ಜಾರ್ಜ್ ವಿರುದ್ಧ ಎಫ್‌ಐಆರ್ : ಯಾರು, ಏನು ಹೇಳಿದರು?
ಬೆಂಗಳೂರು, ಜುಲೈ 18 : ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಸಮರ್ಥಿಸಿಕೊಳ್ಳುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿನ್ನಡೆ ಉಂಟಾಗಿದೆ. ಜಾರ್ಜ್ ಮತ್ತು ಇತರ ಇಬ್ಬರು ಐಪಿಎಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲು ಮಾಡಲು ಕೋರ್ಟ್ ಸೂಚನೆ ನೀಡಿದೆ. [ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣದ Timeline]
ಎಂ.ಕೆ.ಗಣಪತಿ ಅವರ ಪುತ್ರ ನೇಹಾಲ್ ಅವರು ಜುಲೈ 11ರಂದು ಸಲ್ಲಿಸಿದ್ದ ಖಾಸಗಿ ದೂರನ್ನು ಪರಿಗಣಿಸಿ, ಮಡಿಕೇರಿ ಜೆಎಂಎಫ್‌ಸಿ ಕೋರ್ಟ್ ನ್ಯಾಯಾಧೀಶೆ ಅನ್ನಪೂರ್ಣೇಶ್ವರಿ ಅವರು ಮೂವರ ವಿರುದ್ಧ ಎಫ್‌ಐಆರ್ ದಾಖಲು ಮಾಡಲು ಮಡಿಕೇರಿ ನಗರ ಠಾಣೆ ಪೊಲೀಸರಿಗೆ ಆದೇಶ ನೀಡಿದ್ದಾರೆ.[ಜಾರ್ಜ್ ವಿರುದ್ಧ FIR ದಾಖಲಿಸಲು ಸೂಚನೆ]
ಕೋರ್ಟ್ ಆದೇಶದಂತೆ ಸಚಿವ ಕೆ.ಜೆ.ಜಾರ್ಜ್, ಲೋಕಾಯುಕ್ತ ಐಜಿಪಿ ಪ್ರಣಬ್ ಮೊಹಾಂತಿ, ಗುಪ್ತಚರ ವಿಭಾಗದ ಎಡಿಜಿಪಿ ಎ.ಎಂ.ಪ್ರಸಾದ್ ಅವರ ವಿರುದ್ಧ ಎಫ್‌ಐಆರ್ ದಾಖಲಾಗಲಿದೆ. ಈ ಆದೇಶದಿಂದಾಗಿ ಪ್ರತಿಪಕ್ಷಗಳು ಮತ್ತು ಜನರ ಹೋರಾಟಕ್ಕೆ ಜಯ ಸಿಕ್ಕಿದಂತಾಗಿದೆ. [ಗಣಪತಿ ಆತ್ಮಹತ್ಯೆ, ಸಚಿವ ಜಾರ್ಜ್ ಹೇಳುವುದೇನು?]
ಕೋರ್ಟ್ ಆದೇಶದ ಬಳಿಕ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿರು ಸಚಿವ ಜಾರ್ಜ್ ಅವರು, 'ನಾನು ಅಪರಾಧಿ ಅಲ್ಲ. ಆದ್ದರಿಂದ ರಾಜೀನಾಮೆ ನೀಡುವುದಿಲ್ಲ. ನ್ಯಾಯಾಂಗದ ಆದೇಶವನ್ನು ನಾನು ಗೌರವಿಸುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಳಿದರೆ ರಾಜೀನಾಮೆ ನೀಡುತ್ತೇನೆ' ಎಂದು ಪ್ರತಿಕ್ರಿಯೆ ನೀಡಿದರು. ಯಾರು, ಏನು ಹೇಳಿದರು ನೋಡೋಣ ಬನ್ನಿ....

'ಕಾನೂನಿನ ಆದೇಶಕ್ಕೆ ಬೆಲೆ ಕೊಡುತ್ತೇನೆ'
'ನ್ಯಾಯಾಲಯ ಎಫ್‌ಐಆರ್ ದಾಖಲು ಮಾಡುವಂತೆ ಆದೇಶ ನೀಡಿದೆ. ಕೋರ್ಟ್ ಆದೇಶಕ್ಕೆ ಬೆಲೆ ಕೊಡುತ್ತೇನೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ. ನಮ್ಮ ಪಕ್ಷದ ನಾಯಕರು, ವಕೀಲರ ಜೊತೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ' ಎಂದು ಸಚಿವ ಜಾರ್ಜ್ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದರು.

'ಮಾನ ಮರ್ಯಾದೆ ಇದ್ರೆ ರಾಜೀನಾಮೆ ಪಡೆಯಿರಿ'
'ಸರ್ಕಾರ ಮೊದಲಿನಿಂದಲೂ ಎಂ.ಕೆ.ಗಣಪತಿ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಹಠಮಾರಿ ಧೋರಣೆ ಅನುಸರಿಸುತ್ತಿದೆ. ನಾನು ಗಣಪತಿ ಅವರ ಕುಟುಂಬದವರನ್ನು ಭೇಟಿ ಮಾಡಿ ಕಾನೂನು ಹೋರಾಟಕ್ಕೆ ಸಲಹೆ ನೀಡಿದ್ದೆ. ಈಗ ಕೋರ್ಟ್ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಲು ಸೂಚನೆ ಕೊಟ್ಟಿದೆ. ಸರ್ಕಾರಕ್ಕೆ ಮಾನ ಮರ್ಯಾದೆ ಇದ್ರೆ ಈಗ ಸಚಿವರ ರಾಜೀನಾಮೆ ಪಡೆಯಬೇಕು' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದರು.

'ಈಗ ಏನು ಮಾಡುವರು ನೋಡೋಣ'
'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಷ್ಟು ದಿನ ಸಚಿವ ಜಾರ್ಜ್ ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದರು. ಈಗ ಏನು ಮಾಡುತ್ತಾರೆ? ಎಂದು ನೋಡುವೆವು. ಸಚಿವರ ವಿರುದ್ಧ ಎಫ್‌ಐಆರ್ ದಾಖಲು ಮಾಡಲು ಅನುಮತಿ ನೀಡಿದ್ದರಿಂದ, ಅವರ ರಾಜೀನಾಮೆ ಪಡೆಯಬೇಕು' ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರು ಪ್ರತಿಕ್ರಿಯೆ ನೀಡಿದರು.

'ಸಚಿವರಾಗಿ ಮುಂದುವರೆಯಲು ಸಾಧ್ಯವೇ ಇಲ್ಲ'
'ಯಾವುದೇ ಪ್ರಕರಣದಲ್ಲಿ ತನಿಖೆ ನಡೆಯುವಾಗ ಅವರು ಸಚಿವರಾಗಿ ಮುಂದುವರೆಯುವುದು ಸಾಧ್ಯವಿಲ್ಲ. ಆದ್ದರಿಂದ ಕೆ.ಜೆ.ಜಾರ್ಜ್ ಅವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು' ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿದರು.

'ಈಗ ಸರ್ಕಾರ ಏನು ಮಾಡುತ್ತದೆ?'
'ಮಡಿಕೇರಿ ಜೆಎಂಎಫ್‌ಸಿ ಕೋರ್ಟ್ ಸಚಿವ ಜಾರ್ಜ್ ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲು ಮಾಡಲು ಸೂಚನೆ ನೀಡಿದೆ. ಈಗ ಸರ್ಕಾರ ಏನು ಮಾಡುತ್ತದೆ ನೋಡೋಣ?' ಎಂದು ಬಿಜೆಪಿ ನಾಯಕ ಸುರೇಶ್ ಕುಮಾರ್ ಹೇಳಿದರು.

'ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು'
'ಸಚಿವ ಕೆಜೆ ಜಾರ್ಜ್ ಮಾತ್ರವಲ್ಲ ಅವರನ್ನು ಸಮರ್ಥಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು' ಎಂದು ಬಿಜೆಪಿ ನಾಯಕ ಆರ್.ಅಶೋಕ್ ಒತ್ತಾಯಿಸಿದರು.












Click it and Unblock the Notifications