ನಮ್ಮ ರಾಜ್ಯವೇ ಬೆಸ್ಟ್-ಫಸ್ಟ್ : ಮೋದಿಗೆ ಸಿದ್ದರಾಮಯ್ಯ ತಿರುಗೇಟು!
ಬೆಂಗಳೂರು, ಫೆಬ್ರವರಿ 05 : 'ಸುಳ್ಳಿನ ಕಂತೆಯನ್ನು ನರೇಂದ್ರ ಮೋದಿ ಅವರು ಬಿಚ್ಚಿಟ್ಟಿದ್ದಾರೆ. ರಾಜ್ಯದ ಜನರಿಗೆ ಸುಳ್ಳು ಮಾಹಿತಿಯನ್ನು ನೀಡಿ, ಪ್ರಧಾನಿ ಹುದ್ದೆಗೆ ಅಗೌರವ ತೋರಿಸಿದ್ದಾರೆ' ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ಸೋಮವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಭಾನುವಾರ ಮೋದಿ ಮಾಡಿದ್ದ ಭಾಷಣಕ್ಕೆ ತಿರುಗೇಟು ನೀಡಿದರು. 'ನಮ್ಮ ರಾಜ್ಯವೇ ಫಸ್ಟ್-ಬೆಸ್ಟ್' ಎಂದು ಹೇಳಿದರು.

ಸಿದ್ದರಾಮಯ್ಯ ಪತ್ರಿಕಾಗೋಷ್ಠಿಯ ಪ್ರಮುಖ ಅಂಶಗಳು
* ಯಡಿಯೂರಪ್ಪ ಅವರು ಪರಿವರ್ತನಾ ಯಾತ್ರೆಯಲ್ಲಿ ಮಾಡಿದ ಭಾಷಣದಂತೆ ನರೇಂದ್ರ ಮೋದಿ ಭಾಷಣ ಮಾಡಿ ಹೋಗಿದ್ದಾರೆ. ದೇಶದ ಪ್ರಧಾನಿಯಾಗಿ ಅವರು ಮಾತನಾಡಲಿಲ್ಲ.
* ನಮ್ಮ ಸರ್ಕಾರವನ್ನು ಶೇ 10 ಕಮೀಷನ್ ಪಡೆಯುವ ಸರ್ಕಾರ ಎಂದು ಕರೆದಿದ್ದಾರೆ. ಎಲ್ಲ ಯೋಜನೆಗಳಲ್ಲೂ ಕಮೀಷನ್ ಪಡೆಯುತ್ತಾರೆ ಎಂದು ಆರೋಪಿಸಿದ್ದಾರೆ. ಇದು ಬೇಜವಾಬ್ದಾರಿಯುತವಾದ ಹೇಳಿಕೆ.
* ಯಡಿಯೂರಪ್ಪ ಅವರನ್ನು ವೇದಿಕೆಯಲ್ಲಿ ಪಕ್ಕದಲ್ಲಿ ಕೂರಿಸಿಕೊಂಡು ನಮ್ಮನ್ನು ಭ್ರಷ್ಟಾಚಾರಿಗಳು ಎಂದು ಹೇಳಿದ್ದಾರೆ. ಪಕ್ಕದಲ್ಲಿದ್ದವರನ್ನು ಕೇಳಬೇಕಿತ್ತು, 5 ವರ್ಷಗಳಲ್ಲಿ ಏನು ಮಾಡಿದ್ದಾರೆ? ಎಂದು, ಯಾರು, ಯಾರು ಜೈಲಿಗೆ ಹೋಗಿ ಬಂದರು ಎಂದು?.
* ಚೆಕ್ ಮೂಲಕ ಲಂಚ ಪಡೆದಿದ್ದು, ಯಡಿಯೂರಪ್ಪ, ಕಟ್ಟಾ ಸುಬ್ರಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ, ಜನಾರ್ದನ ರೆಡ್ಡಿ ಜೈಲಿಗೆ ಹೋಗಿದ್ದು ಇವರ ಕಾಲದಲ್ಲಿ ಅಲ್ಲವೇ?
* ಇವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ 9 ವರ್ಷ ಲೋಕಾಯುಕ್ತರನ್ನು ನೇಮಕ ಮಾಡಿರಲಿಲ್ಲ. ಪ್ರಧಾನಿಯಾದ ಮೇಲೆ ಲೋಕಪಾಲರನ್ನು ನೇಮಕ ಮಾಡಿಲ್ಲ. ಇವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಎಂದು ಲೇವಡಿ ಮಾಡಿದರು.
* ಯಾವ ಯೋಜನೆಯನ್ನು ಸರ್ಕಾರ ಶೇ 10ರಷ್ಟು ಕಮೀಷನ್ ಪಡೆದಿದೆ ಎಂಬುದನ್ನು ಅವರು ದಾಖಲೆಗಳನ್ನು ನೀಡಲಿ. ಸ್ಟೀಲ್ ಬ್ರಿಡ್ಜ್ ಯೋಜನೆ ಬಗ್ಗೆ ಮಾತನಾಡಿದ್ದಾರೆ. ಆ ಯೋಜನೆಯನ್ನು ಸರ್ಕಾರ ಆರಂಭಿಸಿಯೇ ಇಲ್ಲ.
* ಅವರು 130 ಕೋಟಿ ಜನರ ಪ್ರತಿನಿಧಿ. ಆದರೆ, ಯಡಿಯೂರಪ್ಪ ಅವರ ಹಂತಕ್ಕೆ ಇಳಿದು ಮಾತನಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಮಾತು ರಾಜಕೀಯ ಪ್ರೇರಿತವಾಗಿತ್ತು.
* ಐಟಿ-ಬಿಟಿಯಲ್ಲಿ ನಮ್ಮ ರಾಜ್ಯ ಮೊದಲ ಸ್ಥಾನದಲ್ಲಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಕೈಗಾರಿಕಾ ವಲಯದ ಹೂಡಿಕೆಯಲ್ಲಿ ರಾಜ್ಯ 11ನೇ ಸ್ಥಾನದಲ್ಲಿತ್ತು. ಈಗ 2 ವರ್ಷದಿಂದ ನಾವೇ ನಂಬರ್ 1
* ಆನ್ ಲೈನ್ ಮಾರುಕಟ್ಟೆ ವ್ಯವಸ್ಥೆ ಪರಿಚಯಿಸಿದ ಮೊದಲ ರಾಜ್ಯ ಕರ್ನಾಟಕ. ಬೇರೆ ರಾಜ್ಯಗಳು ಇದನ್ನು ಈಗ ಅಳವಡಿಸಿಕೊಳ್ಳುತ್ರಿವೆ. 157 ಎಪಿಎಂಸಿಯಲ್ಲಿ ಈ ವ್ಯವಸ್ಥೆ ಜಾರಿಗೆ ತಂದಿದ್ದೆವೆ. ನೀತಿ ಆಯೋಗವೇ ಹೇಳುವ ಪ್ರಕಾರ ಇದರಿಂದಾಗಿ ರೈತರ ಆದಾಯ ಶೇ 38 ರಷ್ಟು ಹೆಚ್ಚಾಗಿದೆ.
* ಎಲ್ಲಾ ತಾಲೂಕುಗಳ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೆಂಟರ್ ಆರಂಭಿಸಿದ ಮೊದಲ ರಾಜ್ಯ ಕರ್ನಾಟಕ, ಕೃಷಿ ಭಾಗ್ಯ ಯೋಜನೆ ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.
* ಕರ್ನಾಟಕದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿವೆ. ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ ಎಂದು ಹೇಳಿದ್ದಾರೆ. ನಿಮ್ಮ ಪಕ್ಷ ಅಧಿಕಾರದಲ್ಲಿರುವ ಹಲವು ರಾಜ್ಯಗಳನ್ನು ಒಮ್ಮೆ ನೋಡಿ ಎಂದು ಸಿದ್ದರಾಮಯ್ಯ ಹೇಳಿದರು.
* ಎನ್‌ಸಿಆರ್‌ಪಿ ನೀಡಿರುವ ಮಾಹಿತಿಯಂತೆ ಅಪರಾಧ ಪ್ರಕರಣಗಳಲ್ಲಿ ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ಹರ್ಯಾಣ, ಉತ್ತರ ಪ್ರದೇಶ ಟಾಪ್ 10 ಪಟ್ಟಿಯಲ್ಲಿವೆ. ನಮ್ಮ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಅಪರಾಧ ಪ್ರಕರಗಳು 6.5 ರಷ್ಟಿತ್ತು. ಈಗ ಅದು 5.7ಕ್ಕೆ ಕಡಿಮೆಯಾಗಿದೆ.
* ನಿರ್ಗಮನದ ಬಾಗಿಲಿನಲ್ಲಿ ನಿಂತಿರುವುದು ಕರ್ನಾಟಕದ ಕಾಂಗ್ರೆಸ್ ಅಲ್ಲ, ನಿಮ್ಮ ಬಿಜೆಪಿ. ರಾಜಸ್ಥಾನದ ಚುನಾವಣೆಯಲ್ಲಿನ ಫಲಿತಾಂಶ ಏನು ಹೇಳುತ್ತದೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
* ಸರ್ಕಾರ ಖರ್ಚು ಮಾಡಿದ ಹಣದ ಬಗ್ಗೆ ಲೆಕ್ಕ ಕೇಳುವ ನೀವು, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮಗನ ಆಸ್ತಿ ಹೇಗೆ ಹೆಚ್ಚಾಯಿತು? ಎಂದು ಲೆಕ್ಕ ನೀಡುವಿರಾ? ಎಂದು ಪ್ರಶ್ನಿಸಿದರು.












Click it and Unblock the Notifications