ಪಕ್ಷ ಬಿಡಿ ಅಂದ್ರು ಕುಮಾರಸ್ವಾಮಿ, ಬಿಡೋಲ್ಲ ಅಂದ್ರು ಬಾಲಕೃಷ್ಣ!
ಬೆಂಗಳೂರು, ಅಕ್ಟೋಬರ್ 22 : ಜೆಡಿಎಸ್ ಪಕ್ಷದಲ್ಲಿ ಭಿನ್ನಮತ ಭುಗಿಲೆದ್ದಿದೆಯೇ?, ಮಾಗಡಿ ಕ್ಷೇತ್ರದ ಜೆಡಿಎಸ್ ಶಾಸಕ ಬಾಲಕೃಷ್ಣ ಅವರು ಕಾಂಗ್ರೆಸ್ ಸೇರಲಿದ್ದಾರೆಯೇ?, ಬಾಲಕೃಷ್ಣ ಅವರಿಗೆ ಪಕ್ಷ ಬಿಡುವಂತೆ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆಯೇ?....ಜೆಡಿಎಸ್ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ನಾಯಕರ ಮಾತಿನ ಏಟು, ಎದಿರೇಟಿನಿಂದ ಸಾಬೀತಾಗುತ್ತಿದೆ.
ಮಾಗಡಿಯಲ್ಲಿ ನಡೆದ ಸಮಾರಂಭವೊಂದರಲ್ಲಿ 'ಪಕ್ಷವು ಯಾವಾಗಲೂ ಆಡಳಿತ ಪಕ್ಷದ ಜೊತೆಗಿರಬೇಕು' ಎಂದು ಶಾಸಕ ಬಾಲಕೃಷ್ಣ ಅವರು ನೀಡಿರುವ ಹೇಳಿಕೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರನ್ನು ಕೆರಳಿಸಿದೆ. 'ನಿಮಗೆ ಅಧಿಕಾರ ಬೇಕು, ಸಚಿವ ಸ್ಥಾನ ಬೇಕು ಎಂಬ ಆಸೆ ಇದ್ದರೆ ನಮ್ಮ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ ಸೇರಿ ಚುನಾವಣೆಗೆ ಸ್ಪರ್ಧಿಸಿ' ಎಂದು ಎಚ್ಡಿಕೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ['ಬಿಬಿಎಂಪಿಯಲ್ಲಿ ಮೈತ್ರಿ : ದೇವೇಗೌಡರಿಗೆ ಲಾಭ ಜಾಸ್ತಿ']
'ನಾನು ಪಕ್ಷದ ಹಿತದೃಷ್ಟಿಯಿಂದ ಹೇಳಿಕೆ ನೀಡಿದ್ದೇನೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಆಪರೇಷನ್ ಕಮಲದ ವೇಳೆಯೇ ನಾನು ಬೇರೆ ಪಕ್ಷಕ್ಕೆ ಹೋಗಿಲ್ಲ. ಈಗ ಕಾಂಗ್ರೆಸ್‌ಗೆ ಹೋಗುತ್ತೇನೆಯೇ? ಕುಮಾರಸ್ವಾಮಿ ಅವರು ಎಚ್.ಡಿ.ರೇವಣ್ಣ ಅವರನ್ನು ಉಪ ಮುಖ್ಯಮಂತ್ರಿ ಮಾಡಲು ನಮ್ಮನ್ನೆಲ್ಲಾ ಕರೆದುಕೊಂಡು ಹೋದರೆ ಅವರ ಜತೆ ಹೋಗುತ್ತೇವೆ' ಎಂದು ಬಾಲಕೃಷ್ಣ ಅವರು ಸ್ಪಷ್ಟನೆ ನೀಡಿದ್ದಾರೆ. ['ನನ್ನ ಆಸ್ತಿಯನ್ನು ಕುಮಾರಸ್ವಾಮಿಗೆ ಬರೆದುಕೊಡುತ್ತೇನೆ']
'ಪಕ್ಷದ ಮೇಲೆ ನಂಬಿಕೆ ಇಟ್ಟು ಯಾರೇ ಬಂದರೂ ಸ್ವಾಗತಿಸುವುದಾಗಿ' ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಹೇಳಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆ. ಬಾಲಕೃಷ್ಣ ಮತ್ತು ಕುಮಾರಸ್ವಾಮಿ ಅವರ ನಡುವಿನ ಮಾತುಗಳೇನು? ಎಂಬ ಮಾಹಿತಿ ಚಿತ್ರಗಳಲ್ಲಿದೆ.....

'ಪೂರ್ವ ಹೊಂದಾಣಿಕೆ ಮಾಡಿಕೊಂಡರೆ ಒಳ್ಳೆಯದು'
ಮಾಗಡಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಬಾಲಕೃಷ್ಣ ಅವರು 'ಜೆಡಿಎಸ್ 10 ವರ್ಷಗಳಿಂದ ಪ್ರತಿಪಕ್ಷ ಸ್ಥಾನದಲ್ಲೇ ಇದೆ. ಆದ್ದರಿಂದ, ಪಕ್ಷದ ಶಾಸಕರ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳೇ ಆಗುತ್ತಿಲ್ಲ. ಜನರ ನಿರೀಕ್ಷೆ ಪೂರೈಸಲು ಆಗುತ್ತಿಲ್ಲ. ಮುಂದಿನ ವಿಧಾನಸಭೆಗೆ ಚುನಾವಣಾ ಪೂರ್ವ ಹೊಂದಾಣಿಕೆ ಮಾಡಿಕೊಂಡರೆ ಒಳ್ಳೆಯದು' ಎಂದು ಹೇಳಿದ್ದರು.

'ಮೈತ್ರಿ ವಿಚಾರ ಪಕ್ಷದ ನಾಯಕರಿಗಿದೆ'
'ಪಕ್ಷದ ವರಿಷ್ಠರು ಈಗಾಗಲೇ ಬಿಬಿಎಂಪಿಯಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಜೊತೆ ಕೈ ಜೋಡಿಸಿದ್ದಾರೆ. ಇನ್ನು ನಾನೇನು ಆಡಳಿತ ಪಕ್ಷವನ್ನು ಸೇರುವುದು?. ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲೂ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಉದ್ದೇಶ ಪಕ್ಷದ ನಾಯಕರಿಗಿದೆ' ಎಂದು ಬಾಲಕೃಷ್ಣ ಅವರು ಹೇಳಿದ್ದರು.

ಖಾರವಾದ ಉತ್ತರ ನೀಡಿದ ಕುಮಾರಸ್ವಾಮಿ
ಬಾಲಕೃಷ್ಣ ಅವರ ಮಾತಿಗೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ ಅವರು, 'ಅಧಿಕಾರದ ಆಸೆ ಇದ್ದರೆ ತಕ್ಷಣವೇ ಕಾಂಗ್ರೆಸ್ ಸೇರಬಹುದು. ಸಚಿವ ಸಂಪುಟ ವಿಸ್ತರಣೆಯೂ ಆಗುತ್ತದಲಿದೆ. ಜೆಡಿಎಸ್‌ಗೆ ರಾಜೀನಾಮೆ ಕೊಟ್ಟು ಅಧಿಕಾರದಲ್ಲಿರುವ ಕಾಂಗ್ರೆಸ್‌ಗೆ ಸೇರಿಕೊಳ್ಳಲಿ' ಎಂದು ಎಚ್ಡಿಕೆ ಹೇಳಿದ್ದಾರೆ.

'ಎಷ್ಟು ಶಾಸಕರ ಕ್ಷೇತ್ರ ಅಭಿವೃದ್ಧಿಯಾಗಿದೆ?'
'ಬಿಜೆಪಿ ಅಧಿಕಾರಾವಧಿಯಲ್ಲಿ ನಮ್ಮ ಪಕ್ಷದ ಹಲವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದರು. ಬಳಿಕ ಚುನಾವಣೆ ಎದುರಿಸಿದ ಅವರಲ್ಲಿ ಎಷ್ಟು ಮಂದಿಯ ಕ್ಷೇತ್ರ ಅಭಿವೃದ್ಧಿ ಆಗಿದೆ?' ಎಂಬುದನ್ನು ಎಲ್ಲರೂ ತಿಳಿಯಲಿ ಎಂದು ಕುಮಾರಸ್ವಾಮಿ ಖಡಕ್ ಉತ್ತರ ನೀಡಿದ್ದಾರೆ.

'ನನಗೆ ಸಚಿವನಾಗುವ ಆಸೆ ಇಲ್ಲ'
'ಪಕ್ಷದ ಹಿತದೃಷ್ಟಿಯಿಂದ ಇಂತಹ ಹೇಳಿಕೆ ನೀಡಿದ್ದೇನೆ. ಇದು ಪಕ್ಷ ವಿರೋಧಿ ಚಟುವಟಿಕೆಯಲ್ಲ. ಆಪರೇಷನ್ ಕಮಲದ ವೇಳೆಯೇ ನಾನು ಹೋಗಲಿಲ್ಲ, ಈಗ ಕಾಂಗ್ರೆಸ್‌ಗೆ ಹೋಗುತ್ತೇನೆಯೇ?' ಎಂದು ಬಾಲಕೃಷ್ಣ ಅವರು ಪ್ರಶ್ನಿಸಿದ್ದಾರೆ.

'ರೇವಣ್ಣ ಉಪಮುಖ್ಯಮಂತ್ರಿಯಾಗಬಹುದು'
'ನನಗೆ ಸಚಿವನಾಗುವ ಆಸೆ ಇದೆ ಎಂದು ಎಲ್ಲೂ ಹೇಳಿಲ್ಲ. ಕುಮಾರಸ್ವಾಮಿ ಅವರು ದೊಡ್ಡ ಮನಸ್ಸು ಮಾಡಿ ಕಾಂಗ್ರೆಸ್ ಜೊತೆ ಕೈ ಜೋಡಿಸಿದರೆ ಎಚ್.ಡಿ. ರೇವಣ್ಣ ಉಪಮುಖ್ಯಮಂತ್ರಿ ಯಾಗಬಹುದು. ನನಗೂ ಸಚಿವ ಸ್ಥಾನ ದೊರಕಿಸಿಕೊಡಬಹುದು' ಎಂದು ಬಾಲಕೃಷ್ಣ ಹೇಳಿದ್ದಾರೆ.

'ಯಾರೇ ಬಂದರೂ ಸ್ವಾಗತ'
'ಪಕ್ಷದ ಮೇಲೆ ನಂಬಿಕೆ ಇಟ್ಟು ಯಾರೇ ಬಂದರೂ ಸ್ವಾಗತಿಸುವುದಾಗಿ' ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದು, ಹಲವು ಕುತೂಹಲಗಳಿಗೆ ಕಾರಣವಾಗಿದೆ. ಬಾಲಕೃಷ್ಣ ಅವರು ಕಾಂಗ್ರೆಸ್ ಸೇರಲಿದ್ದಾರೆಯೇ? ಎಂಬ ಪ್ರಶ್ನೆಗೆ ಕಾಲವೇ ಉತ್ತರಿಸಬೇಕು.












Click it and Unblock the Notifications