Madal Virupakshappa: ಮಾಡಾಳ್ ವಿರೂಪಾಕ್ಷಪ್ಪರನ್ನು ಬಂಧಿಸಲೇಬೇಕು: ಹೈಕೋರ್ಟ್‌ನಲ್ಲಿ Lokayukta ಪೊಲೀಸರ ವಾದ
ಬಂಧನ ಭೀತಿ ಎದುರಿಸುತ್ತಿರುವ ಮಾಡಾಳು ವಿರೂಪಾಕ್ಷಪ್ಪ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಪೀಠ ಶುಕ್ರವಾರ ವಿಚಾರಣೆ ನಡೆಸಿತು. ಅರ್ಜಿದಾರರು ಹಾಗೂ ಲೋಕಾಯುಕ್ತ ಪರ ವಕೀಲರ ವಾದ-ಪ್ರತಿವಾದ ಆಲಿಸಿ ಆದೇಶ ಕಾಯ್ದಿರಿಸಿದೆ.
ಬೆಂಗಳೂರು ಮಾರ್ಚ್ 18: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತಕ್ಕೆ (ಕೆಎಸ್‌ಡಿಎಲ್) ಕೆಮಿಕಲ್ ಆಯಿಲ್ ಪೂರೈಸುವ ಗುತ್ತಿಗೆಯ ಕಾರ್ಯಾದೇಶ ನೀಡಲು ಲಂಚಕ್ಕೆ ಬೇಡಿಕೆಯಿಟ್ಟ ಆರೋಪ ಪ್ರಕರಣದಲ್ಲಿ ಶಾಸಕ ಕೆ. ಮಾಡಾಳು ವಿರೂಪಾಕ್ಷಪ್ಪರನ್ನು ಬಂಧಿಸಿ ವಿಚಾರಣೆ ನಡೆಸಲೇಬೇಕಿದೆ ಎಂದು ಲೋಕಾಯುಕ್ತ ಪೊಲೀಸರು ಹೈಕೋರ್ಟ್‌ನಲ್ಲಿ ಬಲವಾಗಿ ವಾದಿಸಿದ್ದಾರೆ.
ಅಕ್ರಮದಲ್ಲಿ ಮಾಡಾಳು ವಿರೂಪಾಕ್ಷಪ್ಪ ಅವರ ಹೆಸರು ಪ್ರಸ್ತಾಪವಾಗಿದೆ. ವಿರೂಪಾಕ್ಷಪ್ಪ ಪ್ರತಿದಿನ ನೋಟ್ಸ್ ಬರೆದುಕೊಂಡು ಬಂದು ಪೊಲೀಸರ ಮುಂದೆ ಹೇಳಿಕೆ ನೀಡುತ್ತಿದ್ದಾರೆ. ಆದ್ದರಿಂದ, ಅವರನ್ನು ಬಂಧಿಸಿ ವಿಚಾರಣೆ ನಡೆಸಿದರೆ ತನಿಖೆಗೆ ಅನುಕೂಲವಾಗಲಿದೆ ಎಂದು ಲೋಕಾಯುಕ್ತ ಪೊಲೀಸರ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.

ಬಂಧನ ಭೀತಿ ಎದುರಿಸುತ್ತಿರುವ ಮಾಡಾಳು ವಿರೂಪಾಕ್ಷಪ್ಪ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಪೀಠ ಶುಕ್ರವಾರ ವಿಚಾರಣೆ ನಡೆಸಿತು. ಅರ್ಜಿದಾರರು ಹಾಗೂ ಲೋಕಾಯುಕ್ತ ಪರ ವಕೀಲರ ಸುದೀರ್ಘ ವಾದ-ಪ್ರತಿವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿದ ಪೀಠ ಆದೇಶ ಕಾಯ್ದಿರಿಸಿತು.
'ವಿರೂಪಾಕ್ಷಪ್ಪ ಪರ ವಕೀಲರು, ಅರ್ಜಿದಾರರು ಪ್ರತಿದಿನವೂ ಲೋಕಾಯುಕ್ತ ಪೊಲೀಸರ ತನಿಖೆಗೆ ಹಾಜರಾಗಿದ್ದು, ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ತನಿಖೆಯೇ ಮುಕ್ತಾಯದ ಹಂತದಲ್ಲಿರುವಾಗ ಅವರನ್ನು ಬಂಧಿಸಿ ವಿಚಾರಣೆ ನಡೆಸುವ ಅಗತ್ಯವಿಲ್ಲ. ಆದ್ದರಿಂದ, ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕೆಂದು' ಕೋರಿದರು.
ಲೋಕಾಯುಕ್ತ ಪೊಲೀಸರ ಪರ ಹಿರಿಯ ವಕೀಲರು ವಾದ ಮಂಡಿಸಿ, 'ಇಂದಿನ ದಿನಗಳಲ್ಲಿ ಲಂಚವನ್ನು ನೇರವಾಗಿ ಪಡೆಯುವುದಿಲ್ಲ. ಬೇರೊಬ್ಬರ ಮೂಲಕ ಹಣ ಸ್ವೀಕರಿಸುತ್ತಾರೆ. ಇಲ್ಲೂ ಸಹ ಅದೇ ರೀತಿಯಾಗಿದ್ದು, ಪುತ್ರನ ಮೂಲಕ ಲಂಚವನ್ನು ಪಡೆದಿದ್ದಾರೆ' ಎಂದರು.
ತಂದೆ ಹಾಗೂ ಮಗ ಒಂದೇ ಮನೆಯಲ್ಲಿ ವಾಸವಾಗಿದ್ದರೆ ಎನ್ನುವ ನ್ಯಾಯಪೀಠದ ಪ್ರಶ್ನೆಗೆ ಉತ್ತರಿಸಿದ ಅಶೋಕ್ ಹಾರನಹಳ್ಳಿ, ' ಬೆಂಗಳೂರಿನಲ್ಲಿ ಇರುವಾಗ ವಿರೂಪಾಕ್ಷಪ್ಪ ಮಗನ ಮನೆಯಲ್ಲಿ ಇರುತ್ತಿದ್ದರು. ವಿರೂಪಾಕ್ಷಪ್ಪ ಬಳಸುತ್ತಿದ್ದ ಬೆಡ್ ರೂಮ್‌ನಿಂದಲೂ 10 ಲಕ್ಷ ರೂಪಾಯಿ ವಶಕ್ಕೆ ಪಡೆಯಲಾಗಿದೆ. ಆ ಬೆಡ್ ರೂಮ್‌ಅನ್ನು ಮಾವ ಬಳಸುತ್ತಿದ್ದರೆಂದು ಅರ್ಜಿದಾರರ ಸೊಸೆಯ ಹೇಳಿಕೆ ಇದೆ.
ಜೊತೆಗೆ, ಮಾಡಾಳು ವಿರೂಪಾಕ್ಷಪ್ಪ ಅವರ ಸೂಚನೆ ಮೇರೆಗೆ ದೂರುದಾರರು ಅವರ ಪುತ್ರನನ್ನು ಭೇಟಿಯಾಗಿದ್ದರು. ಅಲ್ಲಿ ಬಿಲ್ ಪಾವತಿಗೆ ಲಂಚ ನೀಡುವಂತೆ ಬೇಡಿಕೆ ಇಡಲಾಗಿತ್ತು. ಈ ಸಂಭಾಷಣೆಯನ್ನು ದೂರುದಾರರು ರೆಕಾರ್ಡ್ ಸಹ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಕೆಎಸ್‌ಡಿಎಲ್ ಅಧ್ಯಕ್ಷರೇ ಲಂಚಕ್ಕೆ ಬೇಡಿಕೆ ಇಟ್ಟಿದ್ದರೇ? ಲಂಚಕ್ಕೆ ಬೇಡಿಕೆ ಇಟ್ಟಿದ್ದಕ್ಕೆ ಹಾಗೂ ಪಡೆದಿದ್ದಕ್ಕೆ ಸಾಕ್ಷ್ಯವಿದೆಯೇ? ಪ್ರಕರಣದಲ್ಲಿ ಅರ್ಜಿದಾರರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸುವ ಅಗತ್ಯವೇನಿದೆ? ಸಿನಿಮಾ ಮಾದರಿಯಲ್ಲಿ ಕುರ್ಚಿಗೆ ಕೈ ಕಟ್ಟಿ ವಿಚಾರಣೆಗೆ ಒಳಪಡಿಸುತ್ತೀರಾ? ಪ್ರತಿ ದಿನ ವಿಚಾರಣೆಗೆ ಹಾಜರಾಗಿ, ತನಿಖೆಗೊಳಗಾಗಿದ್ದಾರೆ. ಹೀಗಿರುವಾಗ ಬಂಧಿಸಿ, ವಿಚಾರಣೆಗೆ ಒಳಪಡಿಸುವ ಅಗತ್ಯವೇನಿದೆ ಎಂದು ನ್ಯಾಯಪೀಠ ಪ್ರಶ್ನಿಸಿತು.
ಈ ವೇಳೆ ಲೋಕಾಯುಕ್ತ ಪರ ವಕೀಲರು, 'ಈ ಮಾನದಂಡ ಅನುಸರಿಸಿದರೆ ಎಲ್ಲ ಪ್ರಕರಣಗಳಲ್ಲೂ ನಿರೀಕ್ಷಣಾ ಜಾಮೀನು ನೀಡಬೇಕಾಗುತ್ತದೆ. ಬಂಧಿಸಿ ವಿಚಾರಣೆಗೊಳಪಡಿಸಿದಾಗ ತನಿಖಾಧಿಕಾರಿಗೆ ಹೆಚ್ಚಿನ ಮಾಹಿತಿ ಲಭ್ಯವಾಗುತ್ತದೆ. ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 164ರ ಅಡಿ ಮಾಡಾಳು ವಿರೂಪಾಕ್ಷಪ್ಪ ವಿರುದ್ಧ ಕೆಎಸ್‌ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಸ್ವಇಚ್ಛಾ ಹೇಳಿಕೆ ದಾಖಲಿಸಿದ್ದಾರೆ. 2ನೇ ಆರೋಪಿಯಾಗಿರುವ ಪ್ರಶಾಂತ್ ಅವರು ಕೆಎಸ್‌ಡಿಎಲ್ ಎಂಡಿಯೊಂದಿಗೆ ಟೆಂಡರ್ ಮಾತುಕತೆ ನಡೆಸಿದ್ದಾರೆ' ಎಂದರು.












Click it and Unblock the Notifications