Siddaramaiah: ಸಿದ್ದರಾಮಯ್ಯ ಕೊರಳಿಗೆ ಮುಡಾ ಸಂಕಷ್ಟ: ಸಿಎಂ ಸೇರಿದಂತೆ ನಾಲ್ವರ ವಿರುದ್ಧ ತನಿಖೆ ಆರಂಭ
ಬೆಂಗಳೂರು, ಅಕ್ಟೋಬರ್ 01: 40 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಯಾವುದು ಕಪ್ಪು ಚುಕ್ಕೆ ಇಲ್ಲದಂತೆ ರಾಜಕೀಯ ಮಾಡಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊರಳಿಗೆ ಮುಡಾ ಹಗರಣವೇ ದೊಡ್ಡ ಕಂಟಕವಾಗಿದೆ.
ಮುಡಾ ಹಗರಣ ಸಂಬಂಧ ಒಂದೆಡೆ ಮೈಸೂರು ಲೋಕಾಯಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ನಾಲ್ವರು ಆರೋಪಿಗಳ ವಿರುದ್ಧ ಇಲ್ಲಿನ ಲೋಕಾಯುಕ್ತ ಪೊಲೀಸರು ತನಿಖೆ ಆರಂಭಿಸಿದ್ದು, ಪೂರಕ ದಾಖಲೆಗಳ ಸಂಗ್ರಹ ಶುರು ಮಾಡಿದ್ದಾರೆ.

ಮುಡಾ ಹಗರಣ ಸಂಬಂಧ ತನಿಖಾ ತಂಡಗಳ ನೇತೃತ್ವ ವಹಿಸಿರುವ ಮೈಸೂರು ಡಿವೈಎಸ್‌ಪಿ ಎಸ್.ಕೆ. ಮಾಲತೇಶ್, ಚಾಮರಾಜನಗರ ಡಿವೈಎಸ್‌ಪಿ ಮ್ಯಾಥು ಥಾಮಸ್, ಇನ್‌ಸ್ಪೆಕ್ಟರ್‌ಗಳಾದ ರವಿಕುಮಾರ್ ಹಾಗೂ ಲೋಕೇಶ್‌ಕುಮಾರ್ ಜೊತೆ ಮೈಸೂರು ಲೋಕಾಯುಕ್ತ ಎಸ್.ಪಿ. ಟಿ.ಜೆ. ಉದೇಶ್ ಸೋಮವಾರ ಬೆಳಿಗ್ಗೆ ತಮ್ಮ ಕಚೇರಿಯಲ್ಲಿ ಸಭೆ ನಡೆಸಿದರು. ಬಳಿಕ ಈ ಐವರ ತಂಡವು ಬೆಂಗಳೂರಿಗೆ ತೆರಳಿ, ಲೋಕಾಯುಕ್ತ ಎಡಿಜಿಪಿ ಮನೀಶ್ ಕರ್ಬೇಕರ್ ಅವರನ್ನು ಭೇಟಿ ಮಾಡಿ ಪ್ರಕರಣದ ಸದ್ಯದ ಬೆಳವಣಿಗೆಗಳ ಕುರಿತು ವಿವರಣೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರು 14 ನಿವೇಶನಗಳನ್ನ ವಾಪಸ್ ನೀಡುವುದಾಗಿ ಪತ್ರ ಬರೆದಿದ್ದು, ಸದ್ಯ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇತ್ತ ತನಿಖೆ ಪೂರ್ಣಗೊಳಿಸಲು 85 ದಿನಗಳಷ್ಟೇ ಉಳಿದಿವೆ. ಮೊದಲ ಹಂತದಲ್ಲಿ ಮುಡಾ ಆಯುಕ್ತರು, ಹಿಂದಿನ ಆಯುಕ್ತರಿಗೆ ನೋಟಿಸ್ ನೀಡಲಿದ್ದು, ಮೂಲ ದಾಖಲೆ ಗಳನ್ನು ಪರಿಶೀಲಿಸಲಿದ್ದಾರೆ. ನಂತರ ದಲ್ಲಿ ದೂರಿನಲ್ಲಿ ಉಲ್ಲೇಖಗೊಂಡಿರುವವರನ್ನು ವಿಚಾರಣೆಗೆ ಕರೆಯುವ ಸಾಧ್ಯತೆ ಹೆಚ್ಚಾಗಿದೆ.
ಮುಡಾ ಹಗರಣದ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಯಾವಾಗ ವಿಚಾರಣೆಗೆ ಕರೆಯಬೇಕು? ತಾವೇ ತನಿಖೆ ನಡೆಸಬೇಕೆ ಅಥವಾ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ವಿಚಾರಣೆ ನಡೆಸಬೇಕೆ ಎಂಬ ಕುರಿತು ಚಿಂತನೆಯೂ ನಡೆದಿದೆ.
ಮತ್ತೊಂದು ಮನವಿಯಲ್ಲಿ ಏನಿದೆ?
ದೂರುದಾರ ಸ್ನೇಹಮಯಿ ಕೃಷ್ಣ ತನಿಖೆಗೆ ಪೂರಕವಾಗಿ ಲೋಕಾಯುಕ್ತ ಎಸ್.ಪಿ. ಕಚೇರಿಗೆ ಸೋಮವಾರ ಮನವಿ ಪತ್ರ ಸಲ್ಲಿಸಿದರು. ಆರೋಪಿಗಳ ಲೋಪಗಳನ್ನು ಅವರು ಉಲ್ಲೇಖಿಸಿದ್ದಾರೆ. ಯಾರನ್ನು ಸಾಕ್ಷಿಗಳನ್ನಾಗಿ ಪರಿಗಣಿಸಬಹುದು ಎಂದು ಸಲಹೆಯನ್ನೂ ನೀಡಿದ್ದಾರೆ. ಮುಡಾದಲ್ಲಿ 2015ರಿಂದ ಈವವರೆಗೆ ₹5ಸಾವಿರ ಕೋಟಿ ಮೊತ್ತದ ಅಕ್ರಮ ನಡೆದಿದ್ದು, ಎಲ್ಲವನ್ನೂ ತನಿಖೆಗೆ ಒಳಪಡಿಸಬೇಕು. 50:50 ಅನುಪಾತದಲ್ಲಿ ಹಂಚಿಕೆಯಾಗಿರುವ ಎಲ್ಲ ನಿವೇಶನಗಳ ನೈಜತೆ ಪರಿಶೀಲಿಸಬೇಕು ಎಂದು ಕೋರಿದ್ದಾರೆ.
ಇ.ಡಿಗೆ ಲಿಖಿತವಾಗಿಯೂ ದೂರು
ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸೋಮವಾರ ಜಾರಿ ನಿರ್ದೇಶನಾಲಯದ(ಇಡಿ)ಬೆಂಗಳೂರು ವಿಭಾಗದ ಜಂಟಿ ಆಯುಕ್ತರಿಗೆ ಲಿಖಿತವಾಗಿ ದೂರು ಸಲ್ಲಿಸಿದ್ದಾರೆ. ಸೆಪ್ಟೆಂಬರ್ 27ರಂದು ಅವರು ಇ-ಮೇಲ್ ಹಾಗೂ ಅಂಚೆ ಮೂಲಕ ದೂರು ನೀಡಿದ್ದು, ಸೋಮವಾರ ಮತ್ತೊಮ್ಮೆ ದೂರು ಸಲ್ಲಿಸಿದ್ದಾರೆ.












Click it and Unblock the Notifications