₹3,000 ಕೋಟಿಗೂ ಹೆಚ್ಚು ಆಸ್ತಿ ಬೇನಾಮಿ ಹೆಸರಲ್ಲಿದೆ: ಸಿ.ಟಿ.ರವಿ ವಿರುದ್ಧ ಗಂಭೀರ ಆರೋಪ
ಬೆಂಗಳೂರು, ಡಿಸೆಂಬರ್ 14: ₹3,000 ಕೋಟಿಗೂ ಹೆಚ್ಚು ಆಸ್ತಿ ಬೇನಾಮಿ ಹೆಸರಲ್ಲಿದೆ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ವಿರುದ್ಧ ಕಾಂಗ್ರೆಸ್ ಆರೋಪಿಸಿದೆ.
ಈ ವಿಚಾರವಾಗಿ ಸುದ್ದಗೋಷ್ಠಿ ನಡೆಸಿರುವ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, 'ಸಿ.ಟಿ. ರವಿ ರೌಡಿಶೀಟರ್ ಆಗಿದ್ದು, ಹಲವು ಠಾಣೆಗಳಲ್ಲಿ ರೌಡಿಶೀಟರ್ ಪಟ್ಟಿಯಲ್ಲಿದ್ದ ತಮ್ಮ ಹೆಸರನ್ನು ತೆಗೆಸಿದ್ದಾರೆ' ಎಂದು ವಾಗ್ದಾಳಿ ನಡೆಸಿದ್ದಾರೆ.
'ಹಾಲಿ ತಮ್ಮ ವಿರುದ್ಧ ಇರುವ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಚುನಾವಣಾ ಅಫಿಡವಿಟ್ ನಲ್ಲಿ ನಮೂದಿಸಿದ್ದಾರೆ, ಹಾಗಾಗಿ ಇನ್ನು ಮುಂದೆ ಅವರನ್ನು ಕ್ರಿಮಿನಲ್ 420 ರವಿ ಎಂದು ಕರೆಯುತ್ತೇನೆ' ಎಂದು ಟೀಕಿಸಿದ್ದಾರೆ.

'ಸಿ.ಟಿ. ರವಿ ಅವರ 3,000 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಬೇನಾಮಿ ಹೆಸರಲ್ಲಿದೆ. ರವಿ ಅವರ ಚರಿತ್ರೆ ಏನು, ಅಷ್ಟು ಆಸ್ತಿ ಹೇಗೆ ಬಂತು, ಅದರ ಹಿನ್ನೆಲೆ ಏನು ಎನ್ನುವುದನ್ನು ನಾವು ಹಂತ-ಹಂತವಾಗಿ ದಾಖಲೆಗಳ ಸಮೇತ ಜನರ ಮುಂದೆ ಇಡುತ್ತೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎಲ್ಲವನ್ನೂ ತನಿಖೆ ನಡೆಸುತ್ತೇವೆ' ಎಂದು ಎಂ.ಲಕ್ಷ್ಮಣ್ ಹೇಳಿದ್ದಾರೆ.
'ನಾನು ಬೇಕಾದರೆ ನಿಮ್ಮ(ಸಿ.ಟಿ.ರವಿ) ಕಚೇರಿಗೆ ಒಬ್ಬನೇ ಬರುತ್ತೇನೆ. ಮಾಧ್ಯಮಗಳ ಮುಂದೆ ಚರ್ಚೆ ಮಾಡೋಣ. ನಿಮ್ಮ ಇತಿಹಾಸವೇನು? 20 ವರ್ಷ ನೀವು ಏನಾಗಿದ್ದಿರಿ? ನಿಮ್ಮ ವಿರುದ್ಧ ಯಾವ ಕಾರಣಕ್ಕೆ ಕ್ರಿಮಿನಲ್ ಪ್ರಕರಣಗಳಿವೆ? ಎಂಬುದು ಸೇರಿದಂತೆ ಎಲ್ಲಾ ವಿಚಾರಗಳು ಚರ್ಚೆ ಆಗಲಿ. ಇಲ್ಲದಿದ್ದರೆ ಈ ಬಗ್ಗೆ ತನಿಖೆ ಮಾಡಿಸಿ' ಎಂದು ಲಕ್ಷ್ಮಣ್ ತಿಳಿಸಿದ್ದಾರೆ.
ಪರಿಶಿಷ್ಟರ ಮೀಸಲಾತಿ: ಬಿಜೆಪಿ ಸುಳ್ಳು ಪ್ರಚಾರ
'ಪರಿಶಿಷ್ಟರ ಮೀಸಲಾತಿ ವಿಚಾರವಾಗಿ ಬಿಜೆಪಿ ಸುಳ್ಳಿನ ಪ್ರಚಾರ ಮಾಡುತ್ತಿದೆ. ಮೀಸಲಾತಿ ವಿರೋಧಿ ಬಿಜೆಪಿ, ರಮಾಜೋಯೀಸ್ ಅವರ ಮೂಲಕ ಮೀಸಲಾತಿ ವಿರುದ್ಧ ಕೇಸ್ ಹಾಕಿಸಿದ್ದನ್ನು ನಾವು ಮರೆಯಬಾರದು.ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪಂಚಮಸಾಲಿಗಳಿಗೂ, ಒಕ್ಕಲಿಗರಿಗೂ ಸುಳ್ಳು ಮೀಸಲಾತಿ ನೀಡುತ್ತಾರೆ' ಎಂದು ಲಕ್ಷ್ಮಣ್ ಆರೋಪಿಸಿದ್ದಾರೆ.

₹250 ಕೋಟಿ ಹಗರಣ
'ಕರ್ನಾಟಕ ವಿಧಾನಮಂಡಲದಲ್ಲಿ ₹250 ಕೋಟಿ ಹಗರಣದ ಕುರಿತು ಈಗಾಗಲೇ ನಾನು ಮಾಧ್ಯಮಗಳ ಮುಂದೆ ಚರ್ಚೆ ಮಾಡಿದ್ದೆ. ಈ ಹಿನ್ನೆಲೆ ಕೇಂದ್ರದ ಇ-ವಿಧಾನ್ ಬದಲಿಗೆ ರಾಜ್ಯ ಸರ್ಕಾರ ಜಾರಿ ತರಲು ಹೊರಟಿದ್ದ ಯೋಜನೆಯನ್ನು ತಡೆಹಿಡಿಯಲಾಗಿತ್ತು. ಆದರೆ ಈಗ ಮತ್ತೆ ರಾಜ್ಯದ ಯೋಜನೆ ಜಾರಿಗೆ ತಯಾರಿ ನಡೆಸಿದೆ' ಎಂದು ಕೆಪಿಸಿಸಿ ವಕ್ತಾರರೂ ಆಗಿರುವ ರಮೇಶ್ ಬಾಬು ಆರೋಪಿಸಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರದ ಮೇಲೆ ವಿಶ್ವಾಸ ಹೋಗಿದೆ. ಹಾಗಾಗಿ ಬೆಳಗಾವಿ ಅಧಿವೇಶನದಲ್ಲಿ ನಿಯಮ 69ರ ಅಡಿಯಲ್ಲಿ, ಸಾರ್ವಜನಿಕರ ಹಿತದೃಷ್ಟಿ ಹಾಗೂ ರಾಜ್ಯದ ಜನರ ಹಣ ಪೋಲಾಗುವುದನ್ನು ತಡೆಯುವ ನಿಟ್ಟಿನಲ್ಲಿ 'ಇ ವಿಧಾನ್' ವಿಷಯವನ್ನು ಚರ್ಚೆಗೆ ತೆಗೆದುಕೊಳ್ಳುವಂತೆ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೇನೆ ಎಂದೂ ರಮೇಶ್ ಹೇಳಿದ್ದಾರೆ.












Click it and Unblock the Notifications