Miss Universe 2026 : ಭಾರತವನ್ನು ಪ್ರತಿನಿಧಿಸಲಿದ್ದಾರೆ ಮಣಿಪಾಲ ಲಾ ಕಾಲೇಜಿನ ವಿದ್ಯಾರ್ಥಿನಿ ಕಾಜಿಯಾ ಲಿಜ್ ಮೆಜೊ
Miss Universe 2026 : 75ನೇ ಮಿಸ್ ಯೂನಿವರ್ಸ್ ಸ್ಪರ್ಧೆಯು ಪೋರ್ಟೊ ರಿಕೊದ ಸ್ಯಾನ್ ಜುವಾನ್‌ನಲ್ಲಿರುವ ಜೋಸ್ ಮಿಗುಯೆಲ್ ಅಗ್ರೆಲೋಟ್ ಕೊಲಿಸಿಯಂನಲ್ಲಿ ನಡೆಯಲಿದೆ. ಕಾಜಿಯಾ ಲಿಜ್ ಮೆಜೊ (Kaziah Liz Mejo) 75 ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಇವರು ಬೆಂಗಳೂರಿನ ಮಣಿಪಾಲ್ ಕಾನೂನು ಶಾಲೆಯ ಎರಡನೇ ವರ್ಷದ ವಿದ್ಯಾರ್ಥಿನಿ. ಈ ಹಿನ್ನೆಲೆಯಲ್ಲಿ ಮಣಿಪಾಲ್ ಲಾ ಸ್ಕೂಲ್‌ನ ಪರವಾಗಿ ಕಾಜಿಯಾ ಲಿಜ್ ಮೆಜೊ ಅವರನ್ನು ಸನ್ಮಾನಿಸಲಾಯಿತು. ಮಣಿಪಾಲ್ ಲಾ ಸ್ಕೂಲ್‌ನ ಬೆಂಗಳೂರಿನ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ನ ಅಂಗಸಂಸ್ಥೆ.

52 ಸ್ಪರ್ಧಿಗಳನ್ನು ಹಿಂದಿಕ್ಕಿದ ಸುಂದರಿ
ಆಗಸ್ಟ್ 23 ರಂದು ಜೈಪುರದಲ್ಲಿ ನಡೆದ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯಲ್ಲಿ ಮಿಸ್ ಯೂನಿವರ್ಸ್ ಇಂಡಿಯಾ 2026 (Miss Universe India 2026)ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. 19 ವರ್ಷದ ಮೆಜೊ, ದೇಶಾದ್ಯಂತದ 52 ಇತರ ಸ್ಪರ್ಧಿಗಳನ್ನು ಹಿಂದಿಕ್ಕಿ ಈ ಸಾಧನೆ ಮಾಡಿದ್ದಾರೆ. ಅಂತಿಮ ತೀರ್ಪುಗಾರರಲ್ಲಿ ಭಾರತದ ಮೊದಲ ಮಿಸ್ ಯೂನಿವರ್ಸ್ ಪ್ರಶಸ್ತಿ ವಿಜೇತೆ ಸುಶ್ಮಿತಾ ಸೇನ್, ಮಾಜಿ ಮಿಸ್ ಯೂನಿವರ್ಸ್ ಇಂಡಿಯಾ ಪ್ರಶಸ್ತಿ ವಿಜೇತೆ ಊರ್ವಶಿ ರೌಟೇಲಾ ಮತ್ತು ಸೆಲೀನಾ ಜೇಟ್ಲಿ ಇದ್ದರು.
ನವೆಂಬರ್ 24ಕ್ಕೆ ನಡೆಯಲಿದೆ ಫೈನಲ್ ರೌಂಡ್
75ನೇ ಮಿಸ್ ಯೂನಿವರ್ಸ್ ಸ್ಪರ್ಧೆಯು (Miss Universe 2026) ಪೋರ್ಟೊ ರಿಕೊದ ಸ್ಯಾನ್ ಜುವಾನ್‌ನಲ್ಲಿರುವ ಜೋಸ್ ಮಿಗುಯೆಲ್ ಅಗ್ರೆಲೋಟ್ ಕೊಲಿಸಿಯಂನಲ್ಲಿ ನಡೆಯಲಿದೆ. ನ್ಯಾಷನಲ್ ಕಾಸ್ಟ್ಯೂಮ್ ಕಾಂಪಿಟೇಶನ್ ಮತ್ತು ಪ್ರಿಲಿಮಿನರಿ ರೌಂಡ್ ನವೆಂಬರ್ 21 ಮತ್ತು 22 ರಂದು ನಡೆಯಲಿದೆ. ನವೆಂಬರ್ 24ಕ್ಕೆ ಅಂತಿಮ ಸುತ್ತು ನಡೆಯಲಿದ್ದು ಮಿಸ್ ಯುನಿವರ್ಸ್ ಯಾರಾಗಲಿದ್ದಾರೆ ಎನ್ನುವ ತೀರ್ಪು ಹೊರ ಬೀಳುತ್ತದೆ.
ಕಾಜಿಯಾ ಲಿಜ್ ಮೆಜೊ ಇತರ ಸಾಧನೆಗಳು
ಮೇಜೊ ಮೂಲತಃ ಕೇರಳದ ಅಲಪ್ಪುಳ ಜಿಲ್ಲೆಯ ಮಾವೆಲಿಕ್ಕರದವರು. ಆದರೆ ತಮ್ಮ ಬಾಲ್ಯದ ಹೆಚ್ಚಿನ ದಿನಗಳನ್ನು ಅಬುಧಾಬಿಯಲ್ಲಿ ಕಳೆದಿದ್ಧಾರೆ. ಮಿಸ್ ಯೂನಿವರ್ಸ್ ಇಂಡಿಯಾ ಪ್ರಶಸ್ತಿಯನ್ನು ಗೆದ್ದ ಕೇರಳದ ಮೊದಲ ಸ್ಪರ್ಧಿ ಎನ್ನುವ ಕೀರ್ತಿ ಇವರದ್ದು. ಅವರು ಈ ಹಿಂದೆ ಮಿಸ್ ಯೂನಿವರ್ಸ್ ಕೇರಳ 2026 ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದರು. ಮಿಸ್ ಟೀನ್ ಇಂಟರ್ನ್ಯಾಷನಲ್ 2025 ರಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 2024 ರಲ್ಲಿ ಮಿಸ್ ಟೀನ್ ದಿವಾ ಪ್ರಶಸ್ತಿಯನ್ನು ಗೆದ್ದಿರುವುದಲ್ಲದೆ, ಮಿಸ್ ಟೀನ್ ಇಂಟರ್ನ್ಯಾಷನಲ್ 2025ರ ಮೊದಲ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದಾರೆ.
ಬಹುಮುಖ ಪ್ರತಿಭೆ ಈ ಕಾಜಿಯಾ ಲಿಜ್ ಮೆಜೊ
ಕಾಜಿಯಾ ಲಿಜ್ ಮೆಜೊ ಬರೀ ಮಾಡೆಲ್ ಅಲ್ಲ. ಇವರು ಸುಮಾರು 12 ವರ್ಷಗಳ ಕಾಲ ಭಾರತೀಯ ಶಾಸ್ತ್ರೀಯ ನೃತ್ಯದಲ್ಲಿ ತರಬೇತಿ ಪಡೆದಿದ್ದಾರೆ. ಜೊತೆಗೆ ಹಾಡುಗಾರಿಕೆ, ಡ್ರಮ್ಸ್ ಹಾಗೂ ವಯಲಿನ್ ನುಡಿಸುವ ಹವ್ಯಾಸವೂ ಇದೆ.
ಇಲ್ಲಿಯವರೆಗೆ ಭಾರತಕ್ಕೆ ಮೂರು ಕಿರೀಟ
ಇಲ್ಲಿಯವರೆಗೆ ಭಾರತದ ಮೂವರು ಮಿಸ್ ಯೂನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. 1994ರಲ್ಲಿ ಸುಶ್ಮಿತಾ ಸೇನ್ ಮಿಸ್ ಯೂನಿವರ್ಸ್ ಕಿರೀಟವನ್ನು ಮೊದಲ ಬಾರಿಗೆ ಗೆಲ್ಲುವ ಮೂಲಕ ಈ ಪಟ್ಟಿಯಲ್ಲಿ ಭಾರತದ ಹೆಸರು ಸೇರಿಕೊಳ್ಳುತ್ತದೆ. ನಂತರ 2000ರಲ್ಲಿ ಲಾರಾ ದತ್ತಾ ಎರಡನೇ ಬಾರಿಗೆ ದೇಶಕ್ಕೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ತಂದುಕೊಡುತ್ತಾರೆ. ಇದಾದ ನಂತರ ಬರೋಬ್ಬರಿ 21 ವರ್ಷಗಳ ನಂತರ ಅಂದರೆ 2021ರಲ್ಲಿ ಹರ್ನಾಜ್ ಸಂಧು ಮೂರನೇ ಮಿಸ್ ಯೂನಿವರ್ಸ್ ಕಿರೀಟವನ್ನು ಮುಡಿಗೇರಿಸಿದರು.


Click it and Unblock the Notifications
