ಸಾರಿಗೆ ಸಂಸ್ಥೆಗಳ ಬಗ್ಗೆ ಮಾತನಾಡುವ ಯಾವ ಯೋಗ್ಯತೆ, ನೈತಿಕತೆ ಬಿಜೆಪಿಗಿದೆ?: ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು, ಆಗಸ್ಟ್ 29: ಗ್ಯಾರಂಟಿ ಯೋಜನೆಯ ಪರಿಣಾಮ ಈಗಾಗಲೇ ಕೆ.ಎಸ್.ಆರ್.ಟಿ.ಸಿ ಬಾಗಿಲು ಮುಚ್ಚುವ ಹಂತಕ್ಕೆ ತಲುಪಿದೆ ಎನ್ನುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ. ತಮಗೆ ಪ್ರಬುದ್ಧತೆ, ತಿಳುವಳಿಕೆ ಎರಡೂ ಇಲ್ಲ ಎನ್ನುವುದನ್ನು ಜಗಜಾಹೀರು ಪಡಿಸಿದ್ದೀರಿ. ಅದರೊಂದಿಗೆ ಸಾಮಾನ್ಯ ಜ್ಞಾನದ ಕೊರತೆಯೂ ಇದೆ ಎಂದಾದರೆ ನಿಮ್ಮಿಂದ ಮತ್ತೇನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂಬುದು ಅರಿವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸವಿಸ್ತಾರವಾಗಿ ಉತ್ತರ ನೀಡಿರುವ ಸಚಿವ ರಾಮಲಿಂಗಾರೆಡ್ಡಿ, ಕೆ.ಎಸ್.ಆರ್.ಟಿ.ಸಿಗೆ ಶಕ್ತಿ ಯೋಜನೆ ಬಾಕಿ ₹4,500 ಕೋಟಿ ಸರ್ಕಾರ ಕೊಡಬೇಕಾಗಿದೆ. ವೇತನ ಪಾವತಿಸಲು ಹಣವಿಲ್ಲ, ಇದೇ ರೀತಿ ಮುಂದುವರೆದರೆ, ಮೂರು ನಾಲ್ಕು ತಿಂಗಳಿನಲ್ಲಿ ಸಂಸ್ಥೆ ಮುಚ್ಚಬೇಕಾಗುತ್ತದೆ ಎಂದು ತಿಳಿಸಿರುತ್ತೀರಿ. ತಮಗೆ ಪ್ರಬುದ್ದತೆ, ತಿಳುವಳಿಕೆ ಎರಡೂ ಇಲ್ಲ ಎಂಬುದನ್ನು ಜಗಜಾಹೀರು ಪಡಿಸಿದ್ದೀರಿ. ಅದರೊಂದಿಗೆ ಸಾಮಾನ್ಯ ಜ್ಞಾನದ ಕೊರತೆಯೂ ಇದೆ ಎಂದಾದರೆ ನಿಮ್ಮಿಂದ ಮತ್ತೇನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂಬುದು ಅರಿವಾಗಿದೆ.

ಸಾರಿಗೆ ಸಂಸ್ಥೆಗಳನ್ನು ₹5,900 ಕೋಟಿ ನಷ್ಟದಲ್ಲಿಟ್ಟು, ನಮ್ಮ ಸರ್ಕಾರಕ್ಕೆ ಸಾರಿಗೆ ಸಂಸ್ಥೆ ಮುಚ್ಚಿಬಿಡಿ ಎಂದು ಹೋಗಿರುವುದು ನೀವು. ಬಿ.ಎಸ್ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಬಿ.ಜೆ.ಪಿ ಸರ್ಕಾರದ ಬಗ್ಗೆ ಹತ್ತು ಹಲವು ಬಾರಿ ಹೇಳಿದ್ದಾಗಿದೆ. ಶಕ್ತಿ ಬಾಕಿ ಹಣ ನಾಲ್ಕು ಸಾರಿಗೆ ಸಂಸ್ಥೆಗಳಿಗೆ ₹1467 ಕೋಟಿ ಬರಬೇಕಾಗಿದೆ. ಅದನ್ನು ನೀಡುವ ಬದ್ಧತೆ ಹೊಂದಿದ್ದೇವೆ, ನೀಡುತ್ತೇವೆ. ನೀವು ಸುಳ್ಳು ಮಾಹಿತಿ ನೀಡಿರುವಂತೆ ₹4,500 ಕೋಟಿ ಅಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದೇವೆ ಎಂದರು.
ಬಿ.ಜೆ.ಪಿ ಸರ್ಕಾರದ ಅವಧಿಯಲ್ಲಿ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದಾಗ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳಿಗೆ ತಿಂಗಳ ವೇತನ ಪೂರ್ಣ ಪಾವತಿಯಾಗದೆ , ಅರ್ಧವೇತನ , ಕೆಲವೊಮ್ಮೆ ಆ ವೇತನವೂ ತಿಂಗಳ ಕೊನೆಯವರೆಗೂ, ಒಮ್ಮೊಮ್ಮೆ ಮುಂದಿನ ತಿಂಗಳವರೆಗೂ ಪಾವತಿಯಾಗುತ್ತಿತ್ತು ಎಂಬುದು ತಮಗೆ ಗೊತ್ತಿಲ್ಲದಿದ್ದರೆ ಅವರನ್ನೇ ಕೇಳಿ ತಿಳಿದುಕೊಳ್ಳಿ ಎಂದು ಹೇಳಿದ್ದಾರೆ.

ನಮ್ಮ ಸರ್ಕಾರದ ಅವಧಿಯಲ್ಲಿ ಕೆಎಸ್‌ಆರ್‌ಟಿಸಿ ಮತ್ತು ಕೆಕೆಆರ್‌ಟಿಸಿ ಯಲ್ಲಿ ಪ್ರತಿ ತಿಂಗಳ 1ನೇ ತಾರೀಖಿನಂದು, ಬಿ.ಎಂ.ಟಿ.ಸಿ ಮತ್ತು ವಾಯವ್ಯ ಸಾರಿಗೆ ಸಂಸ್ಥೆಗಳಲ್ಲಿ ಪ್ರತಿ ತಿಂಗಳ 7ನೇ ತಾರೀಖಿನಂದು ವೇತನ ಪಾವತಿ ಆಗುತ್ತಿದೆ. ಬಿ.ಜೆ.ಪಿ ಸರ್ಕಾರದ ಅವಧಿಯಲ್ಲಿ ಸಂಸ್ಥೆಗಳಿಗೆ ಡಕೋಟ ಬಸ್ಸುಗಳನ್ನು ಕಲ್ಪಿಸಿದ ಬಗ್ಗೆ ಹಾಗೂ ಕಳೆದ 5 ವರ್ಷಗಳಲ್ಲಿ ಬಿ.ಎಂ.ಟಿ ಸಿ ಹೊರತುಪಡಿಸಿ ಬೇರೆಲ್ಲೂ ಬಸ್‌ಗಳ ಸೇರ್ಪಡೆಯೇ ಮಾಡಿಲ್ಲದೆ ಸಂಸ್ಥೆಗಳನ್ನು ಮುಚ್ಚುವ ಪರಿಸ್ಥಿತಿಗೆ ತಂದಿಟ್ಟಿರುವುದು ನಾವೇ ನೀವೇ ಎಂಬುದರ ಬಗ್ಗೆಯೂ ಸ್ವಲ್ಪ ಮಾಹಿತಿ ಸಂಗ್ರಹಿಸಿ ಎಂದರು.
ನಮ್ಮ ಸರ್ಕಾರ 5800 ಬಸ್ಸುಗಳ ಸೇರ್ಪಡೆಗೆ ಅನುಮೋದನೆ ನೀಡಿದ್ದು, ಕಳೆದೊಂದು ವರ್ಷದಲ್ಲಿಯೇ 3000 ಹೊಸ ಬಸ್ಸುಗಳ ಸೇರ್ಪಡೆಯಾಗಿದೆ.
ಬಿ.ಜೆ.ಪಿ ಸರ್ಕಾರದ ಅವಧಿಯಲ್ಲಿ ಕಳೆದ 5 ವರ್ಷಗಳಲ್ಲಿ ಸಾರಿಗೆ ಸಂಸ್ಥೆಗಳಲ್ಲಿ 13,888 ಹುದ್ದೆಗಳು ಖಾಲಿ ಇದ್ದರೂ ( ನಿವೃತ್ತಿ ಇನ್ನಿತರೆ ಕಾರಣಗಳಿಂದ ) ಒಂದೇ ಒಂದು ನೇಮಕಾತಿ ಮಾಡದಿರುವ ಹಿಂದೆ ಸಂಸ್ಥೆ ಮುಚ್ಚುವ ಹುನ್ನಾರ ಅಡಗಿತ್ತೇ ತಿಳಿದುಕೊಳ್ಳಿ ಎಂದರು.
ನಮ್ಮ ಸರ್ಕಾರ 9,000 ಹುದ್ದೆಗಳ ನೇಮಕಾತಿಗೆ ಅನುಮತಿ ನೀಡಿದ್ದು, 6,500 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ಕೂಡಲೇ ಪೂರ್ಣಗೊಳ್ಳಲಿದೆ. ಸಾರಿಗೆ ಸಂಸ್ಥೆಗಳು ಉಳಿಯಬೇಕಾದರೆ ಕಾಲಕಾಲಕ್ಕೆ ಬಸ್ಸುಗಳ ಸೇರ್ಪಡೆ ಮತ್ತು ಸಿಬ್ಬಂದಿಗಳ ನೇಮಕಾತಿಯಾಗಲೇಬೇಕು ಆಗಲೇ ಸಂಸ್ಥೆ ಮುನ್ನಡೆಯಲು ಸಾಧ್ಯ ಎಂಬ ಸಾಮಾನ್ಯ ತಿಳುವಳಿಕೆ ತಮಗೆ ಇಲ್ಲದಿರುವುದು ದುರಂತವೇ ಸರಿ. ಆದರೆ ತಮಗೆ ತಮ್ಮ ಬಿ.ಜೆ.ಪಿ ಅವಧಿಯ ಕರ್ಮಕಾಂಡಗಳ ಬಗ್ಗೆ ಪದೇ ಪದೇ ಮೆಲುಕು ಹಾಕಿಕೊಂಡು ಸಂಭ್ರಮಿಸುವ ಹಾಗೂ ಜನರಿಗೂ ಕೂಡ ತಿಳಿಸುವ ಉತ್ಸುಕ ಹಾಗೂ ಅಪೇಕ್ಷೆ ಹೆಚ್ಚಾಗಿದೆ ಎಂದರೆ ನಾವೇನು ಮಾಡಲು ಸಾಧ್ಯ? ಸಾರಿಗೆ ಸಂಸ್ಥೆಗಳ ಬಗ್ಗೆ ಮಾತನಾಡುವ ಯಾವ ಯೋಗ್ಯತೆ ನೈತಿಕತೆ ತಮಗಿದೆ ? ಎಂದು ಪ್ರಶ್ನಿಸಿದ್ದಾರೆ.












Click it and Unblock the Notifications