ನರೇಂದ್ರ ಮೋದಿ 'ಬಾಯಿ ಬಡಾಯಿ, ಸಾಧನೆ ಶೂನ್ಯ': ಸಿದ್ದರಾಮಯ್ಯ

Subscribe to Oneindia Kannada

ಕಾರಟಗಿ (ಕೊಪ್ಪಳ), ಫೆಬ್ರವರಿ 11: ಪ್ರಧಾನಿ ನರೇಂದ್ರ ಮೋದಿಯವರದು ಬಾಯಿ ಬಡಾಯಿ, ಸಾಧನೆ ಶೂನ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ 'ಜನಾಶೀರ್ವಾದ ಯಾತ್ರೆ'ಯಲ್ಲಿ ಕಿಡಿಕಾರಿದರು.

ಇಂದು ಕಾರಟಗಿಯಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರನ್ನು ಹಿಗ್ಗಾಮುಗ್ಗಾ ಝಾಡಿಸಿದರು.

ಮೌನವಾದ ಭಾಷಣ

ಸಿದ್ದರಾಮಯ್ಯ ಭಾಷಣ ಆರಂಭಿಸಲು ಬರುತ್ತಿದ್ದಂತೆ ಪಕ್ಕದಲ್ಲಿದ್ದ ಮಸೀದಿಯಿಂದ ಆಜಾನ್ ಮೊಳಗಲು ಆರಂಭಿಸಿತು. ಆಜಾನ್ ಕೇಳಿ ಸಿದ್ದರಾಮಯ್ಯ ಭಾಷಣ ನಿಲ್ಲಿಸಿ ಹೋಗಿ ಕುಳಿತುಕೊಂಡರು. ಆಜಾನ್ ಮುಗಿದ ನಂತರ ಅವರು ತಮ್ಮ ಮಾತು ಮುಂದುವರಿಸಿದರು.

ನಮ್ಮದು ಕಾಮ್ ಕೀ ಬಾತ್

ನಮ್ಮದು ಕಾಮ್ ಕೀ ಬಾತ್

"ಮೊನ್ನೆ ನರೇಂದ್ರ ಮೋದಿ ಲೋಕಸಭೆಯಲ್ಲಿ ಬಸವಣ್ಣ ಮತ್ತು ನನ್ನನ್ನು ಜ್ಞಾಪಿಸಿಕೊಂಡಿದ್ದಾರೆ. ಬಸವಣ್ಣ 'ಕಾಯಕವೇ ಕೈಲಾಸ' ಎಂದಿದ್ದರು ಎಂದಿದ್ದಾರೆ. ಆದರೆ ನರೇಂದ್ರ ಮೋದಿಯವರು ಕಳೆದ ಮೂರು ವರ್ಷಗಳಲ್ಲಿ ಮಾತನಾಡಿಕೊಂಡೇ ಕಾಲ ಕಳೆದಿದ್ದಾರೆ. ನಮ್ಮ ಸರಕಾರಕ್ಕೂ ಮೋದಿಯವರ ಸರಕಾರಕ್ಕೂ ಇರುವ ವ್ಯತ್ಯಾಸ ಅಂದರೆ, ಮೋದಿಯವರದ್ದು ಖಾಲಿ 'ಮನ್ ಕೀ ಬಾತ್'. ನಮ್ಮ ಸರಕಾರದ್ದು 'ಕಾಮ್ ಕೀ ಬಾತ್'. ನಾವು ನುಡಿದಂತೆ ನಡೆದಿದ್ದೇವೆ. ಆದರೆ ಮೋದಿಯವರು ನುಡಿದಂತೆ ನಡೆದಿಲ್ಲ," ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

"2013ರ ಸಂದರ್ಭದಲ್ಲಿ ನಾವು ಪ್ರಣಾಳಿಕೆ ಮೂಲಕ 165 ಭರವಸೆ ನೀಡಿದ್ದೆವು. ಇದರಲ್ಲಿ 165ನ್ನೂ ಈಡೇರಿಸಿದ್ದೇವೆ. ಕರ್ನಾಟಕದ ಇತಿಹಾಸದಲ್ಲಿ 100ಕ್ಕೆ ನೂರು ನುಡಿದಂತೆ ನಡೆದ ಸರಕಾರ ಇದ್ದರೆ ಅದು ನಮ್ಮ ಸರಕಾರ," ಎಂದು ಅವರು ಅಭಿಪ್ರಾಯಪಟ್ಟರು.

ಅಭಿವೃದ್ಧಿಯ ಪುಸ್ತಕ

ಅಭಿವೃದ್ಧಿಯ ಪುಸ್ತಕ

"ಶಿವರಾಜ ತಂಗಡಗಿ ಕಾರಟಗಿ ಕ್ಷೇತ್ರದಲ್ಲಿ ಏನೆಲ್ಲಾ ಅಭಿವೃದ್ಧಿ ಮಾಡಿದ್ದಾರೆ ಎನ್ನುವುದನ್ನು ಪುಸ್ತಕದ ಮೂಲಕ ತೆರೆದಿಟ್ಟಿದ್ದಾರೆ. ಇದೇ ರೀತಿ ರಾಜ್ಯದಾದ್ಯಂತ ಜಿಲ್ಲೆಗಳಲ್ಲಿ ಮತ್ತು ಕ್ಷೇತ್ರಗಳಲ್ಲಿ ಏನು ಅಭಿವೃದ್ಧಿ ಮಾಡಿದ್ದೇನೆ ಎಂಬುದನ್ನು ಪಟ್ಟಿ ಮಾಡಿ ಜನರ ಕೈಗೆ ಪುಸ್ತಕ ರೂಪದಲ್ಲಿ ನೀಡಲಿದ್ದೇವೆ," ಎಂದು ಸಿಎಂ ಮಾಹಿತಿ ನೀಡಿದರು.

"ಸಿದ್ದರಾಮಯ್ಯ ಸರಕಾರ ಏನೂ ಮಾಡಿಲ್ಲ ನಿಷ್ಕ್ರಿಯವಾಗಿದೆ ಎಂದು ಬಿಎಸ್ ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಹೇಳುತ್ತಿದ್ದಾರೆ. ಅವರಿಗೆ ನಾನು ಒಂದೇ ವೇದಿಕೆಯಲ್ಲಿ ಚರ್ಚೆ ಮಾಡೋಣ ಎಂದುಚರ್ಚೆಗೆ ಆಹ್ವಾನಿಸಿದೆ. ಆದರೆ ಅವರು ಚರ್ಚೆಗೆ ಬರಲು ಸಿದ್ದರಿಲ್ಲ," ಎಂದು ಹರಿಹಾಯ್ದರು.

ಲೂಟಿಕೋರರಿಗೆ ಅಧಿಕಾರ ಕೊಡಬೇಕಾ?

ಲೂಟಿಕೋರರಿಗೆ ಅಧಿಕಾರ ಕೊಡಬೇಕಾ?

ಯಡಿಯೂರಪ್ಪ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರಲ್ಲಾ ಎಂದು ನನಗೆ ಆಶ್ಚರ್ಯವಾಗುತ್ತದೆ ಎಂದು ಹೇಳಿದ ಸಿದ್ದರಾಮಯ್ಯ," ಕರ್ನಾಟಕದ ಇತಿಹಾಸದಲ್ಲಿ ಚೆಕ್ ಮೂಲಕ ಲಂಚ ಪಡೆದುಕೊಂಡ ಏಕೈಕ ಮುಖ್ಯಮಂತ್ರಿ ಯಡಿಯೂರಪ್ಪ. ಯಡಿಯೂರಪ್ಪ ಮಾತ್ರ ಜೈಲಿಗೆ ಹೋಗಲಿಲ್ಲ. ಅವರ ಜತೆ ಜತೆಗೆ ಜನಾರ್ದನ ರೆಡ್ಡಿ, ಕಟ್ಟಾ ಸುಬ್ರಮಣ್ಯ ನಾಯ್ಡು, ಹಾಲಪ್ಪ, ಕೃಷ್ಣಯ್ಯ ಶೆಟ್ಟಿ ಜೈಲು ಪಾಲಾದರು. ಹೀಗಿರುವಾಗ ನರೇಂದ್ರ ಮೋದಿ ಬಂದು ಬಿಜೆಪಿಗೆ ಮತ್ತೆ ಅಧಿಕಾರ ಕೊಡಿ ಎನ್ನುತ್ತಾರೆ. ಈ ಲೂಟಿಕೋರರಿಗೆ ಅಧಿಕಾರ ಕೊಡಬೇಕಾ? ಕೊಡಬಾರದು," ಎಂದು ಹೇಳಿದರು

ನುಡಿದಂತೆ ನಡೆದಿದ್ದೇವೆ

ನುಡಿದಂತೆ ನಡೆದಿದ್ದೇವೆ

"ನಾವು ರೈತರ ಸಾಲಮನ್ನಾ ಮಾಡಿದ್ದೇವೆ. ಇಂದಿರಾ ಕ್ಯಾಂಟೀನ್ ತೆರೆದಿದ್ದೇವೆ. ನಾವು ವಚನ ಕೊಟ್ಟಿದ್ದನ್ನು ಈಡೇರಿಸಿದ್ದೇವೆ. ರೈತರಿಗೆ 3 ಲಕ್ಷ ರೂಪಾಯಿವರೆಗೆ ಬಡ್ಡಿ ರಹಿತ ಸಾಲ ನೀಡಿದ್ದೇವೆ. ಕೃಷಿ ಹೊಂಡ ತುಂಬಿಸಿದ್ದೇವೆ. ಹಸಿವು ಮುಕ್ತ ರಾಜ್ಯ ಆಗಬೇಕು ಎಂದು 1.20 ಕೋಟಿ ಜನರಿಗೆ ಉಚಿತವಾಗಿ ಪ್ರತಿಯೊಬ್ಬರಿಗೆ 7 ಕೆಜಿ ಅಕ್ಕಿ ಕೊಡುವ ಕಾರ್ಯಕ್ರಮ ಜಾರಿಗೆ ತಂದಿದ್ದೇವೆ. ಇಂಥಹ ಕಾರ್ಯಕ್ರಮ ಜಾರಿಗೆ ತಂದ ದೇಶದ ಪ್ರಥಮ ರಾಜ್ಯ ನಮ್ಮದು," ಎಂದು ಮುಖ್ಯಮಂತ್ರಿ ವಿವರಿಸಿದರು.

ನಂಬರ್ 01

ನಂಬರ್ 01

"ನಾವು ಬಹಳಷ್ಟನ್ನು ಸಾಧಿಸಿದ್ದೇವೆ. ಇನ್ನೂ ಸಾಧಿಸಬೇಕಾಗಿದ್ದಿದೆ. ಬಂಡವಾಳ ಹೂಡಿಕೆಯಲ್ಲಿ 2013-14ರಲ್ಲಿ 11ನೇ ಸ್ಥಾನದಲ್ಲಿದ್ದವರು ಈಗ ನಂಬರ್ ವನ್ ಸ್ಥಾನಕ್ಕೆ ಬಂದಿದ್ದೇವೆ. ಕಳೆದ ಎರಡು ವರ್ಷಗಳಲ್ಲಿ ಗುಜರಾತನ್ನು ಹಿಂದಿಕ್ಕಿ ಕರ್ನಾಟಕವನ್ನು ಬಂಡವಾಳ ಹೂಡಿಕೆಯಲ್ಲಿ ನಂಬರ್ ವನ್ ಸ್ಥಾನಕ್ಕೆ ಕೊಂಡೊಯ್ಯುವ ಕೆಲಸ ಮಾಡಿದ್ದೇವೆ," ಎಂದು ಸಿದ್ದರಾಮಯ್ಯ ತಿಳಿಸಿದರು.
"ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ನರೇಂದ್ರ ಮೋದಿ ಸುಳ್ಳು ಹೇಳುತ್ತಾರೆ. ಉತ್ತರ ಪ್ರದೇಶ, ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ ನಮಗಿಂತ ಕ್ರೈಮ್ ರೇಟ್ ನಲ್ಲಿ ಮೇಲಿನ ಸ್ಥಾನದಲ್ಲಿವೆ. ಅಲ್ಲೆಲ್ಲಾ ಬಿಜೆಪಿ ಸರಕಾರ ಅಧಿಕಾರದಲ್ಲಿದೆ ಎಂಬುದನ್ನು ಜ್ಞಾಪಕ ಇಟ್ಟುಕೊಳ್ಳಿ. ನಮಗೆ ಕಾನೂನು ಮತ್ತು ಸುವ್ಯವಸ್ಥೆ ವಿಚಾರದಲ್ಲಿ ಪಾಠ ಮಾಡಲು ಬರಬೇಡಿ. ಭ್ರಷ್ಟಾಚಾರದ ವಿಚಾರದಲ್ಲಿ ನಮಗೆ ನಿಮ್ಮ ಬುದ್ಧಿವಾದ ಬೇಡ. ನೀವು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ 9 ವರ್ಷ ಲೋಕಾಯುಕ್ತರನ್ನು ನೇಮಿಸಿರಲಿಲ್ಲ ಎಂಬುದನ್ನು ಮರೆಯಬೇಡಿ ಎಂದು ಪ್ರಧಾನಿಯನ್ನು ಛೇಡಿಸಿದರು.

ನಿಮಗೆ ನಾಚಿಕೆ ಆಗಲ್ವಾ?

ನಿಮಗೆ ನಾಚಿಕೆ ಆಗಲ್ವಾ?

"ಜೈಲಿಗೆ ಹೋದವರನ್ನು ಮುಂದೆ ಇಟ್ಟುಕೊಂಡು ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡಬೇಕು ಎಂದು ಹೇಳಲು ಬಂದ ನಿಮಗೆ ನಾಚಿಕೆ ಆಗಬೇಕು. ಅಮಿತ್ ಷಾ ಕೊಲೆ ಕೇಸ್ ನಲ್ಲಿ ಸಿಕ್ಕಿಹಾಕಿಕೊಂಡು ಜೈಲಿಗೆ ಹೋದವರು. ಗಡಿಪಾರಾದವರು. ಇವರನ್ನು ರಾಷ್ಟ್ರಾಧ್ಯಕ್ಷರನ್ನಾಗಿ ಮಾಡಿಕೊಂಡಿದ್ದೀರಿ. ನಿಮಗೆ ನಾಚಿಕೆ ಆಗುವುದಿಲ್ವಾ? ನಮ್ಮ ಬಗ್ಗೆ ಹೇಳಲು ನರೇಂದ್ರ ಮೋದಿಯವರೇ ನಿಮಗೆ ಯಾವುದೇ ನೈತಿಕ ಹಕ್ಕಿಲ್ಲ," ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ರೈತ ವಿರೋಧಿಗಳು

ರೈತ ವಿರೋಧಿಗಳು

ಭಾರತೀಯ ಜನತಾ ಪಕ್ಷದ ರೈತರ ವಿರೋಧಿಗಳು ಸಾಲಮನ್ನಾವನ್ನು ವಿರೋಧಿಸಿದ್ದರು. ನಾವು 8,000 ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ದೇವೆ. ನ್ಯಾಷನಲ್ ಬ್ಯಾಂಕ್ ನೀಡಿದ ಸಾಲ 47,000 ಕೋಟಿ ರೂಪಾಯಿ ಇದೆ. ನೀವ್ಯಾಕೆ ಸಾಲ ಮನ್ನಾ ಮಾಡಬಾರದು? 72,000 ಸಾವಿರ ಕೋಟಿ ರೂ. ರೈತರ ಸಾಲವನ್ನು ಮನ್ ಮೋಹನ್ ಸಿಂಗ್ ಮನ್ನಾ ಮಾಡಿದ್ದರು. ಬಂಡವಾಳ ಶಾಹಿಗಳ 6 ಲಕ್ಷ ಕೋಟಿ ರೂಪಾಯಿ ಮನ್ನಾ ಮಾಡಿದ್ದೀರಿ. ಕೈಗಾರಿಕೆಗಳ ಸಾಲ ಮನ್ನಾ ಮಾಡಿದವರಿಗೆ ರೈತರ ಸಾಲ ಮನ್ನಾ ಮಾಡಲು ಯಾಕೆ ಆಗುವುದಿಲ್ಲ?" ಎಂದು ಪ್ರಶ್ನಿಸಿದ ಸಿದ್ದರಾಮಯ್ಯ ಬಿಜೆಪಿಗರು ರೈತ ವಿರೋಧಿಗಳು ಎಂದು ಜರಿದರು.

ಪರಿಶಿಷ್ಟ ಜಾತಿ, ವರ್ಗಗಳ ಬಗ್ಗೆ ಕಾಳಜಿಯಿಲ್ಲ

ಪರಿಶಿಷ್ಟ ಜಾತಿ, ವರ್ಗಗಳ ಬಗ್ಗೆ ಕಾಳಜಿಯಿಲ್ಲ

"ಕೇಂದ್ರದ ಬಜೆಟ್ 24,42,000 ಕೋಟಿ ರೂಪಾಯಿ. ಇದರಲ್ಲಿ ಶೇಕಡಾ 24.1ರಷ್ಟಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನರಿಗೆ ಖರ್ಚು ಮಾಡುತ್ತಿರುವ ಹಣ ಕೇವಲ 54,000 ಕೋಟಿ ರೂಪಾಯಿ. ನಮ್ಮ ಬಜೆಟ್ ಇರುವುದು 1,86,000 ಕೋಟಿ ರೂ. ಅದರಲ್ಲಿ ನಾವು ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ನಾವು ಖರ್ಚು ಮಾಡುವ ಹಣ 27,703 ಕೋಟಿ ರೂಪಾಯಿ. ಇದು ನಮಗೂ ಅವರಿಗೂ ಇರುವ ವ್ಯತ್ಯಾಸ. ರೈತರ ಬಗ್ಗೆ, ಪರಿಶಿಷ್ಟ ಜಾತಿ, ವರ್ಗಗಳ ಬಗ್ಗೆ ಅವರಿಗೆ ಕಾಳಜಿಯಿಲ್ಲ," ಎಂದು ಮುಖ್ಯಮಂತ್ರಿ ಟೀಕಿಸಿದರು.

ಬಿಜೆಪಿಗೆ ಮತ ನೀಡುತ್ತೀರಾ?

ಬಿಜೆಪಿಗೆ ಮತ ನೀಡುತ್ತೀರಾ?

ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, "2004ರಲ್ಲಿ ಅಧಿಕಾರಕ್ಕೆ ಬಂದರೆ ಸಂವಿಧಾನಕ್ಕೆ ತಿದ್ದುಪಡಿ ತಂದು ಹೈದರಾಬಾದ್ ಕರ್ನಾಟಕಕ್ಕೆ 371ಜೆ ಅಡಿಯಲಲ್ಲಿ ವಿಶೇಷ ಸ್ಥಾನಮಾನ ನೀಡುತ್ತೇವೆ ಎಂದು ರಾಹುಲ್ ಗಾಂಧಿ ಕಲಬರಗಿಯಲ್ಲಿ ಭರವಸೆ ನೀಡಿದ್ದರು. ಅದರಂತೆ ಈಗ ಜಾರಿಗೆ ತಂದು ಕಳೆದ ಮೂರು ವರ್ಷಗಳಲ್ಲಿ ತಲಾ 1 ಸಾವಿರ ಕೋಟಿ ರೂ., ಹಾಗೂ ಈ ವರ್ಷ 1,500 ಕೋಟಿ ಕೊಟ್ಟಿದ್ದೇವೆ. ಆದರೆ ಬಿಜೆಪಿಯವರು ಕೊಟ್ಟಿದ್ದು ಜುಜುಬಿ ಹಣ. ಈ ಲೂಟಿಕೋರರಿಗೆ ಮತ್ತೆ ಓಟು ಕೊಡುತ್ತೀರಾ?" ಎಂದು ನೆರೆದಿದ್ದ ಜನರನ್ನು ಪ್ರಶ್ನಿಸಿದರು. ಈ ವೇಳೆ ಜನರು ಒಕ್ಕೊರಲಿನಿಂದ ಮತ ನೀಡಬಾರದು ಎಂದು ಕೂಗಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Janaarshivada Yatre in Karatagi, Koppal: Chief minister of Karnataka, Siddaramaiah attcks on Prime Minister Narendra Modi and said that his achievement is just zero.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ