ಬೆಂಗಳೂರಿನಲ್ಲಿ ಮೋದಿ ಸಭೆ: ಯಡಿಯೂರಪ್ಪ ಕಥೆಯೇನು?
ಬೆಂಗಳೂರು, ನ.16: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗಾಗಿ ಹಂಬಲಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮೋದಿ ಬೆಂಗಳೂರಿಗೆ ಬರುತ್ತಿರುವಾಗ ಶೇಷಾದ್ರಿ ರಸ್ತೆಯಲ್ಲಿ ಧರಣಿ ಕುಳಿತಿರುವುದು ನಿಜಕ್ಕೂ ಶೋಚನೀಯವೇ.

ಬಿಜೆಪಿಗೆ ಮರಳಿ, ಸಮಾವೇಶದಲ್ಲಿ ವೇದಿಕೆಯಲ್ಲಿ ಮೋದಿ ಪಕ್ಕ ಕುಳಿತುಕೊಳ್ಳಬೇಕೆಂದು ಬಯಸಿದ್ದ ಯಡಿಯೂರಪ್ಪಗೆ ಈ ವಾಸ್ತವ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪಂಚರಾಜ್ಯಗಳ ನೆಪವೊಡ್ಡಿ ಯಡಿಯೂರಪ್ಪ ಪಕ್ಷಕ್ಕೆ ಮರಳುವುದನ್ನು ಮುಂದೂಡುತ್ತಾ ಬಂದಿರುವ ರಾಜ್ಯ ಬಿಜೆಪಿ ನಾಯಕರು ಬಿಎಸ್ವೈ ಮರಳಬೇಕು ಎಂದು ಬಹಿರಂಗವಾಗಿ ಹೇಳುತ್ತಿದ್ದರೂ ಒಳಗೊಳಗೆ ಅವರ ವಿರುದ್ಧ ಮಸಲತ್ತು ನಡೆಸುತ್ತಿರುವುದೇ ಇದಕ್ಕೆ ಅನಂತ ಕಾರಣ ಎಂಬುದು ಬಿಜೆಪಿಯಲ್ಲಿರುವ ಬಿಎಸ್ವೈ ನಿಷ್ಠರ ಅನಿಸಿಕೆಯಾಗಿದೆ.
ಒಂದೆಡೆ ತನ್ನ ಬೆಂಬಲ/ ನಿಷ್ಠೆ ಏನಿದ್ದರೂ ಎನ್ ಡಿಎಗೆ ಹೊರತು, ಬಿಜೆಪಿಗಲ್ಲ. ಯಾವುದೇ ಕಾರಣಕ್ಕೂ ಬಿಜೆಪಿಗೆ ಮರಳುವುದಿಲ್ಲ ಎಂದು ಯಡಿಯೂರಪ್ಪ ಬಹಿರಂಗವಾಗಿಯೇ ಹೇಳುತ್ತಿದ್ದರೂ ಮೋದಿಗೆ ಹತ್ತಿರವಾಗಲು ಬಿಜೆಪಿಗೆ ಮರಳುವುದು ಅನಿವಾರ್ಯ ಎಂಬುದು ಅವರಿಗೂ ಮನದಟ್ಟಾಗಿದೆ. ಬಿಜೆಪಿ ನಾಯಕರಿಗೂ ಮನವರಿಕೆಯಾಗಿದೆ.
ವಿಧಾನಸಭೆ ಚುನಾವಣೆ ವೇಳೆ ದೂರವಾಗಿ ಮಣ್ಣುಮುಕ್ಕಿದ್ದು ಲೋಕಸಭೆ ವೇಳೆಗೆ ಬಿಜೆಪಿ-ಕೆಜೆಪಿ ಕೂಡಿಕೆ ಆಗಬೇಕು ಎಂಬುದು ಎರಡೂ ಕಡೆಯ ನಾಡಿಮಿಡಿತವಾಗಿದೆ. ಆದರೂ... ಮೋದಿ ಸಮಾವೇಶದ ವೇಳೆಗೆ ಅದು ಸಾಧ್ಯವಾಗದಿರುವುದು ಯಡಿಯೂರಪ್ಪನವರ ಮುಂದಿನ ನಡೆಯೇನು ಎಂಬುದು ಕುತೂಹಲಕಾರಿಯಾಗಿದೆ.












Click it and Unblock the Notifications