Namma Metro: ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಕೇಂದ್ರದ ಬಗ್ಗೆ ಬಿಗ್ ಅಪ್ ಡೇಟ್ ಕೊಟ್ಟ ಡಿ.ಕೆ. ಸುರೇಶ್
ರಾಮನಗರ, ಜುಲೈ 30: ಮೆಟ್ರೋ ನಿಲ್ದಾಣಗಳಲ್ಲಿ ನಂದಿನ ಕೇಂದ್ರ ತೆರೆಯುವ ವಿಚಾರವಾಗಿ ಸ್ಥಳ ಪರೀಶಿಲನೆ ನಡೆಸಲಾಗುತ್ತಿದ್ದು, ಇದಾದ ನಂತರ ಬಿಎಂಆರ್ ಸಿಎಲ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಬಮುಲ್ ಅಧ್ಯಕ್ಷರಾದ ಡಿ.ಕೆ. ಸುರೇಶ್ ತಿಳಿಸಿದರು.
ಚನ್ನಪಟ್ಟಣದಲ್ಲಿ ಮಾಧ್ಯಮಗಳ ಜೊತೆಗೆ ಡಿ ಕೆ ಸುರೇಶ್ ಅವರು ಮಾತನಾಡಿ, ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಮಳಿಗೆ ಕುರಿತು ನಾವು ಈಗಾಗಲೇ ಈ ವಿಚಾರವಾಗಿ ಅರ್ಜಿ ಸಲ್ಲಿಸಿದ್ದು, ಸ್ಥಳ ಪರಿಶೀಲನೆ ಮಾಡುತ್ತಿದ್ದೇವೆ. ಇದಾದ ನಂತರ ನಮಗೂ ಮೆಟ್ರೋ ಸಂಸ್ಥೆ ನಡುವೆ ಒಪ್ಪಂದ ಆಗಬೇಕಿದೆ. ಹೊರರಾಜ್ಯದ ಸಂಸ್ಥೆಗಳು ಹೆಚ್ಚಿನ ಬಾಡಿಗೆ ನೀಡುವ ಪ್ರಸ್ತಾವನೆ ಸಲ್ಲಿಸಿರುತ್ತಾರೆ. ಹೀಗಾಗಿ ಮೆಟ್ರೋದವರು ನಮ್ಮಿಂದಲೂ ಹೆಚ್ಚಿನ ಬಾಡಿಗೆ ನಿರೀಕ್ಷೆ ಮಾಡುತ್ತಾರೆ. ಇದು ರೈತರ ಸಂಸ್ಥೆಯಾಗಿರುವುದರಿಂದ ಕಡಿಮೆ ಬಾಡಿಗೆ ನೀಡಬೇಕು ಎಂದು ಉಪಮುಖ್ಯಮಂತ್ರಿಗಳು ಹಾಗೂ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದೇನೆ. ಸ್ಥಳ ಪರಿಶೀಲನೆ ಬಳಿಕ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಪರಿಸರ ಸ್ನೇಹಿ ಹಾಲಿನ ಪ್ಯಾಕೆಟ್ ಪರಿಚಯಿಸುವ ಬಗ್ಗೆ ಮಾತನಾಡಿ, ಈಗ ಪ್ರಾಯೋಗಿಕವಾಗಿ ಬೆಂಗಳೂರಿನ ಒಂದು ಭಾಗ ಆಯ್ಕೆ ಮಾಡಲು ಸೂಚಿಸಿದ್ದೇನೆ. ಇದರ ವೆಚ್ಚ ಹೆಚ್ಚಾಗಿದ್ದು, ರಾಜ್ಯಮಟ್ಟದಲ್ಲಿ ಚರ್ಚೆ ಮಾಡಬೇಕಿದೆ. ನಮ್ಮ ಮಾರುಕಟ್ಟೆ ವ್ಯಾಪ್ತಿಯ ಜಯನಗರ, ಬಿಟಿಎಂ ಲೇಔಟ್ ಸೇರಿದಂತೆ ಯಾವ ಸ್ಥಳ ಸೂಕ್ತ ಎಂಬುದನ್ನು ಮಾರುಕಟ್ಟೆ ಅಧಿಕಾರಿಗಳು ಸೂಕ್ತ ಪರಿಶೀಲನೆ ಮಾಡುತ್ತಿದ್ದಾರೆ. ಅತಿ ಶೀಘ್ರದಲ್ಲೇ ಬೆಂಗಳೂರಿನ ಮಾರುಕಟ್ಟೆಗೆ ಪ್ರಾಯೋಗಿಕವಾಗಿ ಬಿಡುಗಡೆ ಮಾಡುತ್ತೇವೆ. ಸ್ವಲ್ಪ ನಷ್ಟವಾದರೂ ಪರಿಸರ ರಕ್ಷಣೆಗೆ ದೊಡ್ಡ ಹೆಜ್ಜೆ ಇಡಲಾಗುವುದು.
ಪರಿಸರದ ದೃಷ್ಟಿಯಿಂದ ಇದನ್ನು ನಾವು ಮಾಡಬೇಕು. ರಾಜ್ಯದಲ್ಲಿ ಅತಿಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗುತ್ತಿರುವುದೇ ಹಾಲಿನ ಪ್ಯಾಕೆಟ್ ಗಳಿಂದ. ನಿತ್ಯ ಕೋಟ್ಯಂತರ ಪ್ಲಾಸ್ಟಿಕ್ ಕವರ್ ತ್ಯಾಜ್ಯವಾಗಿ ಬೀಳುತ್ತಿವೆ. ಇವುಗಳನ್ನು ಕೊಳೆಯುವಂತೆ ಮಾಡುವ ವ್ಯವಸ್ಥೆ ಮಾಡುವುದು ನಮ್ಮ ಚಿಂತನೆ. ಈ ಪ್ರಾಯೋಗಿಕ ಪ್ರಯತ್ನದ ನಂತರ ಸರ್ಕಾರದ ಮುಂದೆ ಈ ಪ್ರಸ್ತಾಪವನ್ನಿಟ್ಟು ಸಾರ್ವಜನಿಕರ ವಿಶ್ವಾಸ ಗಳಿಸಿ ಮಾರುಕಟ್ಟೆಗೆ ಪರಿಚಯಿಸಲಾಗುವುದು ಎಂದು ತಿಳಿಸಿದರು.
ಬೆಂಗಳೂರು ಹಾಲು ಒಕ್ಕೂಟದಲ್ಲಿ ಚನ್ನಪಟ್ಟಣ ಅತಿಹೆಚ್ಚು ಹಾಲು ಉತ್ಪಾದಿಸುತ್ತಿದೆ. ಇಲ್ಲಿ ಸಾಕಷ್ಟು ಸೌಲಭ್ಯ ಕಲ್ಪಿಸಲಾಗಿದೆ. ನನ್ನನ್ನು ಬಮೂಲ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ನಂತರ ಎಲ್ಲಾ 14 ನಿರ್ದೇಶಕರು ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಒಕ್ಕೂಟದ ಬೆಳವಣಿಗೆಗೆ ಹಾಗೂ ರೈತ ಹಿತ ಕಾಯಲು ಯಾವ ರೀತಿ ಕಾರ್ಯಕ್ರಮ ರೂಪಿಸಬೇಕು ಎಂಬುದರ ಬಗ್ಗೆ ಚಿಂತನೆ ನಡೆಸಿದ್ದಾವೆ. ಹೀಗಾಗಿ ಆಡಳಿತ ವರ್ಗ, ಹಾಲು ಮಂಡಳಿಯ ಸಲಹೆ, ಮಾರ್ಗದರ್ಶನ ಪಡೆಯಲು ಇಂದು ಭೇಟಿ ನೀಡಿದ್ದೇನೆ. ಇಲ್ಲಿ ರೈತರಿಗೆ ಅನುಕೂಲ ನೀಡಿ, ಹೆಚ್ಚು ಹಾಲು ಉತ್ಪಾದನೆ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ತಿಳಿಸಿದರು.
ಡಿಸಿಎಂ ಹೊರಗಿಟ್ಟು ಸಿಎಂ ಶಾಸಕರ ಸಭೆ ಮಾಡುತ್ತಿದ್ದಾರೆ ಎಂಬ ಬಗ್ಗೆ ಮಾತನಾಡಿ, ಆ ರೀತಿ ಏನಿಲ್ಲ. ಶಾಸಕರ ಸಭೆ ಮಾಡಲು ಮುಖ್ಯಮಂತ್ರಿಗಳಿಗೆ ಪರಮೋಚ್ಛ ಅಧಿಕಾರವಿದೆ. ಶಾಸಕರ ಸಮಸ್ಯೆ ಆಲಿಸುವುದು ಮೊದಲಿನಿಂದಲೂ ನಡೆಸಿಕೊಂಡು ಬರಲಾಗಿದೆ. ಈ ಬಾರಿ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಶಾಸಕರ ಅಹವಾಲು ಸ್ವೀಕರಿಸುತ್ತಿದ್ದಾರೆ. ಇದು ನಿರಂತರ ಪ್ರಕ್ರಿಯೆ ಎಂದರು.
ಯೂರಿಯಾ ಉತ್ಪಾದನೆ ಮಾಡುವುದು ರಾಜ್ಯ ಸರ್ಕಾರವಲ್ಲ ಎಂದು ನಿಮಗೂ ಚೆನ್ನಾಗಿ ತಿಳಿದಿದೆ. ಈ ಯೂರಿಯಾವನ್ನು ಬಿಡುಗಡೆ ಮಾಡಬೇಕಿರುವುದೂ ಕೇಂದ್ರ ಸರ್ಕಾರವೇ. ಕೇಂದ್ರ ಇದರ ಜವಾಬ್ದಾರಿ ಹೊತ್ತಿದ್ದು, ಅವರು ರಾಜ್ಯ ಸರ್ಕಾರ ಮೇಲೆ ಆರೋಪ ಹಾಕುವ ಬದಲು ತಮ್ಮ ಜವಾಬ್ದಾರಿ ತೆಗೆದುಕೊಂಡು ಆದಷ್ಟು ಬೇಗ ರೈತರ ಸಮಸ್ಯೆ ಬಗೆಹರಿಸುವುದು ಕೇಂದ್ರದ ಸಚಿವರು ಹಾಗೂ ಸಂಸದರ ಕರ್ತವ್ಯ. ಕೇಂದ್ರ ಸಚಿವರಿಗೆ ಮುಖ್ಯಮಂತ್ರಿಗಳು ಪತ್ರ ಬರೆದಿದ್ದು, ಸಂಸತ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಸಚಿವರು ದೆಹಲಿಯಲ್ಲಿ ಸಿಗುತ್ತಾರೆ. ಹೀಗಾಗಿ ಸಂಸದರುಗಳು ಅವರ ಜೊತೆ ಸಭೆ ಮಾಡಿ ಆದಷ್ಟು ಬೇಗ ಬೇಡಿಕೆ ಇರುವ ಕಡೆಗಳಲ್ಲಿ ಇದನ್ನು ಸರಬರಾಜು ಮಾಡಬೇಕು ಎಂದು ತಿಳಿಸಿದರು.












Click it and Unblock the Notifications