ಗೃಹ ಲಕ್ಷ್ಮಿ: ಮೈಸೂರು 'ಚಾಮುಂಡೇಶ್ವರಿ ತಾಯಿ'ಗೂ ಮಾಸಿಕ 2000ರೂ.!
ಬೆಂಗಳೂರು, ನವೆಂಬರ್ 17: ಕರ್ನಾಟಕ ರಾಜ್ಯ ಸರ್ಕಾರ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾಗಿರುವ 'ಗೃಹ ಲಕ್ಷ್ಮಿ' ಯೋಜನೆಯಡಿ ಲಕ್ಷಾಂತರ ಮಹಿಳೆಯರಿಗೆ ಮಾಸಿಕವಾಗಿ 2000 ರೂ. ಜಮೆ ಆಗುತ್ತಿವೆ. ಕೆಲವರಿಗೆ ತಡವಾಗಿದೆ. ಇದೀಗ 'ಮೈಸೂರು ಚಾಮುಂಡೇಶ್ವರಿ ದೇವತೆ'ಯನ್ನು ಈ ಯೋಜನೆಯ ಫಲಾನುಭವಿಯನ್ನಾಗಿಸಲು ಸರ್ಕಾರ ಮನಸ್ಸು ಮಾಡಿದೆ.
ಮೈಸೂರು ಚಾಮುಂಡೇಶ್ವರಿ ದೇವತೆಗೂ ನೀಡಿದರೆ ಹೇಗಿರುತ್ತದೆ...? ಸಾಮಾನ್ಯ ಮಹಿಳೆಯರಿಗೆ ನೀಡಿದಂತೆ ದೇವರಿಗೆ ಸರ್ಕಾರಿ ಯೋಜನೆಯ ಹಣವೇ? ಎಂದು ನೀವು ಅಚ್ಚರಿಪಡಬಹುದು. ಆದರೆ ಇದು ಸತ್ಯ, ಅಧಿದೇವತೆ ಮೈಸೂರು ಚಾಮುಂಡೇಶ್ವರಿ ತಾಯಿಗೂ ಮಾಸಿಕ 2,000 ರೂಪಾಯಿ ನೀಡಲು ರಾಜ್ಯ ಸರ್ಕಾರ ಸೂಚನೆ ನೀಡಿದೆ.

ಕರ್ನಾಟಕ ಸರ್ಕಾರದ 'ಗೃಹ ಲಕ್ಷ್ಮಿ' ಯೋಜನೆಯ ಫಲಾನುಭವಿಗಳ ಪೈಕಿ ಎಪಿಎಲ್/ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಮಹಿಳೆಯರು 2,000 ರೂ. ಪಡೆಯುತ್ತಿದ್ದಾರೆ. ಇನ್ನುಮುಂದೆ ಮೈಸೂರು ಚಾಮುಂಡೇಶ್ವರಿ ಅಮ್ಮನವರ ಖಾತೆಗೂ ಮಾಸಿಕ 2000 ರೂ.ಹಣ ಜಮೆ ಮಾಡಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸೂಚಿಸಿದ್ದಾರೆ ಎಂದು ಅವರು ಹೇಳಿದರು.
ಪತ್ರದ ಮೂಲಕ ಡಿಸಿಎಂಗೆ ಮನವಿ, ಸ್ಪಂದನೆ
ಈ ಕುರಿತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ ಎಂದು ಕಾಂಗ್ರೆಸ್ ಎಂಎಲ್‌ಸಿ ಹಾಗೂ ಪಕ್ಷದ ರಾಜ್ಯ ಮಾಧ್ಯಮ ಪ್ರಕೋಷ್ಠದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಅವರು ಶುಕ್ರವಾರ ಮಾಹಿತಿ ನೀಡಿದ್ದಾರೆ.
ದಿನೇಶ್ ಗೂಳಿಗೌಡ ಅವರ ಈ ಮನವಿ ಪ್ರಸ್ತಾವನೆಗೆ ಒಪ್ಪಿದ ಕರ್ನಾಟಕ ಕಾಂಗ್ರೆಸ್ ಮುಖ್ಯಸ್ಥ ಡಿಕೆ ಶಿವಕುಮಾರ್ ಅವರು ಇನ್ನು ಮುಂದೆ ಪ್ರತಿ ತಿಂಗಳು ಚಾಮುಂಡೇಶ್ವರಿ ದೇವಸ್ಥಾನದ ಖಾತೆಗೆ ಹಣ ಜಮಾ ಮಾಡಲು ಸೂಚಿಸಿದ್ದಾರೆ.

ಪ್ರತಿ ತಿಂಗಳು ದೇವಿ ಖಾತೆ ಹಣ ಜಮೆ
ಮನವಿಗೆ ಉಪಮುಖ್ಯಮಂತ್ರಿ ಅವರು ತಕ್ಷಣ ಸ್ಪಂದಿಸಿದ್ದಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಇಲಾಖೆಯಿಂದ ಅಥವಾ ವೈಯಕ್ತಿಕವಾಗಿ ಪ್ರತಿ ತಿಂಗಳು 2000 ರೂ. ಹಣವನ್ನು ಚಾಮುಂಡೇಶ್ವರಿ ದೇವಿ ಖಾತೆಗೆ ಜಮಾ ಮಾಡುವಂತೆ ತಿಳಿಸಿದ್ದಾರೆ ಎಂದು ಗೂಳಿಗೌಡ ಅವರು ಪ್ರಕಟಣೆ ವಿವರಿಸಿದ್ದಾರೆ.
ವಿಶೇಷವೆಂದರೆ ಕರ್ನಾಟಕ ಸರ್ಕಾರವು ಆಗಸ್ಟ್ 30 ರಂದು ಅರಮನೆ ನಗರಿ ಮೈಸೂರಿನಿಂದ ಚಾಮುಂಡೇಶ್ವರಿ ದೇವಿಗೆ ಮೊದಲ ಕಂತನ್ನು ಠೇವಣಿ ಮಾಡುವ ಮೂಲಕ ಗೃಹ ಲಕ್ಷ್ಮಿ ಯೋಜನೆ ಆರಂಭಿಸಿತ್ತು. ಈ ಮೂಲಕ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ದೇವಿಗೆ ಅರ್ಪಿಸಿ ರಾಜ್ಯದ ಮಹಿಳೆಯರಿಗಾಗಿ ಜಾರಿಗೆ ತಂದ ಯೋಜನೆಯನ್ನು ಯಶಸ್ವಿ ಗೊಳಿಸುವಂತೆ ಕೇಳಿಕೊಂಡಿದ್ದರು.
ದೇವರ ಮೊರೆ ಹೋದ ಸರ್ಕಾರ
ರಾಜ್ಯದಲ್ಲಿ ಸದ್ಯ ತಾಂತ್ರಿಕ ಕಾರಣಗಳಿಂದ ಅರ್ಹ ಫಲಾನುಭವಿಗಳಿಗೆ ಹಣ ಸಂದಾಯವಾಗಿಲ್ಲ. ಅರ್ಧಕ್ಕೆ ಯೋಜನೆ ನಿಂತಿದೆ ಎಂದು ವಿಪಕ್ಷ ನಾಯಕರು ಟೀಕಿಸಿದ್ದಾರೆ. ಈ ಮಧ್ಯೆ ರಾಜ್ಯ ಸರ್ಕಾರ ಎಲ್ಲವು ಅಂದುಕೊಂಡಂತೆ ನಡೆಯುಂತಾಗಲು ದೇವಿ ಚಾಮುಂಡೇಶ್ವರಿಯ ಮೊರೆ ಹೋಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.












Click it and Unblock the Notifications