ಮೇ 29ರಂದು ಕರ್ನಾಟಕಕ್ಕೆ ಮುಂಗಾರಿನ ಆಗಮನ

Subscribe to Oneindia Kannada

ಬೆಂಗಳೂರು, ಮೇ 16: ಸತತ ಬರಪೀಡಿತ ಕರ್ನಾಟಕದ ಆಗಸದಲ್ಲಿ ಬೆಳ್ಳಿ ರೇಖೆಗಳು ಕಾಣಿಸುತ್ತಿವೆ. ಈಗಾಗಲೇ ಗುಡುಗು ಮಿಂಚಿನ ಆರ್ಭಟ ಆರಂಭವಾಗಿದ್ದು ನಿರೀಕ್ಷೆಗೂ ಮೊದಲು ಮುಂಗಾರು ರಾಜ್ಯಕ್ಕೆ ಅಪ್ಪಳಿಸಲಿದೆ ಎಂದು ತಜ್ಞರು ಹೇಳಿದ್ದಾರೆ.

ಈ ಹಿಂದೆ ಜೂನ್ ಮೊದಲ ವಾರದಲ್ಲಿ ಮುಂಗಾರು ರಾಜ್ಯಕ್ಕೆ ಕಾಲಿಡಲಿದೆ ಎನ್ನಲಾಗಿತ್ತು. ಇದೀಗ ಮೇ ಕೊನೆಯ ವಾರದಲ್ಲಿ ಕರ್ನಾಟಕಕ್ಕೆ ಮುಂಗಾರು ಆಗಮಿಸಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಪರಿವೀಕ್ಷಣಾ ಕೇಂದ್ರದ ತಜ್ಞರು ಹೇಳಿದ್ದಾರೆ.

ಮೇ 29ರಂದು ಕರ್ನಾಟಕದ ದಕ್ಷಿಣ ತೀರಕ್ಕೆ ಮುಂಗಾರು ಕಾಲಿಡಲಿದೆ. ಕೇರಳಕ್ಕೆ ಮುಂಗಾರು ಆಗಮಿಸಲಿದ್ದು ಅಲ್ಲಿಂದ ದಕ್ಷಿಣ ಒಳನಾಡಿನ ಮೂಲಕ ಕರ್ನಾಟಕಕ್ಕೆ ಮುಂಗಾರು ಕಾಲಿಡಲಿದೆ ಎಂದು ಕೇಂದ್ರದ ತಜ್ಞರು ಹೇಳಿದ್ದಾರೆ.

Monsoon Rain will reach Karnataka on May 29

ಬಂಗಾಳ ಕೊಲ್ಲಿ ಹಾಗೂ ಹಿಂದೂ ಮಹಾ ಸಾಗರದ ಮೇಲ್ಭಾಗದಲ್ಲಿ ಮುಂಗಾರಿಗೆ ಪೂರಕ ವಾತಾವರಣ ಇದ್ದು ನೈರುತ್ಯ ಮಾನ್ಸೂನ್ ಮಾರುತುಗಳು ಅರಬ್ಬೀ ಸಮುದ್ರ ತೀರಕ್ಕೆ ಸದ್ಯದಲ್ಲೇ ಅಪ್ಪಳಿಸಲಿವೆ. "ಪರಿಸ್ಥಿತಿ ಒಂದು ವಾರ ಇದೇ ರೀತಿ ಮುಂದುವರಿದರೆ ಮೇ ಕೊನೆಯ ವಾರದಲ್ಲಿ ಕರ್ನಾಟಕದಲ್ಲಿ ಮಾನ್ಸೂನ್ ಮಳೆ ಬೀಳಲಿದೆ," ಎಂದು ನೈಸರ್ಗಿಕ ವಿಕೋಪ ಪರಿವೀಕ್ಷಣಾ ಕೇಂದ್ರದ ತಜ್ಞರು ಹೇಳಿದ್ದಾರೆ.

ಈ ಸಂಬಂಧ ರೈತರಿಗೆ ಮಾರ್ಗದರ್ಶನ ನೀಡುವಂತೆಯೂ ಕೃಷಿ ಇಲಾಖೆಗೆ ಕೇಂದ್ರದ ತಜ್ಞರು ಸಲಹೆ ನೀಡಿದ್ದಾರೆ. ಈಗಾಗಲೇ ಕರ್ನಾಟಕದಲ್ಲಿ ಸಾಕಷ್ಟು ಮುಂಗಾರು ಪೂರ್ವ ಮಳೆಗಳು ಬಿದ್ದಿದ್ದು ಒಮ್ಮೆ ಮುಂಗಾರು ಮಳೆ ಬೀಳುತ್ತಿದ್ದಂತೆ ರಾಜ್ಯದಾದ್ಯಂತ ಕೃಷಿ ಚಟುವಟಿಕೆಗಳು ಆರಂಭವಾಗಲಿವೆ.

ಇನ್ನು ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಮುಂಗಾರು ಪೂರ್ವ ಮಳೆಗಳು ಬಹಳ ಕಡಿಮೆ ಬಿದ್ದಿವೆ. ಆದರೆ ಕಳೆದ ಭಾನುವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು ಮುಂಗಾರು ಪೂರ್ವ ಮಳೆ ಕೊರತೆಯನ್ನು ನೀಗಿಸಿದೆ.

ಇನ್ನು ಇತ್ತೀಚೆಗೆ ಗದಗ, ಬಳ್ಳಾರಿ, ಬಾಗಲಕೋಟೆಗಳಲ್ಲೂ ಭಾರಿ ಮಳೆಯಾಗಿದೆ. ಗದಗದಲ್ಲಂತೂ ಮಳೆಯ ರಭಸಕ್ಕೆ ಬಸ್ಸೇ ಕೊಚ್ಚಿಕೊಂಡು ಹೋಗಿತ್ತು.[ರಾಜ್ಯದ ವಿವಿಧ ಜಿಲ್ಲೆಗಳ ಸುದ್ದಿಯ ರೌಂಡಪ್]

ನಿರಂತರ ಮಳೆ

ಹವಾಮಾನ ಇಲಾಖೆ ವರದಿಗಳ ಪ್ರಕಾರ ಸೋಮವಾರ ಉಡುಪಿಯ ಕೋಟ ಮತ್ತು ಬೆಂಗಳೂರಿನ ಮಾಗಡಿಯಲ್ಲಿ 2ಸೆಂ.ಮೀ ಹಾಗೂ ಬೆಂಗಳೂರಿನ ನೆಲಮಂಗಲ, ಚಿತ್ರದುರ್ಗದ ಗೌರಿಬಿದನೂರ, ತುಮಕೂರಿನ ಹುಲಿಯೂರು ದುರ್ಗದಲ್ಲಿ ತಲಾ 1ಸೆಂಟಿ ಮೀಟರ್ ಮಳೆಯಾಗಿದೆ.

ಬಳ್ಳಾರಿಯಲ್ಲಿ ಸೋಮವಾರ ಅತೀ ಹೆಚ್ಚಿನ 41.0 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ಮೂರು ದಿನ ಮೊದಲೇ ಅಂಡಮಾನ್ ಪ್ರವೇಶಿಸಿದ ಮುಂಗಾರು

ವಾಡಿಕೆಗಿಂತ ಮೂರು ದಿನ ಮೊದಲೇ ನೈರುತ್ಯ ಮುಂಗಾರು ಅಂಡಮಾನ್‌ ಮತ್ತು ನಿಕೋಬಾರ್ ದ್ವೀಪಗಳನ್ನು ಪ್ರವೇಶಿಸಿದ್ದು ಇದರಿಂದ ಈ ಬಾರಿ ಮುಂಗಾರು ಮಳೆ ಬೇಗನೆ ಬರಲಿದೆ.[3 ದಿನ ಮೊದಲೇ ಅಂಡಮಾನ್‌ ಮತ್ತು ನಿಕೋಬಾರ್ ಪ್ರವೇಶಿಸಿದ ಮುಂಗಾರು]

'ಬಂಗಾಳ ಕೊಲ್ಲಿಯ ಆಗ್ನೇಯ ಭಾಗದ ಕೆಲವು ಕಡೆಗಳಲ್ಲಿ, ನಿಕೋಬಾರ್‌ ದ್ವೀಪಗಳು, ದಕ್ಷಿಣ ಅಂಡಮಾನ್‌ ಸಮುದ್ರದ ಪೂರ್ಣ ಭಾಗ ಮತ್ತು ಉತ್ತರ ಅಂಡಮಾನ್‌ ಸಮುದ್ರದ ಕೆಲವು ಭಾಗಗಳಿಗೆ ನೈರುತ್ಯ ಮುಂಗಾರು ಭಾನುವಾರ ಕಾಲಿಟ್ಟಿದೆ' ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka State Natural Disaster Monitoring Centre (KSNDMC) forecast says that monsoon will reach Coastal Karnataka by May 29. Earlier Indian Meteorological Department (IMD)'s forecast that monsoon might enter Karnataka coast by the first week of June.
Please Wait while comments are loading...