BY Vijayendra: ಈ ಕಾರಣದಿಂದ ಬಾಣಂತಿಯರು, ಹಸುಗೂಸುಗಳ ಸಾವು: ವಿಜಯೇಂದ್ರ ಆರೋಪ

ಬೆಳಗಾವಿ,ಡಿಸೆಂಬರ್09: ಬಾಣಂತಿಯರು ಮತ್ತು ಹಸುಗೂಸುಗಳ ಸಾವಿನಲ್ಲಿ ರಾಜ್ಯ ಸರಕಾರದ ಬೇಜವಾಬ್ದಾರಿತನ‌ವೇ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆರೋಪಿಸಿದ್ದಾರೆ.

ಬೆಳಗಾವಿಯಲ್ಲಿ ಇಂದು(ಸೋಮವಾರ) ಆಸ್ಪತ್ರೆಗೆ ಭೇಟಿ ಕೊಟ್ಟ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಸತ್ಯಾಂಶ ತಿಳಿಯಲು ಇಲ್ಲಿ ಬಂದಿದ್ದೇವೆ. ಆಸ್ಪತ್ರೆ ಭೇಟಿಯಲ್ಲಿ ರಾಜಕಾರಣದ ಪ್ರಶ್ನೆ ಇಲ್ಲ; ಇವತ್ತು ಬಡವರಿಗೆ ಅನ್ಯಾಯ ಆಗುತ್ತಿದೆ. ಬಾಣಂತಿಯರು, ಹಸುಗೂಸುಗಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ಸದನದಲ್ಲಿ ಚರ್ಚಿಸುತ್ತೇವೆ ಎಂದು ತಿಳಿಸಿದರು.

Mothers And Children Have Died Due To Government Irresponsibility Says BY Vijayendra

ಉಸ್ತುವಾರಿ ಸಚಿವರು, ಆರೋಗ್ಯ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರು ಈ ಸಾವುಗಳ ಕುರಿತು ತಲೆ ಕೆಡಿಸಿಕೊಂಡಿಲ್ಲ; ಈ ಬೇಜವಾಬ್ದಾರಿತನ ಏನಿದೆಯೋ ಅದನ್ನು ಸರಕಾರ ಈಗಲಾದರೂ ಎಚ್ಚತ್ತು ಗಮನಿಸಬೇಕು ಎಂಬ ದೃಷ್ಟಿಯಿಂದ ಇದರ ಕುರಿತು ಗಮನ ಸೆಳೆಯುತ್ತೇವೆ ಎಂದು ತಿಳಿಸಿದರು.

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವುಗಳ ಬೆನ್ನಲ್ಲೇ ಇದೀಗ ಬೆಳಗಾವಿ ಜಿಲ್ಲೆಯಲ್ಲಿ ಕಳೆದ 6 ತಿಂಗಳಲ್ಲೇ 29 ಬಾಣಂತಿಯರು ಹಾಗೂ 1 ವರ್ಷದಲ್ಲಿ 322 ನವಜಾತ ಶಿಶುಗಳು ಮೃತಪಟ್ಟಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿರುವುದು ದುಃಖ ತರಿಸಿದೆ. ಈ ಹಿಂದಿನ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ದೇಶಕ್ಕೆ ಮಾದರಿಯಾಗಿದ್ದ ಆರೋಗ್ಯ ಇಲಾಖೆಯನ್ನು ಸಂಪೂರ್ಣ ಕಡೆಗಣಿಸಿರುವ ಕಾಂಗ್ರೆಸ್‌ ಸರ್ಕಾರದ ಬೇಜವಾಬ್ದಾರಿ ದುರಾಡಳಿತದಲ್ಲಿ ಇಲಾಖೆಯ ಅಕ್ರಮ, ಭ್ರಷ್ಟಾಚಾರಗಳು ಲೋಕಾಯುಕ್ತ ದಾಳಿಯಿಂದ ಬಯಲಾಗುತ್ತಿವೆ.

ನಿರಂತರವಾಗಿ ಬಡಕುಟುಂಬಗಳ ತಾಯಂದಿರು ಹಾಗೂ ಹಸುಗೂಸುಗಳ ಸಾವು ನೋವುಗಳಾಗುತ್ತಿದ್ದರೂ, ಸಾರ್ವಜನಿಕರು ಬಿದಿಗಿಳಿದು ಪ್ರತಿಭಟನೆ ನಡೆಸಿದರೂ ಎಚ್ಚೆತ್ತುಕೊಂಡು ಘಟನೆಯ ಕುರಿತು ಕಠಿಣ ಕ್ರಮ ಕೈಗೊಳ್ಳಲು ತಾತ್ಸಾರ ಧೋರಣೆ ತಾಳಿರುವ ಕಾಂಗ್ರೆಸ್ ಸರ್ಕಾರಕ್ಕೆ ಜನಸಾಮಾನ್ಯರು, ಬಡವರು ತಕ್ಕಪಾಠ ಕಲಿಸಲೇ ಬೇಕಿದೆ ಎಂದು ಹೇಳಿದರು.

ರಾಜ್ಯದಲ್ಲಿರುವ ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ಉತ್ತರ ಕರ್ನಾಟಕದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಅಭಿವೃದ್ಧಿ ಶೂನ್ಯ ಸರಕಾರ ರಾಜ್ಯದಲ್ಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ವಿಪಕ್ಷ ನಾಯಕರ ಜೊತೆ ಈ ಕುರಿತಂತೆ ಚರ್ಚಿಸಿದ್ದೇವೆ. ಒಂದು ಕಡೆ ಸರಕಾರದ ಹಗರಣಗಳು, ಮತ್ತೊಂದು ಕಡೆ ಅಭಿವೃದ್ಧಿಯೇ ಇಲ್ಲದ ಸ್ಥಿತಿ ಇದೆ. ಆಡಳಿತ ಪಕ್ಷದ ಶಾಸಕರೇ ಈ ಶಾಸಕರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮೇಲಿನ ವಿಚಾರಗಳ ಜೊತೆ ಉತ್ತರ ಕರ್ನಾಟಕದ ಅಭಿವೃದ್ಧಿಯೇ ಇಲ್ಲದ ಕುರಿತು ಇಂದಿನ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ ಎಂದು ಪ್ರಕಟಿಸಿದರು. ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆಗೂ ಅವಕಾಶ ಇಲ್ಲವಾಗಿದೆ ಎಂದು ಬಿ ವೈ ವಿಜಯೇಂದ್ರ ಅವರು ಆಕ್ಷೇಪಿಸಿದರು.

ಆಸ್ಪತ್ರೆಗಳು ಶವಾಗಾರವಾಗುವ ಪರಿಸ್ಥಿತಿ: ಛಲವಾದಿ

ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಬಾಣಂತಿಯರು ಮತ್ತು ಹಸುಗೂಸುಗಳ ಸಾವಿನ ವಿಷಯದಲ್ಲಿ ರಾಜ್ಯಾದ್ಯಂತ ಗೊಂದಲದ ವಾತಾವರಣ ಇದೆ. ಆಸ್ಪತ್ರೆಗಳು ಶವಾಗಾರವಾಗುವ ಪರಿಸ್ಥಿತಿಯನ್ನು ನಾವು ನೋಡುತ್ತಿದ್ದೇವೆ ಎಂದು ತಿಳಿಸಿದರು.

ಕಾಂಗ್ರೆಸ್ ಸರಕಾರವೇ ಇಂಥ ಪರಿಸ್ಥಿತಿಗೆ ಕಾರಣ ಎಂದು ಟೀಕಿಸಿದರು. ಕಾಂಗ್ರೆಸ್ಸಿಗರು ಭ್ರಷ್ಟಾಚಾರ ಮಾಡುವ ಕಡೆ ಗಮನ ಕೊಡುತ್ತಿದ್ದು, ಆಸ್ಪತ್ರೆಗಳ ಮೇಲೆ ನಿಯಂತ್ರಣ ಇಲ್ಲವಾಗಿದೆ. ಔಷಧಿ ಕೊಂಡುಕೊಳ್ಳುವಾಗ ಬ್ಲಾಕ್ ಮಾಡಿದ ಕಳಪೆ ಔಷಧಿಗಳನ್ನು ಖರೀದಿಸಿ ಬಳಸಿದ್ದರಿಂದ ಅನೇಕ ಕಡೆ ಇಂಥ ದಾರುಣ ಘಟನೆಗಳು ನಡೆದಿವೆ ಎಂದು ತಿಳಿಸಿದರು.

ಇದೇ ಕಾರಣಕ್ಕೆ ರಾಜ್ಯಾಧ್ಯಕ್ಷ ವಿಜಯೇಂದ್ರ, ಡಾ.ಅಶ್ವತ್ಥನಾರಾಯಣ್, ಶಶಿಕಲಾ ಜೊಲ್ಲೆ, ಹೇಮಲತಾ ನಾಯಕ್ ಸೇರಿ ನಾವೆಲ್ಲ ಇಲ್ಲಿಗೆ ಭೇಟಿ ಕೊಟ್ಟಿದ್ದೇವೆ. ವಸ್ತುಸ್ಥಿತಿಯನ್ನು ವೈದ್ಯರಿಂದ ತಿಳಿದುಕೊಳ್ಳುತ್ತೇವೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+