ಟಿಸುವುದು ಮೌಲ್ಯಯುತವಾಗಿದೆ ಎಂಬುದನ್ನ ನಿರ್ಧರಿಸುವ ಮಾನವನ ವಿವೇಚನೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವೇ ಪ್ರಮುಖವಾಗುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಒಟ್ಟಿನಲ್ಲಿ ಕೃತಕ ಬುದ್ಧಿಮತ್ತೆಯು ಎಲ್ಲರಿಗೂ ಸುಲಭವಾಗಿ ಲಭ್ಯವಾಗುತ್ತಿರುವ ಇಂದಿನ ದಿನಗಳಲ್ಲಿ, ಕೇವಲ ತಂತ್ರಜ್ಞಾನವನ್ನ ಬಳಸುವುದು ಗೊತ್ತಿದ್ದರೆ ಸಾಲದು. ಬದಲಿಗೆ, ಆ ತಂತ್ರಜ್ಞಾನದ ಮೂಲಕ ಎಲ್ಲಿ ಸಕಾರಾತ್ಮಕ ಮತ್ತು ಅರ್ಥಪೂರ್ಣ ಬದಲಾವಣೆ ತರಬಹುದು ಎಂಬುದನ್ನ ಗ್ರಹಿಸುವ ನೌಕರರು ಮಾತ್ರ ಉದ್ಯೋಗ ಕ್ಷೇತ್ರದಲ್ಲಿ ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯವಿದೆ.


Click it and Unblock the Notifications
