ಕರ್ನಾಟಕ ಕಾಂಗ್ರೆಸ್‌ನ 'ನಮ್ಮ ಕಾಂಗ್ರೆಸ್' ಪಾಕ್ಷಿಕ ಪತ್ರಿಕೆ ಬಿಡುಗಡೆ
ಬೆಂಗಳೂರು, ಫೆಬ್ರವರಿ 10 : ನ್ಯಾಷನಲ್ ಹೆರಾಲ್ಡ್ ಮಾದರಿಯಲ್ಲಿ ಕರ್ನಾಟಕ ಕಾಂಗ್ರೆಸ್ ಪಾಕ್ಷಿಕ ಪತ್ರಿಕೆಯನ್ನು ಆರಂಭಿಸಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ 'ನಮ್ಮ ಕಾಂಗ್ರೆಸ್' ಪಾಕ್ಷಿಕ ಪತ್ರಿಕೆ ಪ್ರತಿಯನ್ನು ನೀಡಲಾಗಿದೆ.
ಶನಿವಾರ ದೆಹಲಿಗೆ ಭೇಟಿ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ರಾಹುಲ್ ಗಾಂಧಿ ಅವರಿಗೆ 'ನಮ್ಮ ಕಾಂಗ್ರೆಸ್' ಪಾಕ್ಷಿಕ ಪತ್ರಿಕೆಯನ್ನು ನೀಡಿದರು. ಫೆ.7ರಂದು ಬೆಂಗಳೂರಿನಲ್ಲಿ ಪತ್ರಿಕೆಯನ್ನು ಬಿಡುಗಡೆ ಮಾಡಲಾಗಿತ್ತು.
2019ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಹಲವಾರು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಅದರ ಭಾಗವಾಗಿಯೇ 'ನಮ್ಮ ಕಾಂಗ್ರೆಸ್' ಎಂಬ ಪಾಕ್ಷಿಕ ಪತ್ರಿಕೆಯನ್ನು ಹೊರತರಲು ಆರಂಭಿಸಿದೆ.

ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಮುಖವಾಣಿಯಾಗಿ ನ್ಯಾಷನಲ್ ಹೆರಾಲ್ಟ್ ಪತ್ರಿಕೆ ಇದೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲಿ ಕನ್ನಡದಲ್ಲಿ 'ನಮ್ಮ ಕಾಂಗ್ರೆಸ್' ಪಾಕ್ಷಿಕ ಪತ್ರಿಕೆ ಹೊರಬಲಿದೆ. ಪ್ರತಿ 15 ದಿನಕ್ಕೊಮ್ಮೆ ಪತ್ರಿಕೆ ಪ್ರಕಟವಾಗಲಿದೆ.
ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರದ ಆಡಳಿತ ವೈಫಲ್ಯ, ಏಳು ದಶಕದಲ್ಲಿ ಕಾಂಗ್ರೆಸ್ ಪಕ್ಷ ಮಾಡಿರುವ ಸಾಧನೆಗಳನ್ನು ಪತ್ರಿಕೆ ಮೂಲಕ ತಲುಪಿಸಲಾಗುತ್ತದೆ. ಕಾಂಗ್ರೆಸ್ ನಾಯಕರ ಮಾತು, ರಾಜಕೀಯ ವಿಶ್ಲೇಷಣೆ, ವಿರೋಧ ಪಕ್ಷಗಳ ವೈಫಲ್ಯತೆಯನ್ನು ಪತ್ರಿಕೆ ಒಳಗೊಂಡಿರುತ್ತದೆ.

'ನಮ್ಮ ಕಾಂಗ್ರೆಸ್' ಮೊದಲ ಸಂಚಿಕೆಗೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ರಾಷ್ಟ್ರಮಟ್ಟದ ನಾಯಕರು ಶುಭಾಶಯ ಕೋರಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಪತ್ರಿಕೆಗೆ ಚಂದಾದಾರರಾಗುವಂತೆ ಸೂಚನೆ ನೀಡಲಾಗಿದೆ.












Click it and Unblock the Notifications