ಕೌಟುಂಬಿಕ ಕಲಹ, ಮಗುವಿನೊಂದಿಗೆ ತಾಯಿ ನೇಣಿಗೆ ಶರಣು
ಮಂಡ್ಯ,ಅಕ್ಟೋಬರ್, 08 : ಗಂಡನ ಕಿರುಕುಳದಿಂದ ಬೇಸತ್ತ ಮಹಿಳೆ ತನ್ನ ಐದು ವರ್ಷದ ಮಗುವಿನೊಂದಿಗೆ ನೇಣಿಗೆ ಶರಣಾದ ಅಮಾನವೀಯ ಘಟನೆ ನಗರದ ಜೈನರ ಬೀದಿಯಲ್ಲಿ ಗುರುವಾರ ಮುಂಜಾನೆ ನಡೆದಿದೆ.
ಜೈನರ ಬೀದಿಯ ನಿವಾಸಿ ಪದ್ಮೇಶ ಎಂಬುವನ ಪತ್ನಿ ರೂಪಾ (31), ಸ್ವಸ್ತಿ ಜೈನ್ (5) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಮೊದಲನೇ ಹೆಂಡತಿಯನ್ನು ತೊರೆದ ಪದ್ಮೇಶ ಆರು ವರ್ಷಗಳ ಹಿಂದೆ ಸಾಲಿಗ್ರಾಮದ ರೂಪಾಳನ್ನು ಮದುವೆ ಮಾಡಿಕೊಂಡಿದ್ದನು.[ಸಂಬಂಧಿಕರ ವಿಕೃತ ಸಂತೋಷಕ್ಕೆ ಬಲಿಯಾದ ಸಂಗೀತಾ]

ಸಣ್ಣ ಪುಟ್ಟ ವಿಚಾರಗಳಿಗೂ ಹೆಂಡತಿಯೊಂದಿಗೆ ಜಗಳ ಮಾಡುತ್ತಿದ್ದ ಪದ್ಮೇಶ ಗುರುವಾರ ಸುಮಾರು 5.30ರ ವೇಳೆಗೆ ಕಾಫಿ ಕೊಡುವಂತೆ ಕೇಳಿದ್ದಾನೆ. ಆಗ ಗಂಡನನ್ನು ಹಾಲು ತರಲು ಕಳುಹಿಸಿದ ರೂಪ ಗಂಡ ಮನೆಗೆ ಬರುವಷ್ಟರಲ್ಲಿ ಮಗುವಿನೊಂದಿಗೆ ನೇಣು ಬಿಗಿದುಕೊಂಡಿದ್ದಾಳೆ.
ಹಾಲು ತೆಗೆದುಕೊಂಡು ಬರಲು ಹೋದ ಪದ್ಮೇಶ ಮನೆಗೆ ಕೊಂಚ ತಡವಾಗಿ ಬಂದು ಬಾಗಿಲು ತೆಗೆಯಲು ನೋಡಿದ್ದಾನೆ. ಆಗ ರೂಪಾ ಒಳಗಿನಿಂದ ಲಾಕ್ ಹಾಕಿಕೊಂಡಿರುವುದು ಗೊತ್ತಾಗಿದೆ.
ಅನುಮಾನ ಬಂದ ಪದ್ಮೇಶ ಮನೆಯ ಹಿಂದೆ ತೆರಳಿ ಕಿಟಕಿಯಿಂದ ನೋಡಿದಾಗ ರೂಪ ಮತ್ತು ಆಕೆಯ ಮಗಳು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಸಾವಿನ ವಿಚಾರ ತಿಳಿದ ನಗರದ ಪೂರ್ವ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಶವವನ್ನು ಮಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ.












Click it and Unblock the Notifications