ಮಾರ್ಚ್ 25 ರಂದು ಮೋದಿ ಮೆಗಾ ರ್‍ಯಾಲಿ; ಬಿಜೆಪಿಯ 4 ಯಾತ್ರೆಯಲ್ಲಿ ಯಾವಾಗ? ಇಲ್ಲಿದೆ ನೋಡಿ ಮಾಹಿತಿ
ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ 4 ವಿಜಯ ಸಂಕಲ್ಪ ಯಾತ್ರೆಯನ್ನು ಮಾರ್ಚ್ ತಿಂಗಳಿನಲ್ಲಿ ಆರಂಭಿಸಲಾಗುವುದು ಎಂದು ಸಿ ಸಿ ಪಾಟೀಲ್ ಹೇಳಿದರು.
ಬೆಂಗಳೂರು,ಫೆಬ್ರವರಿ25: ವಿಧಾನಸಭಾ ಚುನವಣೆ ಹಿನ್ನೆಲೆ ಈಗಾಗಲೇ ಮೂರು ಪಕ್ಷಗಳು ಭರ್ಜರಿ ತಯಾರಿಯನ್ನ ನಡೆಸುತ್ತಿದ್ದು, ಬಿಜೆಪಿ ರಾಜ್ಯದ ನಾಲ್ಕು ಭಾಗದಲ್ಲಿ ರಥಯಾತ್ರೆ ನಡೆಸುವ ನಿಟ್ಟಿನಲ್ಲಿ ಪ್ಲಾನ್ ನಡೆಸಿದೆ. ಈ ಹಿಂದೆ ನಡೆದ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯದ ಯಾವ ಯಾವ ಭಾಗದಲ್ಲಿ ಯಾತ್ರೆಯನ್ನ ನಡೆಸಬೇಕು ಎಂಬ ಬಗ್ಗೆ ರಾಜ್ಯ ಬಿಜೆಪಿ ಘಟಕ ಚರ್ಚೆಯನ್ನ ನಡೆಸಿತ್ತು.
ಈ ಕುರಿತು ಶನಿವಾರ ಸುದ್ದಿಗೋಷ್ಠಿ ನಡೆಸಿದ ಸಚಿವ ಸಿ ಸಿ ಪಾಟೀಲ್, ಚುನಾವಣೆ ಎದುರಿಸಲು ಪಕ್ಷ ಸಿದ್ಧವಾಗಿದೆ. ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ 4 ವಿಜಯ ಸಂಕಲ್ಪ ಯಾತ್ರೆಯನ್ನು ಮಾರ್ಚ್ ತಿಂಗಳಿನಲ್ಲಿ ಆರಂಭಿಸಲಾಗುವುದು ಎಂದು ತಿಳಿಸಿದರು.

ರಾಜ್ಯದ ನಾಲ್ಕು ಸ್ಥಳಗಳಿಂದ ಯಾತ್ರೆ ಆರಂಭವಾಗಲಿದ್ದು, ಮಾರ್ಚ್ 1ರಂದು ಮಲೆ ಮಹದೇಶ್ವರ ಬೆಟ್ಟ, ಹನೂರು ತಾಲ್ಲೂಕಿನಿಂದ ಮೊದಲನೇ ಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಂದ ಚಾಲನೆ ನೀಡಲಿದ್ದಾರೆ. ಮಾರ್ಚ್ 2ರಂದು ಸಂಗೊಳ್ಳಿ ರಾಯಣ್ಣ ಸ್ಮಾರಕ, ನಂದಗಢದಿಂದ ಯಾತ್ರೆಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಂದ ಚಾಲನೆ ಸಿಗಲಿದ್ದು, ನಂದಗಢದಿಂದ ಹೊರಡುವ ಯಾತ್ರೆಯು ಕಿತ್ತೂರು ಚೆನ್ನಮ್ಮನ ಹುಟ್ಟೂರಾದ ಕಿತ್ತೂರಿಗೂ ಹೋಗಲಿದೆ ಎಂದು ಹೇಳಿದರು.
ಇನ್ನೂ ಮಾರ್ಚ್ 3ರಂದು ನೂತನ ಅನುಭವ ಮಂಟಪ ನಿರ್ಮಾಣವಾಗುತ್ತಿರುವ ಸ್ಥಳ, ಬಸವಕಲ್ಯಾಣ, ಬೀದರ್ ಜಿಲ್ಲೆಯಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಚಾಲನೆ ನೀಡಲಿದ್ದೇವೆ. ಅಲ್ಲದೆ ನಾಡಪ್ರಭು ಕೆಂಪೇಗೌಡ ಪ್ರತಿಮೆ, ದೇವನಹಳ್ಳಿ, ಬೆಂಗಳೂರು. ಈ ಯಾತ್ರೆಗೂ ಕೇಂದ್ರಗೃಹ ಸಚಿವ ಶ್ರೀ ಅಮಿತ್ ಅವರೇ ಚಾಲನೆ ನೀಡಲಿದ್ದಾರೆ.

ಇನ್ನೂ ರಾಜ್ಯದ ನಾಲ್ಕು ಭಾಗದಲ್ಲಿ ನಡೆಯುವ ಯಾತ್ರೆಗಳಲ್ಲಿ ಮುಖ್ಯಮಂತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸೇರಿದಂತೆ ಹಲವು ಮುಖಂಡರುಗಳು ಯಾತ್ರೆಗಳ ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
50ಕ್ಕೂ ಹೆಚ್ಚು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಬಿಜೆಪಿ ನಾಯಕರು ಪಾಲ್ಗೊಳ್ಳುತ್ತಾರೆ. ರಾಜ್ಯದ ಎಲ್ಲಾ 31 ಜಿಲ್ಲೆಗಳು ಮತ್ತು 224 ವಿಧಾನಸಭಾ ಕ್ಷೇತ್ರಗಳ ಸಂಪರ್ಕ ನಡೆಯಲಿದೆ. ನಾಲ್ಕು ರಥಗಳ ಮೂಲಕ ಒಟ್ಟು 8,000 ಕಿ.ಮೀ . ಯಾತ್ರೆ ಸಂಚರಿಸಲಿದೆ. ಯಾತ್ರೆಯ ಉದ್ದಕ್ಕೂ ಒಟ್ಟು 80ಕ್ಕೂ ಹೆಚ್ಚು ರ್ಯಾಲಿ ಮತ್ತು 75 ಸಾರ್ವಜನಿಕ ಸಭೆಗಳು ನಡೆಯಲಿವೆ.
150ಕ್ಕೂ ಹೆಚ್ಚು ರೋಡ್ ಶೋಗಳು ಸಹಾ ನಡೆಯಲಿವೆ. ಈ ಮೂಲಕ ನಾಡಿನ 4 ಕೋಟಿ ಜನರನ್ನು ಸಂಪರ್ಕಿಸಲಾಗುವುದು. ಯಾತ್ರೆಯ ಅವಧಿ 20 ದಿನಗಳು ಎಂದ ಅವರು, 150 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಮತ್ತು ಮೊದಲ ಬಾರಿಗೆ ಸ್ಪಷ್ಟ ಬಹುಮತ ಪಡೆದು ದಾಖಲೆ ಸೃಷ್ಟಿಸುವುದು ಇದರ ಗುರಿ ಎಂದು ವಿವರಿಸಿದರು.
ಇನ್ನೂ ಮಾರ್ಚ್ 25ರಂದು ದಾವಣಗೆರೆಯಲ್ಲಿ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮೆಗಾ ರ್ಯಾಲಿ ನಡೆಯಲಿದೆ . ಬಿಜೆಪಿ ಸರಕಾರಗಳ ಸಾಧನೆ, ಕಾಂಗ್ರೆಸ್‍ನ ಹುಸಿ ಭರವಸೆ- ದೇಶ ಕೊಳ್ಳೆ ಹೊಡೆದುದನ್ನು ತಿಳಿಸುತ್ತೇವೆ ಎಂದು ಹೇಳಿದರು.












Click it and Unblock the Notifications