ಸರ್ಕಾರಿ ಶಾಲೆಯಲ್ಲಿ ಶ್ರಮದಾನ ಮಾಡಲು ಶಿಕ್ಷಣ ಸಚಿವರ ಮನವಿ
ಬೆಂಗಳೂರು, ಮೇ. 12: ''ನೂತನ ಶೈಕ್ಷಣಿಕ ವರ್ಷ ಮೇ. 16 ಆರಂಭವಾಗಲಿದೆ. ನಾವೆಲ್ಲರೂ ಸೇರಿ ವಿದ್ಯಾರ್ಥಿಗಳನ್ನು ಶಾಲೆಗಳಿಗೆ ಸ್ವಾಗತಿಸಬೇಕಿದೆ. ಈ ನಿಟ್ಟಿನಲ್ಲಿ ನಾವು ನೀವು ಕೂಡಿ ಶಾಲೆಗಳನ್ನು ಮುಂದಿನ ಶೈಕ್ಷಣಿಕ ಚಟುವಟಿಕೆಗೆ ಸಜ್ಜುಗೊಳಿಸೋಣ. ಶಾಲೆ ಪ್ರಾರಂಭ ಮೂರ್ವದಲ್ಲಿ ಮೇ. 15 ರಂದು ಭಾನುವಾರ ನಾನು ಒಂದು ಶಾಲೆಯಲ್ಲಿ ಶ್ರಮದಾನ ಮಾಡಲಿದ್ದೇನೆ. ನೀವು ಒಂದು ಶಾಲೆಯಲ್ಲಿ ಒಂದು ತಾಸು ಶ್ರಮದಾನ ಮಾಡಿ''
ಮೇ. 16 ರಿಂದ ರಾಜ್ಯದಲ್ಲಿ ಶಾಲೆಗಳು ಪ್ರಾರಂಭವಾಗಲಿದ್ದು, ಸರ್ಕಾರಿ ಶಾಲೆಗಳಲ್ಲಿ ಶ್ರಮದಾನ ಮಾಡುವಂತೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ. ಕೊರೊನಾ ದಿಂದ ಎರಡು ವರ್ಷ ಮಕ್ಕಳ ಕಲಿಕೆ ಮೇಲೆ ನಕಾರಾತ್ಮಕ ಪರಿಣಾಮ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಹದಿನೈದು ದಿನ ಮೊದಲೇ ಶಾಲೆಗಳನ್ನು ಪ್ರಾರಂಭ ಮಾಡಲಾಗುತ್ತಿದೆ. ಶಾಲೆ ಪ್ರಾರಂಭಕ್ಕೆ ಪೂರ್ವದಲ್ಲಿ ಸರ್ಕಾರಿ ಶಾಲೆಗಳನ್ನು ಸಜ್ಜುಗೊಳಿಸಲು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ವಿನೂತನ ಕರೆ ಕೊಟ್ಟಿದ್ದಾರೆ.
ಶಾಲೆ ಪ್ರಾರಂಭಕ್ಕೆ ಪೂರ್ವದಲ್ಲಿ ಸಿದ್ಧಗೊಳಿಸಬೇಕಿದೆ. ಶಾಲೆಗಳನ್ನು ಸ್ವಚ್ಛಗೊಳಿಸಿ ಆಕರ್ಷಣೆಗೊಳಿಸಬೇಕಾಗಿದೆ. ಹೀಗಾಗಿ ಒಂದು ಗಂಟೆ ಸಮಯವನ್ನು ಶಾಲೆಗಳಿಗಾಗಿ ನೀಡಿ. ಶಾಲೆಯಲ್ಲಿ ಶ್ರಮದಾನ ಮಾಡಿ. ಮೇ. 15 ರಂದು ನಾನು ಒಂದು ಶಾಲೆಯಲ್ಲಿ ಶ್ರಮದಾನ ಮಾಡಲಿದ್ದೇನೆ. ನೀವು ಸಹ ನಿಮ್ಮ ಸಮಯದ ಒಂದು ತಾಸನ್ನು ವಿನಿಯೋಗಿಸಿ. ಶ್ರಮದಾನ ಮಾಡುವಂತೆ ಶಿಕ್ಷಣ ಸಚಿವರು ಮನವಿ ಮಾಡಿದ್ದಾರೆ.

ಸ್ವಯಂ ಸ್ವೇವಾ ಸಂಸ್ಥೆಗಳಿಗೆ ಮನವಿ: ಸರ್ಕಾರಿ ಶಾಲೆಗಳ ಅಗತ್ಯತೆಗಳನ್ನು ಗಮನಿಸಿ ಅದರ ಅಭಿವೃದ್ಧಿಗಾಗಿ ಯೋಜನೆಯೊಂದನ್ನು ರೂಪಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಮತ್ತು ಕಾರ್ಪೋರೇಟ್ ಪ್ರತಿನಿಧಿಗಳು ಮುಂದಾಗಬೇಕಿದೆ ಎಂದು ಕೋರಿದ್ದಾರೆ.

ಶಾಲಾ ವಯಸ್ಸಿನ ಅರ್ಹ ಮಕ್ಕಳು ಶಾಲೆಗೆ ದಾಖಲಾಗದೇ ಇದ್ದಲ್ಲಿ ಅವರನ್ನು ಹತ್ತಿರದ ಸರ್ಕಾರಿ ಶಾಲೆಗೆ ಸೇರಿಸಲು ಅಗತ್ಯ ಕ್ರಮ ವಹಿಸೋಣ. ನಾವು ಓದಿದ ಸರ್ಕಾರಿ ಶಾಲೆಗೆ ಭೇಟಿ ನೀಡಿ ಅದರ ಅಭಿವೃದ್ಧಿಗೆ ಕೈ ಜೋಡಿಸೋಣ. ಶಿಕ್ಷಕರು ಹಾಗೂ ಮಕ್ಕಳಿಗೆ ಉಪಯುಕ್ತವಾದ ಪುಸ್ತಕಗಳು ನಿಮ್ಮಲ್ಲಿದ್ದರೆ, ಅವುಗಳನ್ನು ವಿಲೇವಾರಿ ಮಾಡಬೇಕೆಂದು ನೀವು ಬಯಿಸಿದ್ದರೆ ಅಂತಹ ಪುಸ್ತಕಗಳನ್ನು ಸರ್ಕಾರಿ ಶಾಲೆಗೆ ದಾನ ನೀಡಿ ಗ್ರಂಥಾಲಯಗಳನ್ನು ಉತ್ತಮ ಪಡಿಸಿ. ನಿಮ್ಮ ವೃತ್ತಿ ತಜ್ಞತೆಯ ಬಗ್ಗೆ ಮಕ್ಕಳೊಂದಿಗೆ ಸಮಾಲೋಚನೆ ಮಾಡಿ ಮಕ್ಕಳಲ್ಲಿ ಗುರಿ ಬಿತ್ತುವ ಕೆಲಸ ಮಾಡಿ ಎಂದು ನಾಗೇಶ್ ಮನವಿ ಮಾಡಿದ್ದಾರೆ.
Recommended Video
ಸರ್ಕಾರಿ ಶಾಲೆಗಳ ಪ್ರಗತಿಗೆ ಸಾರ್ವಜನಿಕರು ಸಕ್ರಿಯವಾಗಿ ಭಾಗಿಯಾಗಿ ಅಭಿವೃದ್ಧಿ ಮಾಡುವ ದಿಸೆಯಲ್ಲಿ ಸಣ್ಣ ಪ್ರಯತ್ನವನ್ನು ಶಿಕ್ಷಣ ಸಚಿವರು ಮಾಡಿದ್ದಾರೆ. ಇದು ಯಶಸ್ವಿಯಾಗುತ್ತಾ ಕಾದು ನೋಡಬೇಕು.











Click it and Unblock the Notifications