ಸರ್ಕಾರಿ ಶಾಲೆಗಳ ಚಿತ್ರಣ ಬದಲಿಸಲು 'ನಮ್ಮ ಶಾಲೆ' ಆ್ಯಪ್ ಕಂಡು ಹಿಡಿದ ಬೆಂಗಳೂರಿನ ಯುವಕ

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಪಾಳುಬಿದ್ದ ಶೌಚಾಲಯ, ಸೋರುವ ಛಾವಣಿ, ಕುಸಿಯುತ್ತಿರುವ ಗೋಡೆ ಅಥವಾ ಕುಡಿಯುವ ನೀರಿನ ಸಮಸ್ಯೆಯನ್ನಾ ನಾವು ಆಗಾಗ ನೋಡುತ್ತೇವೆ. ಆದರೆ, ಈ ಸಮಸ್ಯೆಗಳನ್ನ ಯಾರಿಗೆ ತಿಳಿಸಬೇಕು? ಸರಿಪಡಿಸುವ ಜವಾಬ್ದಾರಿ ಯಾವ ಅಧಿಕಾರಿಯದ್ದು? ಎಂಬುದು ಬಹುತೇಕರಿಗೆ ತಿಳಿದಿರುವುದಿಲ್ಲ. ಇದು ಸಾಮಾನ್ಯ ಆದರೆ ಇಂತಹ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಬೆಂಗಳೂರು ಮೂಲದ ಯುವಕ ಧ್ರುವ್ ಜಟ್ಟಿ ಅವರು 'ನಮ್ಮ ಶಾಲೆ' ಎಂಬ ವಿನೂತನ ಆನ್‌ಲೈನ್ ವೇದಿಕೆಯನ್ನ ಹುಟ್ಟುಹಾಕಿದ್ದಾರೆ.

ಕರ್ನಾಟಕದ 56,000 ಸರ್ಕಾರಿ ಶಾಲೆಗಳ ಮ್ಯಾಪಿಂಗ್

'ನಮ್ಮ ಶಾಲೆ' ಪ್ಲಾಟ್‌ಫಾರ್ಮ್ ಕರ್ನಾಟಕದಾದ್ಯಂತ ಇರುವ ಸುಮಾರು 56,000 ಸರ್ಕಾರಿ ಶಾಲೆಗಳನ್ನ ರಾಜ್ಯದ 236 ಶಿಕ್ಷಣ ಕಚೇರಿಗಳಿಗೆ ಡಿಜಿಟಲ್ ರೂಪದಲ್ಲಿ ಮ್ಯಾಪ್ ಮಾಡಿದೆ. ಇದರ ಮೂಲಕ ಯಾವುದೇ ನಾಗರಿಕರು ತಮ್ಮ ಸುತ್ತಮುತ್ತಲಿನ ಶಾಲೆಯಲ್ಲಿರುವ ಮೂಲಸೌಕರ್ಯದ ಕೊರತೆಯನ್ನ ಫೋಟೋ ಸಮೇತ ದಾಖಲಿಸಬಹುದು.

NammaShale Platform A New Tech Initiative to Fix Government Schools Infrastructure in Karnataka

ಈ ದೂರು ನೇರವಾಗಿ ಆ ಶಾಲೆಗೆ ಸಂಬಂಧಪಟ್ಟ ಜವಾಬ್ದಾರಿಯುತ ಅಧಿಕಾರಿಗೆ ತಲುಪುತ್ತದೆ. ಒಂದು ವೇಳೆ ನಿಗದಿತ ಸಮಯದೊಳಗೆ ಸಮಸ್ಯೆ ಬಗೆಹರಿಯದಿದ್ದರೆ, ಆ ದೂರು ಸಾರ್ವಜನಿಕರಿಗೆ ಹಾಗೂ ಸರ್ಕಾರೇತರ ಸಂಸ್ಥೆಗಳಿಗೆ ಆ್ಯಪ್‌ನಲ್ಲಿ ಕಾಣಿಸುತ್ತದೆ. ಈ ಮೂಲಕ ಅಧಿಕಾರಿಗಳ ಮೇಲೆ ನಿರಂತರ ಒತ್ತಡ ಹೇರಿ ತ್ವರಿತವಾಗಿ ಕೆಲಸ ಮಾಡಿಸಲು ಸಾಧ್ಯವಾಗುತ್ತದೆ.

ನಾಗರಿಕ ತಂತ್ರಜ್ಞಾನ ಮತ್ತು ಆಡಳಿತದಲ್ಲಿ ಹೊಣೆಗಾರಿಕೆ

ಸರ್ಕಾರಿ ವ್ಯವಸ್ಥೆಯಲ್ಲಿನ ಬಹುದೊಡ್ಡ ಸಮಸ್ಯೆಯೆಂದರೆ, ಇಲಾಖೆಗಳ ನಡುವೆ ಹೊಣೆಗಾರಿಕೆ ಕಳೆದುಹೋಗುವುದು. ದೂರು ನೀಡಿದಾಗ, "ಇದು ನಮ್ಮ ಇಲಾಖೆಗೆ ಬರುವುದಿಲ್ಲ, ಬೇರೆ ಕಚೇರಿಗೆ ಹೋಗಿ" ಎಂಬ ಉತ್ತರ ಸಾಮಾನ್ಯವಾಗಿ ಕೇಳಿಬರುತ್ತದೆ. ಯಾರು ಹೊಣೆ ಎಂದು ಗೊತ್ತಿಲ್ಲದ ದೂರುಗಳು ಕೇವಲ ಕಾಗದದ ಮೇಲಷ್ಟೇ ಉಳಿಯುತ್ತವೆ ಮತ್ತು ಇಲಾಖೆಗಳ ನಡುವೆ ಅಲೆದಾಡುತ್ತವೆ.

ಇದರಿಂದ ಬೇಸತ್ತು ಪೋಷಕರು ಹಾಗೂ ನಾಗರಿಕರು ದೂರು ನೀಡುವುದನ್ನೇ ಬಿಡುತ್ತಾರೆ. ಆದರೆ 'ನಮ್ಮ ಶಾಲೆ' ಈ ನಿರಾಸಕ್ತಿಯನ್ನ ಪಾರದರ್ಶಕ ಟ್ರ್ಯಾಕಿಂಗ್ ವ್ಯವಸ್ಥೆಯಾಗಿ ಬದಲಾಯಿಸುತ್ತದೆ. ಇದು ಯಾವ ಶಾಲೆ, ಸಮಸ್ಯೆಯೇನು, ಜವಾಬ್ದಾರಿಯುತ ಅಧಿಕಾರಿ ಯಾರು ಮತ್ತು ದೂರು ನೀಡಿದ ನಂತರ ಏನಾದರೂ ಕ್ರಮ ಕೈಗೊಳ್ಳಲಾಗಿದೆಯೇ ಎಂಬ ಸಂಪೂರ್ಣ ಮಾಹಿತಿಯನ್ನ ಇಲ್ಲಿ ಒದಗಿಸುತ್ತದೆ.

ಶಾಲಾ ಮೂಲಸೌಕರ್ಯ ದುರಸ್ತಿ

ಕೇವಲ ತಂತ್ರಜ್ಞಾನವೊಂದೇ ಕುಸಿದುಬಿದ್ದ ತರಗತಿಯನ್ನ ದುರಸ್ತಿ ಮಾಡಲು ಸಾಧ್ಯವಿಲ್ಲ. ಅಧಿಕಾರಿಗಳು ಸ್ಪಂದಿಸಿದಾಗ, ಅನುದಾನ ಲಭ್ಯವಿದ್ದಾಗ ಮಾತ್ರ ಈ ಪ್ಲಾಟ್‌ಫಾರ್ಮ್ ಹೆಚ್ಚು ಮೌಲ್ಯಯುತವಾಗುತ್ತದೆ. ದೂರುಗಳು ಹಾಗೇ ಉಳಿದರೆ ಅದು ಕೇವಲ ಆಡಳಿತ ಯಂತ್ರದ ನಿಷ್ಕ್ರಿಯತೆಯ ದಾಖಲೆಯಾಗಿ ಪರಿಣಮಿಸುತ್ತದೆ. ಅದಕ್ಕಾಗಿಯೇ ಇಲ್ಲಿ ಸಾರ್ವಜನಿಕರು ಮತ್ತು ಎನ್‌ಜಿಒಗಳ ಪಾತ್ರ ಬಹಳ ಮುಖ್ಯವಾಗುತ್ತದೆ.

ನಿರಂತರವಾಗಿ ಫಾಲೋ-ಅಪ್ ಮಾಡುವ ಮೂಲಕ ಮತ್ತು ಸಾರ್ವಜನಿಕ ದಾಖಲೆಗಳನ್ನ ಸೃಷ್ಟಿಸುವ ಮೂಲಕ, ಅಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳದಂತೆ ನೋಡಿಕೊಳ್ಳಬಹುದು. ಈ ವ್ಯವಸ್ಥೆಯು ಅಧಿಕಾರಿಗಳು ಕಣ್ಮುಚ್ಚಿ ಕೂರದಂತೆ ಎಚ್ಚರಿಸುವ ಕೆಲಸ ಮಾಡುತ್ತದೆ.

ಸಮಾಜದಲ್ಲಿ ಬದಲಾವಣೆಯ ಹೊಸ ಭರವಸೆ

ಒಂದೇ ರೀತಿಯ ಸಮಸ್ಯೆಗಳು ಮತ್ತೆ ಮತ್ತೆ ವರದಿಯಾದರೆ, ಅದು ಕೇವಲ ಒಂದು ಶಾಲೆಯ ಸಮಸ್ಯೆಯಾಗಿರದೆ ಇಡೀ ಜಿಲ್ಲೆಯ ಅಥವಾ ತಾಲೂಕಿನ ಮೂಲಸೌಕರ್ಯದ ಕೊರತೆ ಎಂಬುದನ್ನ ಈ ದತ್ತಾಂಶಗಳು ಬಹಿರಂಗಪಡಿಸುತ್ತವೆ. ನಾಗರಿಕ ತಂತ್ರಜ್ಞಾನವು ಸರ್ಕಾರವನ್ನು ಬದಲಿಸುವುದಿಲ್ಲ, ಬದಲಾಗಿ ಅಧಿಕಾರಿಗಳ ಜವಾಬ್ದಾರಿಯನ್ನು ಮರೆಮಾಚದಂತೆ ಮಾಡುತ್ತದೆ ಎಂಬುದು ಇದರ ಹಿಂದಿನ ಆಶಯ. ಸರ್ಕಾರಿ ಶಾಲೆಯಲ್ಲಿ ಏನು ಮುರಿದಿದೆ, ಎಲ್ಲಿ ರಿಪೇರಿಯಾಗಬೇಕು ಎಂದು ಸ್ಥಳೀಯ ಜನರಿಗೆ ಚೆನ್ನಾಗಿ ತಿಳಿದಿದೆ. ಆದರೆ ಅದನ್ನು ಯಾರು ಸರಿಪಡಿಸಬೇಕು ಎಂಬುದನ್ನು 'ನಮ್ಮ ಶಾಲೆ' ಪ್ಲಾಟ್‌ಫಾರ್ಮ್ ಇದೀಗ ನಿಖರವಾಗಿ ತೋರಿಸಿಕೊಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+