ಕರ್ನಾಟಕದ ಯಾವ ಇಲಾಖೆಯಲ್ಲಿ ನೆಟ್ಟಗೆ ಕೆಲಸ ಆಗ್ತಿದೆ: ಕಂದಾಯ ಇಲಾಖೆ ಭ್ರಷ್ಟಾಚಾರ ಕಂಡು ಹೌಹಾರಿದ ಸಚಿವ!
ಬೆಂಗಳೂರು, ಜೂನ್ 21: ವಸತಿ ಯೋಜನೆಗಳಿಗೆ ಹಣ ನೀಡಿದವರಿಗೆ ಮಾತ್ರವೇ ಸಚಿವ ಬಿ.ಝಡ್ ಜಮೀರ್ ಅಹ್ಮದ್ ಅವರು ಮನೆ ನೀಡುತ್ತಿದ್ದಾರೆ ಎಂದು ಸ್ವತಃ ಕಾಂಗ್ರೆಸ್ ಶಾಸಕರೇ ಹೇಳಿದ್ದ ಆಡಿಯೋ ವೈರಲ್ ಆಗಿದೆ. ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಹೀಗಿರುವಾಗಲೇ ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರವನ್ನು ಸಚಿವ ಕೃಷ್ಣಬೈರೇಗೌಡ ಅವರೇ ಕಂಡು ಹೌಹಾರಿದ್ದಾರೆ. ಬೆಂಗಳೂರಿನಲ್ಲಿ ಸರ್ವರ್ ಡೌನ್ ಅಂದರೆ ಹೇಗೆ? ಎಂದು ವಿಪಕ್ಷ ನಾಯಕರು ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಯಾವ ಇಲಾಖೆಯಲ್ಲಿ ನೆಟ್ಟಗೆ ಕೆಲಸ ನಡೆಯುತ್ತಿದೆ ಅಂತ ನೀವೇ ತಿಳಿಸಬೇಕು ಎಂದು ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ. ಜೊತೆಗೆ ಕಂದಾಯ ಇಲಾಖೆಯಲ್ಲಿನ ಭ್ರಷ್ಟಾಚಾರ ಸ್ವತಃ ಕಂಡ ಕಂದಾಯ ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ವಿಡಿಯೋ ಸಹ ಶೇರ್ ಮಾಡಿಕೊಂಡಿದ್ದಾರೆ.

ರಾಜ್ಯದ್ಲಲಿ ಒಂದು ಕಡೆ ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿರೋದನ್ನು ಸ್ವತಃ ಕಣ್ಣಾರೆ ಕಂಡ ಕಂದಾಯ ಸಚಿವರು ಬೆಚ್ಚಿಬಿದ್ದಿದ್ದಾರೆ. ಇತ್ತ ರಾಜ್ಯ ವಸತಿ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಅವರು ವಸತಿ ಇಲಾಖೆಯಲ್ಲಿ ದುಡ್ಡು ಕೊಟ್ಟರೇ ಮಾತ್ರ ಮನೆಗಳನ್ನು ಕೊಡುತ್ತಿದ್ದಾರೆ. ತಮ್ಮ ಕ್ಷೇತ್ರದ ಜನರಿಗೆ ಮನೆ ಕೊಡಿಸಲಾಗದೇ ಕಾಂಗ್ರೆಸ್ ಪಕ್ಷದ ಶಾಸಕರೇ ಕೈ ಚೆಲ್ಲಿದ್ದಾರೆ ಎಂದು ಅವರು ಲೇವಡಿ ಮಾಡಿದರು.
ರಾಜ್ಯದಲ್ಲಿ ಹೀಗೆ ಬರಗೆಟ್ಟು ಹೋದ ವ್ಯವಸ್ಥೆಗೆ ಆಕ್ಸಿಜನ್ ತರಹ ಇದ್ದಿದ್ದೇ ಸಬ್ ರಿಜಿಸ್ಟ್ರಾರ್ ಕಚೇರಿ. ಅಲ್ಲಿಂದ ಸರ್ಕಾರಕ್ಕೆ ಆದಾಯ ಬರುತ್ತಿತ್ತು. ಆದರೇ ಈಗ ಅಲ್ಲಿಯೂ ಸರ್ವರ್ ಡೌನ್ ಎಂದು ಹೇಳಲಾಗುತ್ತಿದೆ. ಭ್ರಷ್ಟಾಚಾರ ನಡೆಯುತ್ತಿದೆ ಎಂದು ಅವರು ವಿವರಿಸಿದರು.
ಸರ್ವರ್ ನಿರ್ವಹಣೆ, ಪಾವತಿಗೆ ಹಣ ಇಲ್ಲವೇ?
ಭಾರತದ ಐಟಿ ರಾಜಧಾನಿ ಬೆಂಗಳೂರಿನಲ್ಲಿ ಸರ್ವರ್ ಡೌನ್ ಅಂದರೇ ಹೇಗೆ? ಖಾಸಗಿ ಕಂಪನಿಗಳಿಗಿಲ್ಲದ ಸರ್ವರ್ ಡೌನ್, ಸರ್ಕಾರಿ ಕಚೇರಿಗೆ ಆಗುತ್ತಿದೆ ಅಂದರೇ ಸರ್ವರ್ ನಿರ್ವಹಿಸಲು ಪಾವತಿಸಬೇಕಾದ ಹಣವನ್ನು ಪಾವತಿಸಲು
ಕಾಂಗ್ರೆಸ್ ಸರ್ಕಾರದ ಬೊಕ್ಕಸದಲ್ಲಿ ಹಣವಿದೆಯಾ ಅಥವಾ ಇಲ್ಲವಾ? ಎನ್ನುವ ಅನುಮಾನ ಕಾಡುತ್ತಿದೆ ಎಂದು ಸರ್ಕಾರದ ಆಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಿಡಿಯೋದಲ್ಲಿ ಕಾಣುವಂತೆ ಕಂದಾಯ ಇಲಾಖೆಯಲ್ಲಿ ಅಧಿಕಾರಿಗಳು ಜನಸಾಮಾನ್ಯರ ದಾಖಲೆ ಪತ್ರ ನೀಡಲು ವಿಳಂಬ ಮಾಡಿದ್ದಾರೆ. ಹಣ ಪಡೆಯುತ್ತಿರುವ ಆರೋಪ ಕೇಳಿ ಬಂದಿದ್ದು, ಅದರ ಬಗ್ಗೆ ಬೋರ್ಡ್ ಹಾಕಿಬಿಡಿ, ಜನ ದುಡ್ಡು ಕೊಟ್ಟು ಹೋಗುತ್ತಾರೆ. ಕೆಲಸ ಪಾರದರ್ಶಕವಾಗಿರಲಿದೆ ಎಂದು ಅಧಿಕಾರಿಗಳ ಬೆವರಿಳಿಸಿದ್ದಾರೆ. ಜನ ಕಾಳಜಿ ತೋರಿದ್ದು ಕಾಣಿಸುತ್ತದೆ.
ವಸತಿ ಇಲಾಖೆ ಭ್ರಷ್ಟಾಚಾರ ಶಾಸಕರಿಂದಲೇ ಬಹಿರಂಗ
ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಆರ್.ಪಾಟೀಲ್ ಅವರು ವಸತಿ ಇಲಾಖೆಯಲ್ಲಿ ಹಣ ನೀಡಿದವರಿಗೆ ಮಾತ್ರವೇ ಮನೆ ಮಂಜೂರು ಮಾಡಲಾಗಿದೆ ಎಂದು ಸಚಿವ ಬಿ.ಝಡ್ ಜಮೀರ್ ಅಹ್ಮದ್ ಅವರ ಆಪ್ತ ಕಾರ್ಯದರ್ಶಿ ಸರ್ಫರಾಜ್ಅವರೊಂದಿಗೆ ಮಾತನಾಡಿದ ಆಡಿಯೋ ವೈರಲ್ ಆಗಿದೆ. ಇದು ಸರ್ಕಾರದ ಇಲಾಖೆಗಳ ಮಟ್ಟದಲ್ಲಿನ ಭ್ರಷ್ಟಾಚಾರವನ್ನು ಎತ್ತಿ ತೋರಿಸುತ್ತದೆ. ಸ್ವತಃ ಕಾಂಗ್ರೆಸ್ ಶಾಸಕರೇ ಇದನ್ನು ಬಹಿರಂಗಪಡಿಸಿದ್ದಾರೆ. ಇದರ ವಿರುದ್ಧ ಬಿಜೆಪಿ ನಾಯಕರು ಹರಿಹಾಯ್ದಿದ್ದಾರೆ..












Click it and Unblock the Notifications