'Highways: ದಶಕಗಳಿಂದಲೂ ಅಭಿವೃದ್ಧಿ ಕಾಣದ ಲಕ್ಷ್ಮೇಶ್ವರ-ಗದಗ ರಾಜ್ಯ ಹೆದ್ದಾರಿ ದುರಸ್ತಿಗೆ ಹಣ ನೀಡಿ'
ಗದಗ: ಉತ್ತರ ಕರ್ನಾಟಕ ಭಾಗವನ್ನು ನಿರ್ಲಕ್ಷಿಸಲಾಗುತ್ತಿದೆ. ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಈ ಭಾಗದಲ್ಲಿ ನಿರೀಕ್ಷಿತ ಅಭಿವೃದ್ಧಿಗಳು ವರ್ಷಗಳಿಂದಲೂ ಆಗುತ್ತಿಲ್ಲ ಎಂಬ ಮಾತಿದೆ. ಇದಕ್ಕೆ ಸಾಕ್ಷಿ ಎಂಬಂತಿದೆ ಲಕ್ಷ್ಮೇಶ್ವರ-ಗದಗ ರಸ್ತೆ. ಹಿರಿಯ ರಾಜಕಾರಣಿಗಳು ಈ ಭಾಗದಲ್ಲಿದ್ದರೂ ಸಹಿತ ದಶಕಗಳಿಂದಲೂ ಈ ರಸ್ತೆ ಪ್ಯಾಚ್ ವರ್ಕ್ ಕಾಣುತ್ತಿದೆ ಹೊರತು ಪರಿಪೂರ್ಣ ಅಭಿವೃದ್ಧಿ ಕಂಡಿಲ್ಲ. ಇದೀಗ ಈ ರಸ್ತೆ ಅಭಿವೃದ್ಧಿಗೆ ರಾಜ್ಯ ಸಚಿವರಿಗೆ ಸಂಸದರ ಪತ್ರ ಮುಖೇನ ಒತ್ತಾಯಿಸಿದ್ದಾರೆ.
ಕಾರವಾರ ಇಳಕಲ್ ರಾಜ್ಯ ಹೆದ್ದಾರಿಯ (State Highway) ಲಕ್ಷ್ಮೇಶ್ವರ-ಗದಗ 221.50 ಕಿಲೋ ಮೀಟರ್ ಉದ್ದದ 227.50 ಕಿಲೋ ಮೀಟರ್ ವರೆಗೆ ಸಂಪೂರ್ಣ ಹಾಳಾಗಿದೆ. ಈ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ 9.50 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡುವಂತೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಪತ್ರ ಬುಧವಾರ ಬರೆದು ಒತ್ತಾಯಿಸಿದ್ದಾರೆ.

ಗದಗ ಜಿಲ್ಲೆಯ ಕಾರವಾರ-ಇಳಕಲ್ ರಾಜ್ಯ ಹೆದ್ದಾರಿ ಲೋಕೋಪಯೋಗಿ ಇಲಾಖೆಯ ಮುಖ್ಯ ರಸ್ತೆಯಾಗಿದೆ. ಈ ರಸ್ತೆಯು ಸಂಪೂರ್ಣ ಹಾಳಾಗಿದೆ. ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಅತ್ಯಂತ ತೊಂದರೆಯಾಗಿದೆ. ಈ ರಸ್ತೆ ಸುಧಾರಣೆಗೆ 9.80 ಕೋಟಿ ರೂ. ಅನುದಾನ ನೀಡಬೇಕು. ಹಣದಲ್ಲಿ ರಸ್ತೆ ಅಭಿವೃದ್ಧಿಗೊಳಿಸಲು ಅವರು ಕೋರಿದ್ದಾರೆ.
40 ವರ್ಷಗಳಿಂದ ಅಭಿವೃದ್ಧಿ ಕಂಡಿಲ್ಲ
ಸಂಸದರು ನೀಡಿರುವ ಮಾಹಿತಿ ಪ್ರಕಾರ, ಕಾರವಾರ-ಇಳಕಲ್ ರಾಜ್ಯ ಹೆದ್ದಾರಿ ಸಂಪೂರ್ಣವಾಗಿ ಹಾಳಾಗಿದೆ. ಅಲ್ಲಲ್ಲಿ ರಸ್ತೆಗುಂಡಿ, ಹಂಪ್‌ಗಳು ಇಲ್ಲ, ಸಂಚಾರ ಸಿಗ್ನಲ್ ಫಲಕಗಳು ಕಾಣೆಯಾಗಿವೆ. ಈ ಹೆದ್ದಾರಿ ಪೈಕಿ ಗದಗ-ಲಕ್ಷೇಶ್ವರ 40 ಕಿಲೋ ಮೀಟರ್ ಉದ್ದದ ರಸ್ತೆಯಂತೂ ಹೇಳತೀರದಂತೆ ಹಾಳಾಗಿದೆ. ಸ್ಥಳೀಯರ ಪ್ರಕಾರ, ಸುಮಾರು 40 ವರ್ಷಗಳಿಂದಲೂ ಪೂರ್ಣವಾಗಿ ರಸ್ತೆ ಅಭಿವೃದ್ಧಿಯೇ ಆಗಿಲ್ಲ. ಬರೀ ದೊಡ್ಡ ದೊಡ್ಡ ರಸ್ತೆ ಗುಂಡಿ ಮುಚ್ಚುವುದು, ಪ್ಯಾಚ್ ಮಾಡುತ್ತಲೇ ಬಂದಿದ್ದಾರೆ.
ಅಭಿವೃದ್ಧಿ ಇಚ್ಛಾಶಕ್ತಿ ಇಲ್ಲದ ನಾಯಕರಿಂದ ರಸ್ತೆ ನಿರ್ಲಕ್ಷ್ಯ
ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಈ ಗದಗ-ಲಕ್ಷೇಶ್ವರ ರಸ್ತೆ ಬರುತ್ತದೆ. ಮುಖ್ಯವಾಗಿ ಈ ರಸ್ತೆ ಎರಡು ವಿಧಾನಸಭಾ ಕ್ಷೇತ್ರಗಳ ಗಡಿಗೆ ಹೊಂದಿಕೊಂಡಿದೆ. ಈ ಕಾರಣಕ್ಕೆ ಏನೋ ದಶಕಗಳಿಂದ ಇಲ್ಲಿನ ರಸ್ತೆ ಮೂಲಸೌಕರ್ಯ ಅಭಿವೃದ್ಧಿ ಮರಿಚಿಕೆ ಆಗಿದೆ. ಗದಗ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ನಿರಂತರವಾಗಿ ಆರಿಸಿ ಬರುವ ಹಿರಿಯ ರಾಜಕಾರಣಿ ಎಚ್.ಕೆ.ಪಾಟೀಲ್ ಹಾಗೂ ಶಿರಹಟ್ಟಿ ಕ್ಷೇತ್ರದ ಪ್ರತಿನಿಧ ಚಂದ್ರು ಲಮಾಣಿ ಅವರು ಈ ರಾಜ್ಯ ಹೆದ್ದಾರಿ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ.
ರಾಜಕೀಯ ಕಾರಣಗಳು ಹಾಗೂ ಇಲ್ಲಿನ ರಾಜಕೀಯ ನಾಯಕರಲ್ಲಿನ ಇಚ್ಛಾಶಕ್ತಿ ಕೊರತೆಯಿಂದಾಗಿ ಈ 40 ಕಿಲೋ ಮೀಟರ್ ರಸ್ತೆ ದಶಕಗಳಿಂದಲೂ ಅಭಿವೃದ್ಧಿ ಕಂಡಿಲ್ಲ. ಇದರಿಂದ ದೊಡ್ಡ ದೊಡ್ಡ ತಗ್ಗುಗಳನ್ನು ಪ್ರತಿ ವರ್ಷ ಮುಚ್ಚಿ ಪ್ಯಾಚ್ ವರ್ಕ್ ಮಾಡಲಾಗುತ್ತಿದೆ. ಇದರಿಂದ ರೋಸಿ ಹೋಗಿರುವ ಸ್ಥಳೀಯರು ಇಲ್ಲಿನ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ರಸ್ತೆ ಹಾಳಾಗಿದ್ದರಿಂದ ಬೇಸಿಗೆಯಲ್ಲಿ ಧೂಳು ಏಳುತ್ತದೆ. ಮಳೆಗಾಲದಲ್ಲಿ ದೊಡ್ಡ ದೊಡ್ಡ ತಗ್ಗುಗಳಲ್ಲಿ ನೀರು ನಿಂತು ಸಮಸ್ಯೆ ಉಂಟಾಗುತ್ತದೆ. ಇದಕ್ಕೆ ಕೊನೆ ಯಾವಾಗ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಇಂತಹ ಸಮಸ್ಯೆ ಗದಗ-ಲಕ್ಷ್ಮೇಶ್ವರಕ್ಕೆ ಸೀಮಿತವಾಗದೇ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳ ಕೆಲ ರಾಜ್ಯ ಹೆದ್ದಾರಿಗಳು, ಗ್ರಾಮಗಳ ರಸ್ತೆಗಳ ಸ್ಥಿತಿ ಇದೇ ರೀತಿ ಇದೆ. ಚುನಾವಣೆ ವೇಳೆ ಮನೆಬಾಗಿಲಿಗೆ ಬರುವ ಇಲ್ಲಿನ ಜನನಾಯಕರು ಜನರ ಸಂಚಾರ ಸಮಸ್ಯೆ ಆಲಿಸಬೇಕಿದೆ.












Click it and Unblock the Notifications