ಇವರಿಂದಲೇ ಬಿಜೆಪಿ ಮತ್ತೆ ಅಧಿಕಾರಕ್ಕೆ: ಭವಿಷ್ಯ ನುಡಿದ ರೇಣುಕಾಚಾರ್ಯ
ಒಂದೆಡೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉರುಳುತ್ತಾ? ಎನ್ನುವ ಚರ್ಚೆಗಳು ಜೋರಾಗಿದ್ದರೆ ಮತ್ತೊಂದೆಡೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸದಲ್ಲಿದೆ. ಈ ಬಗ್ಗೆ ಮಾತನಾಡಿರುವ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣಕಾಚಾರ್ಯ, ಬಿಜೆಪಿ ಮತ್ತೆ ಅಧಿಕಾರಕ್ಕೇರಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ನಿನ್ನೆ ಬಸನಗೌಡ ಪಾಟೀಲ್ ಯತ್ನಾಳ್ ಅವರು ನಡೆಸಿದ್ದ ಗೌಪ್ಯ ಸಭೆಗೆ ಪ್ರತಿಯಾಗಿ ರೇಣುಕಾಚಾರ್ಯ ಹಾಗೂ ಇತರರು ಇಂದು ಬೇರೊಂದು ಸಭೆ ನಡೆಸಿ ಟಕ್ಕರ್ ಕೊಟ್ಟಿದ್ದಾರೆ. ಈ ಸಭೆ ಬಳಿಕ ಮಾತನಾಡಿರುವ ರೇಣುಕಾಚಾರ್ಯ, ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಬಿಎಸ್‌ವೈ ಪುತ್ರ ಬಿ.ವೈ.ವಿಜಯೇಂದ್ರ ಅವರ ಬ್ಯಾಟಿಂಗ್ ಕೂಡ ಮಾಡಿದ್ದಾರೆ.

' ವಿಜಯೇಂದ್ರ ಅವರು ಮಾಡಿರುವ ತಪ್ಪೇನು? ಬಿಜೆಪಿ ಹಮ್ಮಿಕೊಂಡಿದ್ದ ಮುಡಾ ಪಾದಯಾತ್ರೆ ಸಕ್ಸಸ್ ಆಗಿದೆ. ಈ ಪಾದಯಾತ್ರೆ ಫೇಲ್ ಆಗಬೇಕು ಎಂದು ಹಲವರು ನಿರೀಕ್ಷಿಸಿದ್ದರು. ಆದರೆ ನಮ್ಮ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ನಾವೆಲ್ಲರೂ ಒಗ್ಗಟ್ಟಿನಿಂದ ನಡೆಯಬೇಕು. ಆಂತರಿಕವಾಗಿ ಏನೇ ಇದ್ದರೂ ಅದನ್ನು ನಾಲ್ಕು ಗೋಡೆಗಳ ಮಧ್ಯೆ ಮಾತನಾಡಬೇಕು' ಎಂದು ಬುದ್ಧಿವಾದ ಹೇಳಿದ್ದಾರೆ.
ವಿಜಯೇಂದ್ರ ಅವರು ರಾಜ್ಯ ಬಿಜೆಪಿಗೆ ಅಧ್ಯಕ್ಷರಾದ ಮೇಲೆ ಪಕ್ಷಕ್ಕೆ ಒಂದು ರೀತಿ ಹಬ್ಬದ ಕಳೆಯೇ ಬಂದಿದೆ. ವಿಜಯೇಂದ್ರ ಅವರು ಯಾರೊಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ಹಾಗಾಗಿ ಹೆಚ್ಚು ಸ್ಥಾನಗಳನ್ನು ಜಯಿಸುವ ಗುರಿ ಇಟ್ಟುಕೊಂಡಿದ್ದಾರೆ. ಹಾಗಾಗಿ ನಾವೆಲ್ಲರೂ ವಿಜಯೇಂದ್ರ ಅವರೊಂದಿಗೆ ನಿಲ್ಲಬೇಕು ಎಂದು ಕರೆ ನೀಡಿದ್ದಾರೆ.

'ಮುಂದೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ರಾಜ್ಯದ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಹೀಗಿರುವಾಗ ನಾವು ಪಕ್ಷದಲ್ಲೇ ವಿನಾಕಾರಣ ಗೊಂದಲ ಸೃಷ್ಟಿಸಿಕೊಳ್ಳುತ್ತಿರುವುದು ಸರಿಯಲ್ಲ. ಹೈಕಮಾಂಡ್‌ನವರು ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಹೀಗಿದ್ದಾಗ ಅವರನ್ನು ವಿರೋಧ ಮಾಡುತ್ತಿರೋದೇಕೆ? ಕರ್ನಾಟಕದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದ ಬಿ.ಎಸ್.ಯಡಿಯೂರಪ್ಪನವರು. ಅವರ ಬಗ್ಗೆ ತುಚ್ಛವಾಗಿ ಮಾತನಾಡುವುದು ಸರಿಯಲ್ಲ' ಎಂದು ತಮ್ಮದೇ ಪಕ್ಷದ ನಾಯಕರಿಗೆ ಎಚ್ಚರಿಕೆ ಕೂಡ ನೀಡಿದ್ದಾರೆ.
'ವಿಜಯೇಂದ್ರ ಅವರ ಕಾರ್ಯವೈಖರಿ ನೋಡಿಯೇ ಹೈಕಮಾಂಡ್ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿದೆ. ಹಾಗಾಗಿ ಅವರ ಮೇಲೆ ಯಾಕೆ ಈ ರೀತಿ ಮಾತನಾಡುವುದು? ಯಾರೇನೇ ಮಾತನಾಡಿದರೂ ವಿಜಯೇಂದ್ರ ಅವರನ್ನು ಯಾವ ಕಾರಣಕ್ಕೂ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಮಾತೇ ಇಲ್ಲ' ಎಂದಿದ್ದಾರೆ.
'ವಿಜಯೇಂದ್ರ ಅವರೇನು ರೆಡಿಮೇಡ್ ಫುಡ್ ಅಲ್ಲ. ಅವರು ಅಧ್ಯಕ್ಷರಾದ ಮೇಲೆ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಸಂಘಟನೆ ಮಾಡ್ತಿದ್ದೇವೆ. ಅವರು ಅಧ್ಯಕ್ಷರಾದ ಮೆಲೆಯೇ ಪಕ್ಷಕ್ಕೆ ಒಂದು ರೀತಿಯಲ್ಲಿ ಬೂಸ್ಟ್ ಸಿಕ್ಕಂತಾಗಿದೆ. ಈಗ ಯಾರಾದರೂ ಅವರ ಬಗ್ಗೆ ಮಾತನಾಡಿದರೆ, ಇಷ್ಟು ದಿನ ಮಾತನಾಡಬಾರದು ಎಂದು ಸುಮ್ಮನೆ ಇದ್ದೆವು. ಆದರೆ, ಇನ್ಮುಂದೆ ಇರುವ ಮಾತೇ ಇಲ್ಲ' ಎಂದು ರೇಣುಕಾಚಾರ್ಯ ಹೇಳಿದ್ದಾರೆ.
'ಒಂದು ವೇಳೆ ಯತ್ನಾಳ್ ರಾಜ್ಯಾಧ್ಯಕ್ಷ ಆಗಿದ್ದರೆ ನಾವೆಲ್ಲರೂ ಒಪ್ಪುತ್ತಿದ್ದೆವು ಅಲ್ಲವೇ? ಈಗ ವಿಜಯೇಂದ್ರ ಅವರನ್ನು ಯಾಕೆ ಅವರು ಸಹಿಸುತ್ತಿಲ್ಲ? ಮುಂದಿನ ಚುನಾವಣೆಯನ್ನು ಬಿಜೆಪಿ ವಿಜಯೇಂದ್ರ ಅವರ ನೇತೃತ್ವಲ್ಲೇ ಎದುರಿಸಲಿದೆ. ಪಕ್ಷದ ಏಳಿಗೆಗಾಗಿ ನಾವು ಮತ್ತಷ್ಟು ಸಭೆ ಮಾಡಲಿದ್ದೇವೆ. ಸಂಘ ಪರಿವಾರ ಹಾಗೂ ಬಿಜೆಪಿ ಹೈಕಮಾಂಡ್ ಒಟ್ಟಾಗಿ ಹೋಗುವಂತೆ ಸೂಚಿಸಿದೆ. ಆದರೂ ಈ ರೀತಿ ಮಾಡುತ್ತಿರುವುದು ಸರಿಯಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications