MUDA Case: ಮುಡಾದ 14 ಸೈಟ್ ವಾಪಸ್ ಪಡೆಯುತ್ತೇವೆ ಎಂದ ಯತೀಂದ್ರ ಸಿದ್ದರಾಮಯ್ಯ!
ಕಳೆದ ಒಂದು ವರ್ಷದಿಂದಲೂ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದ್ದ 14 ಸೈಟುಗಳ ಪ್ರಕರಣದ ಇದೀಗ ಹೊಸ ತಿರುವುಪಡೆದುಕೊಂಡಿದೆ. ಇದೀಗ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಮುಡಾಗೆ ವಾಪಸ್ ಕೊಟ್ಟಿರುವ 14 ಸೈಟುಗಳನ್ನು ವಾಪಸ್ ಪಡೆಯುವ ಬಗ್ಗೆ ಮಾತನಾಡಿದ್ದಾರೆ. ಇದು ಭಾರೀ ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ. ರಾಜಕೀಯ ಒತ್ತಡಕ್ಕೆ ಮಣಿದು 14 ಸೈಟುಗಳನ್ನು ಹಿಂದಿರುಗಿಸಲಾಗಿತ್ತು. ಇದೀಗ 14 ಸೈಟುಗಳನ್ನು ಮರಳಿ ಪಡೆಯುವ ಬಗ್ಗೆ ಯತೀಂದ್ರ ಅವರು ಮಾತನಾಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ಮುಡಾ / ಮೈಸೂರು ಅಭಿವೃದ್ಧಿ ಪ್ರಾಧಿಕಾರದಿಂದ 14 ಸೈಟುಗಳನ್ನು ಬದಲಿ ನಿವೇಶನವಾಗಿ ಪಡೆದಿದ್ದ ಸಿದ್ದರಾಮಯ್ಯ ಅವರ ಕುಟುಂಬದ ವಿಚಾರವು ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಬೇಕು ಎನ್ನುವ ಹಂತಕ್ಕೆ ಹೋಗಿತ್ತು. ಅಲ್ಲದೆ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಇದೀಗ ವಿಚಾರವು ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಮುಡಾ ನಿವೇಶನ ಪ್ರಕರಣದ ತನಿಖಾ ಮುಗಿದ ಮೇಲೆ ನಾವು ಕೋರ್ಟ್ ಮೂಲಕವೇ 14 ಸೈಟ್‌ಗಳನ್ನು ಹಿಂಪಡೆಯುವ ಬಗ್ಗೆ ನಮ್ಮ ತಾಯಿ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ಇ.ಡಿ. ನೋಟಿಸ್ ಬಂದ ಮೇಲೆ ನಮ್ಮ ತಾಯಿ ಅವರು ಮಾನಸಿಕವಾಗಿ ನೋವು ಅನುಭವಿಸಿದ್ದರು. ಇದೀಗ ಹೈಕೋರ್ಟ್ ಇಸಿಆರ್ ರದ್ದು ಮಾಡಿದೆ. ಅಲ್ಲದೆ ವಿಚಾರಣೆಗೆ ಹಾಜರಾಗಲು ನೀಡಿದ್ದ ಸಮನ್ಸ್ ಅನ್ನು ಸಹ ವಜಾ ಮಾಡಿ, ಈ ಸಂಬಂಧ ತೀರ್ಪು ನೀಡಿರುವುದು ಸಮಾಧಾನ ತಂದಿದೆ ಎಂದು ಅವರು ಹೇಳಿದ್ದಾರೆ. ನಮ್ಮ ತಂದೆಯನ್ನು ( ಮುಖ್ಯಮಂತ್ರಿ ಸಿದ್ದರಾಮಯ್ಯ) ಈ ಪ್ರಕರಣದಲ್ಲಿ ವಿನಾಕಾರಣ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದರು. ಹೀಗಾಗಿ ನಾವು 14 ಸೈಟ್ ಗಳನ್ನು ವಾಪಸ್ಸು ಕೊಟ್ಟಿದ್ದೆವು. ನ್ಯಾಯಯುತವಾಗಿ ನಮಗೆ ಆ ಸೈಟ್‌ಗಳು ಬರಬೇಕು ಎಂದು ಅವರು ಹೇಳಿದ್ದಾರೆ.
ಆಗ ನಮಗೆ ಸೈಟ್ ವಾಪಸ್ಸು ಕೊಡಬೇಕು ಎನ್ನುವಂತಹ ವಾತಾವರಣ ನಿರ್ಮಾಣ ಮಾಡಲಾಗಿತ್ತು. ವಿನಾಕಾರಣ ಮಾಡುತ್ತಿದ್ದ ಟೀಕೆಯನ್ನು ನಿಲ್ಲಿಸುವ ಅವಶ್ಯಕತೆ ಇತ್ತು. ಇದೀಗ ನಮ್ಮ ತಪ್ಪಿಲ್ಲ ಎನ್ನುವ ತನಿಖಾ ವರದಿ ಬಂದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸೈಟ್ ಹಿಂಪಡೆಯುವ ಬಗ್ಗೆ ತೀರ್ಮಾನ ತೆಗದುಕೊಳ್ಳಲಾಗುವುದು. ನಮ್ಮ ತಾಯಿ ಅವರು ಈ ವಿಚಾರವಾಗಿ ತೀರ್ಮಾನಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಸೈಟು ವಾಪಸ್ ಪಡೆಯುವ ಬಗ್ಗೆ ವ್ಯಂಗ್ಯವಾಡಿದ ಆರ್. ಅಶೋಕ್
ಇನ್ನು ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅರಿಗೆ ನನ್ನದೊಂದು ಸವಾಲು. ಜಾರಿ ನಿರ್ದೇಶನಾಲಯ (ಇ.ಡಿ.) ಬಂಧನದಿಂದ ತಪ್ಪಿಸಿಕೊಳ್ಳಲು ಮುಡಾದಿಂದ ಅಕ್ರಮವಾಗಿ ಪಡೆದ 14 ಸೈಟುಗಳನ್ನು ವಾಪಸ್ಸು ಕೊಟ್ಟಿದ್ದ ಸಿಎಂ ಸಿದ್ದರಾಮಯ್ಯ ಕುಟುಂಬ, ಈಗ ಸೈಟುಗಳನ್ನು ವಾಪಸ್ಸು ಪಡೆಯುವ ಮಾತಾಡುತ್ತಿದೆ.
ಮುಖ್ಯಮಂತ್ರಿಗಳೇ, ನಿಮಗೆ ನನ್ನದೊಂದು ಸವಾಲು. ನಿಮ್ಮ ಪುತ್ರ, ವಿಧಾನ ಪರಿಷತ್ ಸದಸ್ಯರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಮುಡಾದಿಂದ 14 ಸೈಟುಗಳನ್ನು ವಾಪಸ್ಸು ಪಡೆಯುತ್ತೇವೆ. ಅದು ನಮಗೇ ಸೇರಬೇಕು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ನೀವು 16 ಬಜೆಟ್ ಅಲ್ಲ, 19 ಬಜೆಟ್ ಮಂಡಿಸುತ್ತೀರಿ ಎಂದೂ ಕೂಡ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯನವರು ನಿಜವಾಗಿಯೂ ಸತ್ಯವಂತರಾಗಿದ್ದಾರೆ, ಪ್ರಾಮಾಣಿಕರಾಗಿದ್ದರೆ, ಸ್ಟ್ರಾಂಗ್ ಮುಖ್ಯಮಂತ್ರಿ ಆಗಿದ್ದರೆ, ಮುಂದಿನ ಬಜೆಟ್ ಮಂಡಿಸುವ ಮುನ್ನ ಮುಡಾಗೆ ಹಿಂದಿರುಗಿಸಿರುವ ಸೈಟುಗಳನ್ನು ವಾಪಸ್ಸು ಪಡೆಯಲಿ. ಇದು ನನ್ನ ಸವಾಲು. ಇದಕ್ಕೆ ಸಿದ್ದರಾಮಯ್ಯನವರು ಒಪ್ಪುತ್ತರಾ ಎಂದು ಅವರು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications