ಶಕ್ತಿದೇವತೆಯ ಶಾಪ? 3 ತಿಂಗಳಲ್ಲಿ ಗ್ರಾಮದ 18 ಜನರ ಸಾವು
ಕೋಲಾರ, ನ 6: ನೆಮ್ಮದಿಯಾಗಿದ್ದ ಗ್ರಾಮದಲ್ಲಿ ಕಳೆದ ಮೂರು ತಿಂಗಳಿಂದ ಜವರಾಯನ ಅಟ್ಟಹಾಸ. ಒಬ್ಬರ ಶವಸಂಸ್ಕಾರ ಮುಗಿಯುವಷ್ಟರಲ್ಲಿ ಮತ್ತೊಂದು ಸಾವು.
ಸತ್ತವರಾರೂ ಯಾವುದೇ ರೋಗ ರುಜಿನಗಳಿಂದ ನರಳಿ ಸತ್ತವರಲ್ಲ, ಆರೋಗ್ಯವಾಗಿದ್ದು ರಾತ್ರಿ ಮಲಗಿದವರು ಬೆಳಗ್ಗೆ ಹೆಣವಾಗಿರುತ್ತಾರೆ. ಈ ಚಿತ್ರವಿಚಿತ್ರ ಘಟನೆಗೆ ಇದುವರೆಗೆ ಗ್ರಾಮದ 18 ಜನ ಸಾವನ್ನಪಿದ್ದಾರೆ.
ರಾಜ್ಯದ ಗಡಿ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಕೆ.ಪಾತೂರು ಗ್ರಾಮದಲ್ಲಿನ ಸದ್ಯದ ಪರಿಸ್ಥಿತಿ ಇದು. ಗ್ರಾಮದಲ್ಲಿ ಸುಮಾರು 150 ಕ್ಕೂ ಹೆಚ್ಚು ಮನೆಗಳಿವೆ. ಕರ್ನಾಟಕ ಹಾಗೂ ಆಂಧ್ರದ ಗಡಿ ಭಾಗದಲ್ಲಿರುವ ಕೆ ಪಾತೂರು ಗ್ರಾಮದಲ್ಲಿ ಕಳೆದ ಮೂರು ತಿಂಗಳಿಂದ ಸರಣಿ ಸಾವು ಮುಂದುವರಿಯುತ್ತಲೇ ಇದ್ದು ಜನರು ತೀವ್ರ ಆತಂಕಕ್ಕೊಳಗಾಗಿದ್ದಾರೆ.
ಅಕ್ಷರಸ: ಸ್ಮಶಾನದಂತಾಗಿರುವ ಈ ಗ್ರಾಮದಲ್ಲಿನ ಅನೇಕ ಕುಟುಂಬಗಳು ಊರಿಗೆ ಊರೇ ಖಾಲಿಯಾಗಿ ಬಿಡುತ್ತದೆನೋ ಎಂಬ ಆತಂಕದಲ್ಲಿದೆ. ಅನೇಕ ಕುಟುಂಬಗಳು ಈಗಾಗಲೇ ಮನೆಯ ಸಾಮಗ್ರಿಗಳನ್ನೆಲ್ಲಾ ತೆಗುದುಕೊಂಡು ವಲಸೆ ಹೋಗಲು ಆರಂಭಿಸಿದ್ದಾರೆ.

ಶಕ್ತಿದೇವತೆಯ ಶಾಪ : ಇದಕ್ಕೆಲ್ಲಾ ಕಾರಣ ಗ್ರಾಮದ ಶಕ್ತಿದೇವತೆ ಶಾಪ ಎನ್ನುವುದು ಗ್ರಾಮಸ್ಥರ ಅಭಿಪ್ರಾಯ. ಇದಕ್ಕೆ ಗ್ರಾಮಸ್ಥರು ನೀಡುವ ಸ್ಪಷ್ಟೀಕರಣ ಏನಂದರೆ, ಗ್ರಾಮದ ಹೊರಗಡೆ ಬೃಹತ್ ಆಲದ ಮರವೊಂದಿತ್ತು. ಅದನ್ನು ಗ್ರಾಮಸ್ಥರು ಕಡಿದು ಹಾಕಿದ್ದರು.
ಅಂದಿನಿಂದ ಗ್ರಾಮದಲ್ಲಿ ಸಾವಿನ ಸರಪಳಿ ಆರಂಭವಾಗಿದೆ. ಗ್ರಾಮದಲ್ಲಿ ಸಂಭವಿಸುತ್ತಿರುವ ಘಟನೆಗಳಿಗೆ ಶಕ್ತಿದೇವತೆಯ ಶಾಪವೇ ಕಾರಣ ಎನ್ನುವುದು ಗ್ರಾಮಸ್ಥರ ಹೇಳಿಕೆ.
ಸರಣಿ ಸಾವಿನಿಂದಾಗಿ ಆತಂಕಕ್ಕೊಳಗಾಗಿರುವ ಜನರು ಗ್ರಾಮದಲ್ಲಿ ಹಿರಿಯರ ಸಲಹೆ ಮೇರೆಗೆ ಗಂಗಮ್ಮ ದೇವಿಯ ಪೂಜೆ, ಉತ್ಸವ ಕೂಡಾ ಮಾಡಿಸಿದ್ದಾರೆ.
ದುರಂತವೆಂದರೆ ಉತ್ಸವ ಮಾಡಿದ ದಿನದಂದೇ ಗ್ರಾಮಸ್ಥನೊಬ್ಬನು ಸಾವನ್ನಪ್ಪಿದ್ದು. ಇದರಿಂದ ಗ್ರಾಮದ ಜನರಲ್ಲಿ ಮತ್ತಷ್ಟು ಆತಂಕ ಮನೆಮಾಡಿದ್ದು ಯಾರಿಗೆ ಯಾವಾಗ ಏನಾಗುತ್ತೋ ಎನ್ನುವ ಭಯದಲ್ಲಿ ಜನ ಬದುಕುತ್ತಿದ್ದಾರೆ.
ಇನ್ನೊಂದು ಸೋಜಿಗದ ಸಂಗತಿ ಏನಂದರೆ, ಸಾವಿನ ಸರಣಿ ಆರಂಭವಾದ ಮೇಲೆ ಗ್ರಾಮದಲ್ಲಿ ರಾತ್ರಿ ಇಡೀ ಒಂದು ರೀತಿಯ ವಿಚಿತ್ರ ಶಬ್ಧಗಳು ಕೇಳಿಬರುತ್ತಿದೆ. ಇದರಿಂದ ಗ್ರಾಮದ ಜನರು ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾರೆ.
ಜ್ಯೋತಿಷಿಗಳ ಸಲಹೆ ಮೇರೆಗೆ ಗ್ರಾಮ ದೇವರು, ಗ್ರಾಮದಲ್ಲಿರುವ ಶಾಸನಗಳಿಗೆ ನಿತ್ಯ ಪೂಜೆಗಳನ್ನು ಮಾಡಲಾಗುತ್ತಿದೆ. ಆದರೂ, ಗ್ರಾಮದಲ್ಲಿ ನಿಗೂಢವಾಗಿ ಜನರು ಸಾವನ್ನಪ್ಪುತ್ತಿರುವ ಘಟನೆ ಮುಂದುವರಿಯುತ್ತಲೇ ಇದೆ.
ಒಟ್ಟಿನಲ್ಲಿ ಇದು ಶಕ್ತಿದೇವತೆಯ ಶಾಪವೋ, ಸಾಂಕ್ರಾಮಿಕ ರೋಗ ಹರಡಿದಿಯೋ, ಸರಣಿ ಸಾವಿನಿಂದ ಕೆ.ಪಾತೂರು ಗ್ರಾಮಸ್ಥರ ಬದುಕು ಹೈರಾಣವಾಗಿರುವುದಂತೂ ಸತ್ಯ.












Click it and Unblock the Notifications