ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಹಿಷ್ಕಾರ ವಿರೋಧಿಸಿ ಪ್ರತಿಭಟನೆಗಿಳಿದ 45 ದಲಿತ ಕುಟುಂಬಗಳು

ಜಿಲ್ಲಾ ಸರ್ಕಾರಿ ಶಾಲೆಯ ಸುಧಾರಣಾ ಸಮಿತಿಯ ಅಧ್ಯಕ್ಷ ಸ್ಥಾನದ ಮೀಸಲಾತಿ ಕುರಿತ ಅಸಮಾಧಾನದಲ್ಲಿ ಭಾನುವಾರ ಗ್ರಾಮದ 45 ಕುಟುಂಬಗಳಿಗೆ ಬಹಿಷ್ಕಾರ ಹಾಕಲಾಗಿತ್ತು.

|
Google Oneindia Kannada News

ಗದಗ, ಫೆಬ್ರವರಿ 20: ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಸಮೀಪದ ಯಕಲಾಸಪುರ ಗ್ರಾಮದ ಸುಮಾರು 45 ದಲಿತ ಕುಟುಂಬಗಳ ಸಾಮೂಹಿಕ ಬಹಿಷ್ಕಾರದ ಬಿಸಿ ತಾರಕ್ಕೇರಿದ್ದು, ದಲಿತ ಕುಟುಂಬಗಳು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸಬೇಕೆಂದು ಧರಣಿ ಕುಳಿತಿದ್ದಾರೆ.

ಇದಲ್ಲದೆ, ನ್ಯಾಯ ಕೇಳಿದ್ದಕ್ಕೆ ತಮ್ಮ ಕುಟುಂಬಗಳ ಮೇಲೆ ಬಹಿಷ್ಕಾರ ಹಾಕಿದ ಸವರ್ಣೀಯರ ಕುಟುಂಬಗಳ ಮೇಲೆ ಜಾತಿ ನಿಂದನೆ ದಾವೆ ಹೂಡುವುದಾಗಿಯೂ ಘೋಷಣೆ ಕೂಗಿದ್ದಾರೆ. ಆದರೆ, ಸದ್ಯಕ್ಕೆ ಪರಿಸ್ಥಿತಿ ವಿಕೋಪಕ್ಕೆ ಹೋಗದೇ ಹತೋಟಿಯಲ್ಲಿದೆ ಎಂದು ಪರಿಸ್ಥಿತಿ ಶಮನಗೊಳಿಸಲು ಪ್ರಯತ್ನಿಸುತ್ತಿರುವ ಅಧಿಕಾರಿಗಳು ತಿಳಿಸಿದ್ದಾರೆ.

ಯಕಲಾಸಪುರ ಗ್ರಾಮದ ಸರಕಾರಿ ಶಾಲೆಯ ಶಾಲಾ ಸುಧಾರಣಾ ಸಮಿತಿಯ (ಎಸ್ ಡಿಎಂಸಿ) ಅಧ್ಯಕ್ಷ ಸ್ಥಾನ ಈ ಬಾರಿ ದಲಿತರಿಗೆ ಮೀಸಲಾಗಬೇಕಿದೆ. ಇದನ್ನೇ ಭಾನುವಾರ (ಫೆಬ್ರವರಿ 19) ನಡೆದ ಸಭೆಯೊಂದರಲ್ಲಿ ದಲಿತರು, ಸವರ್ಣೀಯರನ್ನು ಅಧ್ಯಕ್ಷ ಸ್ಥಾನ ಬಿಟ್ಟುಕೊಡ್ಲಲು ಕೋರಿದ್ದಾರೆ. ಆದರೆ, ಇದಕ್ಕೆ ಸವರ್ಣೀಯರು ಒಪ್ಪಿಲ್ಲ. ಹಾಗಾಗಿಯೇ, ಇದು ಗಲಾಟೆಗೆ ಕಾರಣವಾಗಿ, ಆನಂತರ ದಲಿತ ಕುಟುಂಬಗಳನ್ನು ಗ್ರಾಮದಿಂದ ಬಹಿಷ್ಕರಿಸುವ ನಿರ್ಧಾರಕ್ಕೆ ಸವರ್ಣೀಯರು ಬಂದಿದ್ದರೆನ್ನಲಾಗಿದೆ.

Negotiation meeting conducted to difuse the chaotic situation in Yakalasapura

ಈ ಪ್ರಕರಣ ಬೆಳಕಿಗೆ ಬಂದ ಕೂಡಲೇ ಪರಿಸ್ಥಿತಿ ಶಾಂತಗೊಳಿಸಲು ಮುಂದಾಗಿರುವ ಗದಗ ತಾಲೂಕಿನ ತಹಶೀಲ್ದಾರ್ ಬಿರಾದಾರ್ ಹಾಗೂ ಮತ್ತಿತರ ಅಧಿಕಾರಿಗಳು ಸವರ್ಣೀಯರು ಹಾಗೂ ದಲಿತರ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಲು ಪ್ರಯತ್ನಿಸುತ್ತಿದ್ದಾರೆ. ಅಲ್ಲದೆ, ಫೆಬ್ರವರಿ 21ಕ್ಕೆ ಸಂಧಾನ ಸಭೆ ನಡೆಸಲು ಮುಂದಾಗಿದ್ದಾರೆ.

ಫೆ. 21 ರಂದು ಮಂಗಳವಾರ ರಾಜ್ಯ ಎಸ್ಸಿ ಎಸ್ಟಿ ಆಯೋಗದ ಅಧ್ಯಕ್ಷ ಎ.ಮುನಿಯಪ್ಪ ಗ್ರಾಮಕ್ಕೆ ಭೇಟಿ ನೀಡಲಿದ್ದು, ದಲಿತರು ಮತ್ತು ಸವರ್ಣೀಯರ ನಡುವೆ ಶಾಂತಿ ಸಂಧಾನ ಸಭೆ ನಡೆಸಲಿದ್ದಾರೆ ಎಂದು ತಿಳಿಸಿದರು.

ಈ ಕುರಿತು ಒನ್ ಇಂಡಿಯಾಕ್ಕೆ ಮಾಹಿತಿ ನೀಡಿರುವ ಗದಗ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಜಾ ಹುಸೇನ ಮುಧೋಳ, ''ಫೆಬ್ರವರಿ 20ರಂದು ಬೆಳಗ್ಗೆ ಗದಗ ತಹಶೀಲ್ದಾರ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ನಾನೂ ಕೂಡ ಈಗ ಗ್ರಾಮಕ್ಕೆ ಭೇಟಿ ನೀಡಿ ದಲಿತರಿಗೆ ಸಾಂತ್ವನ ಹೇಳಿ ಬಹಿಷ್ಕಾರದ ಕುರಿತು ಮಾಹಿತಿ ಪಡೆದುಕೊಳ್ಳುತ್ತೇನೆ'' ಎಂದಿದ್ದಾರೆ.

ಬಹಿಷ್ಕಾರಕ್ಕೆ ಕಾರಣವಾದ ಮೀಸಲಾತಿ: ಗ್ರಾಮದ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ಸ್ಥಾನ ಈ ಹಿಂದೆ ಜನರೆಲ್ ಕ್ಯಾಟಗರಿಯಾಗಿ ಮೀಸಲಾಗಿತ್ತು. ಈ ಬಾರಿ ಅಂದರೆ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅಧ್ಯಕ್ಷ ಸ್ಥಾನ ದಲಿತ ಲಂಬಾಣಿ ಸಮುದಾಯಕ್ಕೆ ಮೀಸಲಾಗಬೇಕೆಂದು ಜಿಲ್ಲಾ ಶಿಕ್ಷಣಾಧಿಕಾರಿ ಅದೇಶ ಹೊರಡಿಸಿದ್ದರು.

ಇದರಿಂದ ಗ್ರಾಮದ ಸವರ್ಣೀಯರು ಮೀಸಲಾತಿಯನ್ನು ಖಂಡಿಸಿ ಪ್ರತಿಭಟಿಸಿದಾಗ ಗ್ರಾಮದಲ್ಲಿ ದಲಿತರು ಪ್ರತ್ಯುತ್ತರವಾಗಿ ಪ್ರತಿಭಟನೆ ನಡೆಸಿದ್ದರು. ಈ ವಿಷಯದಲ್ಲಿ ದಲಿತರ ವಿರುದ್ಧ ತಿರುಗಿ ಬಿದ್ದ ಸವರ್ಣೀಯರು ಗ್ರಾಮದಿಂದ ಎಲ್ಲರನ್ನೂ ಬಹಿಷ್ಕಾರ ಹಾಕಿದ್ದರು. ಘಟನೆ ಕುರಿತು ಮಾಧ್ಯಮಗಳಲ್ಲಿ ವರದಿ ಬಂದ ನಂತರ ಎಚ್ಚೆತ್ತ ಅಧಿಕಾರಿಗಳು ಇಂದು ಗ್ರಾಮಕ್ಕೆ ಭೇಟಿ ನೀಡಿ ದಲಿತ ಸಮುದಾಯದವರಿಗೆ ಸಾಂತ್ವನ ಹೇಳಿ ನಾಳೆ ನಡೆಯುವ ಸಂಧಾನ ಸಭೆಯಲ್ಲಿ ಪಾಲ್ಗೊಳ್ಳಲು ಆಹ್ವಾನಿಸಿದ್ದಾರೆ.

ಮರುಕಳಿಸುತ್ತಿರುವ ದಬ್ಬಾಳಿಕೆ?: ಸಾಮಾನ್ಯವಾಗಿ ಹಿಂದುಳಿದ ಪ್ರದೇಶವೆಂದೇ ಹೆಸರುವಾಸಿಯಾಗಿರುವ ಉತ್ತರ ಕರ್ನಾಟಕದ ಕಪ್ಪತ್ತಗುಡ್ಡದ ತಪ್ಪಲಲ್ಲಿರುವ ಮುಂಡರಗಿ ತಾಲೂಕೂ ಅಕ್ರಮ ಮರಳುಗಾರಿಕೆಗೆ ರಾಜ್ಯದಲ್ಲಿಯೇ ಹೆಸರುವಾಸಿಯಾಗಿದೆ.

ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದ ಲಂಬಾಣಿ ಸಮುದಾಯದ ಜನತೆ ಕಂಡು ಬರುತ್ತಾರೆ. ಶಿರಹಟ್ಟಿ ಕ್ಷೇತ್ರಕ್ಕೆ ಲಂಬಾಣಿ ಸಮುದಾಯದವರೇ ಕಾಂಗ್ರೆಸ್ ಪಕ್ಷದ ಶಾಸಕರಾಗಿದ್ದಾರೆ. ಇನ್ನು ಮಾಜಿ ಸಚಿವರೊಬ್ಬರೂ ಕೂಡ ಈ ಭಾಗದಲ್ಲಿ ಪ್ರಭಾವ ಹೊಂದಿದ್ದಾರೆ. ಅದೇ ರೀತಿ ಈ ಭಾಗದಲ್ಲಿ ಸವರ್ಣೀಯರು ಹೆಚ್ಚಾಗಿ ಶ್ರೀಮಂತ ವರ್ಗದವರಿದ್ದರೆ, ದಲಿತ ಸಮುದಾಯದವರು ಕೂಲಿ ನಾಲಿ ಮಾಡಿಕೊಂಡು ಜೀವನ ಸಾಗಿಸಬೇಕಾದ ಪರಿಸ್ಥಿತಿ ಇದೆ.

ಈ ಹಿಂದೆಯೂ ಸವರ್ಣೀಯರ ಮತ್ತು ದಲಿತರ ನಡುವಿನ ಬಹಿಷ್ಕಾರದಂತಹ ಕಾರ್ಯಗಳು ಇಲ್ಲಿ ನಿರಂತರವಾಗಿಯೇ ನಡೆಯುತ್ತವೆ. ಕೆಲ ದಲಿತರು ಬಹಿಷ್ಕಾರದ ಬೆದರಿಕೆಗೆ ಹೆದರಿ ಯಾವುದೇ ರೀತಿಯ ದೌರ್ಜನ್ಯಗಳಾದರೂ ಬಾಯಿ ಬಿಟ್ಟು ಹೇಳುವುದಿಲ್ಲ. ಕೆಲವೇ ಕೆಲವು ಪ್ರಕರಣಗಳು ಮಾಧ್ಯಮಗಳ ಮೂಲಕ ಸಮಾಜದಲ್ಲಿ ಗೊತ್ತಾಗುತ್ತಿವೆ.

ಒಟ್ಟಿನಲ್ಲಿ ನಿರಂತರ ನಡೆಯುತ್ತಿರುವ ಈ ಜಾತಿಯ ಸಮರ ಮುಂದುವರೆಯುವುದೋ ಅಥವಾ ಇಲ್ಲಿಗೇ ನಿಲ್ಲುವುದೋ ಈ ಆಧುನಿಕ ಯುಗದಲ್ಲಿ ಯಕ್ಷಪ್ರಶ್ನೆಯಾಗಿದೆ.

English summary
The panic situation emerged due to the ostracism of 45 Dalit families from Yakalasapura village of Gadag district is under control says Government authorities. Officers are has set a meeting of negotiation between the upper cast communities and Dalits on February 21st.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X