Get Updates
Get notified of breaking news, exclusive insights, and must-see stories!

ತಾಲಿಬಾನ್ ಆಡಳಿತಕ್ಕೆ ಕೆಂಪು ಹಾಸಿಗೆಯ ಸ್ವಾಗತ: ಪ್ರಧಾನಿ ಮೋದಿಗೆ ನಜ್ಮಾ ನಜೀರ್ ಪತ್ರ

ಆಫ್ಗಾನಿಸ್ತಾನದ ಆಡಳಿತ ಚುಕ್ಕಣಿಯನ್ನು ಹಿಡಿರುವ ತಾಲಿಬಾನ್ ಸರ್ಕಾರದೊಂದಿಗೆ (ಹಲವು ದೇಶಗಳು ಅಧಿಕೃತ ಮಾನ್ಯತೆ ನೀಡಿಲ್ಲ) ಭಾರತದ ಸಂಪರ್ಕ ಮತ್ತು ಮಹಿಳಾ ಪತ್ರಕರ್ತರನ್ನು ಹೊರಗಿಟ್ಟಿರುವ ಬಗ್ಗೆ ದೇಶದಾದ್ಯಂತ ಭಾರೀ ಚರ್ಚೆ ನಡೆದಿದೆ. ಈ ವಿಷಯದಲ್ಲಿ ಭಾರತ ಸರ್ಕಾರದ ಯಾವುದೇ ಪಾತ್ರವಿಲ್ಲ ಎಂದು ಭಾರತ ಸರ್ಕಾರ ಸ್ಪಷ್ಟಪಡಿಸಿದೆ. ಇದೀಗ ಈ ವಿಚಾರವಾಗಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ನಜ್ಮಾ ನಜೀರ್ ಚಿಕ್ಕನೇರಳೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಒಬ್ಬ ಮುಸ್ಲಿಂ ಮಹಿಳಾ ರಾಜಕಾರಣಿಯಾಗಿ ಮತ್ತು ಭಾರತದ ಹೆಮ್ಮೆಯ ಪ್ರಜೆಯಾಗಿ, ಭಾರತ ಮತ್ತು ತಾಲಿಬಾನ್‌ನೊಂದಿಗಿನ ಇತ್ತೀಚಿನ ರಾಜತಾಂತ್ರಿಕ ಸಂಪರ್ಕ, ವಿಶೇಷವಾಗಿ ಅವರ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿ ಅವರ ದಿನಾಂಕ ಅಕ್ಟೋಬರ್ 10, 2025ರಂದು ನವದೆಹಲಿಗೆ ಭೇಟಿಯ ಸಂದರ್ಭದ ಘಟನೆಗಳ ಬಗ್ಗೆ ಭಾರವಾದ ಹೃದಯ ಮತ್ತು ಆಳವಾದ ಕಳವಳದಿಂದ ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ.

Najma Nazir Questions India s Red Carpet Approach to Taliban in Letter to PM Modi

ರಾಜತಾಂತ್ರಿಕತೆಯ ಅಗತ್ಯವನ್ನು ನಾನು ಅರ್ಥಮಾಡಿಕೊಂಡಿದ್ದರೂ ಕೂಡ ಈ ಸಂಬಂಧವು ಭಾರತದ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಮತ್ತು ಲಿಂಗ ಸಮಾನತೆಯ ಕುರಿತಾದ ಭಾರತದ ಸಾಂವಿಧಾನಿಕ ಬದ್ಧತೆಯನ್ನು ದುರ್ಬಲಗೊಳಿಸುವ ಗಂಭೀರ ವಿರೋಧಾಭಾಸ ಮತ್ತು ನೈತಿಕ ಮೌಲ್ಯಗಳ ಅಧಃಪತನವನ್ನು ಎತ್ತಿ ತೋರಿಸಲೇಬೇಕಾಗಿದೆ.

ತಾವು ಪ್ರಧಾನಿಯಾಗುವ ಕೆಲವು ವರ್ಷಗಳು ಮುಂಚೆ ಮತ್ತು‌ ತಾವು ಪ್ರಧಾನಿಯಾದ ನಂತರವಂತು ಭಾರತದ ಧೃವೀಕರಣಗೊಂಡ ರಾಜಕೀಯ ಸಂದರ್ಭದಲ್ಲಿ, ವಿಶೇಷವಾಗಿ ನಿಮ್ಮ ಪಕ್ಷದ ಕೆಲವು ಸದಸ್ಯರಿಂದ, ನನ್ನಂತಹ ಭಾರತೀಯ ಮುಸ್ಲಿಮರನ್ನು "ತಾಲಿಬಾನ್ ಸಹಾನುಭೂತಿಗಳು" ಅಥವಾ "ತಾಲಿಬಾನಿ ಮನಸ್ಥಿತಿ" ಎಂದು ಎಷ್ಟರ ಮಟ್ಟಿಗೆ ಆರೋಪಿಸಿದ್ದೀರೆಂದರೆ ಬಹುತೇಕ ನಡೆದ ಎಲ್ಲಾ ಚುನಾವಣೆಗಳಿಗು ಇದನ್ನೇ ಶಸ್ತ್ರಾಸ್ತ್ರವಾಗಿ ಬಳಸಲಾಗಿದೆ ಎಂದು ನಜ್ಮಾ ಅವರು ಹೇಳಿದ್ದಾರೆ.

ಮುಸಲ್ಮಾನರೆಲ್ಲರು ತಾಲಿಬಾನಿ ಸಹಾನುಭೂತಿಗಳು,ಮನಸ್ಥಿತಿಯವರು ಎಂಬಂತಹ ರೀತಿಯ ಭಾಷಣಗಳು ಸಾಮುದಾಯಿಕ ಒಡಕುಗಳನ್ನು ಉಂಟುಮಾಡಿದೆ ಮತ್ತು ನಮ್ಮ ಸಮುದಾಯವನ್ನು ಸದಾ ಅವಮಾನಿತ ಹಾಗು ಅನುಮಾನಿತ ಪರಿಸ್ಥಿತಿಯಲ್ಲಿಟ್ಟಿದೆ. ಆದರೆ ಇಂದು, ನಿಮ್ಮ ಸರ್ಕಾರವು ಯುನೈಟೆಡ್ ನೇಷನ್ಸ್ ನಿಂದ ಭಯೋತ್ಪಾದನೆಗೆ ಸಂಬಂಧಿಸಿದ ದಿಗ್ಬಂಧನದಲ್ಲಿರುವ, ಲಿಂಗ ತಾರತಮ್ಯವನ್ನು ಜಾರಿಗೊಳಿಸಿ ಅಫ್ಘಾನಿಸ್ತಾನದಲ್ಲಿ ಮಹಿಳೆಯರನ್ನು ಸಾರ್ವಜನಿಕ ಜೀವನದಿಂದ ವ್ಯವಸ್ಥಿತವಾಗಿ ಅಳಿಸಿಹಾಕುವ ಪ್ರಖ್ಯಾತಿ ಹೊಂದಿರುವ ತಾಲಿಬಾನ್ ಆಡಳಿತಕ್ಕೆ-ಕೆಂಪು ಹಾಸಿಗೆಯ ಸ್ವಾಗತವನ್ನು ನೀಡಿದೆ. ಭಾರತ ಸರ್ಕಾರದ ಈ ನಿಲುವು ಕೇವಲ ವಿರೋಧಾಭಾಸವಷ್ಟೇ ಅಲ್ಲ, ಸಮಾನತೆ ಮತ್ತು ನ್ಯಾಯದ ಭಾರತದ ನೀತಿಗಳನ್ನು ಬೆಂಬಲಿಸುವವರಿಗೆ ಆಳವಾಗಿ ನೋವುಂಟುಮಾಡಿದೆ.

ಈ ಭೇಟಿಯ ಅತ್ಯಂತ ಖಂಡನೀಯ ಕ್ಷಣವೆಂದರೆ, ನವದೆಹಲಿಯ ಅಫ್ಘಾನ್ ರಾಯಭಾರ ಕಚೇರಿಯಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಿಂದ ಮಹಿಳಾ ಪತ್ರಕರ್ತರನ್ನು ಹೊರಗಿಡಲಾಯಿತು. 16 ಪುರುಷ ವರದಿಗಾರರಿಗೆ ಪ್ರವೇಶವನ್ನು ಅನುಮತಿಸಲಾಗಿದ್ದರೂ, ಭಾರತದ ರೋಮಾಂಚಕ ಮಾಧ್ಯಮದ ಅವಿಭಾಜ್ಯ ಅಂಗವಾದ ಸಮರ್ಥ, ವೃತ್ತಿಪರ ಮಹಿಳಾ ಪತ್ರಕರ್ತರನ್ನು ತಡೆಯಲಾಯಿತು.ಇದು ತಾಲಿಬಾನ್‌ನ ಮಹಿಳಾ ದ್ವೇಷದ ಆಚರಣೆಗಳನ್ನು ನಮ್ಮ ಭೂಮಿಯಲ್ಲಿ ಪ್ರತಿಧ್ವನಿಸುವಂತೆ ನನಗಂತು ಭಾಸವಾಯಿತು.

ತಾಲಿಬಾನ್‌ನ "ಸಮನ್ವಯದ ಕೊರತೆ" ಎಂಬ ದುರ್ಬಲ ನೆವವು ಈ ಅವಮಾನವನ್ನು ಕಡಿಮೆಗೊಳಿಸುವುದಿಲ್ಲ, ಅಥವಾ ಈ ರೀತಿಯ ಘಟನೆಯನ್ನು ನಮ್ಮ ರಾಜಧಾನಿಯಲ್ಲಿ ಅನುಮತಿಸಲಾಗಿದೆ ಎಂಬ ಸತ್ಯ ಕ್ಷಮೆಗೆ ಅರ್ಹವಾದದ್ದು ಅಲ್ಲ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಯಾವುದೇ ಪಾತ್ರವಿಲ್ಲಎಂದು ಸ್ಪಷ್ಟಪಡಿಸಿದ್ದರೂ, ಈ ಘೋರ ಅವಮಾನದ ಮುಂದೆ ಸರ್ಕಾರದ ಮೌನವು ಬಹಳಷ್ಟು ವಿಷಯಗಳನ್ನು ಮಾರ್ಧನಿಸುತ್ತದೆ.

ಸಾರ್ವಜನಿಕ ಜೀವನದಲ್ಲಿ ಒಬ್ಬ ಮುಸ್ಲಿಂ ಮಹಿಳೆಯಾಗಿ, ನಮ್ಮ ಹಕ್ಕುಗಳ ಪರ ಧ್ವನಿಯನ್ನು ಎತ್ತಿದಾಗೆಲ್ಲ ನಾವು ಎದುರಿಸುವ ವಿರೋಧಗಳ ಬಗ್ಗೆ, ಕುಹಕಗಳ ಬಗ್ಗೆ,ನನಗೆ ಚೆನ್ನಾಗಿ ತಿಳಿದಿದೆ, ಆಗಾಗ್ಗೆ ಅಲ್ಲ ಪ್ರತಿ ಕ್ಷಣವು ಜಗತ್ತು ನಮ್ಮನ್ನು ಮೌನಗೊಳಿಸಲು ಪ್ರಯತ್ನಿಸುತ್ತದೆ.

ಮಹಿಳೆಯರನ್ನು ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ವಲಯದಲ್ಲಿ ತಡೆಯುವ ನಿಮ್ಮ ಆಡಳಿತ ನಮ್ಮದೇ ಭೂಮಿಯಲ್ಲಿ ನಮಗೆ ತಾಲಿಬಾನಿಗಳು ಬಂದು ಷರತ್ತುಗಳನ್ನು ನಿರ್ದೇಶಿಸಲು ಅನುಮತಿಸಿದಾಗ "ನಾರಿ ಶಕ್ತಿ"ಯಂತಹ ನಿಮ್ಮ ಸರ್ಕಾರದ ಘೋಷಣೆಗಳು ಖಾಲಿಯಾಗಿ ಕಾಣುತ್ತವೆ. ಈ ಘಟನೆಯು ನಮ್ಮ ಪತ್ರಕರ್ತರಿಗೆ ಮಾತ್ರವಲ್ಲದೆ, ಸಮಾನತೆಗಾಗಿ ಶ್ರಮಿಸುವ ಪ್ರತಿಯೊಬ್ಬ ಭಾರತೀಯ ಮಹಿಳೆಗೂ ಅವಮಾನ ಉಂಟುಮಾಡಿದೆ. ಇದು ಭಾರತದ ಮಹಿಳಾ ಹಕ್ಕುಗಳ ಬದ್ಧತೆಯನ್ನು ರಾಜತಾಂತ್ರಿಕ ಸೌಕರ್ಯಕ್ಕಾಗಿ ರಾಜಿಮಾಡಬಹುದೆಂಬ ಅಪಾಯಕಾರಿ ಸಂದೇಶವನ್ನು ರವಾನಿಸಿದೆ.

ಈ ಸಂಪರ್ಕದ ದೀರ್ಘಾವಧಿಯ ಪರಿಣಾಮಗಳ ಬಗ್ಗೆ ಒಮ್ಮೆ ಯೋಚಿಸಿ ಎಂದು ನಾನು ನಿಮ್ಮಲ್ಲಿ ವಿನಂತಿಸುತ್ತೇನೆ. ತಾಲಿಬಾನ್‌ನ ಹಿಂದುಳಿದ ತತ್ವಶಾಸ್ತ್ರವನ್ನು ಸ್ಪಷ್ಟವಾಗಿ ಖಂಡಿಸದೆ ಅವರ ಆತಿಥ್ಯ ಮಾಡುವುದರಿಂದ, ಅವರ ಆಚರಣೆಗಳನ್ನು ಸಾಮಾನ್ಯಗೊಳಿಸುವ ಮತ್ತು ನಮ್ಮ ಗಡಿಗಳೊಳಗಿನ ಕಟ್ಟರವಾದಿಗಳಿಗೆ ಧೈರ್ಯ ತುಂಬುವ ಅಪಾಯವಿದೆ. ಪ್ರಜಾಸತ್ತಾತ್ಮಕತೆ ಮತ್ತು ಬಹುತ್ವವಾದದ ದೀಪಸ್ತಂಭವಾಗಿರುವ ಭಾರತದ ನೈತಿಕ ಸ್ಥಾನಮಾನವನ್ನು ದಯವಿಟ್ಟು ನಿಮ್ಮ ರಾಜಕೀಯ ಲಾಭಕ್ಕಾಗಿ ಹರಾಜಿಗಿಡಬೇಡಿ.

ವ್ಯಾಪಾರ-ವ್ಯವಹಾರ ತಮಗೆ ಅಫ್ಘಾನಿಸ್ತಾನದೊಂದಿಗೆ ಮುಖ್ಯವಾದರೂ, ಅವು ನಮ್ಮ ದೇಶದ ಮೂಲ ಮೌಲ್ಯಗಳಿಗೆ ಧಕ್ಕೆ ತರಬಾರದು ಎಂಬ ಪ್ರಜ್ಞೆ ಕಾಪಾಡಿಕೊಳ್ಳಿ. ಪ್ರಶ್ನಿಸುವವರನ್ನು ತಾವು ಎಷ್ಟರ ಮಟ್ಟಿಗೆ ಇಷ್ಟ ಪಡುತ್ತೀರಿ ಮತ್ತು ಉತ್ತರಿಸುತ್ತೀರಿ ಎಂಬ ಸ್ಪಷ್ಟ ಚಿತ್ರಣ ನನಗಿದ್ದರೂ ಕೂಡಭಾರತದ ಮಹಿಳೆಯರ ಪರವಾಗಿ ನಾನು ನಿಮ್ಮಲ್ಲಿ ಈ ಮೂರು ಮುಖ್ಯ ಪ್ರಶ್ನೆಗಳನ್ನು ಕೇಳಲು ಇಚ್ಚಿಸುತ್ತೇನೆ; ನವದೆಹಲಿಯ ಒಂದು ಕಾರ್ಯಕ್ರಮದಲ್ಲಿ ಲಿಂಗ ಸಮಾನತೆಯ ಉಲ್ಲಂಘನೆಗೆ ಹೇಗೆ ಅವಕಾಶ ನೀಡಲಾಯಿತು ಎಂದು ಪ್ರಶ್ನೆ ಮಾಡಿದ್ದಾರೆ.

ತಾಲಿಬಾನ್‌ನೊಂದಿಗಿನ ಭವಿಷ್ಯದ ಸಂಪರ್ಕಗಳು ಭಾರತದ ಪ್ರಜಾಸತ್ತಾತ್ಮಕ ತತ್ವಗಳನ್ನು ಎತ್ತಿಹಿಡಿಯುತ್ತದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ನಿಮ್ಮ ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಳ್ಳಲಿದೆ, ಈ ಘಟನೆಯಿಂದ ದ್ರೋಹಕ್ಕೊಳಗಾದಂತೆ ಭಾವಿಸುವ ಭಾರತೀಯ ಮಹಿಳೆಯರ, ವಿಶೇಷವಾಗಿ ಸಾರ್ವಜನಿಕ ಜೀವನದಲ್ಲಿರುವವರ ಕಳವಳಗಳನ್ನು ನೀವು ಹೇಗೆ ಸಂಬೋಧಿಸಲಿದ್ದೀರಿ ಎಂದು ಅವರು ಪ್ರಶ್ನಿಸಿದ್ದಾರೆ.

ಒಬ್ಬ ಮುಸ್ಲಿಂ ಮಹಿಳಾ ರಾಜಕಾರಣಿಯಾಗಿ, ನಾನು ನ್ಯಾಯ, ಸಮಾನತೆ ಮತ್ತು ಎಲ್ಲರಿಗೂ ಘನತೆಯನ್ನು ಎತ್ತಿಹಿಡಿಯುವ ಭಾರತಕ್ಕಾಗಿ ನಿಲ್ಲುತ್ತೇನೆ. ನಮ್ಮ ವಿದೇಶಾಂಗ ನೀತಿಯು ಕೂಡ ಇದೇ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ ಆದರೆ ತಾತ್ಕಾಲಿಕ ಲಾಭಕ್ಕಾಗಿ ಅವುಗಳನ್ನು ತ್ಯಾಗ ಮಾಡದಿರುವಂತೆ ನಾನು ನಿಮ್ಮಲ್ಲಿ ಹಕ್ಕೊತ್ತಾಯ ಮಾಡುತ್ತೇನೆ.

ತಾಲಿಬಾನ್‌ಗೆ ಕೆಂಪು ಹಾಸಿಗೆಯ ಸ್ವಾಗತವು ತಕ್ಷಣದ ಆಸಕ್ತಿಗಳನ್ನು ಪೂರೈಸಿರಬಹುದು ಆದರೆ ಇದು ಪ್ರಜಾಸತ್ತಾತ್ಮಕತೆ ಮತ್ತು ಮಹಿಳಾ ಸಬಲೀಕರಣದ ಚಾಂಪಿಯನ್ ಆಗಿರುವ ಭಾರತದ ಪರಂಪರೆಯನ್ನು ಕಳಂಕಗೊಳಿಸುವ ಅಪಾಯವನ್ನು ಹೊಂದಿದೆ. ತಾವು ಈ ನಾಡಿನ ಮಹಿಳೆಯರ ಕಳವಳ ತುಂಬಿದ ಪ್ರಶ್ನೆಗಳಿಗೆ ಉತ್ತರಿಸುತ್ತೀರಿ ಎಂಬ ನಿರೀಕ್ಷೆಯಲ್ಲಿದ್ದೇನೆ ಎಂದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+