ಪರಮೇಶ್ವರ ಸಮ್ಮುಖದಲ್ಲಿ ಉಪಮುಖ್ಯಮಂತ್ರಿ ಹುದ್ದೆ ಚರ್ಚೆ!
ಬೆಂಗಳೂರು, ಏ. 14 : ಕೆಪಿಸಿಸಿ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಡಾ.ಜಿ.ಪರಮೇಶ್ವರ ಅವರಿಗೆ ಡಿಸಿಎಂ ಹುದ್ದೆ ಕೊಡಬೇಕು ಎಂಬ ಬೇಡಿಕೆ ಹೊಸದಲ್ಲ. ಆದರೆ, ಇಂದು ಪರಮೇಶ್ವರ ಅವರ ಸಮ್ಮುಖದಲ್ಲೇ ಇಬ್ಬರು ಕಾಂಗ್ರೆಸ್ ನಾಯಕರು ಈ ಕುರಿತು ಚರ್ಚೆ ಮಾಡಿದರು.
ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 124ನೇ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಹುದ್ದೆ ಬಗ್ಗೆ ಚರ್ಚೆ ನಡೆಯಿತು. ಪಕ್ಷದ ಹಿರಿಯ ನಾಯಕ ಎಂ.ವಿ.ರಾಜಶೇಖರನ್ ಪರಮೇಶ್ವರ ಪರ ಬ್ಯಾಟಿಂಗ್ ಮಾಡಿದರೆ, ಸಿಎಂ ಆಪ್ತ ಸಚಿವ ಆಂಜನೇಯ ತಿರುಗೇಟು ಕೊಟ್ಟರು.

ಎಂ.ವಿ.ರಾಜಶೇಖರನ್ ಹೇಳಿದ್ದೇನು ? : 'ದಲಿತರನ್ನು ಅಧಿಕಾರದಿಂದ ದೂರವಿಟ್ಟರೆ ರಾಜ್ಯದ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಮೇಶ್ವರ ಅವರನ್ನು ಉಪಮುಖ್ಯಮಂತ್ರಿ ಮಾಡಬೇಕು' ಎಂದು ಎಂ.ವಿ.ರಾಜಶೇಖರನ್ ಅಭಿಪ್ರಾಯಪಟ್ಟರು. [ದಲಿತರು ಮುಖ್ಯಮಂತ್ರಿಯಾಗಲು ಇದು ಸಕಾಲವಲ್ಲ]
'ಪರಮೇಶ್ವರ್ ಕೇವಲ ಜ್ಞಾನಿ ಮಾತ್ರವಲ್ಲ ಅವರು ವಿಜ್ಞಾನಿ. ಕೃಷಿ ವಿಷಯದಲ್ಲಿ ಪದವಿ ಪಡೆದ ಪರಮೇಶ್ವರ ಅವರ ಆಲೋಚನೆಗಳು ಮತ್ತು ಕೆಲಸಗಳಿಂದ ರಾಜ್ಯದ ಅಭಿವೃದ್ಧಿಯಾಗುತ್ತದೆ. ಪರಮೇಶ್ವರ ಅವರು ಮುಖ್ಯಮಂತ್ರಿಯಾಗಲಿ ಅದಕ್ಕೂ ಮೊದಲು ಅವರು ಡಿಸಿಎಂ ಆಗಲಿ' ಎಂದು ಹಾರೈಸಿದರು. [ಪರಮೇಶ್ವರ್ ಡಿಸಿಎಂ, ಸಿದ್ದರಾಮಯ್ಯ ಘೋಷಣೆ!]
ಆಂಜನೇಯ ಹೇಳಿದ್ದಿಷ್ಟು : ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರು, 'ಪರಮೇಶ್ವರ ಅವರನ್ನು ಡಿಸಿಎಂ ಮಾಡುವುದು ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಈ ಬಗ್ಗೆ ಶಾಸಕಾಂಗ ಸಭೆಯಲ್ಲಿ ಚರ್ಚೆ ಮಾಡೋಣ. ಸೂಕ್ತ ಸಮಯದಲ್ಲಿ ಅವರಿಗೆ ಸ್ಥಾನ ಮಾನ ದೊರೆಯುತ್ತದೆ' ಎಂದು ರಾಜಶೇಖರನ್ ಅವರ ಮಾತಿಗೆ ತಿರುಗೇಟು ಕೊಟ್ಟರು.












Click it and Unblock the Notifications