ಗ್ರಾಮಗಳ ಹೆಸರು ಬದಲಾವಣೆ; ಕೇರಳ ಸರ್ಕಾರಕ್ಕೆ ಸಿಎಂ ಪತ್ರ
ಮಂಗಳೂರು, ಜೂನ್ 28; ಕರ್ನಾಟಕದ ಭಾಗವೇ ಆಗಿದ್ದ ಮತ್ತು ಹೆಚ್ಚು ಕನ್ನಡಿಗರನ್ನೇ ಹೊಂದಿರುವ ಗಡಿ ಜಿಲ್ಲೆಯಾದ ಕಾಸರಗೋಡಿನ ಕನ್ನಡ ಪ್ರಾಬಲ್ಯವಿರುವ 11 ಗ್ರಾಮಗಳ ಹೆಸರನ್ನು ಕನ್ನಡದಿಂದ ಮಲಯಾಳಂಗೆ ಕೇರಳ ಸರ್ಕಾರ ಭಾಷಾಂತರ ಮಾಡಿದೆ.
ಕೇರಳ ಸರ್ಕಾರದ ತೀರ್ಮಾನ ಕನ್ನಡಿಗರನ್ನು ಕೆರಳಿಸಿದೆ. ಕಾಸರಗೋಡುವಿನಲ್ಲಿ ನಡೆಯುತ್ತಿರುವ ಕನ್ನಡದ ದೌರ್ಜನ್ಯದ ಬಗ್ಗೆ ಕರ್ನಾಟಕ ಸರ್ಕಾರ ಮಧ್ಯಪ್ರವೇಶ ಮಾಡುವ ಅಗತ್ಯವಿದೆ ಎಂದು ಹಲವರು ಒತ್ತಾಯಿಸಿದ್ದಾರೆ.
ಸೋಮವಾರ ಕರ್ನಾಟಕ ಪ್ರದೇಶ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರನ್ನು ಭೇಟಿ ಮಾಡಿದರು. ಕಾಸರಗೋಡು ಮತ್ತು ಮಂಜೇಶ್ವರದಲ್ಲಿನ ಕನ್ನಡ ಹೆಸರುಗಳನ್ನು ಹೊಂದಿದ ಕೆಲವು ಗ್ರಾಮಗಳ ಹೆಸರುಗಳನ್ನು ಮಲಯಾಳಿ ಭಾಷೆಯ ಆಧಾರದ ಹೆಸರುಗಳನ್ನಾಗಿ ಬದಲಾಯಿಸಲು ಹೊರಟಿರುವ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆದರು.

ಸರ್ಕಾರ ಕೂಡಲೇ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು ಈ ವಿಷಯವು ತಮ್ಮ ಗಮನಕ್ಕೆ ಈಗಾಗಲೇ ಬಂದಿದ್ದು, ಕೂಡಲೇ ಕೇರಳ ಸರ್ಕಾರದ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.
ಕಾಸರಗೋಡು ಮತ್ತು ಮಂಜೇಶ್ವರ ಭಾಗದಲ್ಲಿ ಕನ್ನಡಿಗರು ಮತ್ತು ಮಲಯಾಳ ಭಾಷಿಗರು ಪರಸ್ಪರ ಸಹಬಾಳ್ವೆಯಿಂದ ಸಹೋದರರಂತೆ ಬದುಕನ್ನು ನಿರ್ವಹಿಸುತ್ತಿದ್ದು, ಕನ್ನಡ ಭಾಷೆಯ ಸಾಂಸ್ಕೃತಿಕ, ಐತಿಹಾಸಿಕ ಮಹತ್ವವುಳ್ಳ ಗ್ರಾಮಗಳ ಹೆಸರುಗಳನ್ನು ಬದಲಾಯಿಸುವುದು ಸೂಕ್ತವಲ್ಲ.
ಕೇರಳ ಸರ್ಕಾರದ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಗ್ರಾಮಗಳ ಹೆಸರುಗಳ ಬದಲಾವಣೆಯ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕೆಂದು ಕೋರಿ ಪತ್ರ ಬರೆಯುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.
ಗ್ರಾಮಗಳ ಹೆಸರುಗಳನ್ನು ಬದಲಾಯಿಸುವ ಪ್ರಯತ್ನ ಕೇರಳ ಸರ್ಕಾರದ ಗಮನಕ್ಕೆ ಬಾರದೆಯೇ ಕೇವಲ ಸ್ಥಳೀಯ ಸಂಸ್ಥೆಗಳ ಹಂತದಲ್ಲಿಯೇ ನಡೆದಿರಬಹುದೆಂಬ ವಿಷಯವನ್ನು ಈ ಸಂದರ್ಭದಲ್ಲಿ ಪ್ರಾಧಿಕಾರದ ಅಧ್ಯಕ್ಷರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಕೇರಳ ಸರ್ಕಾರ ಕಾಸರಗೋಡು ಜಿಲ್ಲೆಯ ಮಧೂರು ಎಂಬ ಗ್ರಾಮವನ್ನು ಮಧುರಂ, ಕಾರಡ್ಕವನ್ನು ಕಡಗಮ್, ಪಿಳಿಕುಂಜೆಯನ್ನು ಪಿಳಿಕುನ್ನು, ಮಂಜೇಶ್ವರವನ್ನು ಮಂಜೇಶ್ವರಂ, ಕುಂಬಳವನ್ನು ಕುಂಬ್ಳಾ, ನೆಲ್ಲಿಕುಂಜವನ್ನು ನೆಲ್ಲಿಕುನ್ನಿ, ಮಲ್ಲಅನ್ನು ಮಲ್ಲಂ, ಬೇದಡ್ಕವನ್ನು ಬೇಡಗಮ್, ಆನೆಬಾಗಿಲುವನ್ನು ಆನೆವಾಗಿಲ್, ಹೊಸದುರ್ಗವನ್ನು ಪುದಿಯಕೋಟ, ಸಸಹಿತ್ಲುವನ್ನು ಶೈವಲಖ್ ಎಂಬುವುದಾಗಿ ಬದಲಾಯಿಸಲು ತೀರ್ಮಾನ ಮಾಡಿದೆ.
ಮಂಜೇಶ್ವರ ಸೇರಿದದಂತೆ ವಿವಿಧ ಪ್ರದೇಶಗಳಲ್ಲಿ ಹೆಸರುಗಳನ್ನು ಬದಲಾವಣೆ ಮಾಡಿ ಹೊಸ ಬೋರ್ಡ್‌ಗಳನ್ನು ಸಹ ಹಾಕಲಾಗಿದೆ. ಕರ್ನಾಟಕದಲ್ಲಿ ಹಲವರು ಕೇರಳದ ತೀರ್ಮಾನಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.












Click it and Unblock the Notifications