ಬಂಧನ ಭೀತಿಯಲ್ಲಿ ಸಚಿವ ವಿ.ಸೋಮಣ್ಣ: ಮಾ.30ರಂದು ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ
ಬೆಂಗಳೂರು, ಮಾ. 28: ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಪ್ರಕರಣದಲ್ಲಿ ವಸತಿ ಸಚಿವ ವಿ.ಸೋಮಣ್ಣ ಬಂಧನ ಭೀತಿ ಎದುರಿಸುತ್ತಿದ್ದಾರೆ. ಹಾಗಾಗಿ ಅವರು ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಮೊರೆ ಹೋಗಿದ್ದಾರೆ.
ಸೋಮಣ್ಣ ಅವರ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ಸಂಬಂಧ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಮೂಲ ದೂರುದಾರರಿಗೆ ಆದೇಶಿಸಿದೆ.
ಸೋಮಣ್ಣ ಜಾಮೀನು ಅರ್ಜಿ ನ್ಯಾಯಾಧೀಶ ಬಿ.ಜಯಂತ್ ಕುಮಾರ್ ಅವರ ಮುಂದೆ ವಿಚಾರಣೆಗೆ ಬಂದಿತು. ಕೆಲ ಕಾಲ ವಾದ ಆಲಿಸಿದ ಬಳಿಕ ದೂರುದಾರರಾದ ರಾಮಕೃಷ್ಣಗೆ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿ ವಿಚಾರಣೆಯನ್ನು ಮಾ.30ಕ್ಕೆ ಮುಂದೂಡಿತು.

ಏ.16ಕ್ಕೆ ಸಮನ್ಸ್ ಜಾರಿ:
ಆದಾಯಕ್ಕೆ ಮೀರಿದ ಆಸ್ತಿ ಗಳಿಕೆ ಮತ್ತು ಭಷ್ಟಾಚಾರ ಆರೋಪ ಸಂಬಂಧ ಜನಪ್ರತಿನಿಗಳ ಕೋರ್ಟ್‌ಗೆ ಖುದ್ದು ಹಾಜರಾಗಲು ವಸತಿ ಸಚಿವ ವಿ. ಸೋಮಣ್ಣ ಅವರಿಗೆ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿತ್ತು.
ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ ಏ.16ರಂದು ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆ ಸೋಮಣ್ಣ ಅವರಿಗೆ ಆದೇಶಿಸಿದ್ದಾರೆ.
ಅಲ್ಲದೆ, ಪ್ರಕರಣದ ಸಂಬಂಧ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಡಿವೈಎಸ್‌ಪಿ ಸಲ್ಲಿಸಿರುವ ವರದಿಯನ್ನು ನ್ಯಾಯಾಧೀಶರು ತಿರಸ್ಕರಿಸಿದ್ದಾರೆ. ಸೋಮಣ್ಣ ಮತ್ತು ಅವರ ಕುಟುಂಬದ ಸದಸ್ಯರ ಆದಾಯ ಮೂಲಗಳು ದಿನೇ ದಿನೇ ಹೇಗೆ ವೃದ್ಧಿಯಾಯಿತು ಎಂಬ ಬಗ್ಗೆ ಸೂಕ್ತ ತನಿಖೆ ನಡೆದಿಲ್ಲ. ಎಲ್ಲವನ್ನೂ ಮುಚ್ಚಿಡಲಾಗಿದೆ ಎಂಬ ಆರೋಪವನ್ನು ನ್ಯಾಯಾಲಯ ಪುರಸ್ಕರಿಸಿದೆ.
ಮೂಡಲಪಾಳ್ಯದ ರಾಮಕೃಷ್ಣ ಸಲ್ಲಿಸಿರುವ ಖಾಸಗಿ ದೂರಿನಲ್ಲಿಸೋಮಣ್ಣ ಮತ್ತು ಕುಟುಂಬದವರು ಬೆಂಗಳೂರು, ಮಂಗಳೂರು ಮತ್ತು ಮೈಸೂರಿನಲ್ಲಿ ಸಾಕಷ್ಟು ಅಕ್ರಮ ಸ್ಥಿರಾಸ್ತಿ ಹೊಂದಿದ್ದಾರೆ. ಮಾರ್ಗದರ್ಶಿ ಮೌಲ್ಯಕ್ಕಿಂತಲೂ ಕಡಿಮೆ ದರದಲ್ಲಿ ಜಮೀನು ಖರೀದಿಸಿದ್ದಾರೆ. ಎಸಿಬಿ ತನಿಖೆಯಲ್ಲಿ ಕೇವಲ ಅವರ ವೈಯಕ್ತಿಕ ಮತ್ತು ಖಾಸಗಿ ಸಾಲಗಳ ಬಗ್ಗೆ ತನಿಖೆ ನಡೆಸಲಾಗಿದೆ ಎಂದು ಹೇಳಿದ್ದಾರೆ.
ಸೋಮಣ್ಣ ಸಾರ್ವಜನಿಕ ಸೇವಕರಾಗಿ ಅಕ್ರಮ ಸಂಪಾದನೆ ಮಾಡುವ ಮೂಲಕ ಕ್ರಿಮಿನಲ್ ದುರ್ನಡತೆ ತೋರಿದ್ದಾರೆ. ಆದ್ದರಿಂದ, ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ 1988ರ ಕಲಂ 13(1)(ಬಿ) (ಡಿ) ಮತ್ತು (ಇ) ಕಲಂ 13(2)ರ ಅಡಿ ಪ್ರಕರಣ ದಾಖಲಿಸಿ, ಕ್ರಮ ಜರುಗಿಸಬೇಕು ಎಂದು ಕೋರಿದ್ದಾರೆ.












Click it and Unblock the Notifications