Breaking News: ಮಾಜಿ ಸಚಿವ ಜನಾರ್ದನ ರೆಡ್ಡಿ ರೇಂಜ್ ರೋವರ್ ಕಾರು ಪೊಲೀಸ್ ವಶಕ್ಕೆ
ಬೆಂಗಳೂರು, ಅಕ್ಟೋಬರ್ 08: ಗಂಗಾವತಿ ಶಾಸಕ, ಬಿಜೆಪಿ ನಾಯಕ ಜನಾರ್ದನ ರೆಡ್ಡಿ ಬಳಕೆ ಮಾಡುತ್ತಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಜನಾರ್ದನ ರೆಡ್ಡಿ ಕಾರನ್ನು ಬೆಂಗಳೂರಿಲ್ಲಿ ವಶಕ್ಕೆ ಪಡೆದುಕೊಂಡು ಪೊಲೀಸರು ಗಂಗಾವತಿಗೆ ತೆಗೆದುಕೊಂಡು ಹೋಗಿದ್ದಾರೆ. ಕೊಪ್ಪಳಕ್ಕೆ ಭೇಟಿ ನೀಡಿದ್ದ ಜನಾರ್ದನ ರೆಡ್ಡಿ, ಕಾರಿನ ವಿರುದ್ಧ ನಿಯಮ ಉಲ್ಲಂಘನೆ ಹಿನ್ನಲೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಗಂಗಾವತಿ ಸಂಚಾರಿ ಠಾಣೆಯ ಪೊಲೀಸರು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ರೇಂಜ್ ರೋವರ್ ಕಾರನ್ನು ಬೆಂಗಳೂರಿನಲ್ಲಿ ಮಂಗಳವಾರ ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಗಂಗಾವತಿಗೆ ತೆಗೆದುಕೊಂಡು ಹೋಗಿದ್ದಾರೆ. ಜನಾರ್ದನ ರೆಡ್ಡಿ ಬಳಕೆ ಮಾಡುವ ರೇಂಜ್ ರೋವರ್ ಸೇರಿದಂತೆ ಮೂರು ಕಾರುಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಜನಾರ್ದನ ರೆಡ್ಡಿ ಬಳ್ಳಾರಿಗೆ ಭೇಟಿ ನೀಡಲು ಇದ್ದ ನಿರ್ಬಂಧವನ್ನು ಸುಪ್ರೀಂಕೋರ್ಟ್ ತೆರವುಗೊಳಿಸಿತ್ತು. ನವರಾತ್ರಿಯ ಮೊದಲ ದಿನ ಬಳ್ಳಾರಿಗೆ ಅವರು ಭೇಟಿ ನೀಡಿದ್ದರು. ಬಿಜೆಪಿ ಕಾರ್ಯಕರ್ತರು ಮತ್ತು ರೆಡ್ಡಿ ಅಭಿಮಾನಿಗಳು ಭವ್ಯ ಸ್ವಾಗತ ಕೋರಿದ್ದರು. ಅಲ್ಲಿಂದ ವಾಪಸ್ ಗಂಗಾವತಿಗೆ ಆಗಮಿಸಿದ್ದ ಅವರು ನಿಯಮ ಉಲ್ಲಂಘನೆ ಮಾಡಿದ್ದರು.
ಬೆಂಗಾವಲು ಪಡೆಗೆ ಅಡ್ಡಿ: ಮುಖ್ಯಮಂತ್ರಿಗಳ ಬೆಂಗಾವಲು ಪಡೆಗೆ ಅಡ್ಡಿಪಡಿಸಿದ ಹಿನ್ನಲೆಯಲ್ಲಿ ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದೆ. ಈ ಹಿನ್ನಲೆಯಲ್ಲಿ ಜನಾರ್ದನ ರೆಡ್ಡಿ ರೇಂಜ್ ರೋವರ್ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಅಕ್ಟೋಬರ್ 5ರಂದು ಗಂಗಾವತಿಯಿಂದ ಗಿಣಿಗೇರಾ ಏರ್‌ಸ್ಟ್ರಿಪ್ ಕಡೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಯಚೂರು ಪ್ರವಾಸ ಮುಗಿಸಿಕೊಂಡು ಹೋಗುತ್ತಿದ್ದರು. ಆಗ ರೇಂಜ್ ರೋವರ್ ಕಾರಿನಲ್ಲಿದ್ದ ಜನಾರ್ದನ ರೆಡ್ಡಿ ಮುಖ್ಯಮಂತ್ರಿಗಳ ಬೆಂಗಾವಲು ಪಡೆಗೆ ಅಡ್ಡವಾಗಿ ಹೋಗಿದ್ದರು. ಈ ಹಿನ್ನಲೆಯಲ್ಲಿ ರೇಂಜ್ ರೋವರ್ ಸೇರಿ ಮೂರು ಕಾರುಗಳ ವಿರುದ್ಧ ಗಂಗಾವತಿ ಠಾಣೆಯ ಎಎಸ್ಐ ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಮುಖ್ಯಮಂತ್ರಿಗಳ ಕಾರು ಸಾಗುತ್ತಿದ್ದ ಕಾರಣ ಶಿಷ್ಟಾಚಾರದಂತೆ ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಆಗ ಕಾರಿನಲ್ಲಿ ಹೋಗುತ್ತಿದ್ದ ಜನಾರ್ದನ ರೆಡ್ಡಿ ಕಾರನ್ನು ತಡೆದು ನಿಲ್ಲಿಸಲಾಗಿತ್ತು. ಕೆಲಕಾಲ ಜನಾರ್ದನ ರೆಡ್ಡಿ ಟ್ರಾಫಿಕ್‌ನಲ್ಲಿ ಕಾಯುತ್ತಿದ್ದರು. ಬಳಿಕ ವಾಹನ ಬಿಡುವಂತೆ ಮನವಿ ಮಾಡಿದ್ದರು. ಆದರೆ ಪೊಲೀಸರು ಮುಖ್ಯಮಂತ್ರಿಗಳ ಕಾರು ಹೋಗುವ ತನಕ ಕಾಯಲು ಸೂಚಿಸಿದ್ದರು.
ಆಗ ಜನಾರ್ದನ ರೆಡ್ಡಿ ರೇಂಜ್ ರೋವರ್ ಕಾರನ್ನು ಡಿವೈಡರ್ ಮೇಲೆ ಹತ್ತಿಸಿ, ಮುಖ್ಯಮಂತ್ರಿಗಳ ಬೆಂಗಾವಲು ಪಡೆಗೆ ಕಾರು ಬರುತ್ತಿದ್ದ ದಿಕ್ಕಿನಲ್ಲಿ ಸಾಗಿದ್ದರು. ಆಗ ಎದುರಿಗೆ ಬಂದ ಮುಖ್ಯಮಂತ್ರಿಗಳ ಬೆಂಗಾವಲು ಪಡೆಗೆ ಕಾರು ನಿಲ್ಲಿಸಿತ್ತು. ಮುಖ್ಯಮಂತ್ರಿಗಳ ಬೆಂಗಾವಲು ಪಡೆಗೆ ಅಡ್ಡಿಪಡಿಸಿದ ಕಾರಣಕ್ಕೆ ಅವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿತ್ತು.
ಶಿಷ್ಟಾಚಾರ ಪ್ರಕಾರದ ಪ್ರಕಾರ ಮುಖ್ಯಮಂತ್ರಿ ಮತ್ತು ಅವರ ಬೆಂಗಾವಲು ಪಡೆ ಸಾಗುವ ರಸ್ತೆಗೆ ಅವರು ಸಂಚರಿಸುತ್ತಿರುವ ಹೊತ್ತಿನಲ್ಲಿ ಬೇರೆ ವಾಹನಗಳಿಗೆ ಪ್ರವೇಶ ಇರುವುದಿಲ್ಲ ಝೀರೊ ಟ್ರಾಫಿಕ್ ವ್ಯವಸ್ಥೆ ಮಾಡಲಾಗುತ್ತದೆ. ಈ ನಿಯಮವನ್ನು ಉಲ್ಲಂಘನೆ ಮಾಡಿದರೆ ಅಂತಹವರ ವಿರುದ್ಧ ಪ್ರಕರಣ ದಾಖಲು ಮಾಡಲಾಗುತ್ತದೆ. ನಗರದ ರಸ್ತೆಯಲ್ಲಿ ಎಷ್ಟು ವಾಹನ ಸಂಚಾರ ದಟ್ಟಣೆ ಇದ್ದರೂ ಸಹ ಮುಖ್ಯಮಂತ್ರಿಗಳ ಕಾರು ಬರುವಾಗ ಝೀರೊ ಟ್ರಾಫಿಕ್ ವ್ಯವಸ್ಥೆ ಒದಗಿಸಲಾಗುತ್ತದೆ.












Click it and Unblock the Notifications