ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಹೆಚ್ಚು ಅನುಕೂಲ: ಡಿ.ಕೆ. ಶಿವಕುಮಾರ್
ತಲಕಾವೇರಿ, ಡಿ.24: ಮೇಕೆದಾಟು ಯೋಜನೆಯಿಂದ ಕರ್ನಾಟಕಕ್ಕಿಂತ ತಮಿಳುನಾಡಿಗೆ ಹೆಚ್ಚಿನ ಅನುಕೂಲ ಆಗುತ್ತದೆ. ಆದ್ದರಿಂದ ಅವರು ವಿರೋಧ ಮಾಡುವುದು ಸರಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಕಾವೇರಿಯ ಜನ್ಮಸ್ಥಳ ತಲಕಾವೇರಿಗೆ ಶುಕ್ರವಾರ ಭೇಟಿ ನೀಡಿ, ಪೂಜೆ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಮೇಕೆದಾಟು ಯೋಜನೆಯಿಂದ ತಮಿಳುನಾಡಿನವರಿಗೇ ಹೆಚ್ಚು ಅನುಕೂಲ ಆಗಲಿದ್ದು, ಅವರು ರಾಜಕಾರಣ ಮಾಡುತ್ತಿದ್ದಾರೆ. ಇದರಿಂದ ಅವರಿಗೂ ನ್ಯಾಯ ಸಿಗುತ್ತದೆ. ವಿರೋಧ ಮಾಡುವುದರಲ್ಲಿ ಅಲ್ಲಿನ ಎಲ್ಲ ರಾಜಕೀಯ ಪಕ್ಷಗಳು ಮುಂದೆ ನಿಲ್ಲುತ್ತವೆ. ಈಗಾಗಲೇ ಈ ಜಲಾನಯನ ವ್ಯಾಪ್ತಿಯಲ್ಲಿನ ಎಲ್ಲ ಆಣೆಕಟ್ಟುಗಳ ನಿಯಂತ್ರಣವನ್ನು ಕೇಂದ್ರದ ಕೈಗೆ ನೀಡಲಾಗಿದೆ. ಯಾರಿಗೆ, ಯಾವಾಗ, ಎಷ್ಟು ನೀರು ಬಿಡಬೇಕು ಎಂದು ಅವರೇ ನಿರ್ಧರಿಸುತ್ತಾರೆ. ನಾವು ಇದಕ್ಕೆ ತಲೆಬಾಗಿರುವಾಗ, ಈ ಯೋಜನೆ ಅನುಷ್ಠಾನಕ್ಕೆ ಮಾಡಲು ಅವರು ಸಹಕಾರ ನೀಡಲಿ ಮನವಿ ಮಾಡುತ್ತೇನೆ ಎಂದರು.
ಜನವರಿ 9ರಿಂದ ಪಾದಯಾತ್ರೆ:
ಮೇಕೆದಾಟು ಯೋಜನೆ ಕೂಡಲೇ ಆರಂಭವಾಗಬೇಕು ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮೇಲೆ ಒತ್ತಾಯ ಹಾಕಲು ನಾವು ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. 2022 ರ ಜನವರಿ 9 ರಿಂದ ಈ ಪಾದಯಾತ್ರೆ ಆರಂಭಿಸುತ್ತಿದ್ದೇವೆ. ಹೀಗಾಗಿ ಕಾವೇರಿ ಉಗಮವಾಗುವ ಪವಿತ್ರ ಸ್ಥಾನಕ್ಕೆ ಬಂದು ಹಿಂದೂ ಧರ್ಮದ ಶಾಸ್ತ್ರದಂತೆ ಪೂಜೆ ಸಲ್ಲಿಸಿ ನಮ್ಮ ಹೋರಾಟ ಆರಂಭಿಸುತ್ತಿದ್ದೇವೆ. ಈ ರಾಜ್ಯಕ್ಕೆ ಒಳ್ಳೆಯದಾಗಬೇಕು ಎಂಬುದು ನಮ್ಮ ಸಂಕಲ್ಪ. ಜನರಿಗೆ ಕುಡಿಯುವ ನೀರು ನೀಡಬೇಕು, ಪವಿತ್ರ ನೀರು ಸದುಪಯೋಗ ಆಗಬೇಕು ಎಂದು ಈ ಹೋರಾಟ ಮಾಡುತ್ತಿದ್ದೇವೆ. ಜತೆಗೆ ಇದರಿಂದ 400 ಮೆ.ವ್ಯಾ. ವಿದ್ಯುತ್ ಉತ್ಪಾದನೆಯೂ ಆಗಲಿದೆ. ಅರ್ಧ ಬೆಲೆಯಲ್ಲಿ ವಿದ್ಯುತ್ ಉತ್ಪಾದನೆಯಾಗಲಿದೆ. ಎಲ್ಲ ರೀತಿಯಲ್ಲೂ ಅನುಕೂಲವಾಗುವ ಯೋಜನೆ ಇದಾಗಿದೆ ಎಂದು ವಿವರಿಸಿದರು.

ಮೇಕೆದಾಟು ನಮ್ಮ ನೀರು, ನಮ್ಮ ಹಕ್ಕು. ಮೇಕೆದಾಟು ಅಣೆಕಟ್ಟೆ ರಾಜ್ಯದ ಹಣದಲ್ಲೇ ಮುಗಿಯುವ ಯೋಜನೆಯಾಗಿದ್ದು, ಎರಡು ರಾಜ್ಯದ ಜನರು ಹಾಗೂ ರೈತರಿಗೆ ಅನುಕೂಲವಾಗಲಿದೆ. ಈ ಯೋಜನೆಗೆ ಜೆಡಿಎಸ್, ಬಿಜೆಪಿ, ರೈತ ಸಂಘಟನೆ, ಮಠಾಧಿಪತಿಗಳು, ಇತರೆ ಸಂಘಟನೆಗಳು ಬೆಂಬಲ ಸೂಚಿಸಿದ್ದು, ನಾನು ಪಕ್ಷಾತೀತವಾಗಿ ಎಲ್ಲರನ್ನು ಈ ಪಾದಯಾತ್ರೆಗೆ ಆಹ್ವಾನಿಸುತ್ತೇನೆ. ಈ ಪಾದಯಾತ್ರೆಗೆ ಕಾಂಗ್ರೆಸ್ ಮುಂದಾಳತ್ವ ವಹಿಸಿರಬಹುದು. ಆದರೆ ಇದು ಎಲ್ಲರ ಹೋರಾಟವಾಗಿದೆ. ಕೊಡಗಿನ ವೀರ ಹಾಗೂ ಪವಿತ್ರ ಭೂಮಿಯಲ್ಲಿ ಪೂಜೆ ಮಾಡಿ ನಮ್ಮ ಹೋರಾಟದ ಹೆಜ್ಜೆ ಇಡುತ್ತಿದ್ದೇವೆ.
Koo Appಬೆಂಗಳೂರು ಸೇರಿದಂತೆ 10 ಜಿಲ್ಲೆಗಳ ಜನರು ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಮೇಕೆದಾಟು ಜಲಾಶಯ ನಿರ್ಮಾಣವಾದರೆ, ಕೋಟ್ಯಂತರ ಜನರ ಬದುಕು ಹಸನಾಗಲಿದೆ. ಇದಕ್ಕಾಗಿ ಜನವರಿ 9ರಿಂದ 19ರವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಬನ್ನಿ, ಈ ಹೋರಾಟದಲ್ಲಿ ನೀವೂ ಕೈಜೋಡಿಸಿ. MekedatuNammaHakku.org - ಕರ್ನಾಟಕ ಕಾಂಗ್ರೆಸ್ (@inckarnataka) 24 Dec 2021
104 ಟಿಎಂಸಿ ಕಾವೇರಿ ನೀರು ಸಮುದ್ರಕ್ಕೆ
ಕಾವೇರಿ ನದಿಯಿಂದ ರಾಜ್ಯದ 3 ಕೋಟಿಗೂ ಹೆಚ್ಚು ಜನರಿಗೆ ಅನುಕೂಲವಾಗುತ್ತಿದೆ. ಜತೆಗೆ ತಮಿಳುನಾಡಿನ ರೈತರಿಗೂ ಅನುಕೂಲವಾಗುತ್ತಿದೆ. ಆದರೆ ಈ ವರ್ಷವೂ ಸೇರಿದಂತೆ ಹತ್ತಾರೂ ವರ್ಷಗಳಿಂದ 104 ಟಿಎಂಸಿಗೂ ಹೆಚ್ಚು ನೀರು ಸಮುದ್ರಕ್ಕೆ ಸೇರುತ್ತಿದೆ. ಹೀಗಾಗಿ ಅನೇಕ ವರ್ಷಗಳಿಂದ ಈ ಪ್ರದೇಶದಲ್ಲಿ ಸಮತೋಲಿತ ಅಣೆಕಟ್ಟೆ ಯೋಜನೆ ಮಾಡಬೇಕು, ಎರಡು ರಾಜ್ಯಕ್ಕೂ ನ್ಯಾಯ ಸಿಗಬೇಕು ಎಂಬ ಒತ್ತಾಸೆ ಇದೆ. ಹೀಗಾಗಿ ಮೇಕೆದಾಟು ಅಣೆಕಟ್ಟು ಕಟ್ಟಬೇಕು, ಸಮತೋಲಿತ ಯೋಜನೆ ಆಗಬೇಕು. ಅದರಿಂದ ವಿದ್ಯುತ್ ಉತ್ಪಾದನೆ, ಬೆಂಗಳೂರು ಮಹಾನಗರದ ಒಂದೂವರೆ ಕೋಟಿ ಜನರಿಗೆ ನಿರಂತರವಾಗಿ ಕುಡಿಯುವ ನೀರಿನ ಪೂರೈಕೆಯಾಗಬೇಕು, ಮಳೆ ಕೊರತೆಯಾದ ಸಮಯದಲ್ಲಿ ಕಾವೇರಿ ಜಲಾನಯನ ಪ್ರದೇಶದ ಮಂಡ್ಯ, ಚಾಮರಾಜನಗರ, ಮೈಸೂರು, ಹಾಸನ, ತುಮಕೂರು, ಕೋಲಾರ, ರಾಮನಗರ ಪ್ರದೇಶದ ರೈತರಿಗೆ ನೀರು ಒದಗಿಸುವುದು, ಹಾಗೂ ತಮಿಳುನಾಡಿಗೂ 66 ಟಿಎಂಸಿ ನೀರನ್ನು ಬಿಡುವ ಯೋಜನೆ ಸಿದ್ಧವಾಗಿದೆ ಎಂದು ಶಿವಕುಮಾರ್ ಹೇಳಿದರು.

9,900 ಕೋಟಿ ಮೊತ್ತದ ಯೋಜನೆ
ಸುಮಾರು 9900 ಕೋಟಿ ರೂ. ಮೊತ್ತದ ಈ ಯೋಜನೆಯ ವಿಸ್ತೃತ ವರದಿಯ ಪ್ರಸ್ತಾವನೆ ಸಲ್ಲಿಸಿದ್ದು, ಅದಕ್ಕೆ ಕೇಂದ್ರ ಸರ್ಕಾರವೂ ಒಪ್ಪಿಗೆ ನೀಡಿದೆ. ಸುಪ್ರೀಂ ಕೋರ್ಟ್ ಕುಡಿಯುವ ನೀರಿನ ಪೂರೈಕೆಗೆ ಯಾರೂ ಅಡ್ಡಿ ಮಾಡಬಾರದು ಎಂದು ಹೇಳಿದೆ. ಹಿಂದೆ ನೀರಾವರಿ ಸಚಿವರಾಗಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಅನುಮೋದನೆ ನೀಡಿದ್ದು, ಈ ಅಣೆಕಟ್ಟು ಕಟ್ಟಬೇಕು ಎಂದು ನಾವು ಹೋರಾಟ ಮಾಡುತ್ತಿದ್ದೇವೆ. ಈ ಯೋಜನೆಗೆ ಕೇಂದ್ರ ಸರ್ಕಾರದ ಪರಿಸರ ಇಲಾಖೆ ಒಪ್ಪಿಗೆ ಮಾತ್ರ ಸಿಗಬೇಕಿದೆ. ಅದು ಸಿಕ್ಕ ತಕ್ಷಣ ನಾವು ಯೋಜನೆ ಆರಂಭಿಸಬಹುದು. ಈ ಯೋಜನೆಗೆ ಅಗತ್ಯವಿರುವ ಸಣ್ಣ ಪ್ರಮಾಣದ ಭೂಮಿಯನ್ನು ಈಗಲೇ ಪಡೆಯಬಹುದಾಗಿದೆ. ಇದಕ್ಕೆ ಕನಕಪುರ ಹಾಗೂ ಮಳವಳ್ಳಿಯಲ್ಲಿ ಸ್ವಲ್ಪ ಭಾಗದ ಜಮೀನು ಬೇಕಾಗಿದೆ. ಅದನ್ನು ಬಿಟ್ಟರೆ ಉಳಿದೆಲ್ಲವೂ ಅರಣ್ಯ ಭೂಮಿ ಒಳಪಡುತ್ತದೆ. ಕನಕಪುರದ ನಮ್ಮ ಜನ ರಾಜ್ಯದ ಹಿತದೃಷ್ಟಿಗೆ ತಮ್ಮ ಜಮೀನು ನೀಡಲು ಬದ್ಧತೆ ಹೊಂದಿದ್ದಾರೆ ಎಂದು ವಿವರಿಸಿದರು.












Click it and Unblock the Notifications