ನವವೃಂದಾವನ ಒಂದು ಮಠದ ಆಸ್ತಿಯಾಗಲು ಸಾಧ್ಯವೇ?

By: ವಿಷ್ಣುದಾಸ ನಾಗೇಂದ್ರಾಚಾರ್ಯ
Subscribe to Oneindia Kannada

ನವವೃಂದಾವನದ ವಿಷಯ ಇವತ್ತು ಎಲ್ಲರ ಚರ್ಚೆಯ ವಿಷಯ. ಹೀಗಾಗಿ ಅದರ ಕುರಿತು ಆಲೋಚಿಸುವ, ನಿರ್ಣಯಿಸುವ, ಸಾಮಾಜಿಕ ಕಾಮೆಂಟ್ ಗಳನ್ನು ಹಾಕುವ ಮುನ್ನ ನಮಗಿರಬೇಕಾದ ಕೆಲವು ಎಚ್ಚರಗಳ ಬಗ್ಗೆ ಈಗ ಚರ್ಚೆ ಮಾಡೋಣ.

1. ಮೊದಲಿಗೆ, ಇಂತಹ ವಿಷಯಗಳನ್ನು ಫೇಸ್ ಬುಕ್, ವಾಟ್ಸಪ್ ಗಳಲ್ಲಿ ಚರ್ಚೆ ಮಾಡುವದೇ ತಪ್ಪು, ಅದರಿಂದ ಬೇರೆಯ ಸಮಾಜದವರಿಗೆ ಹಾಸ್ಯಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಎನ್ನುವದು ಕೆಲವರ ಅಂಬೋಣ. ಇದು ಸರಿಯೇ?

ಖಂಡಿತ ತಪ್ಪು. ಸಾಮಾಜಿಕ ತಾಣ ಇವತ್ತು ಜನಸಾಮಾನ್ಯನ ವೇದಿಕೆ. ನಮ್ಮ ಧ್ವನಿಯನ್ನು ಮತ್ತೊಬ್ಬರಿಗೆ ತಲುಪಿಸಲು ಇರುವ ಮಹತ್ತ್ವದ ಸಾಧನ. ಇಲ್ಲಿ ನಮ್ಮ ವೈಯಕ್ತಿಕ ಬದುಕಿನ ಬಗ್ಗೆ ಹೇಳಿಕೊಳ್ಳುವದು ದಡ್ಡತನವಾದೀತೇ ಹೊರತು, ಸಾಮಾಜಿಕ ವಿಷಯಗಳನ್ನಲ್ಲ.[ಪತ್ರ : ಮನನೊಂದ ಮಾಧ್ವನ ಮನದಾಳದ ಮಾತುಗಳು]

hospet

ನವವೃಂದಾವನದ ವಿಷಯವಾಗಲೀ, ಅಥವಾ ಪೀಠಾಧಿಪತಿಗಳ ವಿಷಯವಾಗಲೀ ಇವು ಸಾಮಾಜಿಕ ವಿಷಯಗಳು. ಮಠಗಳು/ಸರಕಾರಗಳು ಇರುವದೇ ಜನಸಾಮಾನ್ಯನಿಂದ. ಅಂದ ಮೇಲೆ ಮಠಗಳು ಹೇಗೆ ನಡೆದುಕೊಳ್ಳಬೇಕು, ಯಾವ ರೀತಿ ನಮಗೆ ಮಾರ್ಗದರ್ಶಕವಾಗಿರಬೇಕು ಎನ್ನುವದನ್ನು ಪಾಠ ಹೇಳುವ ಆವಶ್ಯಕತೆ ಅನೇಕ ಬಾರಿ ಬಂದೊದಗುತ್ತದೆ. ಹಿಂದೆ ನಮ್ಮ ಅಭಿಪ್ರಾಯಗಳನ್ನು ದಾಖಲಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಈ ದಿವಸ ನಮ್ಮ ಅಭಿಪ್ರಾಯಗಳನ್ನು ಅತ್ಯಂತ ಸ್ಪಷ್ಟವಾಗಿ ದಾಖಲಿಸಲು ಅವಕಾಶವಿದೆ. ಹೀಗಾಗಿ ಅವಶ್ಯವಾಗಿ ನಾವು ನಮ್ಮ ಅಭಿಪ್ರಾಯ, ಮೆಚ್ಚುಗೆ, ಹೇವರಿಕೆಗಳನ್ನು ದಾಖಲಿಸಲೇ ಬೇಕು.

ಇನ್ನು ಬೇರೆಯ ಸಮಾಜದವರು ಆಡಿಕೊಳ್ಳುತ್ತಾರೆ ಎನ್ನುವ ಪ್ರಶ್ನೆಯ ಕುರಿತು. ಇದೊಂದು ಮೂರ್ಖತನದ ಮಾತು. ಮತ್ತೊಬ್ಬರು ನಮ್ಮನ್ನು ಆಡಿಕೊಳ್ಳಬಾರದು ಎಂದರೆ ನಮ್ಮಲ್ಲಿ ತಪ್ಪಿರಬಾರದೇ ಹೊರತು ಇರುವ ತಪ್ಪನ್ನು ಮುಚ್ಚಿಕೊಳ್ಳುವದರಲ್ಲಿ ಅರ್ಥವಿಲ್ಲ. ತಪ್ಪು ಬಯಲಿಗೆ ಬಂದರೆ, ಆ ತಪ್ಪನ್ನು ಸಮಾಜ, ಸಮಾಜದ ಮುಖಂಡರು (ಸಜ್ಜನರಾಗಿದ್ದರೆ) ತಿದ್ದಿಕೊಳ್ಳುತ್ತಾರೆ. ದುಷ್ಟರಾಗಿದ್ದರೆ ತಿರಸ್ಕರಿಸುತ್ತಾರೆ. ಆಗ ಹಾಲು ಯಾವುದು, ನೀರು ಯಾವುದು ಎಂದು ಜನರಿಗೆ ಸ್ಪಷ್ಟವಾಗಿ ಗೊತ್ತಾಗುತ್ತದೆ. ಆಗ ಆ ದುಷ್ಟರನ್ನು ನಮ್ಮ ಸಮಾಜದಿಂದಲೇ ದೂರವಿರಿಸಲು ಸಾಧ್ಯವಾಗುತ್ತದೆ.[ಮಡಿ ಎಂದರೇನು? ಮಡಿಯ ಬಗ್ಗೆ ಶಾಸ್ತ್ರ ಏನು ಹೇಳುತ್ತದೆ?]

ಮತ್ತು ಸಮಸ್ಯೆಗಳು ಪ್ರತಿಯೊಂದು ಸಮಾಜದಲ್ಲಿಯೂ ಇದೆ. ಆ ತಪ್ಪನ್ನು ತಿದ್ದುವ ದೊಡ್ಡ ವೇದಿಕೆ ಈ ಸೋಷಿಯಲ್ ಮೀಡಿಯಾ. ಇದನ್ನು ಸಮರ್ಥವಾಗಿ ನಾವು ಉಪಯೋಗಿಸಲೇ ಬೇಕು.

2. ನಮ್ಮ ಮಾತು ಕಾಮೆಂಟುಗಳನ್ನು ದೊಡ್ಡವರು ನೋಡುತ್ತಾರಾ? ಎಂಬ ಪ್ರಶ್ನೆ.
ಅನೇಕ ದೊಡ್ಡವರ ಕುರಿತು ತಿಳಿದುಕೊಂಡಿರುವದರಿಂದ ಹೇಳುತ್ತೇನೆ - ಅವಶ್ಯವಾಗಿ ನೋಡುತ್ತಾರೆ, ಮತ್ತು ಅಲ್ಲಿ ಬರುವ ಕಾಮೆಂಟುಗಳಿಗೆ ಹೆದರುತ್ತಾರೆ. ಮತ್ತು ಅನೇಕ ಬಾರಿ ಒಳ್ಳೆಯ ಅಂಶವಿದ್ದಾಗ ಗ್ರಹಿಸುತ್ತಾರೆ.

ಈಗ ಪ್ರಧಾನವಾಗಿ ನವವೃಂದಾವನದ ವಿಷಯಕ್ಕೆ ಬರೋಣ. ನವವೃಂದಾವನದ ಗಡ್ಡೆ ಉತ್ತರಾದಿ ಮಠದ ಹೆಸರಿಗಾಗಿದೆ, ಅದೇನು ಅವರೊಬ್ಬರ ಆಸ್ತಿಯಾ ಎಂದು ಎಲ್ಲರೂ ಪ್ರಶ್ನೆ ಮಾಡುತ್ತಿದ್ದಾರೆ. ನ್ಯಾಯಯುತವಾಗಿ ಯೋಚನೆ ಮಾಡಿ. ನವವೃಂದಾವನದ ಪ್ರದೇಶವನ್ನು ಉತ್ತರಾದಿ ಮಠ ಖರೀದಿಸಿದ ದಾಖಲೆಯಿದೆ. ಅದಕ್ಕಾಗಿಯೇ ಕೋರ್ಟು ಅದರ ಪರವಾಗಿ ತೀರ್ಪು ನೀಡಿದೆ. ಇದು ಮೊದಲ ಅಂಶ.

ಎರಡನೆಯದು, ಉತ್ತರಾದಿಮಠ ಆ ಪ್ರದೇಶದ ಒಡೆಯ ಎಂದರೆ, ನಮ್ಮನಿಮ್ಮ ಹಾಗೆ ಮನೆಗಳನ್ನು ಹೊಂದಿದಂತಲ್ಲ. ವಸ್ತುಸ್ಥಿತಿಯಲ್ಲಿ Uttaradi Matha is the custodian of that property. ಅದು ಸಮಗ್ರ ಮಾಧ್ವಸಮಾಜದ ಆಸ್ತಿ. ಆದರೆ ಅದರ ಉಸ್ತುವಾರಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಉತ್ತರಾದಿ ಮಠದ್ದು.

ಈಗ ಪಾಜಕವಿದೆ. ಅದು ಕಾಣಿಯೂರು ಮಠದ ಆಸ್ತಿ. ಕುಂಜಾರುಗಿರಿ ಅದಮಾರು ಮಠದ ಆಸ್ತಿ. ಪಾಜಕ, ಕುಂಜಾರುಗಿರಿಗಳು ಸಮಗ್ರ ಮಾಧ್ವರ ಆಸ್ತಿ. ಆದರೆ, ಅಲ್ಲಿ ಯಾವುದೇ ನಿರ್ಣಯವನ್ನು ಕೈಗೊಳ್ಳಬೇಕಾದರೆ, ಅಭಿವೃದ್ಧಿ ಪಡಿಸಬೇಕಾದರೆ ಸಮಗ್ರ ಮಾಧ್ವರು ಹೋಗಲು ಸಾಧ್ಯವಿಲ್ಲ ತಾನೇ? ಅದಕ್ಕಾಗಿ, ಆಯಾಯ ಮಠಗಳು ಹೊಣೆ ಹೊತ್ತು ಅದನ್ನು ನಿಭಾಯಿಸುತ್ತವೆ.[ಬ್ರಾಹ್ಮಣರನ್ನು ಕಂಡರೆ ನಗಬೇಕೋ ಅಳಬೇಕೋ!]

ಹಾಗೇ ಕೃಷ್ಣ ಮಠ ನಮ್ಮ ಅಷ್ಟಮಠಗಳ ಆಸ್ತಿ. ಪರ್ಯಾಯದ ಮಠ ಉಸ್ತುವಾರಿ ನೋಡಿಕೊಳ್ಳುವ ಮುಖ್ಯ ಆಸ್ತಿದಾರ. ಪೇಜಾವರ ಮಠ ಪರ್ಯಾಯ ಮಾಡುವಾಗ ಉಳಿದ ಮಠಗಳು ಹೋಗಿ ಅಲ್ಲಿ ಮೂಗು ತೂರಿಸುವಂತಿಲ್ಲ. ಅಷ್ಟೇಕೆ ಮಹಾಪೂಜೆಯನ್ನೂ ಮಾಡುವಂತಿಲ್ಲ. ಉಳಿದ ಪೂಜೆಯನ್ನು ಮಾಡಬಹುದು, ಅದರೆ ಮಹಾಪೂಜೆ ಪರ್ಯಾಯಮಠವೇ ಮಾಡಬೇಕು.

ಹಾಗೆ, ನವವೃಂದಾವನ ನಮ್ಮ ಸಮಗ್ರ ಮಾಧ್ವರ ಆಸ್ತಿ ಎನ್ನುವದರಲ್ಲಿ ಸಂಶಯವಿಲ್ಲ. ಆದರೆ, ಅದರ ಪ್ರದೇಶದ ಒಡೆತನ ಉತ್ತರಾದಿಮಠಕ್ಕೆ ಇದೆ. ಇದರಲ್ಲಿ ತಪ್ಪೇನಿದೆ?

ಮಂತ್ರಾಲಯ, ಕುಂಭಕೋಣ, ನಂಜನಗೂಡಿನಲ್ಲಿ ವೃಂದಾವನವಿರುವ ಪ್ರದೇಶವೂ ಮಾಧ್ವರ ಆಸ್ತಿ ತಾನೇ? ಅವುಗಳ ಒಡೆತನ ರಾಯರ ಮಠದ ಅಧೀನದಲ್ಲಿಲ್ಲವೇ?ಸಮಗ್ರ ಮಾಧ್ವರ ಆಸ್ತಿ ಎಂದಾದ ಮಾತ್ರಕ್ಕ ಯಾವುದೇ ಮಠದ ಅಧೀನದಲ್ಲಿರಬಾರದು ಎನ್ನುವದು ಪರಮದಡ್ಡತನ.

ಇನ್ನು ಪೂಜೆಯ ವಿಷಯಕ್ಕೆ ಬರೋಣ. ಹಿಂದೆ ಹೇಳಿದಂತೆ ಪರ್ಯಾಯಮಠದವರನ್ನು ಬಿಟ್ಟರೆ ಮತ್ತೊಬ್ಬ ಅಷ್ಟಮಠಾಧೀಶರೂ ಸಹಿತ ಶ್ರೀಕೃಷ್ಣನಿಗೆ ಮಹಾಪೂಜೆಯನ್ನು ಮಾಡುವಂತಿಲ್ಲ. ಇನ್ನು ಘಟ್ಟದ ಕೆಳಗಿರುವ ಭಂಡಾರಕೇರಿ, ಭೀಮನಕಟ್ಟೆ, ಸುಬ್ರಹ್ಮಣ್ಯ ಮಠಗಳಿಗೇ ಶ್ರೀಕೃಷ್ಣನನ್ನು ಮುಟ್ಟಿ ಪೂಜಿಸುವ ಅಧಿಕಾರವಿಲ್ಲ. ಘಟ್ಟದ ಮೇಲಿನ ಮಠಗಳಿಗೂ ಸುತರಾಂ ಇಲ್ಲ.

ಹಾಗಂತ ಕೃಷ್ಣ ಅಷ್ಟಮಠಕ್ಕೆ ಮಾತ್ರ ಸೇರಿದವನೇನು? ಬೇರೆ ಮಠದವರಿಗೆ ಕೃಷ್ಣ ದೇವರಲ್ಲವೇನು? ಅಥವಾ ಅವನ ಭಕ್ತರಾದ ನಮಗೆ ಸೇರಿಲ್ಲವೇನು? ಹಾಗಂತ ನಾವೂ ಕೃಷ್ಣನನ್ನು ಮುಟ್ಟಿ ಪೂಜಿಸುತ್ತೇವೆ ಎಂದು ಜಗಳವಾಡಬಹುದಲ್ಲವೇ?

ಪದ್ಮನಾಭತೀರ್ಥರು ಉತ್ತರಾದಿಮಠ, ರಾಯರಮಠ, ವ್ಯಾಸರಾಜಮಠಗಳಿಗೆ ಮೂಲಪುರುಷರು ಎಂದಾದ ಮಾತ್ರಕ್ಕೆ ಮೂರೂ ಮಠಗಳಿಗೆ ಮುಟ್ಟಿ ಪೂಜೆ ಮಾಡುವ ಅಧಿಕಾರ ಯಾಕೆ ಬರಬೇಕು. ಆ ಪ್ರದೇಶ ಯಾರ ಅಧೀನವೋ ಪೂಜೆಯನ್ನೂ ಅವರೇ ಸಲ್ಲಿಸತಕ್ಕದ್ದು. ಅದು ಅಲ್ಲ ಅಂತಾದರೆ ಸಮಗ್ರ ಮಾಧ್ವರ ಆಸ್ತಿಯಾದ ಕೃಷ್ಣನನ್ನು ಅಷ್ಟಮಠಾಧೀಶರನ್ನು ಬಿಟ್ಟು ಬೇರೆಯವರು ಪೂಜೆ ಮಾಡಲಿ. ಅದು ಹೇಗೆ ಸಾಧ್ಯವಿಲ್ಲವೋ, ಇದೂ ಹಾಗೆ ಸಾಧ್ಯವಿಲ್ಲ.

ಹೇಗೆ ಉಡುಪಿಗೆ, ಮಂತ್ರಾಲಯಕ್ಕೆ, ಕುಂಭಕೋಣಕ್ಕೆ ಉತ್ತರಾದಿಮಠದವರು ಹೋದರೂ ಕೇವಲ ದರ್ಶನ ಮಾತ್ರ ಮಾಡಿ ಬರಬೇಕೋ, ಪೂಜೆಗೆ ಹಠ ಹಿಡಿಯಬಾರದೋ, ಹಾಗೆ ಉಳಿದ ಮಠದವರೂ ಸಹ ನವವೃಂದಾವನಕ್ಕೆ ಹೋಗಿ ದರ್ಶನ ಮಾಡಿ ಬರಬೇಕಷ್ಟೇ. ಅಲ್ಲಿ ಪೂಜೆ ಆರಾಧನೆಗಳಲ್ಲಿ ಹಕ್ಕು ಕೇಳುವದಾದರೆ ತಮ್ಮ ಹಕ್ಕನ್ನೂ ಮತ್ತೊಬ್ಬರಿಗೆ ಬಿಟ್ಟುಕೊಡಲಿ.

ಉತ್ತರಾದಿ ಮಠವೇನಾದರೂ ಬೇರೆಯ ಮಠದವರಿಗೆ ದರ್ಶನಕ್ಕೂ ಅವಕಾಶ ನೀಡದಿದ್ದಲ್ಲಿ ಅದು ಅಕ್ಷಮ್ಯ ಅಪರಾಧವಾಗುತ್ತದೆ. ಇದುವರೆಗೂ ಉತ್ತರಾದಿ ಮಠ ಹಾಗೆ ಮಾಡಿಲ್ಲ. ಮಳಖೇಡವೂ ಉತ್ತರಾದಿ ಮಠದ ಆಸ್ತಿ. ಬೇರೆಯ ಮಠದವರು ಹೋಗಿ ದರ್ಶನ ಮಾಡಿ ಬರುತ್ತಲೇ ಇದ್ದಾರೆ. ಹಾಗೆ ನವವೃಂದಾವನ ಸಹಿತ.ಇನ್ನು ಆರಾಧನೆಗಳ ವಿಷಯಕ್ಕೆ ಬರೋಣ, ಪ್ರಧಾನ ಸಮಸ್ಯೆ ಇರುವದು ಇಲ್ಲಿಯೇ.

ಪದ್ಮನಾಭತೀರ್ಥರ, ಕವೀಂದ್ರತೀರ್ಥರ, ವಾಗೀಶತೀರ್ಥರು ಉತ್ತರಾದಿ ಮಠ ಮತ್ತು ರಾಯರಮಠ ಎರಡಕ್ಕೂ ಸೇರಿದವರು ಸಂಶಯವಿಲ್ಲ. ಆದರೆ, ಈಗ ಉತ್ತರಾದಿಮಠದ ಅಧೀನದಲ್ಲಿ ಆಸ್ತಿ ಇರುವದರಿಂದ, ಅವರು ಈ ಆರಾಧನೆಗಳನ್ನು ಏನು ಮಾಡಿದರೂ ಮತ್ತೊಬ್ಬರಿಗೆ ಕೊಡುವದಿಲ್ಲ. ಕಾನೂನಿನ ಪ್ರಕಾರ ಅವರೇ ಪೂರ್ಣ ಹಕ್ಕುದಾರರು. ಕಾನೂನನ್ನು ಮೀರುವ ಧೂರ್ತರು ಏನಾದರೂ ಮಾಡಬಹುದೇ ಹೊರತು ಕಾನೂನಿನ ಪರಿಧಿಯಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ.

ಇನ್ನು Exclusive ಆಗಿ ರಾಯರ ಮಠದ ಪರಂಪರೆಗೆ ಸೇರಿದ ಶ್ರೀ ಸುಧೀಂದ್ರ ತೀರ್ಥರ ಮತ್ತು ಶ್ರೀ ವ್ಯಾಸರಾಜತೀರ್ಥರ ಆರಾಧನೆಯ ಕುರಿತು.ನೋಡಿ, ತಮ್ಮ ಪರಂಪರೆಗೆ ಸೇರಿದ ಗುರುಗಳ ಆರಾಧನೆಯನ್ನು ಆ ಮಠದವರು ಮಾಡುವದು ಅವರ ಕರ್ತವ್ಯ. ಆದರೆ, ಇಲ್ಲಿ ವೃಂದಾವನವಿರುವ ಪ್ರದೇಶ ಉತ್ತರಾದಿ ಮಠಕ್ಕೆ ಸೇರಿದೆಯಾದ್ದರಿಂದ ಆ ಮಠಕ್ಕೆ ತಿಳಿಸಿ ಸೌಹಾರ್ದದಿಂದ ಅನುಮತಿಯನ್ನು ಪಡೆದು (ಕೋರ್ಟಿನ ತೀರ್ಪಿನ ಪ್ರಕಾರ ಅವರು ಆಸ್ತಿಯ ಒಡೆಯರು ಆದ್ದರಿಂದ ಅನುಮತಿ ಎಂಬ ಶಬ್ದವನ್ನು ಬಳಸಲೇ ಬೇಕು) ಆರಾಧನೆಯನ್ನು ಮಾಡಬೇಕು.

ಇನ್ನು ರಾಘವೇಂದ್ರ ಮತ್ತು ವ್ಯಾಸರಾಜ ಮಠಕ್ಕೆ ಅನುಮತಿ ಕೊಡುವ ಸಂದರ್ಭಗಳಲ್ಲಿ ಉತ್ತರಾದಿ ಮಠ ಸೌಜನ್ಯದಿಂದ ನಡೆದುಕೊಂಡಲ್ಲಿ ತುಂಬ ಎತ್ತರದ ಸ್ಥಾನವನ್ನು ಮಾಧ್ವರ ಮಧ್ಯದಲ್ಲಿ ಪಡೆಯುತ್ತದೆ. ಅವರು ಉಳಿದ ಮಠಗಳಿಗೆ ಅವರ Exclusive ಪರಂಪರೆಯ ಯತಿಗಳ ಆರಾಧನೆಯನ್ನು ಮಾಡಲು ಅವಕಾಶವನ್ನೇ ನೀಡದ ಸಂದರ್ಭದಲ್ಲಿ ನಾವು ನೈತಿಕವಾದ ಹೋರಾಟವನ್ನು ಮಾಡೋಣ.[ಪೂಜೆ ವಿವಾದಕ್ಕೆ ತೆರೆ ಬೀಳುವುದು ಯಾವಾಗ?]

(ನಾನು ಶ್ರೀ ಸೋಸಲೆ ವ್ಯಾಸರಾಜ ಮಠದ ಶಿಷ್ಯ. ನಮ್ಮ ಮಠದ ಕೆಲವು ಅಭಿಮಾನಿಗಳು (ಸ್ವಾಮಿಗಳಲ್ಲ, ಅವರ ಪಂಗಡದವರೂ ಅಲ್ಲ. ನಮ್ಮ ಶ್ರೀಮಠದ ಮೇಲೆ ಅಪಾರ ಭಕ್ತಿ ಹೊಂದಿದವರು) ಈಗಾಗಲೇ ಉತ್ತರಾದಿಮಠದವರನ್ನು ಭೇಟಿಯಾದದ್ದನ್ನು ನನಗೆ ತಿಳಿಸಿದ್ದಾರೆ. ಶ್ರೀ ವ್ಯಾಸರಾಜರ ಆರಾಧನೆಯ ಸಂದರ್ಭದಲ್ಲಿ ಉತ್ತರಾದಿ ಮಠ ಹೇಗೆ ನಡೆದುಕೊಳ್ಳುತ್ತದೆ ಎನ್ನುವದನ್ನು ಕಂಡು ನಾವೆಲ್ಲರೂ ಪ್ರತಿಕ್ರಿಯಿಸೋಣ.)

ಉತ್ತರಾದಿಮಠದಲ್ಲಿ ಈಗ ಅಧಿಪತಿಗಳಾಗಿರುವ ಶ್ರೀ ಸತ್ಯಾತ್ಮತೀರ್ಥಶ್ರೀಪಾದಂಗಳವರ ಸಜ್ಜನಿಕೆಯ ಕುರಿತು ಯಾರಿಗೂ ಸಂಶಯವಿಲ್ಲ. ಹೀಗಾಗಿ ಇತರ ಮಠಗಳ ಆರಾಧನೆಗಳು ಇತರ ಮಠಗಳಿಂದಲೇ ನಡೆಯುವದಕ್ಕೆ ಅವರ ವಿರೋಧವೂ ಇರುವದಿಲ್ಲ, ಅಷ್ಟೇ ಅಲ್ಲ, ಅವರ ಸಹಕಾರವೂ ಇರುತ್ತದೆ ಎಂದು ನನಗೆ ವಿಶ್ವಾಸವಿದೆ.

ಸಿಂಧೂನದಿಯ ಅನೇಕ ಪರಮಪವಿತ್ರ ಸ್ನಾನಘಟ್ಟಗಳು ಇವತ್ತು ಪಾಕೀಸ್ತಾನದ ಪಾಲಾಗಿವೆ. ನಾವು ಅಲ್ಲಿ ಹೋಗಿ ಸ್ನಾನ ಮಾಡಬೇಕೆಂದರೆ ಪಾಕಿಸ್ತಾನ ಸರಕಾರದ ಅನುಮತಿಯನ್ನು ಪಡೆಯಬೇಕಾದ್ದು ಅನಿವಾರ್ಯ. ಅದು ಕಾನೂನಿನ ಕ್ರಮ. ಕಾನೂನಿಗೆ ನಾವು ನೀಡುವ ಗೌರವ. ಹೀಗಾಗಿ ಕಾನೂನಿನಂತೆ ಎಲ್ಲರೂ ನಡೆದುಕೊಂಡರೆ ಸಮಸ್ಯೆಯೇ ಆಗುವದಿಲ್ಲ. ಅನುಮತಿ ಕೋರುವವರು ಮತ್ತು ನೀಡುವವರು ಇಬ್ಬರೂ ಸೌಜನ್ಯದಿಂದ ನಡೆದುಕೊಂಡಲ್ಲಿ ಯಾವ ಸಮಸ್ಯೆಯೂ ಇರುವದೇ ಇಲ್ಲ.ಇನ್ನು ಉತ್ತರಾದಿಮಠದಲ್ಲಿರುವ ಅನೇಕ ಪಂಡಿತರ ಮತ್ತು ಗೃಹಸ್ಥರ ದುರಹಂಕಾರದ ಮಾತುಗಳ ಕುರಿತು.

ಕೆಲವು ಉತ್ತರಾದಿ ಮಠದವರು, "ನಮ್ಮ ಅಪ್ಪಣೆಯಿಲ್ಲದೇ ಬೇರೆಯವರು ಇಲ್ಲಿ ಕಾಲಿಡುವಂತಿಲ್ಲ ಎಂದು ಕೋರ್ಟು ತೀರ್ಪು ನೀಡಿದೆ" ಎಂದು ಬರೆದಿದ್ದಾರೆ. ಕಾನೂನಿನ ದೃಷ್ಟಿಯಲ್ಲಿ ಶಿಕ್ಷಾರ್ಹ ಅಪರಾಧ ಅದು. ಕಾರಣ, ಕೋರ್ಟಿನ ತೀರ್ಪನ್ನು ತಪ್ಪಾಗಿ ಬಿಂಬಿಸುತ್ತಿದ್ದಾರೆ.

ನಾನು ಒಡೆತನದ ಕುರಿತಾಗಿ ಬಂದ ತೀರ್ಪನ್ನೂ ಮತ್ತು ಇಂದು (10/12/2015) ಬಂದಿರುವ ತೀರ್ಪನ್ನೂ ಪರಿಪೂರ್ಣ ಓದಿದ್ದೇನೆ. ಅದರಲ್ಲಿ
1. ನವವೃಂದಾವನವು ಉತ್ತರಾದಿ ಮಠದ ಆಸ್ತಿ,
2. ಅವರು ಅದನ್ನು ಅನುಭವಿಸಲಿಕ್ಕೆ ಯಾರೂ ಅಡ್ಡಿ ಮಾಡುವಂತಿಲ್ಲ, ಅಡ್ಡಿ ಪಡಿಸುವ ಸಂಭವವಿದ್ದಾಗ ಗಂಗಾವತಿಯ Dy.S.P ರಕ್ಷಣೆ ನೀಡಬೇಕುಎಂದಿದೆಯಷ್ಟೇ ಹೊರತು ಅಲ್ಲಿ ದರ್ಶನಕ್ಕಾಗಿ ಹೋಗಲಿಕ್ಕೆ ಉತ್ತರಾದಿ ಮಠದ permission ತೆಗೆದುಕೊಳ್ಳಬೇಕು ಎಂದೇನೂ ಇಲ್ಲ. ಉತ್ತರಾದಿಮಠವೂ ಸಹಿತ ಇತರ ಮಠದವರು ದರ್ಶನಕ್ಕೂ ಬರಬಾರದು ಎಂದು ಎಲ್ಲಿಯೂ ಬರೆದಿಲ್ಲ.

ನಾವೀಗ ಮಳಖೇಡಕ್ಕೆ, ಮಂತ್ರಾಲಯಕ್ಕೆ, ತಿರುಪತಿಗೆ, ಉಡುಪಿಗೆ ಹೋಗಿ ದರ್ಶನ ಪಡೆಯುತ್ತೇವೆ. ಅದನ್ನು ಮುಟ್ಟಿ ಪೂಜೆ ಮಾಡಬೇಕು ಎಂದರೆ ಅದು ಸಾಧ್ಯವಾ?ಒಂದು ವೇಳೆ ಮುಂದೇನಾದರೂ ಭಕ್ತರಿಗೆ ದರ್ಶನ ಪಡೆಯಲು ಅವಕಾಶವನ್ನು ಕಲ್ಪಿಸದೇ ಇದ್ದಲ್ಲಿ, ವಿರೋಧ ಮಾಡಿದಲ್ಲಿ ನಾವೆಲ್ಲರೂ ಸೇರಿ ಪ್ರತಿಭಟನೆ ಮಾಡೋಣ. ಅವಶ್ಯವಾಗಿ ಖಂಡಿಸೋಣ. ತಪ್ಪೇನಿದೆ. ಉತ್ತರಾದಿಮಠವೇನು ಸರ್ವಾಧಿಕಾರಿಯೇ? ಅಥವಾ ಕಾನೂನಿಗೆ ಮೀರಿದ್ದೇ? ಎರಡೂ ಅಲ್ಲವಲ್ಲ.

ಒಂದು ಮಾತು, ಉತ್ತರಾದಿ ಮಠದ ಕಡೆಯಲ್ಲಿಯೇ ತೀರ್ಪಿದ್ದರೂ, ಶ್ರೀ ಸತ್ಯಾತ್ಮತೀರ್ಥಶ್ರೀಪಾದಂಗಳವರು ಸಮಗ್ರ ಸಮಾಜ ಗೌರವಿಸಬೇಕಾದ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದರೂ, ಅದು ಎಲ್ಲರ ಗೌರವವನ್ನು ಪಡೆದುಕೊಳ್ಳಲು ವಿಫಲವಾಗುತ್ತಿರುವದಕ್ಕೆ ಕಾರಣ, ಆ ಮಠದ ಅನೇಕ ಶಿಷ್ಯರ ಮೂರ್ಖತನದ ಮತ್ತು ದುರಹಂಕಾರದ ವರ್ತನೆಗಳು.

ಕಬ್ಬಿಣವನ್ನು ಯಾರೂ ನಾಶಮಾಡಲು ಆಗುವದಿಲ್ಲ. ಆದರೆ ಅದಕ್ಕೆ ಹಿಡಿಯುವ ತುಕ್ಕು ಅದನ್ನು ನಾಶ ಮಾಡಿಬಿಡುತ್ತದೆ. ಹೀಗೆ ಶ್ರೀ ಸತ್ಯಾತ್ಮತೀರ್ಥರು ಮತ್ತು ಕೆಲವು ಪ್ರಜ್ಞಾವಂತ ಶಿಷ್ಯರು ಉತ್ತರಾದಿಮಠದ ಘನತೆಯನ್ನು ಎತ್ತಿ ಹಿಡಿಯಲು ಹೋಗುತ್ತಿದ್ದರೆ ಅನೇಕ ಮೂರ್ಖ ಮತ್ತು ದುರಹಂಕಾರಿ ಶಿಷ್ಯರು ಆ ಘನತೆಯನ್ನು ಮಣ್ಣುಪಾಲು ಮಾಡುತ್ತಿದ್ದಾರೆ.

ಶ್ರೀ ಸತ್ಯಾತ್ಮತೀರ್ಥಶ್ರೀಪಾದಂಗಳವರು ತಮ್ಮ ಆ ಕೆಲವು ಮೂರ್ಖಶಿಷ್ಯರಿಗೆ ಕರೆದು ಸರಿಯಾಗಿ ಬುದ್ಧಿ ಹೇಳದೇ ಇದ್ದರೇ ಅವರು ಮಾಡುತ್ತಿರುವ ಸಾತ್ವಿಕ ಪ್ರಯತ್ನಗಳೆಲ್ಲ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗುವದರಲ್ಲಿ ಸಂಶಯವಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Nava Brindavana controversy : The Court has given verdict in favour of Uttaradi Math, but Rayara matha continues to worship in the premises. Vishnudasa Nagendracharya explains what are the basic things we all know about Nava Brindavana.
Please Wait while comments are loading...